T20 World Cup 2024: ಭಾರತಕ್ಕೆ ಸುಲಭ ತುತ್ತಾದ ಬಾಂಗ್ಲಾ; ರೋಹಿತ್ ಪಡೆಗೆ 60 ರನ್ ಜಯ
T20 World Cup 2024: ನ್ಯೂಯಾರ್ಕ್ನ ನಸ್ಸೌ ಕೌಂಟಿ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಭಾರತ ಹಾಗೂ ಬಾಂಗ್ಲಾದೇಶ ನಡುವಿನ ಏಕೈಕ ಅಭ್ಯಾಸ ಪಂದ್ಯದಲ್ಲಿ ನಿರೀಕ್ಷೆಯಂತೆ ಟೀಂ ಇಂಡಿಯಾ 60 ರನ್‌ಗಳ ಬೃಹತ್ ಜಯ ದಾಖಲಿಸಿದೆ.
ನ್ಯೂಯಾರ್ಕ್ನ ನಸ್ಸೌ ಕೌಂಟಿ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಭಾರತ ಹಾಗೂ ಬಾಂಗ್ಲಾದೇಶ (India vs Bangladesh) ನಡುವಿನ ಏಕೈಕ ಟಿ20 ವಿಶ್ವಕಪ್ (T20 World Cup 2024) ಅಭ್ಯಾಸ ಪಂದ್ಯದಲ್ಲಿ ನಿರೀಕ್ಷೆಯಂತೆ ಟೀಂ ಇಂಡಿಯಾ 60 ರನ್‌ಗಳ ಬೃಹತ್ ಜಯ ದಾಖಲಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಭಾರತ ತಂಡ (Team India) 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 182 ರನ್ ಗಳಿಸಿತು. ತಂಡದ ಪರವಾಗಿ ರಿಷಬ್ ಪಂತ್ ಅರ್ಧಶತಕ ಸಿಡಿಸಿದರೆ, ಉಪನಾಯಕ ಹಾರ್ದಿಕ್ ಪಾಂಡ್ಯ 40 ಹಾಗೂ ಸೂರ್ಯಕುಮಾರ್ ಯಾದವ್ 31 ರನ್‌ಗಳ ಕೊಡುಗೆ ನೀಡಿದರು. ಉತ್ತರವಾಗಿ ಗುರಿ ಬೆನ್ನಟ್ಟಿದ ಬಾಂಗ್ಲಾದೇಶ ತಂಡ 20 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 121 ರನ್ ಗಳಿಸಲಷ್ಟೇ ಶಕ್ತವಾಯಿತು.
ತತ್ತರಿಸಿದ ಬಾಂಗ್ಲಾ ಬ್ಯಾಟಿಂಗ್ ವಿಭಾಗ
193 ರನ್‌ಗಳ ಗುರಿ ಬೆನ್ನಟ್ಟಿದ ಬಾಂಗ್ಲಾದೇಶ ತಂಡ ಕೆಟ್ಟ ಆರಂಭ ಪಡೆಯಿತು. ತಂಡದ ಇಬ್ಬರು ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಸೌಮ್ಯ ಸರ್ಕಾರ್ ಮತ್ತು ನಾಯಕ ನಜ್ಮುಲ್ ಹಸನ್ ಶಾಂಟೊ ಖಾತೆ ತೆರೆಯದೆ ಪೆವಿಲಿಯನ್‌ಗೆ ಮರಳಿದರು. ತಂಜಿದ್ ಹಸನ್ 17 ರನ್ ಮತ್ತು ಲಿಟನ್ ದಾಸ್ ಆರು ರನ್ ಗಳಿಸಿ ಪೆವಿಲಿಯನ್‌ಗೆ ಮರಳಿದರು. ಇದಾದ ನಂತರ ಶಕೀಬ್ ಅಲ್ ಹಸನ್ (28) ಮತ್ತು ಮಹಮ್ಮದುಲ್ಲಾ (40) ತಂಡದ ಇನ್ನಿಂಗ್ಸ್ ನಿಭಾಯಿಸುವ ಕೆಲಸ ಮಾಡಿದರು. ಅದಾಗ್ಯೂ ಈ ಜೋಡಿ ಪೆವಿಲಿಯನ್ ಸೇರಿಕೊಂಡ ಬಳಿಕ ಮತ್ತೆ ಇನ್ನಿಂಗ್ಸ್ ಕುಸಿಯಲಾರಂಭಿಸಿತು.
T20 World Cup 2024: ಪಾಂಡ್ಯ ಪಂಚ್ಗೆ ನೆತ್ತರು ಚೆಲ್ಲಿದ ಬಾಂಗ್ಲಾ ಬೌಲರ್! ವಿಡಿಯೋ ನೋಡಿ
ರಿಷಾದ್ ಹುಸೇನ್ ಐದು ರನ್ ಗಳಿಸಿ ಔಟಾದರೆ, ಝಾಕಿರ್ ಅಲಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು. ಮೆಹದಿ ಹಸನ್ ಮತ್ತು ತಂಜೀಮ್ ಕ್ರಮವಾಗಿ ಎರಡು ಮತ್ತು ಒಂದು ರನ್ ಗಳಿಸಿ ಔಟಾದರು. ಭಾರತದ ಪರ ಅರ್ಷದೀಪ್ ಸಿಂಗ್ ಮತ್ತು ಶಿವಂ ದುಬೆ ತಲಾ ಎರಡು ವಿಕೆಟ್ ಪಡೆದರೆ, ಬುಮ್ರಾ, ಸಿರಾಜ್, ಪಾಂಡ್ಯ ಮತ್ತು ಅಕ್ಷರ್ ಪಟೇಲ್ ತಲಾ ಒಂದು ವಿಕೆಟ್ ಪಡೆದರು.
All smiles in New York as #TeamIndia complete a 60-run win in the warmup clash against Bangladesh 👏👏
Scorecard ▶️ https://t.co/EmJRUPmJyn#T20WorldCup pic.twitter.com/kIAELmpYIh
— BCCI (@BCCI) June 1, 2024
ಮಿಂಚಿದ ಪಂತ್, ಪಾಂಡ್ಯ, ಸೂರ್ಯ
ಟಾಸ್ ಗೆದ್ದು ಮೊದಲು ಬ್ಯಾಟಿಂಗ್‌ಗೆ ಬಂದ ಭಾರತ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ರೋಹಿತ್ ಶರ್ಮಾ ಅವರೊಂದಿಗೆ ಆರಂಭಿಕರಾಗಿ ಕಣಕ್ಕಿಳಿದಿದ್ದ ಸಂಜು ಸ್ಯಾಮ್ಸನ್ ಕೇವಲ ಒಂದು ರನ್ ಗಳಿಸಲಷ್ಟೇ ಶಕ್ತರಾದರು. ಅವರನ್ನು ಷರೀಫುಲ್ ಇಸ್ಲಾಂ ಎಲ್‌ಬಿಡಬ್ಲ್ಯು ಔಟ್ ಮಾಡಿದರು. ನಾಯಕ ರೋಹಿತ್ ಕೂಡ 23 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಆದರೆ ಮೂರನೇ ಕ್ರಮಾಂಕದಲ್ಲಿ ಬಂದ ಸ್ಟಾರ್ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಬ್ ಪಂತ್ 53 ರನ್ ಗಳಿಸಿ ನಿವೃತ್ತರಾದರು. ಅವರ ಇನ್ನಿಂಗ್ಸ್ನಲ್ಲಿ ನಾಲ್ಕು ಬೌಂಡರಿ ಹಾಗೂ 4 ಸಿಕ್ಸರ್ ಕೂಡ ಸೇರಿದ್ದವು.
ಸೂರ್ಯಕುಮಾರ್ ಯಾದವ್ 31, ಶಿವಂ ದುಬೆ 14, ಹಾರ್ದಿಕ್ ಪಾಂಡ್ಯ 40 ಮತ್ತು ರವೀಂದ್ರ ಜಡೇಜಾ ನಾಲ್ಕು ರನ್‌ಗಳ ಕೊಡುಗೆ ನೀಡಿದರು. ಈ ಪಂದ್ಯದಲ್ಲಿ ಪಾಂಡ್ಯ ಮತ್ತು ಜಡೇಜಾ ಅಜೇಯರಾಗಿ ಉಳಿದರೆ, ಬಾಂಗ್ಲಾದೇಶ ಪರ ಮೆಹದಿ ಹಸನ್, ಶರೀಫುಲ್ ಇಸ್ಲಾಂ, ಮಹಮ್ಮದುಲ್ಲಾ ಮತ್ತು ತನ್ವೀರ್ ಇಸ್ಲಾಂ ತಲಾ ಒಂದು ವಿಕೆಟ್ ಪಡೆದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:47 pm, Sat, 1 June 24