ಟಿ20 ವಿಶ್ವಕಪ್ಗೆ (T20 World Cup 2024) ತಯಾರಿ ನಡೆಸಲು ಎಲ್ಲಾ ತಂಡಗಳು ಅಭ್ಯಾಸ ಪಂದ್ಯಗಳನ್ನು ಆಡುತ್ತಿವೆ . ಟೀಂ ಇಂಡಿಯಾ ತನ್ನ ಸಿದ್ಧತೆಗಾಗಿ ಕೇವಲ ಒಂದು ಅಭ್ಯಾಸ ಪಂದ್ಯವನ್ನು ಇಂದು ಬಾಂಗ್ಲಾದೇಶ (India vs Bangladesh) ವಿರುದ್ಧ ಆಡುತ್ತಿದೆ. ಅಭ್ಯಾಸ ಪಂದ್ಯಗಳು ತಂಡಗಳ ಸಿದ್ಧತೆಯನ್ನು ಬಹಿರಂಗಪಡಿಸುತ್ತವೆ. ಶನಿವಾರ ನ್ಯೂಯಾರ್ಕ್ನಲ್ಲಿ ನಡೆದ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಅಭ್ಯಾಸ ಪಂದ್ಯದಲ್ಲಿ ಟೀಂ ಇಂಡಿಯಾ (Team India) ಹೇಗೆ ವಿಶ್ವಕಪ್ಗೆ ಸಿದ್ಧಗೊಂಡಿದೆ ಎಂಬುದು ಜಗಜ್ಜಾಹೀರಾಗಿದೆ. ಅದರಲ್ಲೂ ತಂಡದ ಆರಂಭಿಕ ಜೋಡಿ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ. ಐಪಿಎಲ್ನಲ್ಲಿ 500 ಕ್ಕೂ ಅಧಿಕ ರನ್ ಕಲೆಹಾಕಿದ್ದ ಸಂಜು ಸ್ಯಾಮ್ಸನ್ (Sanju Samson) ಈ ಪಂದ್ಯದಲ್ಲಿ ರೋಹಿತ್ ಶರ್ಮಾ ಜೊತೆ ಓಪನಿಂಗ್ ಮಾಡಿದರು. ಆದರೆ, ರನ್ ಕಲೆಹಾಕಲು ತಿಣುಕಾಡಿ 1 ರನ್ಗೆ ಪೆವಿಲಿಯನ್ ಸೇರಿಕೊಂಡರು.
ಅಭ್ಯಾಸ ಪಂದ್ಯದಲ್ಲಿ ಕೇವಲ 6 ಎಸೆತಗಳನ್ನು ಎದುರಿಸಿದ ಸಂಜು ಸ್ಯಾಮ್ಸನ್ ಕೇವಲ 1 ರನ್ಗೆ ಸುಸ್ತಾದರು. ಎರಡನೇ ಓವರ್ನ ಐದನೇ ಎಸೆತದಲ್ಲಿ ಶೋರಿಫುಲ್ ಇಸ್ಲಾಂ, ಸಂಜುರನ್ನು ಎಲ್ಬಿಡಬ್ಲ್ಯೂ ಔಟ್ ಮಾಡುವ ಮೂಲಕ ಪೆವಿಲಿಯನ್ ಹಾದಿ ತೋರಿಸಿದರು. ಸಂಜು ಅವರು ಹಾರ್ಡ್ ಲೆಂಗ್ತ್ ಬಾಲ್ ಅನ್ನು ಫ್ಲಿಕ್ ಮಾಡಲು ಪ್ರಯತ್ನಿಸುವ ಯತ್ನದಲ್ಲಿ ವಿಕೆಟ್ ಕಳೆದುಕೊಂಡರು. ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ, ನಾಯಕ ರೋಹಿತ್ ಶರ್ಮಾ ಸಂಜು ಜೊತೆ ಓಪನಿಂಗ್ ಮಾಡುವ ಮೂಲಕ ಪ್ರಯೋಗಕ್ಕೆ ಮುಂದಾಗಿದ್ದರು. ಆದರೆ ಈ ಪ್ರಯೋಗ ಸಂಪೂರ್ಣವಾಗಿ ವಿಫಲವಾಯಿತು.
T20 World Cup 2024: ಪಾಂಡ್ಯ ಪಂಚ್ಗೆ ನೆತ್ತರು ಚೆಲ್ಲಿದ ಬಾಂಗ್ಲಾ ಬೌಲರ್! ವಿಡಿಯೋ ನೋಡಿ
ವಾಸ್ತವವಾಗಿ ಈ ಪಂದ್ಯದಲ್ಲಿ ಸಂಜುರನ್ನು ಆರಂಭಿಕನಾಗಿ ಕಣಕ್ಕಿಳಿಸಲು ಕಾರಣವೂ ಇತ್ತು. ಏಕೆಂದರೆ ಐಪಿಎಲ್ನಲ್ಲಿ ಸಂಜು ಅದ್ಭುತ ಫಾರ್ಮ್ನಲ್ಲಿದ್ದರು. ಆಡಿದ 15 ಪಂದ್ಯಗಳಲ್ಲಿ 150ಕ್ಕಿಂತ ಸ್ಟ್ರೈಕ್ ರೇಟ್ ಹಾಗೂ 48.27 ಸರಾಸರಿಯಲ್ಲಿ 531 ರನ್ ಕಲೆಹಾಕಿದ್ದರು. ಹೀಗಾಗಿ ಉತ್ತಮ ಫಾರ್ಮ್ನಲ್ಲಿರುವ ಸಂಜುಗೆ ಪ್ಲೇಯಿಂಗ್ 11 ನಲ್ಲಿ ಅವಕಾಶ ನೀಡುವ ಸಲುವಾಗಿ ಅಭ್ಯಾಸ ಪಂದ್ಯದಲ್ಲಿ ಅವರನ್ನು ಆರಂಭಿಕನಾಗಿ ಕಣಕ್ಕಿಳಿಸಿತ್ತು. ಆದರೆ ಸಂಜು ಆಡಳಿತ ಮಂಡಳಿಯ ನಂಬಿಕೆ ಉಳಿಸಿಕೊಳ್ಳುವಲ್ಲಿ ವಿಫಲರಾದರು.
ಈ ಬಾರಿಯ ಟಿ20 ವಿಶ್ವಕಪ್ಗೆ ಆಯ್ಕೆಯಾಗಿರುವ ತಂಡದಲ್ಲಿ ಆರಂಭಿಕ ಸ್ಥಾನಕ್ಕೆ ಯುವ ಬ್ಯಾಟರ್ ಯಶಸ್ವಿ ಜೈಸ್ವಾಲ್ರನ್ನು ಆಯ್ಕೆ ಮಾಡಲಾಗಿತ್ತು. ಆದರೆ ಇಂದು ನಡೆದ ಅಭ್ಯಾಸ ಪಂದ್ಯದಲ್ಲಿ ಅವರನ್ನು ಆರಂಭಿಕನಾಗಿ ಇರಲಿ, ತಂಡದಲ್ಲೂ ಆಡಿಸುವ ಯೋಚನೆಗೆ ನಾಯಕ ರೋಹಿತ್ ಹೊಗಲಿಲ್ಲ. ಇದರರ್ಥ ಅವರು ಇಡೀ ಟೂರ್ನಿಯಲ್ಲಿ ಬೆಂಚ್ ಕಾಯುವ ಸಾಧ್ಯತಗಳು ಹೆಚ್ಚಾಗಿವೆ. ಜೈಸ್ವಾಲ್ರನ್ನು ಇಂದಿನ ಪಂದ್ಯದಲ್ಲಿ ಆಡಿಸದಿರುವುದರಿಂದ ನಾಯಕ ರೋಹಿತ್ ಶರ್ಮಾ ಅವರೊಂದಿಗೆ ವಿರಾಟ್ ಕೊಹ್ಲಿ ಆರಂಭಿಕರಾಗಿ ಕಣಕ್ಕಿಳಿಯುವುದು ಖಚಿತ ಎಂದು ಹೇಳಲಾಗುತ್ತಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:35 pm, Sat, 1 June 24