T20 World Cup 2022: ಪರ್ತ್ನಲ್ಲಿ ನಡೆದ ಸೌತ್ ಆಫ್ರಿಕಾ (South Africa) ವಿರುದ್ಧದ ಪಂದ್ಯದಲ್ಲಿ ಟೀಮ್ ಇಂಡಿಯಾ (Team India) 5 ವಿಕೆಟ್ಗಳಿಂದ ಸೋಲನುಭವಿಸಿದೆ. ಆದರೆ ಈ ಸೋಲಿಗೆ ಒಂದು ಕಾರಣ ಭಾರತ ತಂಡದ ಬ್ಯಾಟ್ಸ್ಮನ್ಗಳ ವೈಫಲ್ಯ. ಇದಾಗ್ಯೂ ಟೀಮ್ ಇಂಡಿಯಾಗೆ ಬೌಲರ್ಗಳು ಅತ್ಯುತ್ತಮ ಆರಂಭ ಒದಗಿಸಿದ್ದರು. ಆದರೆ ಈ ಉತ್ತಮ ಆರಂಭವನ್ನು ಮುಂದುವರೆಸುವಲ್ಲಿ ಟೀಮ್ ಇಂಡಿಯಾ ಫೀಲ್ಡರ್ಗಳು ಎಡವಿದ್ದರು. ಅಂದರೆ ಕಳಪೆ ಫೀಲ್ಡಿಂಗ್ನಿಂದ ಟೀಮ್ ಇಂಡಿಯಾ ಪಂದ್ಯವನ್ನೇ ಕೈಚೆಲ್ಲಿಕೊಂಡಿತು ಎಂದರೆ ತಪ್ಪಾಗಲಾರದು.
ಏಕೆಂದರೆ ಕೇವಲ 134 ರನ್ಗಳ ಸುಲಭ ಗುರಿಯೊಳಗೆ ಎದುರಾಳಿಗಳನ್ನು ನಿಯಂತ್ರಿಸಲು ಅತ್ಯುತ್ತಮ ಬೌಲಿಂಗ್ ಹಾಗೂ ಫೀಲ್ಡಿಂಗ್ ಅತ್ಯವಶ್ಯಕ. ಅದರಂತೆ ಟೀಮ್ ಇಂಡಿಯಾಗೆ ಪವರ್ಪ್ಲೇನಲ್ಲಿ ವೇಗದ ಬೌಲರ್ಗಳು ಅತ್ಯುತ್ತಮ ಆರಂಭ ಒದಗಿಸಿದ್ದರು. ಕೇವಲ 24 ರನ್ ನೀಡಿ 3 ವಿಕೆಟ್ ಕಬಳಿಸಿ ಸೌತ್ ಆಫ್ರಿಕಾಗೆ ಆರಂಭಿಕ ಆಘಾತ ನೀಡಿದ್ದರು.
ಆದರೆ ಸೌತ್ ಆಫ್ರಿಕಾ ಬ್ಯಾಟರ್ಗಳ ಮೇಲೆ ಇದೇ ಒತ್ತಡವನ್ನು ಮುಂದುವರೆಸುವಲ್ಲಿ ಸಾಧ್ಯವಾಗಲಿಲ್ಲ. ಇದಕ್ಕೆ ಮುಖ್ಯ ಕಾರಣ ಭಾರತೀಯ ಆಟಗಾರರ ಕಳಪೆ ಫೀಲ್ಡಿಂಗ್. ಏಕೆಂದರೆ ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಕೈಚೆಲ್ಲಿಕೊಂಡಿದ್ದು ಬರೋಬ್ಬರಿ 4 ಅವಕಾಶಗಳನ್ನು.
ಪಂದ್ಯದ ಆರಂಭದಲ್ಲೇ ಡೇವಿಡ್ ಮಿಲ್ಲರ್ನನ್ನು ರನೌಟ್ ಮಾಡುವ ಅವಕಾಶ ರೋಹಿತ್ ಶರ್ಮಾಗೆ ಲಭಿಸಿತ್ತು. ಆದರೆ ಹಿಟ್ಮ್ಯಾನ್ ಎಸೆದ ಥ್ರೋ ವಿಕೆಟ್ನಿಂದ ದೂರ ಸಾಗಿತ್ತು. ಇದಾದ ಬಳಿಕ ಏಡನ್ ಮಾರ್ಕ್ರಾಮ್ ಅವರನ್ನು ರನೌಟ್ ಮಾಡುವ ಮತ್ತೊಂದು ಅವಕಾಶ ಸೂರ್ಯಕುಮಾರ್ ಮುಂದಿತ್ತು. ಆದರೆ ವಿಕೆಟ್ಗೆ ಡೈರೆಕ್ಟ್ ಹಿಟ್ ಮಾಡುವಲ್ಲಿ ಸೂರ್ಯ ವಿಫಲರಾಗಿದ್ದರು.
ಇನ್ನು 12ನೇ ಓವರ್ನಲ್ಲಿ ಏಡನ್ ಮಾರ್ಕ್ರಾಮ್ ನೀಡಿದ ಸುಲಭ ಕ್ಯಾಚ್ ಅನ್ನು ವಿರಾಟ್ ಕೊಹ್ಲಿ ಕೈಚೆಲ್ಲಿದ್ದರು. ಇದರ ಬೆನ್ನಲ್ಲೇ 13ನೇ ಓವರ್ನಲ್ಲಿ ಡೇವಿಡ್ ಮಿಲ್ಲರ್ ಅವರನ್ನು ಸುಲಭವಾಗಿ ರನೌಟ್ ಮಾಡುವ ಅವಕಾಶ ರೋಹಿತ್ ಶರ್ಮಾ ಮುಂದಿತ್ತು. ಆದರೆ ಅತ್ಯುತ್ತಮ ಅವಕಾಶದಲ್ಲೂ ವಿಕೆಟ್ಗೆ ಡೈರೆಕ್ಟ್ ಆಗಿ ಚೆಂಡು ತಾಗಿಸುವಲ್ಲಿ ಹಿಟ್ಮ್ಯಾನ್ ವಿಫಲರಾದರು.
ಹೀಗೆ 13 ಓವರ್ಗಳ ಒಳಗೆ ಸಿಕ್ಕ ನಾಲ್ಕು ಅವಕಾಶಗಳನ್ನು ಟೀಮ್ ಇಂಡಿಯಾ ಕೈಚೆಲ್ಲಿಕೊಂಡಿದ್ದು ದುಬಾರಿಯಾಯಿತು ಎನ್ನಬಹುದು. ಏಕೆಂದರೆ ಈ ಹಂತದಲ್ಲಿ ಸೌತ್ ಆಫ್ರಿಕಾ ಕಲೆಹಾಕಿದ್ದು ಕೇವಲ 68 ರನ್ಗಳು ಮಾತ್ರ. ಆದರೆ ಟೀಮ್ ಇಂಡಿಯಾ ಫೀಲ್ಡರ್ಗಳು ನೀಡಿದ ಜೀವದಾನವನ್ನು ಬಳಸಿಕೊಂಡ ಡೇವಿಡ್ ಮಿಲ್ಲರ್ (59) ಹಾಗೂ ಏಡನ್ ಮಾರ್ಕ್ರಾಮ್ (52) ಅರ್ಧಶತಕ ಬಾರಿಸುವ ಮೂಲಕ ತಂಡಕ್ಕೆ ಜಯ ತಂದುಕೊಡುವಲ್ಲಿ ಯಶಸ್ವಿಯಾದರು.
Catch drop by virat kholi ??#INDvSA #T20WorldCup2022 #ViratKohli? #T20WorldCup pic.twitter.com/DlNXuoYeau
— Chand Deo Besra (@aryanchandu2580) October 30, 2022
ಇದರ ಹೊರತಾಗಿ ಟೀಮ್ ಇಂಡಿಯಾ ಬೌಲರ್ಗಳು 134 ರನ್ ಟಾರ್ಗೆಟ್ ಅನ್ನು ಕೊನೆಯ ಓವರ್ ತನಕ ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದರು. ಹೀಗಾಗಿ ಕಳಪೆ ಫೀಲ್ಡಿಂಗ್ನಿಂದಲೇ ಟೀಮ್ ಇಂಡಿಯಾ ಪಂದ್ಯ ಕೈಚೆಲ್ಲಿಕೊಂಡಿತು ಎಂದರೆ ತಪ್ಪಾಗಲಾರದು.
ಸೌತ್ ಆಫ್ರಿಕಾ ಪ್ಲೇಯಿಂಗ್ 11– ಕ್ವಿಂಟನ್ ಡಿ ಕಾಕ್, ತೆಂಬಾ ಬವುಮಾ (ನಾಯಕ), ರಿಲೀ ರೊಸ್ಸೊ, ಐಡೆನ್ ಮಾರ್ಕ್ರಾಮ್, ಡೇವಿಡ್ ಮಿಲ್ಲರ್, ಟ್ರಿಸ್ಟಾನ್ ಸ್ಟಬ್ಸ್, ವೇಯ್ನ್ ಪಾರ್ನೆಲ್, ಕೇಶವ್ ಮಹಾರಾಜ್, ಕಗಿಸೊ ರಬಾಡಾ, ಲುಂಗಿ ಎನ್‌ಗಿಡಿ, ಅನ್ರಿಕ್ ನೋಕಿಯಾ
ಟೀಮ್ ಇಂಡಿಯಾ ಪ್ಲೇಯಿಂಗ್ 11– ರೋಹಿತ್ ಶರ್ಮಾ (ನಾಯಕ), ಕೆಎಲ್. ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ದೀಪಕ್ ಹೂಡಾ , ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ, ಅರ್ಷದೀಪ್ ಸಿಂಗ್, ಅಶ್ವಿನ್.