T20 World Cup 2024: ಕೇವಲ 39 ರನ್​ಗೆ ಉಗಾಂಡ ಆಲೌಟ್

|

Updated on: Jun 09, 2024 | 9:10 AM

T20 World Cup 2024: ಉಗಾಂಡ ತಂಡವು ಟಿ20 ವಿಶ್ವಕಪ್​ನಲ್ಲಿ ಅತ್ಯಂತ ಕಳಪೆ ದಾಖಲೆ ಬರೆದಿದೆ. ವೆಸ್ಟ್ ಇಂಡೀಸ್ ವಿರುದ್ಧ ಕೇವಲ 39 ರನ್​ಗಳಿಗೆ ಆಲೌಟ್ ಆಗುವ ಮೂಲಕ ಟಿ20 ವಿಶ್ವಕಪ್​ನಲ್ಲಿ ಅತೀ ಕಡಿಮೆ ಮೊತ್ತಕ್ಕೆ ಆಲೌಟ್ ಆದ 2ನೇ ತಂಡ ಎನಿಸಿಕೊಂಡಿದೆ. ಇದಕ್ಕೂ ಮುನ್ನ 2014ರಲ್ಲಿ ನೆದರ್​ಲ್ಯಾಂಡ್ಸ್ ತಂಡವು 39 ರನ್​ಗಳಿಗೆ ಆಲೌಟ್ ಆಗಿತ್ತು. ಇದೀಗ ಉಗಾಂಡ ಈ ಕಳಪೆ ದಾಖಲೆಯನ್ನು ಸರಿಗಟ್ಟಿರುವುದು ವಿಶೇಷ.

T20 World Cup 2024: ಕೇವಲ 39 ರನ್​ಗೆ ಉಗಾಂಡ ಆಲೌಟ್
Uganda
Follow us on

T20 World Cup 2024: ಗಯಾನಾದ ಪ್ರಾವಿಡೆನ್ಸ್ ಸ್ಟೇಡಿಯಂನಲ್ಲಿ ಟಿ20 ವಿಶ್ವಕಪ್​ನ 18ನೇ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡ ಅಮೋಘ ಗೆಲುವು ದಾಖಲಿಸಿದೆ. ಅದು ಕೂಡ ಉಗಾಂಡ ತಂಡವನ್ನು ಕೇವಲ 39 ರನ್​ಗಳಿಗೆ ಆಲೌಟ್ ಮಾಡುವ ಮೂಲಕ ಎಂಬುದು ವಿಶೇಷ. ಈ ಪಂದ್ಯದಲ್ಲಿ ಟಾಸ್ ಗೆದ್ದ ವೆಸ್ಟ್ ಇಂಡೀಸ್ ತಂಡದ ನಾಯಕ ರೋವ್​ಮನ್ ಪೊವೆಲ್ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ವಿಂಡೀಸ್ ಪರ ಆರಂಭಿಕ ಆಟಗಾರ ಜಾನ್ಸನ್ ಚಾರ್ಲ್ಸ್ 44 ರನ್ ಬಾರಿಸಿ ಮಿಂಚಿದ್ದರು.

ಆ ಬಳಿಕ ಬಂದ ನಿಕೋಲಸ್ ಪೂರನ್ 17 ಎಸೆತಗಳಲ್ಲಿ 22 ರನ್ ಬಾರಿಸಿದರೆ, ರೋವ್​ಮನ್ ಪೊವೆಲ್ 23 ರನ್​ಗಳ ಕೊಡುಗೆ ನೀಡಿದರು. ಇನ್ನು ಎಡಗೈ ದಾಂಡಿಗ ಶೆರ್ಫೆನ್ ರುದರ್​ಫೋರ್ಡ್ 22 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು.

ಇದರ ನಡುವೆ ಅಂತಿಮ ಓವರ್​ಗಳ ವೇಳೆ ಕಣಕ್ಕಿಳಿದ ಆ್ಯಂಡ್ರೆ ರಸೆಲ್ 17 ಎಸೆತಗಳಲ್ಲಿ 6 ಫೋರ್​ಗಳೊಂದಿಗೆ 30 ರನ್ ಸಿಡಿಸಿದರು. ಈ ಮೂಲಕ ವೆಸ್ಟ್ ಇಂಡೀಸ್ ತಂಡ ನಿಗದಿತ 20 ಓವರ್​ಗಳಲ್ಲಿ 5 ವಿಕೆಟ್ ಕಳೆದುಕೊಂಡು 173 ರನ್ ಕಲೆಹಾಕಿತು.

ಉಗಾಂಡ ಕಳಪೆ ಬ್ಯಾಟಿಂಗ್:

ವೆಸ್ಟ್ ಇಂಡೀಸ್ ನೀಡಿದ 174 ರನ್​ಗಳ ಕಠಿಣ ಗುರಿಯನ್ನು ಬೆನ್ನತ್ತಿದ ಉಗಾಂಡ ತಂಡವು ಕಳಪೆ ಬ್ಯಾಟಿಂಗ್ ಪ್ರದರ್ಶನ ನೀಡಿತು. 4 ರನ್​ಗಳಿಸುವಷ್ಟರಲ್ಲಿ ಆರಂಭಿಕರಿಬ್ಬರನ್ನು ಔಟ್ ಮಾಡಿ ವಿಂಡೀಸ್ ಬೌಲರ್​ಗಳು ಪವರ್​ಪ್ಲೇನಲ್ಲೇ ಪಂದ್ಯದ ಮೇಲೆ ಹಿಡಿತ ಸಾಧಿಸಿದ್ದರು.

ಮೊದಲ ಓವರ್​ನಲ್ಲೇ ರೋಜರ್ ಮುಕಾಸಾ (0) ವಿಕೆಟ್ ಕಬಳಿಸುವ ಮೂಲಕ ಸ್ಪಿನ್ನರ್ ಅಕೇಲ್ ಹೊಸೇನ್ ಶುಭಾರಂಭ ಮಾಡಿದ್ದರು. ಆ ಬಳಿಕ ಅಲ್ಪೇಜ್ ರಂಜಾನಿ (6) ಹಾಗೂ ಕೆನ್ನೆತ್ ವೈಸ್ವಾ (1) ರನ್ನು ಎಲ್​ಬಿಡಬ್ಲ್ಯೂ ಮಾಡಿದರು. ಇದಾದ ಬಳಿಕ ಅಲಿ ಶಾ (3) ಹಾಗೂ ದಿನೇಶ್ ನಕ್ರಾಣಿ (0) ಯನ್ನು ಕ್ಲೀನ್ ಬೌಲ್ಡ್ ಮಾಡಿ ಬ್ಯಾಕ್ ಟು ಬ್ಯಾಕ್ ಯಶಸ್ಸು ತಂದುಕೊಟ್ಟರು.

ಈ ಮೂಲಕ 4 ಓವರ್​ಗಳಲ್ಲಿ ಕೇವಲ 11 ರನ್ ನೀಡಿ ಅಕೇಲ್ ಹೊಸೇನ್ 5 ವಿಕೆಟ್ ಕಬಳಿಸಿದರು. ಮತ್ತೊಂದೆಡೆ ಅಲ್ಝಾರಿ ಜೋಸೆಫ್ 2 ವಿಕೆಟ್ ಪಡೆದರೆ, ರೊಮಾರಿಯೊ ಶೆಫರ್ಡ್, ಗುಡಾಕೇಶ್ ಮೋಟಿ ಮತ್ತು ಆ್ಯಂಡ್ರೆ ರಸೆಲ್ ತಲಾ ಒಂದು ವಿಕೆಟ್ ಕಬಳಿಸಿದರು. ಈ ಮೂಲಕ ಉಗಾಂಡ ತಂಡವನ್ನು 12 ಓವರ್​ಗಳಲ್ಲಿ ಕೇವಲ 39 ರನ್​ಗಳಿಗೆ ಆಲೌಟ್ ಮಾಡಿ ವೆಸ್ಟ್ ಇಂಡೀಸ್ 134 ರನ್​ಗಳ ಅಮೋಘ ಜಯ ಸಾಧಿಸಿದೆ.

ವೆಸ್ಟ್ ಇಂಡೀಸ್ ಪ್ಲೇಯಿಂಗ್ 11: ಬ್ರಾಂಡನ್ ಕಿಂಗ್ , ಜಾನ್ಸನ್ ಚಾರ್ಲ್ಸ್ , ನಿಕೋಲಸ್ ಪೂರನ್ (ವಿಕೆಟ್ ಕೀಪರ್) , ರೋಸ್ಟನ್ ಚೇಸ್ , ರೋವ್​ಮನ್ ಪೊವೆಲ್ (ನಾಯಕ) , ಶೆರ್ಫೇನ್ ರುದರ್ಫೋರ್ಡ್ , ಆಂಡ್ರೆ ರಸೆಲ್ , ರೊಮಾರಿಯೋ ಶೆಫರ್ಡ್ , ಅಕೇಲ್ ಹೊಸೈನ್ , ಅಲ್ಜಾರಿ ಜೋಸೆಫ್ , ಗುಡಾಕೇಶ್ ಮೋಟಿ.

ಇದನ್ನೂ ಓದಿ: Babar Azam: ಬಾಬರ್ ಅಬ್ಬರಕ್ಕೆ ಕಿಂಗ್ ಕೊಹ್ಲಿಯ ದಾಖಲೆ ಉಡೀಸ್

ಉಗಾಂಡ ಪ್ಲೇಯಿಂಗ್ 11: ರೋಜರ್ ಮುಕಾಸಾ , ಸೈಮನ್ ಸ್ಸೆಸಾಜಿ (ವಿಕೆಟ್ ಕೀಪರ್) , ರಾಬಿನ್ಸನ್ ಒಬುಯಾ , ರಿಯಾಜತ್ ಅಲಿ ಶಾ , ಅಲ್ಪೇಶ್ ರಾಮ್ಜಾನಿ , ದಿನೇಶ್ ನಕ್ರಾಣಿ , ಜುಮಾ ಮಿಯಾಗಿ , ಕೆನ್ನೆತ್ ವೈಸ್ವಾ , ಬ್ರಿಯಾನ್ ಮಸಾಬ (ನಾಯಕ) , ಕಾಸ್ಮಾಸ್ ಕ್ಯೆವುಟಾ , ಫ್ರಾಂಕ್ ನ್ಸುಬುಗಾ.

 

Published On - 8:53 am, Sun, 9 June 24