T20 World Cup: ಟಿ20 ವಿಶ್ವಕಪ್ ಆರಂಭದ ಬೆನ್ನಲ್ಲೇ ಇದೀಗ ಮಳೆಯ ಭೀತಿ ಎದುರಾಗಿದೆ. ಆಸ್ಟ್ರೇಲಿಯಾದ ಕೆಲ ಭಾಗಗಳಲ್ಲಿ ಮಳೆಯಾಗುತ್ತಿದ್ದು, ಇದು ಟಿ20 ವಿಶ್ವಕಪ್ ಮೇಲೂ ಪರಿಣಾಮ ಬೀರುವ ಸಾಧ್ಯತೆಯಿದೆ. ಅದರಲ್ಲೂ ಮೆಲ್ಬೋರ್ನ್ನಲ್ಲಿ ಅಕ್ಟೋಬರ್ 23 ರಂದು ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ವರದಿ ತಿಳಿಸಿದೆ. ಮುಂದಿನ ಭಾನುವಾರ ಮೆಲ್ಬೋರ್ನ್ ಸುತ್ತ ಮುತ್ತ ಶೇ.60 ರಷ್ಟು ಮಳೆಯಾಗುವ ಸಾಧ್ಯತೆಯಿದ್ದು, ಇದರಿಂದ ಭಾರತ-ಪಾಕಿಸ್ತಾನ್ (India vs Pakistan) ನಡುವಣ ಪಂದ್ಯ ನಡೆಯುತ್ತಾ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ.
ಏಕೆಂದರೆ ಅಕ್ಟೋಬರ್ 23 ರಂದೇ ಭಾರತ-ಪಾಕಿಸ್ತಾನ್ ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್ನಲ್ಲಿ ಮುಖಾಮುಖಿಯಾಗಲಿದೆ. ಪ್ರಸ್ತುತ ಹವಾಮಾನ ವರದಿಯಂತೆ, ಒಂದು ವೇಳೆ ಪಂದ್ಯಕ್ಕೆ ಮಳೆ ಅಡಚಣೆ ಉಂಟು ಮಾಡಿದರೆ ಫಲಿತಾಂಶ ಹೇಗೆ ನಿರ್ಧಾರವಾಗಲಿದೆ ಎಂಬ ಸಂಶಯ ಹಲವರಲ್ಲಿದೆ. ಈ ಎಲ್ಲಾ ಡೌಟ್ಗಳಿಗೆ ಇಲ್ಲಿದೆ ಉತ್ತರ…
ಒಂದು ವೇಳೆ ಭಾರತ-ಪಾಕಿಸ್ತಾನ್ ನಡುವಣ ಪಂದ್ಯದ ವೇಳೆ ಮಳೆ ಬಂದರೆ, ಓವರ್ಗಳ ಕಡಿತದೊಂದಿಗೆ ಪಂದ್ಯವನ್ನು ಮುಂದುವರೆಸಲಾಗುತ್ತದೆ. ಅಂದರೆ ಮಳೆಯಿಂದಾಗಿ ಪಂದ್ಯ ಶುರುವಾಗುವುದು ವಿಳಂಬವಾದರೆ ಅಥವಾ ಪಂದ್ಯ ನಡೆಯುತ್ತಿದ್ದ ವೇಳೆ ಮಳೆ ಬಂದರೆ ಓವರ್ ಕಡಿಮೆಗೊಳಿಸಿ ಪಂದ್ಯವನ್ನು ನಡೆಸಲಾಗುತ್ತದೆ.
ಇದಾಗ್ಯೂ ನಿರಂತರ ಮಳೆಯಿಂದ ಅಡಚಣೆ ಉಂಟಾದರೆ ಪಂದ್ಯದ ನಿಗದಿತ ಸಮಯದವರೆಗೂ ಕಾಯಲಾಗುತ್ತದೆ. ಇದರ ನಡುವೆ ಮಳೆ ನಿಂತರೆ 5 ಓವರ್ಗಳ ಪಂದ್ಯವನ್ನು ಆಯೋಜಿಸಲಾಗುತ್ತದೆ. ಅಂದರೆ ಐದೈದು ಓವರ್ಗಳ ಪಂದ್ಯ ನಡೆಯಲಿದೆ.
ಕನಿಷ್ಠ 5 ಓವರ್ಗಳ ಪಂದ್ಯ ನಡೆಸಲು ಕೂಡ ಸಾಧ್ಯವಾಗದಿದ್ದರೆ ಮಾತ್ರ ಆ ಪಂದ್ಯವನ್ನು ರದ್ದು ಮಾಡಲಾಗುತ್ತದೆ. ಇಲ್ಲಿ ರದ್ದು ಮಾಡಿದರೆ ಮೀಸಲು ದಿನ ಇರುವುದಿಲ್ಲ. ಬದಲಾಗಿ ಉಭಯ ತಂಡಗಳಿಗೂ ತಲಾ 1 ಪಾಯಿಂಟ್ ನೀಡಲಾಗುತ್ತದೆ.
ಇನ್ನು ನಾಕೌಟ್ ಹಂತದಲ್ಲಿ ಮಳೆ ಬಂದರೆ ಮೀಸಲು ದಿನ ಇರಲಿದೆ. ಅಂದರೆ ಸೆಮಿಫೈನಲ್ ಹಾಗೂ ಫೈನಲ್ ಪಂದ್ಯಗಳ ವೇಳೆ ಮಳೆ ಬಂದರೆ ಮರುದಿನ ಪಂದ್ಯವನ್ನು ಮುಂದುವರೆಸಲಾಗುತ್ತದೆ. ಅಂದರೆ ಪಂದ್ಯ ಎಲ್ಲಿಗೆ ಸ್ಥಗಿತವಾಗಿರುತ್ತದೆಯೋ ಅಲ್ಲಿಂದಲೇ ಮರುದಿನ ಪಂದ್ಯ ಶುರುವಾಗಲಿದೆ.
ಉದಾಹರಣೆಗೆ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ 15 ಓವರ್ ಬ್ಯಾಟಿಂಗ್ ಮಾಡಿದ ವೇಳೆ ಮಳೆ ಬಂದರೆ, ಮರುದಿನ ಟೀಮ್ ಇಂಡಿಯಾಗೆ ಕೊನೆಯ 5 ಓವರ್ ಬ್ಯಾಟ್ ಮಾಡಲು ಮಾತ್ರ ಅವಕಾಶ ಇರಲಿದೆ. ಬದಲಾಗಿ ಮತ್ತೆ ಆರಂಭದಿಂದ ಪಂದ್ಯ ಶುರುವಾಗುವುದಿಲ್ಲ.
ಅದಾಗ್ಯೂ ಮೀಸಲು ದಿನದಲ್ಲೂ ಸೆಮಿ ಫೈನಲ್ ಪಂದ್ಯಗಳನ್ನು ನಡೆಸಲು ಸಾಧ್ಯವಾಗದಿದ್ದರೆ ಸೂಪರ್-12 ಹಂತದಲ್ಲಿ ಪಡೆದಿರುವ ಪಾಯಿಂಟ್ಗಳನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಈ ಮೂಲಕ ಫೈನಲ್ ಆಡುವ ತಂಡಗಳನ್ನು ನಿರ್ಧರಿಸಲಾಗುತ್ತದೆ.
ಅಂದರೆ ಇಲ್ಲಿ ಸೂಪರ್-12 ಹಂತದಲ್ಲಿ ಯಾವುದೇ ಮೀಸಲು ದಿನ ಇರುವುದಿಲ್ಲ. ಹೀಗಾಗಿ ಭಾರತ-ಪಾಕಿಸ್ತಾನ್ ನಡುವಣ ಪಂದ್ಯದ ವೇಳೆ ಮಳೆ ಬಂದರೆ ಡಕ್ವರ್ತ್ ಲೂಯಿಸ್ ನಿಯಮದ ಪ್ರಕಾರ ಓವರ್ಗಳ ಕಡಿತದೊಂದಿಗೆ ಪಂದ್ಯವನ್ನು ಮುಂದುವರೆಸಲಾಗುತ್ತದೆ.
ಇಲ್ಲಿ ಗಮನಿಸಬೇಕಾದ ಮತ್ತೊಂದು ಅಂಶ ಎಂದರೆ ಕನಿಷ್ಠ 5 ಓವರ್ಗಳ ಪಂದ್ಯ ನಡೆಸಿದ್ರೆ ಮಾತ್ರ ಫಲಿತಾಂಶವನ್ನು ನಿರ್ಧರಿಸಲಾಗುತ್ತದೆ. ಇದರ ಹೊರತಾಗಿ ಸೂಪರ್ ಓವರ್ ಇರುವುದಿಲ್ಲ. ಇನ್ನು 5 ಓವರ್ಗಳ ಪಂದ್ಯವನ್ನು ನಡೆಸಲು ಸಾಧ್ಯವಾಗದಿದ್ದರೆ ಮಾತ್ರ ಆ ಮ್ಯಾಚ್ ಅನ್ನು ರದ್ದುಗೊಳಿಸಿ ಉಭಯ ತಂಡಗಳಿಗೆ ತಲಾ ಒಂದೊಂದು ಪಾಯಿಂಟ್ ನೀಡಲಾಗುತ್ತದೆ.
ಹೀಗಾಗಿ ಭಾರತ-ಪಾಕಿಸ್ತಾನ್ ನಡುವಣ ಪಂದ್ಯದ ವೇಳೆ ಮಳೆ ಅಡಚಣೆ ಉಂಟಾದರೆ, ಪಂದ್ಯಕ್ಕಾಗಿ ನಿಗದಿ ಮಾಡಲಾದ ಸಮಯದವರೆಗೂ ಕಾದು ನೋಡಲಿದ್ದಾರೆ. ಹಾಗಾಗಿ ಕನಿಷ್ಠ 5 ಓವರ್ಗಳ ಪಂದ್ಯವನ್ನಾದರೂ ಕ್ರಿಕೆಟ್ ಪ್ರೇಮಿಗಳು ಎದುರು ನೋಡಬಹುದು.
Published On - 10:10 pm, Sun, 16 October 22