
T20 World Cup 2024: ಟಿ20 ವಿಶ್ವಕಪ್ನ 51ನೇ ಪಂದ್ಯದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಮುಖಾಮುಖಿಯಾಗಲಿದೆ. ಈ ಪಂದ್ಯವು ಉಭಯ ತಂಡಗಳ ಪಾಲಿಗೂ ನಿರ್ಣಾಯಕ. ಏಕೆಂದರೆ ಈ ಮ್ಯಾಚ್ನಲ್ಲಿ ಟೀಮ್ ಇಂಡಿಯಾ ಜಯ ಸಾಧಿಸಿದರೆ ನೇರವಾಗಿ ಸೆಮಿಫೈನಲ್ಗೇರಲಿದೆ. ಅತ್ತ ಸೆಮಿಫೈನಲ್ ರೇಸ್ನಲ್ಲಿ ಉಳಿಯಬೇಕಿದ್ದರೆ ಆಸ್ಟ್ರೇಲಿಯಾ ಈ ಪಂದ್ಯದಲ್ಲಿ ಗೆಲ್ಲಲೇಬೇಕು.
ಒಂದು ವೇಳೆ ಈ ಮ್ಯಾಚ್ನಲ್ಲಿ ಟೀಮ್ ಇಂಡಿಯಾ ಜಯ ಸಾಧಿಸಿದರೆ, ಒಟ್ಟು 6 ಅಂಕಗಳೊಂದಿಗೆ ಸೆಮಿಫೈನಲ್ಗೇರಲಿದೆ. ಇನ್ನು ಆಸ್ಟ್ರೇಲಿಯಾ ಗೆಲುವು ದಾಖಲಿಸಿದರೆ, ಅಫ್ಘಾನಿಸ್ತಾನ್ ಹಾಗೂ ಆಸ್ಟ್ರೇಲಿಯಾ ನಡುವೆ ನೇರ ಪೈಪೋಟಿ ಏರ್ಪಡಲಿದೆ. ಇಲ್ಲಿ ನೆಟ್ ರನ್ ರೇಟ್ನಲ್ಲಿ ಮುಂದಿರುವ ತಂಡ ಸೆಮಿಫೈನಲ್ಗೇರಲಿದೆ.
ಒಂದು ವೇಳೆ ಆಸ್ಟ್ರೇಲಿಯಾ ತಂಡವು ಟೀಮ್ ಇಂಡಿಯಾ ವಿರುದ್ಧ ಅಮೋಘ ಗೆಲುವು ದಾಖಲಿಸಿ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದರೆ, ಭಾರತ ತಂಡ ದ್ವಿತೀಯ ಸ್ಥಾನಕ್ಕೆ ಕುಸಿಯಲಿದೆ. ಇದರಿಂದ ಭಾರತ ಮತ್ತು ಅಫ್ಘಾನಿಸ್ತಾನ್ ನಡುವೆ ಪೈಪೋಟಿ ಏರ್ಪಡಲಿದೆ.
ಕಳೆದ ಒಂದು ವರ್ಷದಲ್ಲಿ ಟೀಮ್ ಇಂಡಿಯಾ ಎರಡು ಬಾರಿ ಐಸಿಸಿ ಟೂರ್ನಿ ಫೈನಲ್ ಪಂದ್ಯದಲ್ಲಿ ಸೋಲನುಭವಿಸಿದೆ. ಈ ಎರಡು ಸೋಲುಗಳು ಮೂಡಿಬಂದಿರುವುದು ಆಸ್ಟ್ರೇಲಿಯಾ ವಿರುದ್ಧ ಎಂಬುದು ವಿಶೇಷ.
2023ರ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದಲ್ಲಿ ಭಾರತದ ವಿರುದ್ಧ ಆಸ್ಟ್ರೇಲಿಯಾ ಗೆದ್ದು ಬೀಗಿತ್ತು. ಹಾಗೆಯೇ ಐಸಿಸಿ ಏಕದಿನ ವಿಶ್ವಕಪ್ 2023 ಫೈನಲ್ ಪಂದ್ಯದಲ್ಲೂ ಭಾರತ ತಂಡಕ್ಕೆ ಸೋಲುಣಿಸಿ ಆಸ್ಟ್ರೇಲಿಯಾ ವಿಶ್ವ ಚಾಂಪಿಯನ್ ಪಟ್ಟಕ್ಕೇರಿತ್ತು.
ಇದೀಗ ಆಸ್ಟ್ರೇಲಿಯಾ ತಂಡದ ಟಿ20 ವಿಶ್ವಕಪ್ ಭವಿಷ್ಯ ಟೀಮ್ ಇಂಡಿಯಾ ಕೈಯಲ್ಲಿದೆ. ಭಾರತ ತಂಡವು ಸೋಮವಾರ ಆಸ್ಟ್ರೇಲಿಯಾ ತಂಡಕ್ಕೆ ಸೋಲುಣಿಸಿದರೆ, ವಿಶ್ವಕಪ್ನಿಂದ ಹೊರಬೀಳುವ ಸಾಧ್ಯತೆ ಹೆಚ್ಚು.
ಏಕೆಂದರೆ ಆಸ್ಟ್ರೇಲಿಯಾ ವಿರುದ್ಧ ಟೀಮ್ ಇಂಡಿಯಾ ಗೆದ್ದರೆ, ಕೊನೆಯ ಪಂದ್ಯದಲ್ಲಿ ಬಾಂಗ್ಲಾದೇಶ್ ವಿರುದ್ಧ ಗೆದ್ದು ಅಫ್ಘಾನಿಸ್ತಾನ್ ತಂಡ ಸೆಮಿಫೈನಲ್ಗೇರಬಹುದು. ಈ ಮೂಲಕ ಆಸೀಸ್ ಪಡೆಯನ್ನು ಟಿ20 ವಿಶ್ವಕಪ್ನಿಂದ ಹೊರಹಾಕಬಹುದು.
ಇದನ್ನೂ ಓದಿ: AFG vs AUS: ಆಸ್ಟ್ರೇಲಿಯಾದ ವಿಶ್ವ ದಾಖಲೆಯ ಗೆಲುವಿನ ಓಟಕ್ಕೆ ಬ್ರೇಕ್ ಹಾಕಿದ ಅಫ್ಘಾನಿಸ್ತಾನ್
ಹೀಗಾಗಿ ಎರಡು ಫೈನಲ್ ಸೋಲುಗಳ ಸೇಡನ್ನು ತೀರಿಸಿಕೊಳ್ಳುವ ಮೂಲಕ ಟೀಮ್ ಇಂಡಿಯಾ ಆಸ್ಟ್ರೇಲಿಯಾ ತಂಡವನ್ನು ಟಿ20 ವಿಶ್ವಕಪ್ನಿಂದ ಹೊರದಬ್ಬಲಿದೆಯಾ ಕಾದು ನೋಡಬೇಕಿದೆ.