ಆಸ್ಟ್ರೇಲಿಯಾ ವಿರುದ್ಧ ಸೆಂಚುರಿ ಸಿಡಿಸಿ ಹಲವು ದಾಖಲೆ ಬರೆದ ಟೆಂಬಾ ಬವುಮಾ
Temba Bavuma Records: ಈ ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕಿಳಿದು ಅಜೇಯರಾಗಿ ಉಳಿದ ಟೆಂಬಾ ಬವುಮಾ 142 ಎಸೆತಗಳಲ್ಲಿ 1 ಸಿಕ್ಸ್ ಹಾಗೂ 14 ಫೋರ್ಗಳೊಂದಿಗೆ 114 ರನ್ ಬಾರಿಸಿದರು. ಈ ಅಜೇಯ ಇನಿಂಗ್ಸ್ನೊಂದಿಗೆ ಸೌತ್ ಆಫ್ರಿಕಾ (ಆಲೌಟ್ ಆದ ಪಂದ್ಯದಲ್ಲಿ) ಪರ ಏಕದಿನ ಕ್ರಿಕೆಟ್ನಲ್ಲಿ ಆರಂಭಿಕನಾಗಿ ಕಣಕ್ಕಿಳಿದು ಔಟಾಗದೇ ಕೊನೆಯದಾಗಿ ಮರಳಿದ 2ನೇ ಬ್ಯಾಟರ್ ಎಂಬ ದಾಖಲೆ ಬವುಮಾ ಪಾಲಾಯಿತು.
ಮಂಗಾಂಗ್ ಓವಲ್ನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಸೌತ್ ಆಫ್ರಿಕಾ ತಂಡದ ನಾಯಕ ಟೆಂಬಾ ಬವುಮಾ (Temba Bavuma) ಭರ್ಜರಿ ಶತಕ ಸಿಡಿಸಿದ್ದಾರೆ. ಈ ಶತಕದೊಂದಿಗೆ ಹಲವು ದಾಖಲೆಗಳನ್ನು ತಮ್ಮದಾಗಿಸಿಕೊಂಡಿರುವುದು ವಿಶೇಷ. ಈ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡವು ಬೌಲಿಂಗ್ ಆಯ್ದುಕೊಂಡಿತು. ಅದರಂತೆ ಮೊದಲು ಬ್ಯಾಟ್ ಮಾಡಿದ ಆತಿಥೇಯ ಸೌತ್ ಆಫ್ರಿಕಾ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ. ಆರಂಭಿಕ ಆಟಗಾರ ಕ್ವಿಂಟನ್ ಡಿಕಾಕ್ ಕೇವಲ 11 ರನ್ಗಳಿಸಿ ನಿರ್ಗಮಿಸಿದರೆ, ಇದರ ಬೆನ್ನಲ್ಲೇ 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ವ್ಯಾನ್ ಡೆರ್ ಡಸ್ಸೆನ್ (8) ಕೂಡ ವಿಕೆಟ್ ಒಪ್ಪಿಸಿದರು.
ಆ ಬಳಿಕ ಬಂದ ಐಡೆನ್ ಮಾರ್ಕ್ರಾಮ್ 19 ರನ್ಗಳಿಸಿದರೆ, ಹೆನ್ರಿಕ್ ಕ್ಲಾಸೆನ್ 14 ರನ್ಗಳಿಸಿ ನಿರ್ಗಮಿಸಿದರು. ಇನ್ನು ಡೇಂಜರಸ್ ಡೇವಿಡ್ ಮಿಲ್ಲರ್ ಶೂನ್ಯಕ್ಕೆ ಔಟಾಗುವ ಮೂಲಕ ನಿರಾಸೆ ಮೂಡಿಸಿದರು.
ಇತ್ತ 100 ರನ್ಗಳಿಸುಷ್ಟರಲ್ಲಿ 5 ವಿಕೆಟ್ ಕಳೆದುಕೊಂಡರೂ ಮತ್ತೊಂದೆಡೆ ಆರಂಭಿಕನಾಗಿ ಕಣಕ್ಕಿಳಿದ ಟೆಂಬಾ ಬವುಮಾ ಕ್ರೀಸ್ ಕಚ್ಚಿ ನಿಂತಿದ್ದರು. ಎಚ್ಚರಿಕೆಯ ಬ್ಯಾಟಿಂಗ್ನೊಂದಿಗೆ ರನ್ ಪೇರಿಸುತ್ತಾ ಸಾಗಿದ ಸೌತ್ ಆಫ್ರಿಕಾ ನಾಯಕ ತಂಡದ ಮೊತ್ತವನ್ನು 200 ರ ಗಡಿದಾಟಿಸಿದರು. ಅಷ್ಟರಲ್ಲಾಗಲೇ ಸೌತ್ ಆಫ್ರಿಕಾ ತಂಡವು 9 ವಿಕೆಟ್ ಕಳೆದುಕೊಂಡಿತು.
ಇದಾಗ್ಯೂ ಏಕಾಂಗಿ ಹೋರಾಟ ಮುಂದುವರೆಸಿದ್ದ ಟೆಂಬಾ ಬವುಮಾ 136 ಎಸೆತಗಳಲ್ಲಿ ಶತಕ ಪೂರೈಸಿದರು. ಆ ಬಳಿಕ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಬವುಮಾ ಸೌತ್ ತಂಡ ಮೊತ್ತವನ್ನು ಹೆಚ್ಚಿಸುವಲ್ಲಿ ನಿರತರಾದರು. ಆದರೆ 49ನೇ ಓವರ್ನ ಕೊನೆಯ ಎಸೆತದಲ್ಲಿ ಲುಂಗಿ ಎನ್ಗಿಡಿ ಔಟಾದರು. ಇದರೊಂದಿಗೆ ಸೌತ್ ಆಫ್ರಿಕಾ ತಂಡವು 222 ರನ್‌ಗಳಿಗೆ ಇನಿಂಗ್ಸ್ ಅಂತ್ಯಗೊಳಿಸಿತು.
ದಾಖಲೆ ಬರೆದ ಟೆಂಬಾ ಬವುಮಾ:
ಈ ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕಿಳಿದು ಅಜೇಯರಾಗಿ ಉಳಿದ ಟೆಂಬಾ ಬವುಮಾ 142 ಎಸೆತಗಳಲ್ಲಿ 1 ಸಿಕ್ಸ್ ಹಾಗೂ 14 ಫೋರ್ಗಳೊಂದಿಗೆ 114 ರನ್ ಬಾರಿಸಿದರು. ಈ ಅಜೇಯ ಇನಿಂಗ್ಸ್ನೊಂದಿಗೆ ಸೌತ್ ಆಫ್ರಿಕಾ (ಆಲೌಟ್ ಆದ ಪಂದ್ಯದಲ್ಲಿ) ಪರ ಏಕದಿನ ಕ್ರಿಕೆಟ್ನಲ್ಲಿ ಆರಂಭಿಕನಾಗಿ ಕಣಕ್ಕಿಳಿದು ಔಟಾಗದೇ ಕೊನೆಯದಾಗಿ ಮರಳಿದ 2ನೇ ಬ್ಯಾಟರ್ ಎಂಬ ದಾಖಲೆ ಬವುಮಾ ಪಾಲಾಯಿತು.
ಇದಕ್ಕೂ ಮುನ್ನ 2000 ರಲ್ಲಿ ಪಾಕಿಸ್ತಾನ್ ವಿರುದ್ಧ ಹರ್ಷಲ್ ಗಿಬ್ಸ್ ಆರಂಭಿಕನಾಗಿ ಕಣಕ್ಕಿಳಿದು ಅಜೇಯರಾಗಿ ಮರಳಿದ್ದರು. ಅಂದು ಪಾಕಿಸ್ತಾನ್ ನೀಡಿದ 168 ರನ್‌ಗಳನ್ನು ಬೆನ್ನಟ್ಟಿದ ಸೌತ್ ಆಫ್ರಿಕಾ 101 ರನ್‌ಗಳಿಗೆ ಆಲೌಟ್ ಆಗಿತ್ತು. ಈ ವೇಳೆ ಹರ್ಷಲ್ ಗಿಬ್ಸ್ 59 ರನ್ ಗಳಿಸಿ ಅಜೇಯರಾಗಿ ಉಳಿದಿದ್ದರು.
ಇದೀಗ ಆಸ್ಟ್ರೇಲಿಯಾ ವಿರುದ್ಧ ಆರಂಭಿಕನಾಗಿ ಕಣಕ್ಕಿಳಿದು ನಾಟೌಟ್ ಆಗಿ ಮರಳಿರುವ ಟೆಂಬಾ ಬವುಮಾ, ಏಕದಿನ ಕ್ರಿಕೆಟ್ನಲ್ಲಿ ಸೌತ್ ಆಫ್ರಿಕಾ (ಆಲೌಟ್ ಆದ ಪಂದ್ಯದಲ್ಲಿ) ಪರ ಆರಂಭಿಕನಾಗಿ ಕಣಕ್ಕಿಳಿದು ಶತಕ ಸಿಡಿಸಿದ ಮೊದಲ ಬ್ಯಾಟರ್ ಎಂಬ ದಾಖಲೆಯನ್ನೂ ಕೂಡ ನಿರ್ಮಿಸಿದ್ದಾರೆ.
ಹಾಗೆಯೇ ಈ ಸಾಧನೆ ಮಾಡಿದ ವಿಶ್ವದ 5ನೇ ಬ್ಯಾಟ್ಸ್ಮನ್ ಹಾಗೂ 2017 ರ ಬಳಿಕ ಏಕದಿನ ಕ್ರಿಕೆಟ್ನಲ್ಲಿ ಇಂತಹದೊಂದು ಸಾಧನೆ ಮಾಡಿದ ಹೆಗ್ಗಳಿಕೆಗೂ ಟೆಂಬಾ ಬವುಮಾ ಪಾತ್ರರಾಗಿದ್ದಾರೆ.
ಆಸ್ಟ್ರೇಲಿಯಾಗೆ 223 ರನ್ಗಳ ಗುರಿ:
ಸೌತ್ ಆಫ್ರಿಕಾ ನೀಡಿರುವ 223 ರನ್ಗಳ ಗುರಿಯನ್ನು ಬೆನ್ನತ್ತಿರುವ ಆಸ್ಟ್ರೇಲಿಯಾ ತಂಡವು 10 ಓವರ್ಗಳ ಮುಕ್ತಾಯದ ವೇಳೆ 69 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ಇನ್ನು 40 ಓವರ್ಗಳು ಬಾಕಿಯಿದ್ದು, 154 ರನ್ಗಳಿಸಿದರೆ ಜಯ ಸಾಧಿಸಬಹುದು. ಇತ್ತ ಸೌತ್ ಆಫ್ರಿಕಾ ತಂಡಕ್ಕೆ ಗೆಲ್ಲಲು 6 ವಿಕೆಟ್ಗಳ ಅಗತ್ಯತೆಯಿದೆ.
ಸೌತ್ ಆಫ್ರಿಕಾ ಪ್ಲೇಯಿಂಗ್ 11: ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್) , ಟೆಂಬಾ ಬವುಮಾ (ನಾಯಕ) , ರಸ್ಸಿ ವ್ಯಾನ್ ಡೆರ್ ಡಸ್ಸೆನ್ , ಐಡೆನ್ ಮಾರ್ಕ್ರಾಮ್ , ಹೆನ್ರಿಕ್ ಕ್ಲಾಸೆನ್ , ಡೇವಿಡ್ ಮಿಲ್ಲರ್ , ಮಾರ್ಕೊ ಯಾನ್ಸೆನ್ , ಜೆರಾಲ್ಡ್ ಕೊಟ್ಝೆ , ಕೇಶವ್ ಮಹಾರಾಜ್ , ಕಗಿಸೊ ರಬಾಡ , ಲುಂಗಿ ಎನ್ಗಿಡಿ.
ಇದನ್ನೂ ಓದಿ: Virat Kohli: ಕ್ಯಾಚ್ ಹಿಡಿದು ಹಲವು ದಾಖಲೆ ಬರೆದ ವಿರಾಟ್ ಕೊಹ್ಲಿ
ಆಸ್ಟ್ರೇಲಿಯಾ ಪ್ಲೇಯಿಂಗ್ 11: ಡೇವಿಡ್ ವಾರ್ನರ್ , ಟ್ರಾವಿಸ್ ಹೆಡ್ , ಮಿಚೆಲ್ ಮಾರ್ಷ್ (ನಾಯಕ) , ಕ್ಯಾಮರೋನ್ ಗ್ರೀನ್ , ಜೋಶ್ ಇಂಗ್ಲಿಸ್ , ಅಲೆಕ್ಸ್ ಕ್ಯಾರಿ ( ವಿಕೆಟ್ ಕೀಪರ್) , ಮಾರ್ಕಸ್ ಸ್ಟೊಯಿನಿಸ್ , ಶಾನ್ ಅಬಾಟ್ , ಆಷ್ಟನ್ ಅಗರ್ , ಜೋಶ್ ಹ್ಯಾಝಲ್ವುಡ್ , ಆ್ಯಡಂ ಝಂಪಾ.
Published On - 9:43 pm, Thu, 7 September 23