ರೋಹಿತ್- ಕೊಹ್ಲಿ ಕ್ರೇಜ್; ವಿದೇಶಿ ಮಂಡಳಿಗಳಿಂದ ಬಿಸಿಸಿಐ ಬಳಿ ವಿಶೇಷ ಮನವಿ

Team India Schedule: ಟಿ20 ವಿಶ್ವಕಪ್ ನಂತರ ವಿಶ್ರಾಂತಿಯಲ್ಲಿರುವ ಟೀಂ ಇಂಡಿಯಾ, ಜೂನ್‌ನಿಂದ ಅಫ್ಘಾನಿಸ್ತಾನ ಸರಣಿಯೊಂದಿಗೆ ಮತ್ತೆ ಕಣಕ್ಕಿಳಿಯಲಿದೆ. ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರ ಜನಪ್ರಿಯತೆಯಿಂದಾಗಿ ಶ್ರೀಲಂಕಾ, ಇಂಗ್ಲೆಂಡ್ ಸೇರಿದಂತೆ ಹಲವು ವಿದೇಶಿ ಕ್ರಿಕೆಟ್ ಮಂಡಳಿಗಳು ಮುಂಬರುವ ಪ್ರವಾಸಗಳಲ್ಲಿ ಹೆಚ್ಚಿನ ಏಕದಿನ ಪಂದ್ಯಗಳನ್ನಾಡುವಂತೆ ಬಿಸಿಸಿಐಗೆ ಮನವಿ ಮಾಡಿವೆ. 2027ರ ವಿಶ್ವಕಪ್‌ಗೆ ತಂಡದ ಸಿದ್ಧತೆಗೆ ಇದು ಸಹಕಾರಿ ಎಂದು ಬಿಸಿಸಿಐ ಒಪ್ಪಿಗೆ ನೀಡುವ ಸಾಧ್ಯತೆಯಿದೆ.

ರೋಹಿತ್- ಕೊಹ್ಲಿ ಕ್ರೇಜ್; ವಿದೇಶಿ ಮಂಡಳಿಗಳಿಂದ ಬಿಸಿಸಿಐ ಬಳಿ ವಿಶೇಷ ಮನವಿ
Rohit, Kohli

Updated on: Mar 14, 2026 | 8:17 PM

ಟಿ20 ವಿಶ್ವಕಪ್ ಗೆದ್ದಿರುವ ಟೀಂ ಇಂಡಿಯಾ (Team India) ಸುಮಾರು ಮೂರು ತಿಂಗಳ ಕಾಲ ಯಾವುದೇ ಅಂತರರಾಷ್ಟ್ರೀಯ ಪಂದ್ಯಗಳನ್ನಾಡುವುದಿಲ್ಲ. ಈ ಸಮಯದಲ್ಲಿ ಐಪಿಎಲ್​ನಲ್ಲಿ (IPL 2026) ನಿರತವಾಗುವ ಭಾರತ ತಂಡ, ಆ ಬಳಿಕ ಜೂನ್ ತಿಂಗಳಲ್ಲಿ ಕಣಕ್ಕಿಳಿಯಲಿದೆ. ಅಫ್ಘಾನಿಸ್ತಾನ ವಿರುದ್ಧದ ಏಕದಿನ ಸರಣಿಯೊಂದಿಗೆ ಟೀಂ ಇಂಡಿಯಾದ ಅಭಿಯಾನ ಶುರುವಾಗಲಿದೆ. ಇದೆಲ್ಲದರ ನಡುವೆ ಹಲವಾರು ಕ್ರಿಕೆಟ್ ಮಂಡಳಿಗಳು ಟೀಂ ಇಂಡಿಯಾದ ಮುಂಬರುವ ವಿದೇಶ ಪ್ರವಾಸಗಳ ಸಮಯದಲ್ಲಿ ಹೆಚ್ಚಿನ ಏಕದಿನ ಪಂದ್ಯಗಳನ್ನು ಆಡುವಂತೆ ಬಿಸಿಸಿಐ (BCCI) ಬಳಿ ವಿನಂತಿಸುತ್ತಿವೆ ಎಂದು ವರದಿಯಾಗಿದೆ.

ರೋಹಿತ್, ಕೊಹ್ಲಿಯ ಕ್ರೇಜ್

ಇಂಡಿಯನ್ ಎಕ್ಸ್‌ಪ್ರೆಸ್ ವರದಿಯ ಪ್ರಕಾರ, ಟೀಂ ಇಂಡಿಯಾ ಈಗಾಗಲೇ ಕಾರ್ಯನಿರತ ವೇಳಾಪಟ್ಟಿಯ ಹೊರತಾಗಿಯೂ, ಶ್ರೀಲಂಕಾ, ಇಂಗ್ಲೆಂಡ್, ನ್ಯೂಜಿಲೆಂಡ್ ಮತ್ತು ಐರ್ಲೆಂಡ್‌ನಂತಹ ದೇಶಗಳ ಕ್ರಿಕೆಟ್ ಮಂಡಳಿಗಳು ಬಿಸಿಸಿಐ ಅನ್ನು ಸಂಪರ್ಕಿಸಿ ಈ ಪ್ರವಾಸಗಳಲ್ಲಿ ಏಕದಿನ ಸರಣಿಗಳನ್ನು ಆಡಲು ಪ್ರಸ್ತಾಪಿಸಿವೆ ಎಂದು ವರದಿಯಾಗಿದೆ. ಇದಕ್ಕೆ ಕಾರಣ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿಯ ಕ್ರೇಜ್ ಎಂದು ವರದಿಯಾಗಿದೆ. ಎಲ್ಲರಿಗೂ ತಿಳಿದಿರುವಂತೆ ಇವರಿಬ್ಬರು ಪ್ರಸ್ತುತ ಏಕದಿನ ಮಾದರಿಯಲ್ಲಿ ಮಾತ್ರ ಆಡುತ್ತಿದ್ದಾರೆ. ಹೀಗಾಗಿ ಇವರಿಬ್ಬರ ಆಟವನ್ನು ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿರುತ್ತಾರೆ.

ಅಲ್ಲದೆ 2027 ರ ಏಕದಿನ ವಿಶ್ವಕಪ್ ಬಳಿಕ ಇವರಿಬ್ಬರು ಈ ಮಾದರಿಗೂ ನಿವೃತ್ತಿ ಘೋಷಿಸಬಹುದು. ಆದ್ದರಿಂದ, ವಿಶ್ವಕಪ್‌ಗೆ ಮೊದಲು ಟೀಂ ಇಂಡಿಯಾ ಪ್ರವಾಸ ಮಾಡುತ್ತಿರುವ ದೇಶಗಳ ಅಭಿಮಾನಿಗಳು ಈ ಇಬ್ಬರು ದಿಗ್ಗಜರನ್ನು ಕೊನೆಯ ಬಾರಿಗೆ ನೋಡುವ ಅವಕಾಶ ಹೊಂದಿರುತ್ತಾರೆ. ಹೀಗಾಗಿ ಇದರ ಲಾಭ ಪಡೆಯಲು ಮುಂದಾಗಿರುವ ವಿದೇಶಿ ಮಂಡಳಿಗಳು ಬಿಸಿಸಿಐ ಬಳಿ ಅಧಿಕ ಏಕದಿನ ಪಂದ್ಯಗಳನ್ನಾಡುವಂತೆ ಮನವಿ ಮಾಡಿವೆ. ಇತ್ತ ಬಿಸಿಸಿಐ ಕೂಡ ವಿದೇಶಿ ಮಂಡಳಿಗಳ ಮನವಿಗೆ ಒಪ್ಪಿಗೆ ಸೂಚಿಸುವ ಸಾಧ್ಯತೆಗಳಿವೆ. ಏಕೆಂದರೆ 2027 ರಲ್ಲಿ ಏಕದಿನ ವಿಶ್ವಕಪ್ ಇರುವ ಕಾರಣ, ಹೆಚ್ಚಿನ ಪಂದ್ಯಗಳನ್ನಾಡುವುದು ತಂಡದ ಅಭ್ಯಾಸಕ್ಕೆ ನೆರವಾಗಲಿದೆ.

ಈ ವಿದೇಶಿ ಪ್ರವಾಸಗಳಲ್ಲಿ ಏಕದಿನ ಸರಣಿ

ಐಪಿಎಲ್ ನಂತರ, ಟೀಂ ಇಂಡಿಯಾ ಅಫ್ಘಾನಿಸ್ತಾನ ವಿರುದ್ಧ ತವರಿನಲ್ಲಿ ಟೆಸ್ಟ್ ಮತ್ತು ಏಕದಿನ ಸರಣಿಯನ್ನು ಆಡಲಿದೆ. ನಂತರ ಜುಲೈನಲ್ಲಿ ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿದ್ದು ಅಲ್ಲಿ 3 ಏಕದಿನ ಮತ್ತು 5 ಟಿ 20 ಪಂದ್ಯಗಳನ್ನು ಆಡಲಿದೆ. ಇದರ ಜೊತೆಗೆ ಇನ್ನೂ ಎರಡು ಏಕದಿನ ಪಂದ್ಯಗಳನ್ನು ಸೇರಿಸುವ ಸಾಧ್ಯತೆಯಿದೆ. ಈ ಪ್ರವಾಸದಲ್ಲಿ ಐರ್ಲೆಂಡ್ ವಿರುದ್ಧವೂ ಸರಣಿಯನ್ನು ಆಡಲಾಗುತ್ತದೆ. ಆದರೆ ಈ ಪ್ರವಾಸದಲ್ಲಿ ಮೂರು ಏಕದಿನ ಪಂದ್ಯಗಳನ್ನು ಆಡಲಾಗುತ್ತದೆಯೇ ಅಥವಾ ಮೂರು ಟಿ 20 ಪಂದ್ಯಗಳನ್ನು ಆಡಲಾಗುತ್ತದೆಯೇ ಎಂದು ನಿರ್ಧರಿಸಬೇಕಾಗಿದೆ.

ಇದರ ನಂತರ ಭಾರತ ತಂಡ ಶ್ರೀಲಂಕಾ ಪ್ರವಾಸ ಮಾಡಲಿದ್ದು, ಅಲ್ಲಿ ಟಿ20 ಸರಣಿ ಬದಲಿಗೆ 3 ಏಕದಿನ ಪಂದ್ಯಗಳನ್ನು ಆಡಬೇಕೆಂದು ಲಂಕಾ ಮಂಡಳಿ ವಿನಂತಿಸಿದೆ. ಪರಿಣಾಮವಾಗಿ, ಶ್ರೀಲಂಕಾದ ವೀಕ್ಷಕರಿಗೆ ವಿರಾಟ್ ಮತ್ತು ರೋಹಿತ್ ಅವರನ್ನು ಕೊನೆಯ ಬಾರಿಗೆ ನೋಡುವ ಅವಕಾಶ ಸಿಗಬಹುದು. ಈ ಸರಣಿಯಿಂದ ಸಂಗ್ರಹವಾದ ಹಣವನ್ನು ಶ್ರೀಲಂಕಾದಲ್ಲಿ ಚಂಡಮಾರುತದಿಂದ ತೊಂದರೆಗೊಳಗಾದ ಜನರಿಗೆ ದೇಣಿಗೆ ನೀಡಲಾಗುವುದು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us