‘ಇದು ನನ್ನ ಮೈದಾನ’ ಸೆಲೆಬ್ರೇಷನ್ ಪ್ಲ್ಯಾನ್ ಇತ್ತಾ? ಕೆಎಲ್ ರಾಹುಲ್ ಹೇಳಿದ್ದೇನು?

IPL 2026 RCB vs DC: ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಐಪಿಎಲ್​ನ 26ನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 20 ಓವರ್​ಗಳಲ್ಲಿ ಕಲೆಹಾಕಿದ್ದು 175 ರನ್​ಗಳು ಮಾತ್ರ. ಈ ಗುರಿಯನ್ನು ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು 19.5 ಓವರ್​ಗಳಲ್ಲಿ 179 ರನ್​ಗಳಿಸಿ 6 ವಿಕೆಟ್​ಗಳ ಜಯ ಸಾಧಿಸಿದೆ. 

ಇದು ನನ್ನ ಮೈದಾನ ಸೆಲೆಬ್ರೇಷನ್ ಪ್ಲ್ಯಾನ್ ಇತ್ತಾ? ಕೆಎಲ್ ರಾಹುಲ್ ಹೇಳಿದ್ದೇನು?
Kl Rahul

Updated on: Apr 19, 2026 | 8:13 AM

ಐಪಿಎಲ್ 2025, ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಹಾಗೂ ಡೆಲ್ಲಿ ಕ್ಯಾಪಿಟಲ್ಸ್ (DC) ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆರ್​ಸಿಬಿ ತಂಡ 20 ಓವರ್​ಗಳಲ್ಲಿ 163 ರನ್ ಕಲೆಹಾಕಿದ್ದರು. ಈ ಗುರಿ ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ ಆರಂಭಿಕ ಆಘಾತಕ್ಕೆ ಒಳಗಾದರೂ ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿದ ಕೆಎಲ್ ರಾಹುಲ್ (KL Rahul) ಏಕಾಂಗಿ ಹೋರಾಟ ನಡೆಸಿದರು.

ಈ ಏಕಾಂಗಿ ಹೋರಾಟದೊಂದಿಗೆ ಅಜೇಯ 93 ರನ್​ ಬಾರಿಸಿ ಕೆಎಲ್ ರಾಹುಲ್ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಜಯ ತಂದು ಕೊಟ್ಟಿದ್ದರು. ಈ ಗೆಲುವಿನ ಬಳಿಕ ತಮ್ಮ ಬ್ಯಾಟ್ ಅನ್ನು ಮಣ್ಣಿನಲ್ಲಿ ಬಲವಾಗಿ ಊರಿ, “ಇದು ನನ್ನ ಮೈದಾನ”ಎಂದು ಕಾಂತಾರಾ ಸ್ಟ್ರೈಲ್​ನಲ್ಲಿ  ಸಂಭ್ರಮಿಸಿದ್ದರು.

ಇದೀಗ ಮತ್ತೊಮ್ಮೆ ಆರ್​ಸಿಬಿ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ಗೆಲುವು ದಾಖಲಿಸಿದೆ. ಈ ಬಾರಿ ಕೂಡ ಗೆಲುವಿನ ರೂವಾರಿಯಾಗಿ ಹೊರಹೊಮ್ಮಿದ್ದು ಕೆಎಲ್ ರಾಹುಲ್. ಆರ್​ಸಿಬಿ ನೀಡಿದ 176 ರನ್​ಗಳ ಗುರಿ ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ ಪರ ರಾಹುಲ್ 34 ಎಸೆತಗಳಲ್ಲಿ 57 ರನ್​ ಬಾರಿಸಿದ್ದಾರೆ. ಈ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಗೆಲುವಿನಲ್ಲಿ ತನ್ನದೆಯಾದ ಕೊಡುಗೆ ನೀಡಿದ್ದಾರೆ.

ಈ ಗೆಲುವಿನ ಬಳಿಕ ಮಾತನಾಡಿದ ಕೆಎಲ್ ರಾಹುಲ್​​ಗೆ ಈ ಬಾರಿ ಕಾಂತಾರಾ ಸ್ಟೈಲ್​ನಲ್ಲಿ ಸೆಲೆಬ್ರೇಷನ್ ಮಾಡುವ ಪ್ಲ್ಯಾನ್ ಇತ್ತಾ ಎಂದು ಕೇಳಲಾಗಿದೆ. ಈ ಪ್ರಶ್ನೆಗೆ ಉತ್ತರಿಸಿದ ರಾಹುಲ್, ಇಲ್ಲಾ, “ಅದು ಕೇವಲ ಒಂದು ಬಾರಿ ಮಾಡಿದ ಆಚರಣೆಯಷ್ಟೇ, ಇಂದಿನ ಪಂದ್ಯದಲ್ಲಿ ಆ ರೀತಿ ಮಾಡಲು ಯಾವುದೇ ಪ್ಲ್ಯಾನ್ ಇರಲಿಲ್ಲ,” ಎಂದಿದ್ದಾರೆ.

ಇದೇ ವೇಳೆ ಈ ಬಾರಿ ಬ್ಯಾಟಿಂಗ್ ಕಠಿಣವಾಗಿತ್ತು ಎಂದು ಒಪ್ಪಿಕೊಂಡಿರುವ ಕೆಎಲ್ ರಾಹುಲ್, ಆರಂಭದಲ್ಲಿ ಪಿಚ್ ಸ್ವಲ್ಪ ಭಿನ್ನವಾಗಿ ವರ್ತಿಸುತ್ತಿತ್ತು. ವಿರಾಟ್ ಕೊಹ್ಲಿ ಮತ್ತು ಫಿಲ್ ಸಾಲ್ಟ್ ಕೂಡ ಚೆಂಡು ಬರುತ್ತಿದ್ದ ರೀತಿಯ ಬಗ್ಗೆ ಅಸಮಾಧಾನಗೊಂಡಿರುವುದನ್ನು ನಾನು ಗಮನಿಸಿದೆ.

ನಾವು ಮೊದಲ ಆರು ಓವರ್‌ಗಳಲ್ಲಿ ಮೂರು ವಿಕೆಟ್ ಕಳೆದುಕೊಂಡಿದ್ದು ನಮಗೆ ಹಿನ್ನಡೆಯಾಯಿತು. ಆದರೆ ನಾವು ಗಳಿಸಬೇಕಾದ ರನ್ ಗತಿ ಏರದಂತೆ ತಡೆಯುವುದು ನಮ್ಮ ಮುಖ್ಯ ಗುರಿಯಾಗಿತ್ತು. ಹೀಗಾಗಿ ನಾನು ಬಿರುಸಿನ ಬ್ಯಾಟಿಂಗ್ ಮುಂದುವರೆಸಲು ನಿರ್ಧರಿಸಿದೆ ಎಂದು ತಿಳಿಸಿದ್ದಾರೆ.

ಇನ್ನು ಟ್ರಿಸ್ಟನ್ ಸ್ಟಬ್ಸ್ ಅವರೊಂದಿಗೆ ಜೊತೆಯಾಟದ ಬಗ್ಗೆ ಮಾತನಾಡಿದ ರಾಹುಲ್, ನಾವಿಬ್ಬರು ನಮ್ಮ ಆಟದ ಶೈಲಿಯನ್ನು ಬದಲಿಸದೆ, ಉತ್ತಮ ಕ್ರಿಕೆಟ್ ಶಾಟ್‌ಗಳನ್ನು ಆಡಲು ನಿರ್ಧರಿಸಿದೆವು. ಬೌಲರ್‌ಗಳ ಮೇಲೆ ಒತ್ತಡ ಹೇರುವುದು ಮುಖ್ಯವಾಗಿತ್ತು. ಕೊನೆಯ ಹಂತದವರೆಗೆ ಪಂದ್ಯವನ್ನು ಕೊಂಡೊಯ್ದರೆ ಗೆಲುವು ಕಷ್ಟವಾಗುತ್ತದೆ ಎಂಬುದು ನಮಗೆ ತಿಳಿದಿತ್ತು.

ಇದಾಗ್ಯೂ ಕೊನೆಯ ಹಂತದಲ್ಲಿ ಪಂದ್ಯ ರೋಚಕ ಹಂತ ತಲುಪಿದರೂ ನಾನು ಗಾಬರಿಗೊಂಡಿರಲಿಲ್ಲ. ಏಕೆಂದರೆ ನನಗೆ ಸ್ಟಬ್ಸ್ ಮತ್ತು ಮಿಲ್ಲರ್ ಮೇಲೆ ಸಂಪೂರ್ಣ ನಂಬಿಕೆ ಇತ್ತು. ಅವರು ಸೌತ್ ಆಫ್ರಿಕಾ ಮತ್ತು ಫ್ರಾಂಚೈಸಿ ಕ್ರಿಕೆಟ್‌ನಲ್ಲಿ ಹಲವು ಪಂದ್ಯಗಳನ್ನು ಫಿನಿಶ್ ಮಾಡಿದ್ದಾರೆ.

ಇದನ್ನೂ ಓದಿ: IPL 2026: ಹೀಗೊಂದು ‘ಅವಮಾನಕರ’ ದಾಖಲೆ ಬರೆದ RCB

ಅಲ್ಲದೆ ಕೊನೆಯ ಓವರ್​ ಅನ್ನು ರೊಮಾರಿಯೋ ಶೆಫರ್ಡ್ ಅಥವಾ ಸುಯಶ್ ಶರ್ಮಾ ಎಸೆಯುತ್ತಾರೆ ಎಂಬುದು ನಮಗೆ ತಿಳಿದಿತ್ತು. ಈ ವೇಳೆ ಬಿಗ್ ಹಿಟ್ ಬಾರಿಸಲು ಅವಕಾಶ ದೊರೆಯಲಿದೆ ಎಂಬುದು ಗೊತ್ತಿತ್ತು. ಹೀಗಾಗಿ ಪಂದ್ಯವು ಕೊನೆಯ ಓವರ್​ನತ್ತ ಸಾಗಿದರೂ ನಾನು ಚಿಂತಿತನಾಗಿರಲಿಲ್ಲ ಎಂದು ಕೆಎಲ್ ರಾಹುಲ್ ತಿಳಿಸಿದ್ದಾರೆ.

 

Follow Us