Vinod Kambli Hospitalized: ಕ್ರಿಕೆಟಿಗ ವಿನೋದ್ ಕಾಂಬ್ಳಿ ಆರೋಗ್ಯ ಸ್ಥಿತಿ ಗಂಭೀರ; ಆಸ್ಪತ್ರೆಗೆ ದಾಖಲು
Vinod Kambli Hospitalized: ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಹೀಗಾಗಿ ಅವರನ್ನು ಮುಂಬೈನ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೆಲವು ದಿನಗಳ ಹಿಂದೆ ಅವರು ಗಂಭೀರ ಮೂತ್ರದ ಸೋಂಕಿನಿಂದ ಬಳಲುತ್ತಿರುವುದಾಗಿ ಹೇಳಿಕೊಂಡಿದ್ದರು. ಈಗ ಅವರ ಆರೋಗ್ಯ ಹದಗೆಟ್ಟಿದ್ದು, ಅವರ ಮೇಲೆ ವೈದ್ಯರು ತೀವ್ರ ನಿಗಾ ಇರಿಸಿದ್ದಾರೆ.
ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಕಳೆದ ಕೆಲವು ದಿನಗಳಿಂದ ಗಂಭೀರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದೀಗ ಕಾಂಬ್ಳಿ ಅವರ ಆರೋಗ್ಯ ಮತ್ತೊಮ್ಮೆ ಹದಗೆಟ್ಟಿದ್ದು ಅವರನ್ನು ಠಾಣೆಯ ಆಕೃತಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವರದಿಯಾಗಿದೆ. ಸದ್ಯ ವೈದ್ಯರ ಮೇಲ್ವಿಚಾರಣೆಯಲ್ಲಿರುವ ವಿನೋದ್ ಕಾಂಬ್ಳಿ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು ಎಂತಲೂ ಹೇಳಲಾಗುತ್ತಿದೆ. ವಾಸ್ತವವಾಗಿ ವಾಸ್ತವವಾಗಿ ಕೆಲವು ದಿನಗಳ ಹಿಂದೆ ಮುಂಬೈನ ಪ್ರಸಿದ್ಧ ಶಿವಾಜಿ ಪಾರ್ಕ್ ಮೈದಾನದಲ್ಲಿ ರಮಾಕಾಂತ್ ಅಚ್ರೇಕರ್ ಅವರ ಸ್ಮಾರಕವನ್ನು ಇತ್ತೀಚೆಗೆ ಅನಾವರಣಗೊಳಿಸಲಾಯಿತು. ಈ ಸಮಾರಂಭದಲ್ಲಿ ಸಚಿನ್ ತೆಂಡೂಲ್ಕರ್, ವಿನೋದ್ ಕಾಂಬ್ಳಿ ಸೇರಿದಂತೆ ರಮಾಕಾಂತ್ ಅವರ ಕೋಚಿಂಗ್‌ನಲ್ಲಿ ಬೆಳೆದಿದ್ದ ಪ್ರಸಿದ್ಧ ಕ್ರಿಕೆಟಿಗರು ಉಪಸ್ಥಿತರಿದ್ದರು. ಆ ಸಮಾರಂಭದಲ್ಲೇ ಕಾಂಬ್ಳಿ ತೀವ್ರ ಅನಾರೋಗ್ಯದಿಂದ ಬಳಲುತ್ತಿರುವುದು ಜಗಜ್ಜಾಹೀರಾಗಿತ್ತು.
ವಿನೋದ್ ಕಾಂಬ್ಳಿ ಆಸ್ಪತ್ರೆಗೆ ದಾಖಲು
ಇತ್ತೀಚೆಗೆ ಅಭಿಮಾನಿಯೊಬ್ಬರು ವಿನೋದ್ ಕಾಂಬ್ಳಿ ಅವರ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಅವರು ಆಸ್ಪತ್ರೆಯಲ್ಲಿ ದಾಖಲಾಗಿರುವುದನ್ನು ಕಾಣಬಹುದಾಗಿದೆ. ಮಾಧ್ಯಮ ವರದಿಗಳ ಪ್ರಕಾರ, ಅವರ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗುತ್ತಿದೆ. ಕಾಂಬ್ಳಿ ಇತ್ತೀಚೆಗೆ ಯೂಟ್ಯೂಬ್ ಚಾನೆಲ್‌ನ ಸಂದರ್ಶನವೊಂದರಲ್ಲಿ ತಾನು ಗಂಭೀರ ಮೂತ್ರದ ಸೋಂಕಿನಿಂದ ಬಳಲುತ್ತಿದ್ದೇನೆ ಎಂದು ಹೇಳಿಕೊಂಡಿದ್ದರು. ಇದಲ್ಲದೆ ಕಾಂಬ್ಳಿ ಅನೇಕ ಕಾಯಿಲೆಗಳಿಂದ ಬಳಲುತ್ತಿರುವುದಾಗಿಯೂ ಹೇಳಿಕೊಂಡಿದ್ದರು.
Today meet great cricketer vinod kambli sir in AKRUTI hospital pic.twitter.com/3qgF8ze7w2
— Neetesh Tripathi (@NeeteshTri63424) December 23, 2024
ಕುಡಿತದ ಚಟದಿಂದ ವಿನೋದ್ ಕಾಂಬ್ಳಿ ಅವರ ಆರೋಗ್ಯ ದಿನದಿಂದ ದಿನಕ್ಕೆ ಹದಗೆಡುತ್ತಿದೆ. ಇತ್ತೀಚೆಗೆ, ಕಾಂಬ್ಳಿ ಸ್ಥಿತಿಯನ್ನು ನೋಡಿ, ಟೀಂ ಇಂಡಿಯಾದ ಹಿರಿಯ ಕ್ರಿಕೆಟಿಗ ಕಪಿಲ್ ದೇವ್, 1983 ರ ವಿಶ್ವಕಪ್ ತಂಡದ ಸಹ ಆಟಗಾರರೊಂದಿಗೆ ಕಾಂಬ್ಳಿಗೆ ಸಹಾಯ ಮಾಡುವುದಾಗಿ ಹೇಳಿಕೊಂಡಿದ್ದರು. ಆದರೆ ತಾವು ಸಹಾಯ ಮಾಡಬೇಕೆಂದರೆ ಕಾಂಬ್ಳಿ ರಿಹ್ಯಾಬ್ ಸೆಂಟರ್ಗೆ ದಾಖಲಾಗಬೇಕು ಎಂಬ ಷರತ್ತನ್ನು ವಿಧಿಸಿದ್ದರು. ಇದರ ನಂತರ, 52 ವರ್ಷದ ವಿನೋದ್ ಕಾಂಬ್ಳಿ ಕೂಡ ಕಪಿಲ್ ದೇವ್ ಅವರ ಪ್ರಸ್ತಾಪವನ್ನು ಒಪ್ಪಿಕೊಂಡು ಸಹಾಯಕ್ಕಾಗಿ ಕೃತಜ್ಞತೆ ವ್ಯಕ್ತಪಡಿಸಿದ್ದರು. ಪುನರ್ವಸತಿಗೆ ಹೋಗಲು ಸಿದ್ಧರಾಗಿದ್ದ ಕಾಂಬ್ಳಿ ಇದೀಗ ಮತ್ತೆ ತೀವ್ರ ಅನಾರೋಗ್ಯಕ್ಕೀಡಾಗಿದ್ದಾರೆ.
ವಿನೋದ್ ಕಾಂಬ್ಳಿ ಅವರ ಕ್ರಿಕೆಟ್ ಜೀವನ
1991 ರಲ್ಲಿ ಏಕದಿನ ಕ್ರಿಕೆಟ್ಗೆ ಪದಾರ್ಪಣೆ ಮಾಡುವ ಮೂಲಕ ಅಂತರಾಷ್ಟ್ರೀಯ ಕ್ರಿಕೆಟ್ ಬದುಕಿಗೆ ಮುನ್ನುಡಿ ಬರೆದಿದ್ದ ಕಾಂಬ್ಳಿ ಇದಾದ ಬಳಿಕ 1993ರಲ್ಲಿ ಟೀಂ ಇಂಡಿಯಾ ಪರ ಟೆಸ್ಟ್‌ಗೆ ಪದಾರ್ಪಣೆ ಮಾಡಿದ್ದರು. ಟೀಂ ಇಂಡಿಯಾ ಪರ ಒಟ್ಟು 17 ಟೆಸ್ಟ್ ಮತ್ತು 104 ಏಕದಿನ ಪಂದ್ಯಗಳನ್ನು ಆಡಿರುವ ಅವರು ಟೆಸ್ಟ್‌ನಲ್ಲಿ ಒಟ್ಟು 1084 ರನ್ ಮತ್ತು ಏಕದಿನದಲ್ಲಿ 2477 ರನ್ ಗಳಿಸಿದ್ದಾರೆ. ವೃತ್ತಿಜೀವನದ ಆರಂಭದಲ್ಲಿ ಕಾಂಬ್ಳಿ ಸಾಕಷ್ಟು ಖ್ಯಾತಿಯನ್ನು ಗಳಿಸಿದ್ದರು. ಆದರೆ ಮದ್ಯದ ಚಟದಿಂದಾಗಿ ಅವರ ವೃತ್ತಿಜೀವನವು ಹೆಚ್ಚು ಕಾಲ ಉಳಿಯಲಿಲ್ಲ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:57 pm, Mon, 23 December 24