T20 World Cup 2022: ಟಿ20 ವಿಶ್ವಕಪ್ನ 30ನೇ ಪಂದ್ಯದಲ್ಲಿ ಟೀಮ್ ಇಂಡಿಯಾ (Team India) ಸೌತ್ ಆಫ್ರಿಕಾ (India vs South Africa) ವಿರುದ್ಧ ಸೋತಿದೆ. ಭಾರತದ ಈ ಸೋಲಿನೊಂದಿಗೆ ಪಾಕಿಸ್ತಾನದ (Pakistan) ಸೆಮಿಫೈನಲ್ ಪ್ರವೇಶಿಸುವ ಕನಸು ಕೂಡ ಬಹುತೇಕ ಕಮರಿದೆ. ಇದಾಗ್ಯೂ ಪವಾಡ ನಡೆದರೆ ಪಾಕ್ ತಂಡಕ್ಕೆ ಸೆಮಿಫೈನಲ್ಗೆ ಎಂಟ್ರಿ ಕೊಡುವ ಅವಕಾಶ ಸಿಗಬಹುದು. ಅಂದರೆ ಪಾಕಿಸ್ತಾನಕ್ಕೆ ನಾಕೌಟ್ ಹಂತ ಪ್ರವೇಶಿಸಲು ಇನ್ನು ಸೌತ್ ಆಫ್ರಿಕಾ ಪಂದ್ಯಗಳ ಫಲಿತಾಂಶವನ್ನು ಅವಲಂಭಿಸಬೇಕಾಗಿದೆ.
ಸೌತ್ ಆಫ್ರಿಕಾ ತಂಡವು 3 ಪಂದ್ಯಗಳಲ್ಲಿ 2 ಜಯ, 1 ಡ್ರಾನೊಂದಿಗೆ ಒಟ್ಟು 5 ಪಾಯಿಂಟ್ಸ್ ಕಲೆಹಾಕಿದೆ. ಇತ್ತ ಟೀಮ್ ಇಂಡಿಯಾ 3 ಪಂದ್ಯಗಳಲ್ಲಿ 2 ಜಯ, 1 ಸೋಲಿನೊಂದಿಗೆ 4 ಪಾಯಿಂಟ್ ಪಡೆದುಕೊಂಡಿದೆ. ಅಂದರೆ ಈ ಎರಡು ತಂಡಗಳಿಗೆ ಸೆಮಿಫೈನಲ್ ಅವಕಾಶ ಜಾಸ್ತಿ ಇದೆ. ಏಕೆಂದರೆ ಟೀಮ್ ಇಂಡಿಯಾ ಮುಂದಿನ 2 ಪಂದ್ಯಗಳಲ್ಲಿ ಗೆದ್ದರೆ 8 ಅಂಕದೊಂದಿಗೆ ನೇರವಾಗಿ ಸೆಮೀಸ್ಗೆ ಎಂಟ್ರಿ ಕೊಡಲಿದೆ. ಮತ್ತೊಂದೆಡೆ ಸೌತ್ ಆಫ್ರಿಕಾ ಮುಂದಿನ 2 ಪಂದ್ಯಗಳನ್ನು ಗೆದ್ದರೆ ಒಟ್ಟು 9 ಅಂಕಗಳೊಂದಿಗೆ ಸೆಮಿಫೈನಲ್ಗೆ ಪ್ರವೇಶಿಸಬಹುದು.
ಆದರೆ ಪಾಕ್ಗೆ ಅವಕಾಶ ಸಿಗಬೇಕಿದ್ದರೆ ಸೌತ್ ಆಫ್ರಿಕಾ ಮುಂದಿನ ಪಂದ್ಯಗಳಲ್ಲಿ ಸೋಲಬೇಕು. ಅಂದರೆ ಒಟ್ಟು 5 ಅಂಕ ಪಡೆದಿರುವ ಸೌತ್ ಆಫ್ರಿಕಾ ತಂಡವು ಮುಂದಿನ ಪಂದ್ಯವನ್ನು ಪಾಕಿಸ್ತಾನ್ ವಿರುದ್ಧ ಆಡಲಿದೆ. ಈ ಪಂದ್ಯದಲ್ಲಿ ಪಾಕ್ ತಂಡ ಗೆದ್ದರೆ ಒಟ್ಟು 4 ಅಂಕಗಳನ್ನು ಪಡೆದಂತಾಗುತ್ತದೆ. ಹಾಗೆಯೇ ಸೌತ್ ಆಫ್ರಿಕಾ ತಂಡವು ತನ್ನ ಕೊನೆಯ ಪಂದ್ಯದಲ್ಲಿ ನೆದರ್ಲ್ಯಾಂಡ್ಸ್ ವಿರುದ್ಧ ಅಚ್ಚರಿಯ ರೀತಿಯಲ್ಲಿ ಸೋತರೆ ಒಟ್ಟು 5 ಅಂಕಗಳೊಂದಿಗೆ ಪಾಯಿಂಟ್ ಟೇಬಲ್ನಲ್ಲಿ ಕುಸಿತ ಕಾಣಲಿದೆ.
ಇತ್ತ ಪಾಕಿಸ್ತಾನ್ ತಂಡವು ತನ್ನ ಕೊನೆಯ ಪಂದ್ಯದಲ್ಲಿ ಬಾಂಗ್ಲಾದೇಶ್ ವಿರುದ್ಧ ಗೆದ್ದರೆ ಒಟ್ಟು 6 ಅಂಕಗಳನ್ನು ಪಡೆಯಬಹುದು. ಈ ಮೂಲಕ ಸೌತ್ ಆಫ್ರಿಕಾವನ್ನು ಹಿಂದಿಕ್ಕಿ ಪಾಕಿಸ್ತಾನಕ್ಕೆ ಸೆಮಿಫೈನಲ್ ಪ್ರವೇಶಿಸುವ ಅವಕಾಶ ದೊರೆಯಲಿದೆ.
ಆದರೆ ಅದಕ್ಕೂ ಮುನ್ನ ಪಾಕಿಸ್ತಾನ್ ತಂಡವು ಮುಂದಿನ ಪಂದ್ಯದಲ್ಲಿ ಸೌತ್ ಆಫ್ರಿಕಾವನ್ನು ಸೋಲಿಸಲೇಬೇಕು. ಹಾಗೆಯೇ ನೆದರ್ಲ್ಯಾಂಡ್ಸ್ ವಿರುದ್ಧ ಸೌತ್ ಆಫ್ರಿಕಾ ಸೋಲಬೇಕೆಂದು ಪ್ರಾರ್ಥಿಸಬೇಕು. ಹೀಗೊಂದು ಅಚ್ಚರಿಯ ಫಲಿತಾಂಶ ಮೂಡಿಬಂದರೆ ಮಾತ್ರ ಪಾಕಿಸ್ತಾನಕ್ಕೆ ಸೆಮಿಫೈನಲ್ ಪ್ರವೇಶಿಸುವ ಅವಕಾಶ ಸಿಗಲಿದೆ.
ಒಂದು ವೇಳೆ ಮುಂದಿನ 2 ಪಂದ್ಯಗಳಲ್ಲಿ ಸೌತ್ ಆಫ್ರಿಕಾ ಒಂದು ಪಂದ್ಯವನ್ನು ಗೆದ್ದರೂ ಪಾಕಿಸ್ತಾನ್ ತಂಡವು ಟಿ20 ವಿಶ್ವಕಪ್ ಸೆಮಿಫೈನಲ್ ರೇಸ್ನಿಂದ ಹೊರಬೀಳಲಿದೆ. ಹೀಗಾಗಿ ಸೌತ್ ಆಫ್ರಿಕಾ ವಿರುದ್ಧದ ಮುಂದಿನ ಪಂದ್ಯವು ಪಾಕ್ ತಂಡಕ್ಕೆ ಮಾಡು ಇಲ್ಲವೇ ಮಡಿ ಪಂದ್ಯ. ಏಕೆಂದರೆ ಈ ಪಂದ್ಯದಲ್ಲಿ ಪಾಕ್ ಸೋತರೆ ಟಿ20 ವಿಶ್ವಕಪ್ನಿಂದ ಬಾಬರ್ ಪಡೆ ಹೊರಬೀಳಲಿದೆ.
ಅಂದರೆ ಇಲ್ಲಿ ಸೆಮಿಫೈನಲ್ ಪ್ರವೇಶಿಸುವ ಆಸೆಯನ್ನು ಜೀವಂತವಿರಿಸಲು ಪಾಕ್ ಮುಂದಿನ ಪಂದ್ಯ ಗೆಲ್ಲಬೇಕು. ಜೊತೆಗೆ ನೆದರ್ಲ್ಯಾಂಡ್ಸ್ ವಿರುದ್ಧದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡದ ಸೋಲನ್ನು ಎದುರು ನೋಡಬೇಕು. ಇಲ್ಲಿ ಸೌತ್ ಆಫ್ರಿಕಾ 2 ಪಂದ್ಯಗಳಲ್ಲೂ ಸೋತು, ಪಾಕ್ 2 ಪಂದ್ಯಗಳಲ್ಲೂ ಗೆದ್ದರೆ ಮಾತ್ರ ಬಾಬರ್ ಪಡೆ ಸೆಮಿಫೈನಲ್ ಪ್ರವೇಶಿಸಬಹುದು.
ಆದರೆ ಇವೆಲ್ಲಕ್ಕೂ ಮುನ್ನ ಜಿಂಬಾಬ್ವೆ ವಿರುದ್ಧವೇ ಸೋತಿರುವ ಪಾಕಿಸ್ತಾನ್ ತಂಡವು ಬಲಿಷ್ಠ ಸೌತ್ ಆಫ್ರಿಕಾ ವಿರುದ್ಧದ ನಿರ್ಣಾಯಕ ಪಂದ್ಯದಲ್ಲಿ ಗೆಲ್ಲಲಿದೆಯಾ ಎಂಬುದೇ ದೊಡ್ಡ ಪ್ರಶ್ನೆ.