
ಭಾರತ ಮತ್ತು ಇಂಗ್ಲೆಂಡ್ (India vs England) ನಡುವಣ ಟೆಸ್ಟ್ ಸರಣಿಗೆ ಡೇಟ್ ಫಿಕ್ಸ್ ಆಗಿದೆ. ಜೂನ್ 20 ರಿಂದ ಆಂಗ್ಲರ ನಾಡಿನಲ್ಲಿ ನಡೆಯಲಿರುವ ಈ ಸರಣಿಯಲ್ಲಿ ಒಟ್ಟು 5 ಪಂದ್ಯಗಳನ್ನಾಡಲಾಗುತ್ತದೆ. ಆದರೆ ಈ ಸರಣಿಯಲ್ಲಿ ಟೀಮ್ ಇಂಡಿಯಾದ ದಿಗ್ಗಜರಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಹಾಗೂ ರವಿಚಂದ್ರನ್ ಅಶ್ವಿನ್ ಕಾಣಿಸಿಕೊಳ್ಳುವುದಿಲ್ಲ ಎಂಬುದು ವಿಶೇಷ.
ಈ ಮೂವರು ಆಟಗಾರರು ಈಗಾಗಲೇ ಟೆಸ್ಟ್ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದಾರೆ. ಇದೀಗ ಮೂವರು ಅನುಪಸ್ಥಿತಿಯಲ್ಲಿ ಟೀಮ್ ಇಂಡಿಯಾ ಕಣಕ್ಕಿಳಿಯಲು ಸಜ್ಜಾಗುತ್ತಿದೆ. ಅದು ಕೂಡ ಬರೋಬ್ಬರಿ 5055 ದಿನಗಳ ಬಳಿಕ ಎಂಬುದು ವಿಶೇಷ.
ಅಂದರೆ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಹಾಗೂ ರವಿಚಂದ್ರನ್ ಅಶ್ವಿನ್ ಇಲ್ಲದೆ ಟೀಮ್ ಇಂಡಿಯಾ ಕೊನೆಯ ಬಾರಿ ಟೆಸ್ಟ್ ಪಂದ್ಯವಾಡಿದ್ದು 2011 ರಲ್ಲಿ. ಓವಲ್ ಮೈದಾನದಲ್ಲಿ ಆಗಸ್ಟ್ 18, 2011 ರಂದು ನಡೆದ ಈ ಪಂದ್ಯದಲ್ಲಿ ರೋಹಿತ್, ವಿರಾಟ್ ಹಾಗೂ ಅಶ್ವಿನ್ ಆಡುವ ಬಳಗದಲ್ಲಿ ಕಾಣಿಸಿಕೊಂಡಿರಲಿಲ್ಲ.
ಇದೀಗ 14 ವರ್ಷಗಳ ನಂತರ, ಅಂದರೆ 2025 ರಲ್ಲಿ ಮತ್ತೆ ಟೀಮ್ ಇಂಡಿಯಾ ಮೂವರು ದಿಗ್ಗಜರಿಲ್ಲದೆ ಕಣಕ್ಕಿಳಿಯಲು ಸಜ್ಜಾಗಿದೆ. ಈ ಬಾರಿ ಕೂಡ ಟೀಮ್ ಇಂಡಿಯಾದ ಎದುರಾಳಿ ಇಂಗ್ಲೆಂಡ್.
ಅಂದರೆ 2011 ರಲ್ಲಿ ವಿರಾಟ್, ರೋಹಿತ್ ಹಾಗೂ ಅಶ್ವಿನ್ ಇಲ್ಲದೆ ಟೀಮ್ ಇಂಡಿಯಾ ಇಂಗ್ಲೆಂಡ್ ತಂಡವನ್ನು ಎದುರಿಸಿದ್ದರು. ಈ ಪಂದ್ಯದಲ್ಲಿ ಭಾರತ ತಂಡವು ಇನಿಂಗ್ಸ್ ಹಾಗೂ 8 ರನ್ಗಳಿಂದ ಸೋಲೊಪ್ಪಿಕೊಂಡಿತ್ತು. ಇದೀಗ 5055 ದಿನಗಳ ಮತ್ತೆ ಮೂವರು ದಿಗ್ಗಜರಿಲ್ಲದೆ ಭಾರತ ತಂಡವು ಇಂಗ್ಲೆಂಡ್ ತಂಡವನ್ನು ಎದುರಿಸಲು ಸನ್ನದ್ಧವಾಗಿದೆ.
ಭಾರತ ಮತ್ತು ಇಂಗ್ಲೆಂಡ್ ನಡುವಣ ಟೆಸ್ಟ್ ಸರಣಿಯೊಂದಿಗೆ 2027ರ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಕೂಡ ಶುರುವಾಗಲಿದೆ. ಏಕೆಂದರೆ ಜೂನ್ 11 ರಂದು 2025ರ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯ ಆರಂಭವಾಗಲಿದ್ದು, ಈ ಪಂದ್ಯದ ಮುಕ್ತಾಯದ ಬೆನ್ನಲ್ಲೇ ಜೂನ್ 20 ರಂದು ಭಾರತ ಮತ್ತು ಇಂಗ್ಲೆಂಡ್ ತಂಡಗಳು ಮುಖಾಮುಖಿಯಾಗಲಿದೆ.
ಈ ಟೆಸ್ಟ್ ಸರಣಿಯ ಮೊದಲ ಪಂದ್ಯವು ಲೀಡ್ಸ್ನಲ್ಲಿ ನಡೆದರೆ, ದ್ವಿತೀಯ ಟೆಸ್ಟ್ ಪಂದ್ಯಕ್ಕೆ ಬರ್ಮಿಂಗ್ಹ್ಯಾಮ್ ಆತಿಥ್ಯವಹಿಸಲಿದೆ. ಇನ್ನು ಮೂರನೇ ಟೆಸ್ಟ್ ಪಂದ್ಯವು ಕ್ರಿಕೆಟ್ ಕಾಶಿ ಲಾರ್ಡ್ಸ್ ಮೈದಾನದಲ್ಲಿ ನಡೆಯಲಿದೆ. ಹಾಗೆಯೇ ನಾಲ್ಕನೇ ಪಂದ್ಯವು ಮ್ಯಾಚೆಂಸ್ಟರ್ನಲ್ಲಿ ನಡೆಯಲಿದ್ದು, ಐದನೇ ಪಂದ್ಯವು ಲಂಡನ್ನ ಕೆನ್ನಿಂಗ್ಟನ್ ಓವಲ್ ಮೈದಾನದಲ್ಲಿ ಜರುಗಲಿದೆ.
ಇದನ್ನೂ ಓದಿ: IPL 2025: RCB ಪರ ಕಣಕ್ಕಿಳಿಯಲು ಸೌತ್ ಆಫ್ರಿಕಾ ವೇಗಿಗೆ ಗ್ರೀನ್ ಸಿಗ್ನಲ್