T20 World Cup 2021: ಅಫ್ಘಾನ್ ವಿರುದ್ದ ಗೆಲ್ಲಬೇಕಿದ್ರೆ ಟೀಮ್ ಇಂಡಿಯಾ ಮೊದಲು…
ಭಾರತ ಮುಂದಿನ ಪಂದ್ಯವನ್ನು ಅಫ್ಘಾನಿಸ್ತಾನ್ ವಿರುದ್ದ ಆಡಲಿದೆ. ಈ ಪಂದ್ಯ ನಡೆಯಲಿರುವುದು ಅಬುಧಾಭಿಯಲ್ಲಿ. ಇಲ್ಲಿ ಆಡಲಾದ 8 ಪಂದ್ಯಗಳಲ್ಲಿ ಟಾಸ್ ಗೆದ್ದು ಚೇಸ್ ಮಾಡಿ 6 ತಂಡಗಳು ಜಯ ಸಾಧಿಸಿದೆ.
ಟಿ20 ವಿಶ್ವಕಪ್ನ (T20 World Cup 2021) ಸೂಪರ್ 12 ರೋಚಕ ಘಟ್ಟದತ್ತ ಸಾಗುತ್ತಿದೆ. ಅದರಲ್ಲೂ ಸೂಪರ್ 12 ಸುತ್ತಿನಲ್ಲಿ ಬಲಿಷ್ಠ ಎನಿಸಿಕೊಂಡ ತಂಡಗಳೇ ಈ ಬಾರಿ ಸೋಲನುಭವಿಸಿರುವುದು ಅಚ್ಚರಿಗೆ ಕಾರಣವಾಗಿದೆ. ಇದಕ್ಕೆ ಮುಖ್ಯ ಕಾರಣ ಟಾಸ್ ಎನ್ನಲಾಗುತ್ತಿದೆ. ಇಲ್ಲಿ ಟಾಸ್ ಗೆದ್ದು ಚೇಸಿಂಗ್ ಮಾಡುವ ತಂಡಗಳು ಸುಲಭವಾಗಿ ಗೆಲುವು ದಾಖಲಿಸುತ್ತಿರುವುದು ಇಂತಹದ್ದೊಂದು ಅಭಿಪ್ರಾಯಕ್ಕೆ ಕಾರಣ. ಹೀಗೆ ಟಾಸ್ ಗೆದ್ದ ತಂಡಗಳ ನಾಯಕರುಗಳು ಬೌಲಿಂಗ್ ಆಯ್ಕೆ ಮಾಡಲು ಮುಖ್ಯ ಕಾರಣ ರಾತ್ರಿ ವೇಳೆ ಇಬ್ಬನಿಯಾಗುತ್ತಿರುವುದು. 2ನೇ ಇನಿಂಗ್ಸ್ ವೇಳೆ ಇಬ್ಬನಿಯಿಂದಾಗಿ ಬೌಲಿಂಗ್ ಪರಿಣಾಮಕಾರಿಯಾಗಿ ನಡೆಯುತ್ತಿಲ್ಲ. ಇದು ಚೇಸಿಂಗ್ ವೇಳೆ ಬ್ಯಾಟರ್ಗಳಿಗೆ ವರದಾನವಾಗಿ ಪರಿಣಮಿಸಿದೆ.
ಈ ವಿಶ್ವಕಪ್ನ ಸೂಪರ್ 12 ಪಂದ್ಯಗಳ ಅಂಕಿ ಅಂಶಗಳನ್ನು ತೆಗೆದುಕೊಂಡರೆ, ಇದುವರೆಗೆ ಯುಎಇನ ಶಾರ್ಜಾ, ಅಬುಧಾಬಿ ಹಾಗೂ ದುಬೈನಲ್ಲಿ ಒಟ್ಟಾರೆ 22 ಪಂದ್ಯಗಳು ನಡೆದಿವೆ. ಇದರಲ್ಲಿ ಮೊದಲು ಬ್ಯಾಟ್ ಮಾಡಿದ ತಂಡಗಳು ಗೆದ್ದಿರುವುದು ಕೇವಲ 4 ಬಾರಿ ಮಾತ್ರ. ಚೇಸಿಂಗ್ ಮಾಡಿದ ತಂಡಗಳು 18 ಪಂದ್ಯಗಳಲ್ಲಿ ಗೆದ್ದಿವೆ.
ಶಾರ್ಜಾದಲ್ಲಿ ಇದುವರೆಗೆ 7 ಪಂದ್ಯಗಳನ್ನು ಆಡಲಾಗಿದ್ದು, ಅದರಲ್ಲಿ ಚೇಸಿಂಗ್ ಮಾಡಿ 5 ಬಾರಿ ಗೆಲುವು ದಾಖಲಿಸಲಾಗಿದೆ. ಇನ್ನು ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿ 2 ಬಾರಿ ಮಾತ್ರ ಗೆಲುವು ದಾಖಲಿಸಿದೆ. ಹಾಗೆಯೇ ಅಬುಧಾಬಿಯಲ್ಲಿ ಆಡಿದ 8 ಪಂದ್ಯಗಳಲ್ಲಿ ಮೊದಲು ಬ್ಯಾಟ್ ಮಾಡಿದ ತಂಡ ಗೆದ್ದಿದ್ದು 2 ಬಾರಿ ಮಾತ್ರ. ಅಲ್ಲದೆ ಟಾಸ್ ಗೆದ್ದು ಚೇಸ್ ಮಾಡಿದ ತಂಡವು ಅಬುಧಾಬಿಯಲ್ಲಿ 6 ಬಾರಿ ಜಯ ಸಾಧಿಸಿದೆ.
ಇನ್ನು ದುಬೈನಲ್ಲಿ ಆಡಿದ 7 ಪಂದ್ಯಗಳಲ್ಲೂ ಟಾಸ್ ಗೆದ್ದು ಚೇಸಿಂಗ್ ಮಾಡಿದ ತಂಡವೇ ಗೆದ್ದಿದೆ. ಇಲ್ಲಿ ಗಮನಿಸಬೇಕಾದ ಮತ್ತೊಂದು ಅಂಶವೆಂದರೆ ಈ ಬಾರಿಯ ಬಲಿಷ್ಠ ತಂಡ ಎನಿಸಿಕೊಂಡಿದ್ದ ಭಾರತ ದುಬೈನಲ್ಲಿ ಎರಡೂ ಪಂದ್ಯಗಳಲ್ಲೂ ಟಾಸ್ ಸೋತಿತ್ತು ಎಂಬುದು. ಟಾಸ್ ಗೆದ್ದ ಪಾಕಿಸ್ತಾನ್ ಹಾಗೂ ನ್ಯೂಜಿಲೆಂಡ್ ತಂಡಗಳು ಚೇಸಿಂಗ್ ಮಾಡಿ ಟೀಮ್ ಇಂಡಿಯಾ ವಿರುದ್ದ ಗೆಲುವು ದಾಖಲಿಸಿತ್ತು. ಅಂದರೆ ಯುಎಇನಲ್ಲಿ ಇದುವರೆಗೆ ನಡೆದ 22 ಪಂದ್ಯಗಳಲ್ಲಿ 18 ಪಂದ್ಯಗಳಲ್ಲಿ ಟಾಸ್ ಗೆದ್ದು ಚೇಸಿಂಗ್ ಮಾಡಿದ ತಂಡಗಳೇ ಗೆದ್ದಿರುವುದು ವಿಶೇಷ.
ಭಾರತ ಮುಂದಿನ ಪಂದ್ಯವನ್ನು ಅಫ್ಘಾನಿಸ್ತಾನ್ ವಿರುದ್ದ ಆಡಲಿದೆ. ಈ ಪಂದ್ಯ ನಡೆಯಲಿರುವುದು ಅಬುಧಾಭಿಯಲ್ಲಿ. ಇಲ್ಲಿ ಆಡಲಾದ 8 ಪಂದ್ಯಗಳಲ್ಲಿ ಟಾಸ್ ಗೆದ್ದು ಚೇಸ್ ಮಾಡಿ 6 ತಂಡಗಳು ಜಯ ಸಾಧಿಸಿದೆ. ಅತ್ತ ಅಫ್ಘಾನಿಸ್ತಾನ್ ಕೂಡ ಸೆಮಿಫೈನಲ್ಗೇರುವ ತವಕದಲ್ಲಿದ್ದು, ಹೀಗಾಗಿ ಟೀಮ್ ಇಂಡಿಯಾ ಭರ್ಜರಿ ಪೈಪೋಟಿ ನೀಡಲಿದೆ. ಅದರಂತೆ ಅಬುಧಾಬಿಯಲ್ಲಿ ಟೀಮ್ ಇಂಡಿಯಾ ಟಾಸ್ ಗೆಲ್ಲಲದಿದ್ದರೆ, ಗೆಲುವು ಸುಲಭವಲ್ಲ ಎಂದೇ ಹೇಳಬಹುದು.
ಇದನ್ನೂ ಓದಿ: IPL 2022: ನಾಲ್ವರು ಆಟಗಾರರಿಗೆ 42 ಕೋಟಿ ರೂ. ನಿಗದಿ: ಐಪಿಎಲ್ ಹೊಸ ರಿಟೈನ್ ನಿಯಮ
ಇದನ್ನೂ ಓದಿ: T20 World Cup 2021: ಸೆಮಿಫೈನಲ್ ಲೆಕ್ಕಾಚಾರ: ನ್ಯೂಜಿಲೆಂಡ್ ವಿರುದ್ದ ಟೀಮ್ ಇಂಡಿಯಾ ಗೆಲ್ಲಲೇಬೇಕು, ಯಾಕೆ ಗೊತ್ತಾ?
ಇದನ್ನೂ ಓದಿ: ICC T20 Batter Rankings: ನೂತನ ಟಿ20 ರ‍್ಯಾಂಕಿಂಗ್ ಪ್ರಕಟ: ಟೀಮ್ ಇಂಡಿಯಾದ ಇಬ್ಬರ ಸ್ಥಾನ ಕುಸಿತ
(The Toss Factor In T20 World Cup 2021)