ಲಕ್ನೋದ ಏಕಾನಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ವಿಶ್ವಕಪ್ (ICC ODI World Cup 2023) ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡವನ್ನು 100 ರನ್ ಗಳಿಂದ ಸೋಲಿಸಿದ ಟೀಂ ಇಂಡಿಯಾ (Team India) ತನ್ನ ಅಜೇಯ ಓಟವನ್ನು ಮುಂದುವರೆಸಿದೆ. ಬಲಿಷ್ಠ ಇಂಗ್ಲೆಂಡ್ ತಂಡವನ್ನು ಆರಂಭದಿಂದಲೂ ಕಾಡಿದ ಭಾರತದ ಬೌಲರ್ಗಳು ಆಂಗ್ಲರನ್ನು ಕೇವಲ 129 ರನ್ಗಳಿಗೆ ಆಲೌಟ್ ಮಾಡಿತು. ಸೆಮಿಫೈನಲ್ ಟಿಕೆಟ್ ಅನ್ನು ಬಹುತೇಕ ಖಚಿತಪಡಿಸಿಕೊಂಡಿರುವ ಟೀಂ ಇಂಡಿಯಾ ಇದೀಗ ತನ್ನ ಮುಂದಿನ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು (India vs Sri Lanka) ಎದುರಿಸಲು ಮುಂಬೈಗೆ ಹಾರಿದೆ. ರೋಹಿತ್ ಪಡೆ ಇದೇ ನವೆಂಬರ್ 2 ರಂದು ತಮ್ಮ ಮುಂದಿನ ಪಂದ್ಯದಲ್ಲಿ ಲಂಕಾ ತಂಡವನ್ನು ಎದುರಿಸಲಿದೆ.
ಟೀಂ ಇಂಡಿಯಾ ಆಡಿರುವ ಆರು ಪಂದ್ಯಗಳನ್ನು ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಅಲಂಕರಿಸಿದೆ. ಇದರೊಂದಿಗೆ ಸೆಮಿಫೈನಲ್ ಟಿಕೆಟ್ ಅನ್ನು ಖಚಿತಪಡಿಸಿಕೊಂಡಿದೆ. ಆದರೆ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ತನ್ನಲ್ಲಿಯೇ ಉಳಿಸಿಕೊಳ್ಳಬೇಕೆಂದರೆ ಟೀಂ ಇಂಡಿಯಾ ಉಳಿದಿರುವ ಮೂರು ಪಂದ್ಯಗಳನ್ನು ಗೆಲ್ಲಬೇಕಿದೆ. ತನ್ನ ಮುಂದಿನ ಪಂದ್ಯದಲ್ಲಿ ಲಂಕಾ ತಂಡವನ್ನು ಎದುರಿಸಲಿರುವ ಟೀಂ ಇಂಡಿಯಾ, ಆ ಬಳಿಕ ದಕ್ಷಿಣ ಆಫ್ರಿಕಾ ಹಾಗೂ ನೆದರ್ಲೆಂಡ್ ತಂಡವನ್ನು ಎದುರಿಸಲಿದೆ.
‘ಬಾಲ್ ಆಫ್ ದಿ ಟೂರ್ನಮೆಂಟ್’: ಕುಲ್ದೀಪ್ ಮ್ಯಾಜಿಕ್ಗೆ ಬಟ್ಲರ್ ಕ್ಲೀನ್ ಬೌಲ್ಡ್! ವಿಡಿಯೋ ನೋಡಿ
ಇತ್ತ ಆಟಗಾರರ ಗಾಯದ ಸಮಸ್ಯೆಯಿಂದ ನಲುಗಿ ಹೋಗಿರುವ ಶ್ರೀಲಂಕಾ ತಂಡ ಆಡಿರುವ 5 ಪಂದ್ಯಗಳಲ್ಲಿ 2 ರಲ್ಲಿ ಗೆದ್ದು ಮೂರರಲ್ಲಿ ಸೋತಿದೆ. ಆದರೆ ತಂಡಕ್ಕೆ ಸೆಮಿಫೈನಲ್ ಕದ ಇನ್ನೂ ತೆರೆದಿದೆ. ಹೀಗಾಗಿ ಉಳಿದಿರುವ 4 ಪಂದ್ಯಗಳಲ್ಲಿ ಲಂಕಾ ತಂಡ ಗೆದ್ದು, ಟಾಪ್ 4 ರಲ್ಲಿ ಸ್ಥಾನ ಪಡೆದಿರುವ ಇತರ ತಂಡಗಳು ಸೋಲನುಭವಿಸಿದರೆ ತಂಡಕ್ಕೆ ಸೆಮಿಫೈನಲ್ಗೆ ಹೋಗುವ ಕೊನೆಯ ಅವಕಾಶ ಸಿಗಲಿದೆ.
ಆದರೆ ತಂಡಕ್ಕೆ ಆಟಗಾರರ ಗಾಯದ ಸಮಸ್ಯೆಯೇ ದೊಡ್ಡ ತಲೆನೋವಾಗಿದೆ. ಟೂರ್ನಿ ಆರಂಭಕ್ಕೂ ಮುನ್ನ ಇಂಜುರಿಯಿಂದಾಗಿ ವನಿಂದು ಹಸರಂಗರಂತಹ ಆಟಗಾರನನ್ನು ಕಳೆದುಕೊಂಡಿದ್ದ ಲಂಕಾ, ಟೂರ್ನಿ ಆರಂಭವಾದ ಬಳಿಕ ನಾಯಕ ದಸುನು ಶನಕ ಸೇರಿದಂತೆ ಮೂರು ಆಟಗಾರರನ್ನು ಕಳೆದುಕೊಂಡಿದೆ. ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಬೌಲಿಂಗ್ನಲ್ಲಿ ಮಿಂಚಿದ್ದ ಲಹಿರು ಕುಮಾರ ಇಂಜುರಿಯಿಂದಾಗಿ ವಿಶ್ವಕಪ್ನಿಂದ ಹೊರಬಿದ್ದಿದ್ದಾರೆ. ಅವರ ಬದಲಿಯಾಗಿ ದುಷ್ಮಂತ ಚಮೀರ ಬಂದಿದ್ದಾರೆ. ಹೀಗಾಗಿ ಪ್ರಮುಖ ವೇಗಿ ಇಲ್ಲದೆ ಕಣಕ್ಕಿಳಿಯುತ್ತಿರುವ ಲಂಕಾ, ಭಾರತಕ್ಕೆ ಯಾವ ರೀತಿಯ ಸವಾಲು ನೀಡಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಕುಲ್ದೀಪ್ ಯಾದವ್, ಮೊಹಮ್ಮದ್ ಶಮಿ, ರವಿಚಂದ್ರನ್ ಅಶ್ವಿನ್, ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ.
ಶ್ರೀಲಂಕಾ ತಂಡ: ಪಾತುಮ್ ನಿಸ್ಸಾಂಕ, ಕುಸಾಲ್ ಪೆರೇರಾ, ಕುಸಲ್ ಮೆಂಡಿಸ್(ನಾಯಕ), ಸದೀರ ಸಮರವಿಕ್ರಮ, ಚರಿತ್ ಅಸಲಂಕಾ, ಧನಂಜಯ ಡಿ ಸಿಲ್ವಾ, ಏಂಜೆಲೊ ಮ್ಯಾಥ್ಯೂಸ್, ಮಹೇಶ್ ತೀಕ್ಷಣ, ಕಸುನ್ ರಜಿತ, ದಿಲ್ಶನ್ ಮಧುಶಂಕ, ದುಷ್ಮಂತ ಚಮೀರ, ದಿಮುತ್ ಕರುಣಾರತ್ನೆ, ಚಾಮಿಕಾ ಕರುಣಾರತ್ನೆ, ದುನಿತ್ ವೆಲ್ಲಲಾಗೆ, ದುಶನ್ ಹೇಮಂತ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ