AUS vs ENG: ಇಂಗ್ಲೆಂಡ್ ವಿರುದ್ಧ ಗೆದ್ದು ಬೀಗಿದ ಆಸ್ಟ್ರೇಲಿಯಾ
T20 World Cup 2024: ಇಂಗ್ಲೆಂಡ್ ವಿರುದ್ಧದದ ಗೆಲುವಿನೊಂದಿಗೆ ಆಸ್ಟ್ರೇಲಿಯಾ ತಂಡ ಗ್ರೂಪ್-ಬಿ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ, ಅದೇ ಇಂಗ್ಲೆಂಡ್ ತಂಡವು 4ನೇ ಸ್ಥಾನಕ್ಕೆ ಕುಸಿದಿದೆ. ಅಂದರೆ ಇದಕ್ಕೂ ಮುನ್ನ ನಡೆದ ಇಂಗ್ಲೆಂಡ್ ಮತ್ತು ಸ್ಕಾಟ್ಲೆಂಟ್ ನಡುವಣ ಪಂದ್ಯವು ರದ್ದಾಗಿತ್ತು. ಹೀಗಾಗಿ ಇಂಗ್ಲೆಂಡ್ ತಂಡವು ಕೇವಲ 1 ಅಂಕಗಳನ್ನು ಮಾತ್ರ ಹೊಂದಿದೆ.
T20 World Cup 2024: ಬಾರ್ಬಡೋಸ್ನ ಕೆನ್ಸಿಂಗ್ಟನ್ ಓವಲ್ ಮೈದಾನದಲ್ಲಿ ನಡೆದ ಟಿ20 ವಿಶ್ವಕಪ್ನ 18ನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ತಂಡದ ನಾಯಕ ಜೋಸ್ ಬಟ್ಲರ್ ಬೌಲಿಂಗ್ ಆಯ್ದುಕೊಂಡರು. ಅದರಂತೆ ಇನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ ತಂಡಕ್ಕೆ ಆರಂಭಿಕರಾದ ಟ್ರಾವಿಸ್ ಹೆಡ್ ಹಾಗೂ ಡೇವಿಡ್ ವಾರ್ನರ್ ಬಿರುಸಿನ ಆರಂಭ ಒದಗಿಸಿದ್ದರು.
ಮೊದಲ ವಿಕೆಟ್ಗೆ ಕೇವಲ 5 ಓವರ್ಗಳಲ್ಲಿ 70 ರನ್ ಪೇರಿಸಿದ ಬಳಿಕ ಡೇವಿಡ್ ವಾರ್ನರ್ (39) ಔಟಾದರು. ಮತ್ತೊಂದೆಡೆ ಟ್ರಾವಿಸ್ ಹೆಡ್ 34 ರನ್ಗಳಿಸಿ ವಿಕೆಟ್ ಒಪ್ಪಿಸಿದರು. ಆ ಬಳಿಕ ಬಂದ ನಾಯಕ ಮಿಚೆಲ್ ಮಾರ್ಷ್ 35 ರನ್ಗಳ ಕೊಡುಗೆ ನೀಡಿದರೆ, ಗ್ಲೆನ್ ಮ್ಯಾಕ್ಸ್ವೆಲ್ 28 ರನ್ ಬಾರಿಸಿದರು. ಇನ್ನು ಅಂತಿಮ ಹಂತದಲ್ಲಿ ಮಾರ್ಕಸ್ ಸ್ಟೋಯಿನಿಸ್ 17 ಎಸೆತಗಳಲ್ಲಿ 30 ರನ್ ಸಿಡಿಸಿದರು.
ಹಾಗೆಯೇ ಮ್ಯಾಥ್ಯೂ ವೇಡ್ 10 ಎಸೆತಗಳಲ್ಲಿ 17 ರನ್ ಬಾರಿಸುವ ಮೂಲಕ ತಂಡದ ಮೊತ್ತವನ್ನು 200ರ ಗಡಿದಾಟಿಸಿದರು. ಅದರಂತೆ ಆಸ್ಟ್ರೇಲಿಯಾ ತಂಡವು ನಿಗದಿತ 20 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 201 ರನ್ ಕಲೆಹಾಕಿತು.
202 ರನ್ಗಳ ಗುರಿಯನ್ನು ಬೆನ್ನತ್ತಿದ ಇಂಗ್ಲೆಂಡ್ ಫಿಲ್ ಸಾಲ್ಟ್ ಹಾಗೂ ಜೋಸ್ ಬಟ್ಲರ್ ಅತ್ಯುತ್ತಮ ಆರಂಭ ಒದಗಿಸಿದ್ದರು. ಮೊದಲ ವಿಕೆಟ್ಗೆ 73 ರನ್ಗಳ ಜೊತೆಯಾಟವಾಡಿದ ಬಳಿಕ ಸಾಲ್ಟ್ (37) ನಿರ್ಗಮಿಸಿದರು. ಮತ್ತೊಂದೆಡೆ 28 ಎಸೆತಗಳಲ್ಲಿ 42 ರನ್ ಚಚ್ಚುವ ಮೂಲಕ ಜೋಸ್ ಬಟ್ಲರ್ ಅಬ್ಬರಿಸಿದ್ದರು.
ಆದರೆ ಆರಂಭಿಕರಿಬ್ಬರ ನಿರ್ಗಮನದ ಬಳಿಕ ಇಂಗ್ಲೆಂಡ್ ತಂಡ ರನ್ ಗತಿ ಕಡಿಮೆಯಾಯಿತು. ವಿಲ್ ಜಾಕ್ಸ್ ಕೇವಲ 10 ರನ್ಗಳಿಸಿ ಔಟಾದರೆ, ಜಾನಿ ಬೈರ್ಸ್ಟೋವ್ 7 ರನ್ಗಳಿಸಲಷ್ಟೇ ಶಕ್ತರಾದರು. ಇನ್ನು ಮೊಯೀನ್ ಅಲಿ (25) ಹಾಗೂ ಹ್ಯಾರಿ ಬ್ರೂಕ್ (20) ಅತ್ಯಲ್ಪ ಕೊಡುಗೆ ನೀಡಿದರೂ ತಂಡವನ್ನು ಗೆಲುವಿನತ್ತ ಕೊಂಡೊಯ್ಯಲು ಸಾಧ್ಯವಾಗಲಿಲ್ಲ.
ಪರಿಣಾಮ ಇಂಗ್ಲೆಂಡ್ ತಂಡವು 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 165 ರನ್ ಗಳಿಸಲಷ್ಟೇ ಶಕ್ತರಾದರು. ಈ ಮೂಲಕ ಆಸ್ಟ್ರೇಲಿಯಾ ತಂಡವು 36 ರನ್ಗಳ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಆಸ್ಟ್ರೇಲಿಯಾ ತಂಡ ಗ್ರೂಪ್-ಬಿ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ, ಇಂಗ್ಲೆಂಡ್ ತಂಡವು 4ನೇ ಸ್ಥಾನಕ್ಕೆ ಕುಸಿದಿದೆ.
ಆಸ್ಟ್ರೇಲಿಯಾ ಪ್ಲೇಯಿಂಗ್ 11: ಡೇವಿಡ್ ವಾರ್ನರ್ , ಟ್ರಾವಿಸ್ ಹೆಡ್ , ಮಿಚೆಲ್ ಮಾರ್ಷ್ (ನಾಯಕ) , ಗ್ಲೆನ್ ಮ್ಯಾಕ್ಸ್ ವೆಲ್ , ಮಾರ್ಕಸ್ ಸ್ಟೊಯಿನಿಸ್ , ಟಿಮ್ ಡೇವಿಡ್ , ಮ್ಯಾಥ್ಯೂ ವೇಡ್ (ವಿಕೆಟ್ ಕೀಪರ್) , ಪ್ಯಾಟ್ ಕಮಿನ್ಸ್ , ಮಿಚೆಲ್ ಸ್ಟಾರ್ಕ್ , ಆ್ಯಡಂ ಝಂಪಾ , ಜೋಶ್ ಹ್ಯಾಝಲ್ವುಡ್.
ಇದನ್ನೂ ಓದಿ: Babar Azam: ಬಾಬರ್ ಅಬ್ಬರಕ್ಕೆ ಕಿಂಗ್ ಕೊಹ್ಲಿಯ ದಾಖಲೆ ಉಡೀಸ್
ಇಂಗ್ಲೆಂಡ್ ಪ್ಲೇಯಿಂಗ್ 11: ಜೋಸ್ ಬಟ್ಲರ್ (ನಾಯಕ) , ಫಿಲ್ ಸಾಲ್ಟ್ , ವಿಲ್ ಜ್ಯಾಕ್ಸ್ , ಜಾನಿ ಬೈರ್ಸ್ಟೋವ್ , ಹ್ಯಾರಿ ಬ್ರೂಕ್ , ಮೊಯಿನ್ ಅಲಿ , ಲಿಯಾಮ್ ಲಿವಿಂಗ್ಸ್ಟೋನ್ , ಕ್ರಿಸ್ ಜೋರ್ಡನ್ , ಜೋಫ್ರಾ ಆರ್ಚರ್ , ಆದಿಲ್ ರಶೀದ್ , ಮಾರ್ಕ್ ವುಡ್.