
ಸೇಂಟ್ ಲೂಸಿಯಾದ ಗ್ರಾಸ್ ಐಲೆಟ್ನಲ್ಲಿರುವ ಡ್ಯಾರೆನ್ ಸಾಮಿ ರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ (Daren Sammy National Cricket Stadium) ಭಾರತ ಹಾಗೂ ಆಸ್ಟ್ರೇಲಿಯಾ (India vs Australia) ನಡುವೆ ಸೂಪರ್ 8 ಸುತ್ತಿನ ಕೊನೆಯ ಪಂದ್ಯ ನಡೆಯುತ್ತಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ನಾಯಕ ಮಿಚೆಲ್ ಮಾರ್ಷ್ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ. ಅದರಂತೆ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡುತ್ತಿರುವ ಟೀಂ ಇಂಡಿಯಾಕ್ಕೆ ಉತ್ತಮ ಆರಂಭ ಸಿಕ್ಕಿಲ್ಲ. ತಂಡ ಎರಡನೇ ಓವರ್ನ ನಾಲ್ಕನೇ ಎಸೆತದಲ್ಲೇ ವಿರಾಟ್ ಕೊಹ್ಲಿ ಅವರ ವಿಕೆಟ್ ಕಳೆದುಕೊಂಡಿತು. ಈ ಪಂದ್ಯದಲ್ಲಿ ಕೊಹ್ಲಿಗೆ ಖಾತೆ ಕೂಡ ತೆರೆಯಲು ಸಾಧ್ಯವಾಗಲಿಲ್ಲ. ಅದಾಗ್ಯೂ ನಾಯಕನ ಇನ್ನಿಂಗ್ಸ್ ಆಡುತ್ತಿರುವ ರೋಹಿತ್ ಶರ್ಮಾ (Rohit Sharma), ಸ್ಟಾರ್ಕ್ ಬೌಲ್ ಮಾಡಿದ 3ನೇ ಓವರ್ನಲ್ಲಿ ಬರೋಬ್ಬರಿ 28 ರನ್ ಕಲೆಹಾಕುವ ಮೂಲಕ ಆಸೀಸ್ ತಂಡಕ್ಕೆ ತಕ್ಕ ಪ್ರತ್ಯುತ್ತರ ನೀಡಿದ್ದಾರೆ.
ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡುತ್ತಿರುವ ಭಾರತಕ್ಕೆ ಮತ್ತೆ ಉತ್ತಮ ಆರಂಭ ನೀಡುವಲ್ಲಿ ಆರಂಭಿಕ ಜೋಡಿ ವಿಫಲವಾಯಿತು. ಕೊಹ್ಲಿಗೆ ಖಾತೆ ತೆರೆಯಲು ಸಾಧ್ಯವಾಗಲಿಲ್ಲ. ಅದಾಗ್ಯೂ ತನ್ನ ಎಂದಿನ ಆಟವನ್ನು ಮುಂದುವರೆಸಿದ ರೋಹಿತ್, ಸ್ಟಾರ್ಕ್ ಬೌಲ್ ಮಾಡಿದ 3ನೇ ಓವರ್ನಲ್ಲಿ ರೌದ್ರವತಾರ ತಾಳಿದರು. ಈ ಓವರ್ನ ಮೊದಲ ಎರಡು ಎಸೆತಗಳನ್ನು ಕವರ್ಸ್ ದಿಕ್ಕಿನಲ್ಲಿ ಸಿಕ್ಸರ್ಗಟ್ಟಿದರು. ಮೂರನೇ ಎಸೆತವನ್ನು ಮಿಡ್ ಆನ್ನಲ್ಲಿ ಬೌಂಡರಿ ಗಟ್ಟಿದ ರೋಹಿತ್, ನಾಲ್ಕನೇ ಎಸೆತವನ್ನು ಒವರ್ ಮಿಡ್ ವಿಕೆಟ್ ಮೇಲೆ ಸಿಕ್ಸರ್ಗಟ್ಟಿದರು. ಐದನೇ ಎಸೆತದಲ್ಲಿ ಯಾವುದೇ ರನ್ ಬರಲಿಲ್ಲ. ಆ ಬಳಿಕ 6ನೇ ಎಸೆತವನ್ನು ಶಾರ್ಟ್ ಥರ್ಡ್ನಲ್ಲಿ ಸಿಕ್ಸರ್ಗಟ್ಟಿದರು. ಈ ಮೂಲಕ ಈ ಓವರ್ನಲ್ಲಿ 28 ರನ್ ಕಲೆಹಾಕಿದರು.
ಆ ಬಳಿಕವೂ ಇಲ್ಲಿಗೆ ನಿಲ್ಲದ ರೋಹಿತ್ ಮೈದಾನದಲ್ಲಿ ಬೌಂಡರಿ, ಸಿಕ್ಸರ್ಗಳ ಮಳೆಗರೆಯುವ ಮೂಲಕ ಕೇವಲ 19 ಎಸೆತಗಳಲ್ಲಿ ತಮ್ಮ ಅರ್ಧಶತಕವನ್ನು ಪೂರೈಸಿದರು. ಇಷ್ಟೇ ಅಲ್ಲದೆ ರೋಹಿತ್ ಇದೀಗ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ನಲ್ಲಿ 200 ಕ್ಕೂ ಅಧಿಕ ಸಿಕ್ಸರ್ ಸಿಡಿಸಿದ ಬ್ಯಾಟರ್ ಎನಿಸಿಕೊಂಡಿದ್ದಾರೆ. ಪ್ರಸ್ತುತ ಈ ಸುದ್ದಿ ಬರೆಯುವ ವೇಳೆಗೆ ಟೀಂ ಇಂಡಿಯಾ 2 ವಿಕೆಟ್ ಕಳೆದುಕೊಂಡಿದ್ದು, 10 ಓವರ್ ಅಂತ್ಯಕ್ಕೆ 114 ರನ್ ಕಲೆಹಾಕಿದೆ. ತಂಡದ ಪರ ರೋಹಿತ್ ಶರ್ಮಾ 36 ಎಸೆತಗಳಲ್ಲಿ ಅಜೇಯ 88 ರನ್ ಬಾರಿಸಿದ್ದರೆ, ಸೂರ್ಯಕುಮಾರ್ ಯಾದವ್ 7 ರನ್ ಬಾರಿಸಿ ಆಡುತ್ತಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:49 pm, Mon, 24 June 24