KL Rahul: ಕೆಎಲ್ ರಾಹುಲ್ ಸಿಡಿಲಬ್ಬರಕ್ಕೆ ದಂಗಾದ ರೋಹಿತ್ ಶರ್ಮಾ..!
T20 World Cup 2022: ಆಸ್ಟ್ರೇಲಿಯಾ ತಂಡಕ್ಕೆ ಗೆಲ್ಲಲು 11 ರನ್ಗಳ ಅವಶ್ಯಕತೆಯಿತ್ತು. ಈ ವೇಳೆ ದಾಳಿಗಿಳಿದ ಮೊಹಮ್ಮದ್ ಶಮಿ ಅವರ ಮೊದಲೆರಡು ಎಸೆತಗಳಲ್ಲಿ ಪ್ಯಾಟ್ ಕಮಿನ್ಸ್ ಎರೆಡೆರಡು ರನ್ ಓಡಿದರು.
T20 World Cup 2022: ಐಸಿಸಿ ಟಿ20 ವಿಶ್ವಕಪ್ನ ಅಭ್ಯಾಸ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೀಮ್ ಇಂಡಿಯಾದ (India vs Australia) ಆರಂಭಿಕ ಆಟಗಾರ ಕೆಎಲ್ ರಾಹುಲ್ (KL Rahul) ಅಕ್ಷರಶಃ ಅಬ್ಬರಿಸಿದ್ದರು. ಈ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದ ಭಾರತ ತಂಡಕ್ಕೆ ಕೆಎಲ್ ರಾಹುಲ್ ಸ್ಪೋಟಕ ಆರಂಭ ಒದಗಿಸಿದ್ದರು. ವಿಶೇಷ ಎಂದರೆ ಕೆಎಲ್ಆರ್ ಅಬ್ಬರದ ಮುಂದೆ ನಾಯಕ ರೋಹಿತ್ ಶರ್ಮಾ ದಂಗಾಗಿ ನಿಂತಿದ್ದರು. ಅಂದರೆ ಹಿಟ್ಮ್ಯಾನ್ ರನ್ ಖಾತೆ ತೆರೆಯುವ ಮುನ್ನವೇ ಕೆಎಲ್ ರಾಹುಲ್ ಅರ್ಧಶತಕದತ್ತ ದಾಪುಗಾಲಿಟ್ಟಿದ್ದರು. ಅಷ್ಟೇ ಅಲ್ಲದೆ ಕೇವಲ 27 ಎಸೆತಗಳಲ್ಲಿ ಸಿಡಿಲಬ್ಬರದ ಅರ್ಧಶತಕ ಬಾರಿಸುವ ಮೂಲಕ ರಾಹುಲ್ ತಮ್ಮ ಫಾರ್ಮ್ ಅನ್ನು ಸಾಬೀತುಪಡಿಸಿದರು.
ಇತ್ತ ರೋಹಿತ್ ಶರ್ಮಾ 1 ರನ್ಗಳಿಸುವಷ್ಟರಲ್ಲಿ ಅತ್ತ ಕೆಎಲ್ ರಾಹುಲ್ ತಮ್ಮ ಅರ್ಧಶತಕವನ್ನು ಪೂರೈಸಿದ್ದರು ಎಂಬುದು ವಿಶೇಷ. ಅಂದರೆ ಹಿಟ್ಮ್ಯಾನ್ ಖಾತೆ ತೆರೆಯುವಷ್ಟರಲ್ಲಿ ಕನ್ನಡಿಗ 3 ಭರ್ಜರಿ ಸಿಕ್ಸ್ ಹಾಗೂ 6 ಫೋರ್ನೊಂದಿಗೆ ಎರಡಂಕಿ ಮೊತ್ತವನ್ನು ಕಲೆಹಾಕಿದ್ದರು. ಅಂತಿಮವಾಗಿ ರಾಹುಲ್ 33 ಎಸೆತಗಳಲ್ಲಿ 3 ಸಿಕ್ಸ್ ಹಾಗೂ 6 ಫೋರ್ನೊಂದಿಗೆ 57 ರನ್ ಬಾರಿಸಿದರೆ, ರೋಹಿತ್ ಶರ್ಮಾ 14 ಎಸೆತಗಳಲ್ಲಿ 15 ರನ್ ಬಾರಿಸಲಷ್ಟೇ ಶಕ್ತರಾಗಿದ್ದರು.
KL RAHUL Scores 50* Runs in just 27 balls in warmup match against Australia #INDvsAUS#indvsaust20i #AUSvsIND #TeamIndia #T20WorldCup pic.twitter.com/psGrLmCFr1
— Shiv (@Shivay__021) October 17, 2022
ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಕೆಎಲ್ ರಾಹುಲ್ ಹಾಗೂ ಮಧ್ಯಮ ಕ್ರಮಾಂಕದಲ್ಲಿ ಸೂರ್ಯಕುಮಾರ್ ಯಾದವ್ ಅವರ ಅರ್ಧಶತಕದ ನೆರವಿನಿಂದ ನಿಗದಿತ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 186 ರನ್ ಕಲೆಹಾಕಿತು.
ಈ ಬೃಹತ್ ಮೊತ್ತವನ್ನು ಬೆನ್ನತ್ತಿದ ಆಸ್ಟ್ರೇಲಿಯಾಗೆ ನಾಯಕ ಆರೋನ್ ಫಿಂಚ್ ಸಿಡಿಲಬ್ಬರದ ಆರಂಭ ಒದಗಿಸಿದ್ದರು. ಆರಂಭದಿಂದಲೇ ಟೀಮ್ ಇಂಡಿಯಾ ಬೌಲರುಗಳನ್ನು ದಂಡಿಸಲಾರಂಭಿಸಿದ ಫಿಂಚ್ ಆಸ್ಟ್ರೇಲಿಯಾ ತಂಡಕ್ಕೆ ಗೆಲುವಿನ ಆಸೆ ಚಿಗುರಿಸಿದ್ದರು. ಆದರೆ ಮತ್ತೊಂದು ತುದಿಯಿಂದ ಫಿಂಚ್ಗೆ ಉತ್ತಮ ಸಾಥ್ ದೊರಕಿರಲಿಲ್ಲ.
ಅದರಲ್ಲೂ ಮಧ್ಯಮ ಕ್ರಮಾಂಕದಲ್ಲಿ ಸ್ಟೀವ್ ಸ್ಮಿತ್ (11), ಗ್ಲೆನ್ ಮ್ಯಾಕ್ಸ್ವೆಲ್ (23), ಮಾರ್ಕಸ್ ಸ್ಟೊಯಿನಿಸ್ (7) ಕೈ ಕೊಟ್ಟಿದ್ದರು. ಪರಿಣಾಮ ಕೊನೆಯ 2 ಓವರ್ಗಳಲ್ಲಿ ಆಸ್ಟ್ರೇಲಿಯಾ ತಂಡಕ್ಕೆ ಗೆಲ್ಲಲು 16 ರನ್ಗಳ ಅವಶ್ಯಕತೆಯಿತ್ತು. ಈ ವೇಳೆಯೂ ಆರೋನ್ ಫಿಂಚ್ ಕ್ರೀಸ್ನಲ್ಲಿದ್ದರು. ಹೀಗಾಗಿ ಆಸೀಸ್ ತಂಡ ಗೆಲ್ಲುವ ವಿಶ್ವಾಸದಲ್ಲಿತ್ತು. ಆದರೆ ಮೊದಲ ಎಸೆತದಲ್ಲೇ ಫಿಂಚ್ (79) ವಿಕೆಟ್ ಕಬಳಿಸುವ ಮೂಲಕ ಹರ್ಷಲ್ ಪಟೇಲ್ ಯಶಸ್ಸು ತಂದುಕೊಟ್ಟರು.
ಇದಾಗ್ಯೂ ಟಿಮ್ ಡೇವಿಡ್ ಕ್ರೀಸ್ನಲ್ಲಿದ್ದ ಕಾರಣ ಅಂತಿಮ ಓವರ್ಗಳ ವೇಳೆ ಬಿಗ್ ಹಿಟ್ ಅನ್ನು ನಿರೀಕ್ಷಿಸಲಾಗಿತ್ತು. ಆದರೆ ಈ ವೇಳೆ ವಿರಾಟ್ ಕೊಹ್ಲಿ ಮಾಡಿದ ಅತ್ಯಾಧ್ಬುತ ಫೀಲ್ಡಿಂಗ್ನಿಂದ ಟಿಮ್ ಡೇವಿಡ್ ಹೊರನಡೆಯಬೇಕಾಯಿತು. 19ನೇ ಓವರ್ನ 2ನೇ ಎಸೆತದಲ್ಲಿ ಜೋಶ್ ಇಂಗ್ಲಿಸ್ ಫ್ರಂಟ್ನಲ್ಲೇ ಬಾರಿಸಿ ಟಿಮ್ ಡೇವಿಡ್ಗೆ ಸ್ಟ್ರೈಕ್ ನೀಡುವ ಯತ್ನ ಮಾಡಿದ್ದರು. ಆದರೆ ಅಲ್ಲೇ ಫೀಲ್ಡಿಂಗ್ನಲ್ಲಿ ವಿರಾಟ್ ಕೊಹ್ಲಿ ಚಕ್ಕನೆ ಚೆಂಡನ್ನು ಹಿಡಿದು ವಿಕೆಟ್ ನೇರವಾಗಿ ಎಸೆಯುವ ಮೂಲಕ ಅದ್ಭುತ ರನೌಟ್ ಮಾಡಿದರು. ಈ ಮೂಲಕ ಟೀಮ್ ಇಂಡಿಯಾಗೆ ಮತ್ತೊಂದು ಯಶಸ್ಸು ತಂದುಕೊಟ್ಟರು.
ಅಂತಿಮವಾಗಿ ಆಸ್ಟ್ರೇಲಿಯಾ ತಂಡಕ್ಕೆ ಗೆಲ್ಲಲು 11 ರನ್ಗಳ ಅವಶ್ಯಕತೆಯಿತ್ತು. ಈ ವೇಳೆ ದಾಳಿಗಿಳಿದ ಮೊಹಮ್ಮದ್ ಶಮಿ ಅವರ ಮೊದಲೆರಡು ಎಸೆತಗಳಲ್ಲಿ ಪ್ಯಾಟ್ ಕಮಿನ್ಸ್ ಎರೆಡೆರಡು ರನ್ ಓಡಿದರು. 3ನೇ ಎಸೆತದಲ್ಲಿ ಭರ್ಜರಿ ಹೊಡೆತ ಬಾರಿಸಿದ ಕಮಿನ್ಸ್ ಚೆಂಡು ಸಿಕ್ಸ್ ಆಗುವ ನಿರೀಕ್ಷೆಯಲ್ಲಿದ್ದರು. ಆದರೆ ಲಾಂಗ್ ಆನ್ನಲ್ಲಿ ಫೀಲ್ಡಿಂಗ್ನಲ್ಲಿದ್ದ ವಿರಾಟ್ ಕೊಹ್ಲಿ ಅತ್ಯಾದ್ಭುತವಾಗಿ ಜಿಗಿಯುವ ಮೂಲಕ ಚೆಂಡನ್ನು ಹಿಡಿದರು. ಇನ್ನು ಕೊನೆಯ 3 ಎಸೆತಗಳಲ್ಲಿ 1 ರನೌಟ್ ಹಾಗೂ 2 ವಿಕೆಟ್ ಉರುಳಿಸುವ ಮೂಲಕ ಮೊಹಮ್ಮದ್ ಶಮಿ ಪರಾಕ್ರಮ ಮೆರೆದರು. ಪರಿಣಾಮ ಟೀಮ್ ಇಂಡಿಯಾ 6 ರನ್ಗಳ ರೋಚಕ ಜಯ ಸಾಧಿಸಿತು.