ಭಾರತದ ಪರ ಮೂರು ಏಕದಿನ ಪಂದ್ಯಗಳನ್ನು ಆಡಿದ್ದ ಆಟಗಾರ ಇದೀಗ ರಣಜಿ ತಂಡದ ಕೋಚ್ ಆಗುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಹೌದು, ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 3 ಪಂದ್ಯಗಳಲ್ಲಿ ಕೇವಲ 18 ರನ್ಗಳಿಸಿದ್ದ ಪಶ್ಚಿಮ ಬಂಗಾಳದ ಲಕ್ಷ್ಮಿ ರತನ್ ಶುಕ್ಲಾ (Laxmi Ratan Shukla) ಇದೀಗ ಬಂಗಾಳ ರಣಜಿ ತಂಡದ ಮುಖ್ಯ ಕೋಚ್ ಆಗಿ ನೇಮಕವಾಗಿದ್ದಾರೆ. ಕೆಲ ದಿನಗಳ ಹಿಂದೆಯಷ್ಟೇ ಬಂಗಾಳ ತಂಡದ ಕೋಚ್ ಅರುಣ್ ಲಾಲ್ ರಾಜೀನಾಮೆ ನೀಡಿದ್ದರು. ಹೀಗಾಗಿ ಬದಲಿ ತರಬೇತುದಾರರ ಆಯ್ಕೆ ಪ್ರಕ್ರಿಯೆಯನ್ನು ಬಂಗಾಳ ಕ್ರಿಕೆಟ್ ಸಂಸ್ಥೆ ಆರಂಭಿಸಿತ್ತು. ಅದರಂತೆ ಇದೀಗ 41 ವರ್ಷದ ಲಕ್ಷ್ಮಿ ರತನ್ ಶುಕ್ಲಾ ಮುಖ್ಯ ಕೋಚ್ ಆಗಿ ಆಯ್ಕೆಯಾಗಿದ್ದಾರೆ. ಹಾಗೆಯೇ ವಿ ರಾಮನ್ ಅವರನ್ನು ಬ್ಯಾಟಿಂಗ್ ಕೋಚ್ ಆಗಿ ನೇಮಿಸಲಾಗಿದೆ.
ಅರುಣ್ ಲಾಲ್ ಬಂಗಾಳ ಕ್ರಿಕೆಟ್ ತಂಡದ ಯಶಸ್ವಿ ಕೋಚ್ ಆಗಿ ಗುರುತಿಸಿಕೊಂಡಿದ್ದರು. ಅವರ ತರಬೇತಿಯಲ್ಲಿ, ತಂಡವು 2019-20 ರ ರಣಜಿ ಟ್ರೋಫಿಯ ಫೈನಲ್‌ಗೆ ಪ್ರವೇಶಿಸಿತ್ತು. ಆದರೆ ಫೈನಲ್ ಹಣಾಹಣಿಯಲ್ಲಿ ಬಂಗಾಳ ತಂಡವು ಮಧ್ಯಪ್ರದೇಶದ ವಿರುದ್ದ ಸೋಲನುಭವಿಸಿತು. ಇದಾಗ್ಯೂ ಅರುಣ್ ಲಾಲ್ ಕಳೆದ ತಿಂಗಳವರೆಗೆ ತಂಡದ ಕೋಚ್ ಆಗಿ ಮುಂದುವರೆದಿದ್ದರು. ಆದರೆ ಇತ್ತೀಚೆಗೆ 2ನೇ ವಿವಾಹವಾಗಿದ್ದ ಅವರು ಕೋಚ್ ಸ್ಥಾನದಿಂದ ಕೆಳಗಿಳಿದಿದ್ದರು.
ಹೀಗಾಗಿ ಕ್ರಿಕೆಟ್ ಅಸೋಷಿಯೇಷನ್ ಆಫ್ ಬಂಗಾಳ ಹೊಸ ಕೋಚ್ನ ಹುಡುಕಾಟದಲ್ಲಿತ್ತು. ಸಿಎಬಿಯ ಮೊದಲ ಆಯ್ಕೆ ಲಕ್ಷ್ಮಿ ರತನ್ ಶುಕ್ಲಾ ಆಗಿರಲಿಲ್ಲ ಎಂಬುದು ಇಲ್ಲಿ ವಿಶೇಷ. ಭಾರತದ ಮಾಜಿ ಕ್ರಿಕೆಟಿಗ ವಾಸಿಂ ಜಾಫರ್ ಅವರು ಮುಖ್ಯ ಕೋಚ್ ಹುದ್ದೆಗೆ ಬಂಗಾಳದ ಕ್ರಿಕೆಟ್ ಅಸೋಸಿಯೇಷನ್‌ನ ಮೊದಲ ಆಯ್ಕೆಯಾಗಿತ್ತು. ಆದರೆ ಅವರು ಬಾಂಗ್ಲಾದೇಶ ಅಂಡರ್ 19 ತಂಡದ ಕೋಚ್ ಜವಾಬ್ದಾರಿವಹಿಸಿಕೊಂಡಿದ್ದಾರೆ. ಇದಾದ ಬಳಿಕ ಅಭಿಷೇಕ್ ನಾಯರ್ ನೇಮಿಸುವ ಬಗ್ಗೆ ಚರ್ಚೆ ನಡೆಸಲಾಗಿದೆ. ಆದರೀಗ ಅಂತಿಮವಾಗಿ ಲಕ್ಷ್ಮಿ ರತನ್ ಶುಕ್ಲಾ ಅವರನ್ನು ಬಂಗಾಳ ಕ್ರಿಕೆಟ್ ತಂಡದ ಕೋಚ್ ಆಗಿ ನೇಮಕ ಮಾಡಲಾಗಿದೆ.
ಲಕ್ಷ್ಮಿ ರತನ್ ಶುಕ್ಲಾ ಭಾರತ ಪರ 3 ಏಕದಿನ ಪಂದ್ಯಗಳನ್ನಾಡಿದ್ದು, ಈ ವೇಳೆ 18 ರನ್ ಗಳಿಸಿದ್ದಾರೆ. ಇದಲ್ಲದೆ 137 ಪ್ರಥಮ ದರ್ಜೆ ಪಂದ್ಯಗಳನ್ನು ಮತ್ತು 141 ಲಿಸ್ಟ್ A ಪಂದ್ಯಗಳನ್ನು ಆಡಿದ್ದಾರೆ. ಶುಕ್ಲಾ ಅವರು ಬಂಗಾಳ ಅಂಡರ್ 23 ತಂಡದ ತರಬೇತುದಾರಾಗಿ ಕಾರ್ಯ ನಿರ್ವಹಿಸಿದ್ದರು. ಹೀಗಾಗಿ ಶುಕ್ಲಾ ಅವರಿಗೆ ಬಂಗಾಳ ಕ್ರಿಕೆಟ್ ತಂಡದ ಡ್ರೆಸ್ಸಿಂಗ್ ರೂಮ್ ಬಗ್ಗೆ ಚೆನ್ನಾಗಿ ಗೊತ್ತಿದೆ. ಈ ಹಿನ್ನೆಲೆಯಲ್ಲಿ ಅಂತಿಮವಾಗಿ ಯುವ ಕೋಚ್ ಅನ್ನು ಆಯ್ಕೆ ಮಾಡಲಾಗಿದೆ ಎಂದು ಬಂಗಾಳ ಕ್ರಿಕೆಟ್ ಅಸೋಷಿಯೇಷನ್ ತಿಳಿಸಿದೆ. ಇದರೊಂದಿಗೆ ಲಕ್ಷ್ಮಿ ರತನ್ ಶುಕ್ಲಾ ಬಂಗಾಳ ಪರ ಕೋಚ್ ಸ್ಥಾನದೊಂದಿಗೆ ಹೊಸ ಇನಿಂಗ್ಸ್ ಆರಂಭಿಸಲಿದ್ದಾರೆ.