Tagenarine Chanderpaul: ತಂದೆಯ ಹಾದಿಯಲ್ಲಿ ಮಗ..ದ್ವಿಶತಕ ಸಿಡಿಸಿ ಮಿಂಚಿದ ಮಾಜಿ ಕ್ರಿಕೆಟಿಗನ ಪುತ್ರ
Tagenarine Chanderpaul: ಮೂರನೇ ದಿನದಾಟದ ವೇಳೆ ಮೊದಲ ಇನಿಂಗ್ಸ್ ಆರಂಭಿಸಿರುವ ಜಿಂಬಾಬ್ವೆ ತಂಡವು 84 ರನ್ಗಳಿಗೆ 2 ವಿಕೆಟ್ ಕಳೆದುಕೊಂಡಿದೆ.
ವೆಸ್ಟ್ ಇಂಡೀಸ್ನ ಮಾಜಿ ಆಟಗಾರ ಶಿವನಾರಾಯಣ್ ಚಂದ್ರಪಾಲ್ ಅವರ ಪುತ್ರ ಟಾಗೆನರೈನ್ ಚಂದ್ರಪಾಲ್ (Tagenarine Chanderpaul) ಟೆಸ್ಟ್ ಕ್ರಿಕೆಟ್ನಲ್ಲಿ ಚೊಚ್ಚಲ ದ್ವಿಶತಕ ಸಿಡಿಸಿದ್ದಾರೆ. ಈ ಮೂಲಕ ಟೆಸ್ಟ್ ಕ್ರಿಕೆಟ್ನಲ್ಲಿ ದ್ವಿಶತಕ ಬಾರಿಸಿದ ಅಪ್ಪ-ಮಗ ಎಂಬ ವಿಶೇಷ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಶಿವನಾರಾಯಣ್ ಚಂದ್ರಪಾಲ್ 2005 ರಲ್ಲಿ ಸೌತ್ ಆಫ್ರಿಕಾ ವಿರುದ್ಧ 203 ರನ್ ಬಾರಿಸಿ ಮಿಂಚಿದ್ದರು. ಇದೀಗ ತಂದೆಯ ಹಾದಿಯಲ್ಲಿರುವ ಮಗ ಕೂಡ ದ್ವಿಶತಕ ಬಾರಿಸಿ ವಿಶ್ವದ ಗಮನ ಸೆಳೆದಿದ್ದಾರೆ.
ಇನ್ನು ಜಿಂಬಾಬ್ವೆ ವಿರುದ್ಧದ ಈ ಪಂದ್ಯದಲ್ಲಿ ಟಾಸ್ ಗೆದ್ದ ವೆಸ್ಟ್ ಇಂಡೀಸ್ ತಂಡವು ಬ್ಯಾಟಿಂಗ್ ಆಯ್ದುಕೊಂಡಿತು. ಅದರಂತೆ ಇನಿಂಗ್ಸ್ ಆರಂಭಿಸಿದ ವಿಂಡೀಸ್ಗೆ ಟಾಗೆನರೈನ್ ಹಾಗೂ ಕ್ರೇಗ್ ಬ್ರಾಥ್ವೈಟ್ ಅತ್ಯುತ್ತಮ ಆರಂಭ ಒದಗಿಸಿದರು. ಮೊದಲ ವಿಕೆಟ್ಗೆ ನಾಜೂಕಾದ ಜೊತೆಯಾಟವಾಡಿದ ಈ ಜೋಡಿ 336 ರನ್ಗಳನ್ನು ಪೇರಿಸಿದರು. ಈ ಹಂತದಲ್ಲಿ 312 ಎಸೆತಗಳಲ್ಲಿ 18 ಫೋರ್ನೊಂದಿಗೆ 182 ರನ್ ಬಾರಿಸಿದ್ದ ಕ್ರೇಗ್ ಬ್ರಾಥ್ವೈಟ್ ಎಲ್ಬಿಡಬ್ಲ್ಯೂ ಆಗಿ ಹೊರನಡೆದರು.
ಮತ್ತೊಂದೆಡೆ ಕಲಾತ್ಮಕ ಬ್ಯಾಟಿಂಗ್ ಪ್ರದರ್ಶಿಸಿದ ಟಾಗೆನರೈನ್ ಚಂದ್ರಪಾಲ್ ಕೆಲ ಹೊಡೆತಗಳ ಮೂಲಕ ತಂದೆಯನ್ನು ನೆನಪಿಸಿದರು. ಅಷ್ಟೇ ಅಲ್ಲದೆ 465 ಎಸೆತಗಳಲ್ಲಿ ಚೊಚ್ಚಲ ದ್ವಿಶತಕ ಪೂರೈಸಿದರು. ಈ ದ್ವಿಶತಕ ಮೂಡಿಬರುವಷ್ಟರಲ್ಲಿ ವೆಸ್ಟ್ ಇಂಡೀಸ್ ಮೊತ್ತವು 400ರ ಗಡಿದಾಟಿತ್ತು.
ಹೀಗಾಗಿ 6 ವಿಕೆಟ್ ನಷ್ಟಕ್ಕೆ 447 ರನ್ಗಳಿಸಿದ್ದ ವೇಳೆ ವೆಸ್ಟ್ ಇಂಡೀಸ್ ಮೊದಲ ಇನಿಂಗ್ಸ್ ಡಿಕ್ಲೇರ್ ಘೋಷಿಸಿತು. ವಿಶೇಷ ಎಂದರೆ 467 ಎಸೆತಗಳನ್ನು ಎದುರಿಸಿದ ಟಾಗೆನರೈನ್ ಚಂದ್ರಪಾಲ್ 3 ಭರ್ಜರಿ ಸಿಕ್ಸ್ ಹಾಗೂ 16 ಬೌಂಡರಿಯೊಂದಿಗೆ 207 ರನ್ ಬಾರಿಸಿ ಅಜೇಯರಾಗಿ ಉಳಿದರು.
ಇದನ್ನೂ ಓದಿ: ಟಿ20 ಕ್ರಿಕೆಟ್ನಲ್ಲಿ ಶತಕ ಬಾರಿಸಿದ ಟೀಮ್ ಇಂಡಿಯಾದ 7 ಬ್ಯಾಟ್ಸ್ಮನ್ಗಳ ಪಟ್ಟಿ ಇಲ್ಲಿದೆ
ಒಟ್ಟಿನಲ್ಲಿ ಟೆಸ್ಟ್ ಕ್ರಿಕೆಟ್ನಲ್ಲಿ ದ್ವಿಶತಕ ಬಾರಿಸಿದ ವೆಸ್ಟ್ ಇಂಡೀಸ್ನ ಮೊದಲ ಅಪ್ಪ-ಮಗ ಎಂಬ ಹಿರಿಮೆಗೆ ಶಿವನಾರಾಯಣ್ ಚಂದ್ರಪಾಲ್-ಟಾಗೆನರೈನ್ ಚಂದ್ರಪಾಲ್ ಪಾತ್ರರಾಗಿದ್ದಾರೆ.
ಸದ್ಯ ಮೂರನೇ ದಿನದಾಟದ ವೇಳೆ ಮೊದಲ ಇನಿಂಗ್ಸ್ ಆರಂಭಿಸಿರುವ ಜಿಂಬಾಬ್ವೆ ತಂಡವು 84 ರನ್ಗಳಿಗೆ 2 ವಿಕೆಟ್ ಕಳೆದುಕೊಂಡಿದೆ. ಇನ್ನು ಕೂಡ 363 ರನ್ ಕಲೆಹಾಕಬೇಕಿದ್ದು, ಅದರೊಳಗೆ ಆಲೌಟ್ ಮಾಡಿ ಫಾಲೋಆನ್ ಹೇರುವ ಪ್ಲ್ಯಾನ್ನಲ್ಲಿದೆ ವೆಸ್ಟ್ ಇಂಡೀಸ್ ತಂಡ.