ODI Cricket: ಏಕದಿನ ಕ್ರಿಕೆಟ್ನ ಸ್ವರೂಪ ಬದಲಿಸಲು ಹೊಸ ಐಡಿಯಾ ನೀಡಿದ ರವಿ ಶಾಸ್ತ್ರಿ
Ravi Shastri: ಈ ಹಿಂದೆ ಏಕದಿನ ಕ್ರಿಕೆಟ್ 60 ಓವರ್‌ಗಳ ಪಂದ್ಯವಾಗಿತ್ತು. ನಾವು 1983ರಲ್ಲಿ ವಿಶ್ವಕಪ್ ಗೆದ್ದಾಗ ಅದು 60 ಓವರ್‌ಗಳ ಇನಿಂಗ್ಸ್ ಆಗಿತ್ತು.
ಕ್ರಿಕೆಟ್ ಅಂಗಳದಲ್ಲಿ ಏಕದಿನ ಸ್ವರೂಪದ ಚರ್ಚೆಗಳು ಜೋರಾಗಿದೆ. 31ನೇ ವರ್ಷಕ್ಕೆ ಇಂಗ್ಲೆಂಡ್ ಆಲ್ರೌಂಡರ್ ಬೆನ್ ಸ್ಟೋಕ್ಸ್ ನಿವೃತ್ತಿ ಘೋಷಿಸಿದ್ದ ಬೆನ್ನಲ್ಲೇ ಇದೀಗ ಏಕದಿನ ಸ್ವರೂಪದ ಬಗ್ಗೆ ಅನೇಕ ಆಟಗಾರರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ. ಅದರಲ್ಲೂ ಪಾಕ್ ದಿಗ್ಗಜ ವಾಸಿಂ ಅಕ್ರಮ್ ಏಕದಿನ ಕ್ರಿಕೆಟ್ನ ಪ್ರಾಮುಖ್ಯತೆಯು ಕುಂಠಿತವಾಗುತ್ತಿದೆ ಎಂದು ಹೇಳಿದ್ದರು. ಇದೀಗ ಟೀಮ್ ಇಂಡಿಯಾದ ಮಾಜಿ ಆಟಗಾರ ರವಿ ಶಾಸ್ತ್ರ್ರಿ ಕೂಡ ಏಕದಿನ ಸ್ವರೂಪದ ಬಗ್ಗೆ ಮಾತನಾಡಿದ್ದಾರೆ. ಅಷ್ಟೇ ಅಲ್ಲದೆ ಏಕದಿನ ಕ್ರಿಕೆಟ್ನಲ್ಲಿ ಬದಲಾವಣೆ ತರಲು ಸೂಚಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ರವಿ ಶಾಸ್ತ್ರಿ, ಏಕದಿನ ಕ್ರಿಕೆಟ್ ಅನ್ನು 50 ಓವರ್ಗಳನ್ನು ಆಡಿಸುವುದು ನಿಲ್ಲಿಸಬೇಕೆಂದು ಅಭಿಪ್ರಾಯಪಟ್ಟಿದ್ದಾರೆ. ಬದಲಾಗಿ 40 ಓವರ್‌ಗಳ ಪಂದ್ಯಗಳನ್ನು ನಡೆಸಬೇಕು. ಓವರ್‌ಗಳ ಕಡಿತದೊಂದಿಗೆ ಪಂದ್ಯದ ಮೇಲಿನ ಆಸಕ್ತಿಯನ್ನು ಉಳಿಸಬಹುದು ಎಂದು ರವಿ ಶಾಸ್ತ್ರಿ ಅಭಿಪ್ರಾಯಪಟ್ಟಿದ್ದಾರೆ.
ಪಂದ್ಯದ ಸಮಯವನ್ನು ಕಡಿಮೆ ಮಾಡುವುದರಿಂದ ಯಾವುದೇ ಹಾನಿ ಆಗುವುದಿಲ್ಲ. ಈ ಹಿಂದೆ ಏಕದಿನ ಕ್ರಿಕೆಟ್ 60 ಓವರ್‌ಗಳ ಪಂದ್ಯವಾಗಿತ್ತು. ನಾವು 1983ರಲ್ಲಿ ವಿಶ್ವಕಪ್ ಗೆದ್ದಾಗ ಅದು 60 ಓವರ್‌ಗಳ ಇನಿಂಗ್ಸ್ ಆಗಿತ್ತು. ಆ ಬಳಿಕ 60 ಓವರ್‌ಗಳು ದೀರ್ಘಾವಧಿ ಎಂದು ಪರಿಗಣಿಸಲಾಯಿತು. ಹೀಗಾಗಿ ಏಕದಿನ ಪಂದ್ಯವನ್ನು 50 ಓವರ್ಗಳಿಗೆ ಇಳಿಸಲಾಯಿತು. ಇದರಿಂದ ಯಾವುದೇ ಬದಲಾವಣೆ ಆಗಿರಲಿಲ್ಲ. ಬದಲಾಗಿ ಪಂದ್ಯದ ಮೇಲೆ ಆಸಕ್ತಿ ಹೆಚ್ಚಾಯಿತು ಎಂದು ರವಿ ಶಾಸ್ತ್ರಿ ಹೇಳಿದರು.
ಪ್ರಸ್ತುತ ಸನ್ನಿವೇಶದಲ್ಲಿ ಏಕದಿನ ಕ್ರಿಕೆಟ್ ಅನ್ನು 40 ಓವರ್ಗಳಿಗೆ ಸೀಮಿತಗೊಳಿಸುವುದು ಸೂಕ್ತ ಎಂದಿರುವ ರವಿ ಶಾಸ್ತ್ರಿ, ಈ ಮೂಲಕ ಓನ್ಡೇ ಕ್ರಿಕೆಟ್ ಮೇಲಿನ ಆಸಕ್ತಿಯನ್ನು ಉಳಿಸಿಕೊಳ್ಳಬಹುದು. ಹಾಗೆಯೇ ಆಟಗಾರರು ದೀರ್ಘಾವಧಿವರೆಗೆ ಫೀಲ್ಡಿಂಗ್ ಮಾಡುವುದನ್ನು ಸಹ ತಪ್ಪಿಸಬಹುದು ಎಂದು ಹೇಳಿದ್ದಾರೆ.
ಕೆಲ ದಿನಗಳ ಹಿಂದೆಯಷ್ಟೇ ಪಾಕಿಸ್ತಾನದ ಮಾಜಿ ನಾಯಕ ಶಾಹಿದ್ ಅಫ್ರಿದಿ ಕೂಡ ಏಕದಿನ ಕ್ರಿಕೆಟ್ ಅನ್ನು 40 ಓವರ್ಗಳಿಗೆ ಸೀಮಿತಗೊಳಿಸುವಂತೆ ಸಲಹೆ ನೀಡಿದ್ದರು. ಇದೀಗ ರವಿ ಶಾಸ್ತ್ರಿ ಕೂಡ ಅದೇ ಮಾದರಿಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದು, ಹೀಗಾಗಿ ಏಕದಿನ ಕ್ರಿಕೆಟ್ನ ಸ್ವರೂಪ ಬದಲಾಗಲಿದೆಯಾ ಕಾದು ನೋಡಬೇಕಿದೆ.