
ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆದ 2026 ರ ಟಿ20 ವಿಶ್ವಕಪ್ನ (T20 World Cup 2026) 17ನೇ ಪಂದ್ಯದಲ್ಲಿ ಕ್ರಿಕೆಟ್ ಶಿಶು ದೇಶಗಳಾದ ನೇಪಾಳ ಹಾಗೂ ಇಟಲಿ ( Nepal vs Italy) ತಂಡಗಳು ಮುಖಾಮುಖಿಯಾಗಿದ್ದವು. ಇದೇ ವಿಶ್ವಕಪ್‌ನಲ್ಲಿ ಬಲಿಷ್ಠ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ನೇಪಾಳ ನೀಡಿದ ಕೆಚ್ಚೆದಯ ಹೋರಾಟವನ್ನು ನೋಡಿದ್ದವರು ಇಂದಿನ ಪಂದ್ಯದಲ್ಲಿ ಇಟಲಿಗೆ ಸೋಲು ಕಟ್ಟಿಟ್ಟ ಬುತ್ತಿ ಎಂದುಕೊಂಡಿದ್ದರು. ಆದರೆ ನೇಪಾಳ ವಿರುದ್ಧ ಅಚ್ಚರಿಯ ಪ್ರದರ್ಶನ ನೀಡಿದ ಇಟಲಿ ಬರೋಬ್ಬರಿ 10 ವಿಕೆಟ್‌ಗಳ ಜಯ ದಾಖಲಿಸಿತು. ಇದು ಟಿ20 ವಿಶ್ವಕಪ್‌ನಲ್ಲಿ ಇಟಲಿ ತಂಡದ ಚೊಚ್ಚಲ ಗೆಲುವಾಗಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ನೇಪಾಳ 123 ರನ್ ಕಲೆಹಾಕಲಷ್ಟೇ ಶಕ್ತವಾಯಿತು. ಈ ಗುರಿ ಬೆನ್ನಟ್ಟಿದ ಇಟಲಿ ಯಾವುದೇ ವಿಕೆಟ್ ಕಳೆದುಕೊಳ್ಳದೆ 12.4 ಓವರ್ಗಳಲ್ಲಿ ಗೆಲುವಿನ ದಡ ಮುಟ್ಟಿತು.
ಫುಟ್‌ಬಾಲ್‌ಗೆ ಹೆಸರುವಾಸಿಯಾದ ಇಟಲಿ ಇದೇ ಮೊದಲ ಬಾರಿಗೆ ಟಿ20 ವಿಶ್ವಕಪ್‌ನಲ್ಲಿ ಭಾಗವಹಿಸುತ್ತಿದ್ದು ತನ್ನ ಮೊದಲ ಗೆಲುವಿನ ಖಾತೆ ತೆರೆದಿದೆ. ಇದರೊಂದಿಗೆ ಇಟಲಿ ಆಡಿರುವ ಎರಡು ಪಂದ್ಯಗಳಿಂದ ಎರಡು ಅಂಕಗಳೊಂದಿಗೆ ಗ್ರೂಪ್ ಸಿ ನಲ್ಲಿ ಮೂರನೇ ಸ್ಥಾನದಲ್ಲಿದೆ. ಈ ಮೂಲಕ ಇಟಲಿ ಸೂಪರ್ ಏಟ್ಸ್ ಹಂತವನ್ನು ತಲುಪುವ ತನ್ನ ಭರವಸೆಯನ್ನು ಜೀವಂತವಾಗಿರಿಸಿಕೊಂಡಿದೆ. ಇತ್ತ ನೇಪಾಳವು ಸತತ ಎರಡನೇ ಸೋಲನ್ನು ಎದುರಿಸಿ ಟೂರ್ನಿಯಿಂದ ಹೊರಬೀಳುವ ಆತಂಕದಲ್ಲಿದೆ.
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡುವಾಗ ನೇಪಾಳಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಇದರ ಪರಿಣಾಮವಾಗಿ ನೇಪಾಳ 49 ರನ್‌ಗಳಿಗೆ ಪ್ರಮುಖ ಮೂರು ವಿಕೆಟ್‌ಗಳನ್ನು ಕಳೆದುಕೊಂಡಿತು. ಕುಶಾಲ್ ಭುರ್ತಾಲ್ ಐದು ರನ್‌ಗಳಿಗೆ ಔಟಾದರೆ, ನಾಯಕ ರೋಹಿತ್ ಪೌಡೆಲ್ 14 ಎಸೆತಗಳಲ್ಲಿ 23 ರನ್ ಗಳಿಸಿ ಪೆವಿಲಿಯನ್‌ಗೆ ಮರಳಿದರು. ಆಸಿಫ್ ಶೇಖ್ ಕೂಡ 20 ರನ್ಗೆ ಸುಸ್ತಾದರು. ಆ ನಂತರವೂ ನಿಯಮಿತ ಅಂತರದಲ್ಲಿ ನೇಪಾಳ ವಿಕೆಟ್ ಕಳೆದುಕೊಂಡಿತು.
ಇಟಲಿ ಬೌಲರ್ಗಳ ಯೋಜಿತ ದಾಳಿಯ ಮುಂದೆ ನೇಪಾಳದ ಯಾವುದೇ ಬ್ಯಾಟ್ಸ್ಮನ್ಗೆ ದೊಡ್ಡ ಇನ್ನಿಂಗ್ಸ್ ಆಡಲು ಸಾಧ್ಯವಾಗಲಿಲ್ಲ. ನೇಪಾಳ ಪರ ಆರಿಫ್ ಶೇಖ್ 27 ರನ್ ಗಳಿಸಿ ಅಗ್ರ ಸ್ಕೋರರ್ ಎನಿಸಿಕೊಂಡರೆ, ಕರಣ್ ಕೆಸಿ 11 ಎಸೆತಗಳಲ್ಲಿ ಒಂದು ಬೌಂಡರಿ ಮತ್ತು ಒಂದು ಸಿಕ್ಸರ್‌ನೊಂದಿಗೆ 18 ರನ್ ಗಳಿಸಿ ಅಜೇಯರಾಗಿ ಉಳಿದರು. ಇಟಲಿ ಪರ ಕ್ರಿಶನ್ ಮೂರು ವಿಕೆಟ್ ಪಡೆದರೆ, ಬೆನ್ ಮಾನೆಟ್ಟಿ ಎರಡು ವಿಕೆಟ್ ಪಡೆದರು. ಅಲಿ ಹಸನ್, ಜೆಜೆ ಸ್ಮಟ್ಸ್ ಮತ್ತು ಜಸ್ಪ್ರೀತ್ ಸಿಂಗ್ ತಲಾ ಒಂದು ವಿಕೆಟ್ ಪಡೆದರು.
SL vs OMN: 19 ವರ್ಷಗಳ ನಂತರ ಟಿ20 ವಿಶ್ವಕಪ್‌ನಲ್ಲಿ ಶ್ರೀಲಂಕಾಕ್ಕೆ ದಾಖಲೆಯ ಗೆಲುವು
ಈ ಗುರಿ ಬೆನ್ನಟ್ಟಿದ ಇಟಲಿ ಪರ ಸಹೋದರರಾದ ಜಸ್ಟಿನ್ ಮೊಸ್ಕಾ ಮತ್ತು ಆಂಥೋನಿ ಮೊಸ್ಕಾ ಅಜೇಯ ಅರ್ಧಶತಕ ಬಾರಿಸಿ ತಂಡವನ್ನು ಸುಲಭವಾಗಿ ಗೆಲುವಿನ ದಡ ಮುಟ್ಟಿಸಿದರು. ಜಸ್ಟಿನ್ ಅಜೇಯ 60 ರನ್ ಗಳಿಸಿದರೆ, ಆಂಥೋನಿ ಕೂಡ ಅಜೇಯ 62 ರನ್ ಸಿಡಿಸಿದರು. ಈ ಇಬ್ಬರಿಗೆ ಟಿ20 ವಿಶ್ವಕಪ್‌ನಲ್ಲಿ ಇದು ಚೊಚ್ಚಲ ಅರ್ಧಶತಕವಾಗಿತ್ತು. ಇವರಿಬ್ಬರು ಒಟ್ಟಿಗೆ ಒಂಬತ್ತು ಸಿಕ್ಸರ್‌ಗಳು ಮತ್ತು ಎಂಟು ಬೌಂಡರಿಗಳನ್ನು ಬಾರಿಸಿ ತಂಡಕ್ಕೆ ಐತಿಹಾಸಿಕ ಗೆಲುವು ತಂದುಕೊಟ್ಟರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:53 pm, Thu, 12 February 26