ರಾಷ್ಟ್ರೀಯ ತಂಡದಲ್ಲಿ ಶತಕಗಳ ಮೇಲೆ ಶತಕ ಸಿಡಿಸಿ ದಾಖಲೆಗಳ ಮೇಲೆ ದಾಖಲೆ ಬರೆದಿದ್ದ ಟೀಂ ಇಂಡಿಯಾದ ಯುವ ಕ್ರಿಕೆಟಿಗ ತಿಲಕ್ ವರ್ಮಾ ದೇಶೀ ಕ್ರಿಕೆಟ್ನಲ್ಲಿ ಮಾತ್ರ ರನ್ ಬರ ಎದುರಿಸುತ್ತಿದ್ದಾರೆ. ತಿಂಗಳ ಹಿಂದೆ ದಕ್ಷಿಣ ಆಫ್ರಿಕಾ ವಿರುದ್ಧ ನಡೆದಿದ್ದ ಟಿ20 ಸರಣಿಯಲ್ಲಿ ಎರಡು ಬ್ಯಾಕ್ ಟು ಬ್ಯಾಕ್ ಶತಕ ಸಿಡಿಸಿ ದಾಖಲೆಯ ಪುಸ್ತಕದಲ್ಲಿ ತಮ್ಮ ಹೆಸರನ್ನು ನಮೋದಿಸಿದ್ದ ತಿಲಕ್ ಇದೀಗ ಭಾರತದಲ್ಲಿ ನಡೆಯುತ್ತಿರುವ ದೇಶೀ ಟೂರ್ನಿ ವಿಜಯ್ ಹಜಾರೆ ಟ್ರೋಫಿಯಲ್ಲಿ ಸತತ ಎರಡನೇ ಪಂದ್ಯದಲ್ಲೂ ಖಾತೆ ತೆರೆಯದೆ ವಿಕೆಟ್ ಒಪ್ಪಿಸಿದ್ದಾರೆ.
ವಾಸ್ತವವಾಗಿ ಕಳೆದ ನವೆಂಬರ್ನಲ್ಲಿ 4 ಪಂದ್ಯಗಳ ಟಿ20 ಸರಣಿಗಾಗಿ ಟೀಂ ಇಂಡಿಯಾ ದಕ್ಷಿಣ ಆಫ್ರಿಕಾ ಪ್ರವಾಸ ಮಾಡಿತ್ತು. ಈ ವೇಳೆ ತಂಡದಲ್ಲಿ ಆಡುವ ಅವಕಾಶ ಪಡೆದಿದ್ದ ತಿಲಕ್ ವರ್ಮಾ ಸತತ ಎರಡು ಟಿ 20 ಗಳಲ್ಲಿ ಶತಕ ಬಾರಿಸುವ ಮೂಲಕ ಇತಿಹಾಸ ನಿರ್ಮಿಸಿದ್ದರು. ಸೆಂಚುರಿಯನ್ನಲ್ಲಿ ನಡೆದ ಮೂರನೇ ಟಿ20 ಪಂದ್ಯದಲ್ಲಿ ಅಜೇಯ 107 ರನ್ ಕಲೆಹಾಕಿದ್ದ ತಿಲಕ್ ನಂತರ ಜೋಹಾನ್ಸ್ಬರ್ಗ್ನಲ್ಲಿ ನಡೆದ 4ನೇ ಟಿ20 ಪಂದ್ಯದಲ್ಲೂ ಅಜೇಯ 120 ರನ್ ಬಾರಿಸುವ ಮೂಲಕ ದಾಖಲೆ ಪುಸ್ತಕಗಳಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಂಡರು. ಆದರೆ, ತಿಲಕ್ ದೇಶೀಯ ಕ್ರಿಕೆಟ್ನಲ್ಲಿ ಈ ಫಾರ್ಮ್ ಅನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತಿಲ್. 2 ದಿನಗಳ ಹಿಂದೆ ಪ್ರಾರಂಭವಾದ ದೇಶೀಯ ಏಕದಿನ ಪಂದ್ಯಾವಳಿ ವಿಜಯ್ ಹಜಾರೆ ಟ್ರೋಫಿಯಲ್ಲಿ ತಿಲಕ್ ಅವರ ಫ್ಲಾಪ್ ಶೋ ಮುಂದುವರೆದಿದೆ.
ಪ್ರಸ್ತುತ ನಡೆಯುತ್ತಿರುವ ವಿಜಯ್ ಹಜಾರೆ ಟ್ರೋಫಿಯಲ್ಲಿ ಹೈದರಾಬಾದ್ ತಂಡದ ನಾಯಕರಾಗಿರುವ ತಿಲಕ್ ವರ್ಮಾ ಮುಂಬೈ ವಿರುದ್ಧದ ಎರಡನೇ ಪಂದ್ಯದಲ್ಲೂ ಮತ್ತೊಮ್ಮೆ ಖಾತೆ ತೆರೆಯಲು ವಿಫಲರಾಗಿದ್ದಾರೆ. ಈ ಪಂದ್ಯದಲ್ಲಿ ಕೇವಲ 2 ಎಸೆತಗಳನ್ನು ಎದುರಿಸಿದ ತಿಲಕ್ಗೆ ಖಾತೆ ತೆರೆಯಲೂ ಸಾಧ್ಯವಾಗಲಿಲ್ಲ. ಇದಕ್ಕೂ ಮುನ್ನ ನಾಗಾಲ್ಯಾಂಡ್ ವಿರುದ್ಧವೂ ತಿಲಕ್ ಶೂನ್ಯಕ್ಕೆ ಔಟಾಗಿದ್ದರು.
ಇನ್ನು ಮುಂಬೈ ವಿರುದ್ಧದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಹೈದರಾಬಾದ್ ತಂಡ ಸಂಪೂರ್ಣ 50 ಓವರ್ಗಳನ್ನು ಆಡಲು ಸಾಧ್ಯವಾಗದೆ 38.1 ಓವರ್ಗಳಲ್ಲಿ 169 ರನ್ಗಳಿಗೆ ಆಲೌಟ್ ಆಯಿತು. ಒಂದು ಹಂತದಲ್ಲಿ ತಂಡ 130 ರನ್ ಗಳಿಸುವಷ್ಟರಲ್ಲಿ 5 ವಿಕೆಟ್ ಕಳೆದುಕೊಂಡಿತ್ತು. ಇದಾದ ಬಳಿಕವೂ ಚೇತರಿಸಿಕೊಳ್ಳಲು ಸಾಧ್ಯವಾಗದೆ ಅಲ್ಪ ರನ್ಗಳಿಗೆ ಇನ್ನಿಂಗ್ಸ್ ಮುಗಿಸಿತು. ಮುಂಬೈ ಪರ ವಿನೋದ್ 4 ಹಾಗೂ ಆಯುಷ್ ಮ್ಹಾತ್ರೆ ಮೂರು ವಿಕೆಟ್ ಪಡೆದರು.
ಈ ಗುರಿ ಬೆನ್ನಟ್ಟಿದ ಮುಂಬೈ ತಂಡ ಕೂಡ ಗೆಲುವಿಗೆ ಸಾಕಷ್ಟು ಶ್ರಮವಹಿಸಬೇಕಾಯಿತು. ತನುಷ್ ಕೋಟ್ಯಾನ್ ಅವರ ಅಜೇಯ 39 ರನ್ ಹಾಗೂ ನಾಯಕ ಶ್ರೇಯಸ್ ಅಯ್ಯರ್ ಅವರ ಅಜೇಯ 44 ರನ್ಗಳ ಸ್ಫೋಟಕ ಇನ್ನಿಂಗ್ಸ್ನಿಂದಾಗಿ ಮುಂಬೈ ತಂಡ 7 ವಿಕೆಟ್ ಕಳೆದುಕೊಂಡು 25.2 ಓವರ್ಗಳಲ್ಲಿ ಗೆಲುವಿನ ದಡ ಮುಟ್ಟಿತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ