Tim David: ಕೊನೆಯ ಓವರ್ನಲ್ಲಿ ಬೇಕಿತ್ತು 17 ರನ್ಸ್: ಸತತ 3 ಸಿಕ್ಸ್ ಸಿಡಿಸಿದ ಟಿಮ್ ಡೇವಿಡ್ ರೋಚಕ ವಿಡಿಯೋ ನೋಡಿ
MI vs RR, IPL 2023: ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಕೊನೆಯ 6 ಎಸೆತಗಳಲ್ಲಿ ಮುಂಬೈ ಗೆಲುವಿಗೆ 17 ರನ್ಗಳು ಬೇಕಾದವು. ಆದರೆ, ಟಿಮ್ ಡೇವಿಡ್ ಮೊದಲ ಮೂರು ಎಸೆತಗಳಲ್ಲೇ ಪಂದ್ಯವನ್ನು ಮುಗಿಸಿಬಿಟ್ಟರು.
ಐಪಿಎಲ್ 2023 ರಲ್ಲಿ (IPL 2023) ನಡೆಯುತ್ತಿರುವ ಪ್ರತಿಯೊಂದು ಪಂದ್ಯ ಕೂಡ ಕುತೂಹಲ ಕೆರಳಿಸುತ್ತಿದೆ. ಭಾನುವಾರ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಜರುಗಿದ ಮುಂಬೈ ಇಂಡಿಯನ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ (MI vs RR) ಪಂದ್ಯ ಕೂಡ ರೋಚಕತೆ ಸೃಷ್ಟಿಸಿತ್ತು. ಅಭಿಮಾನಿಗಳನ್ನು ಮಾತ್ರವಲ್ಲದೆ ಉಭಯ ತಂಡದ ಆಟಗಾರರನ್ನು ತುದಿಗಾಲಿನಲ್ಲಿ ನಿಲ್ಲಿಸಿದ್ದ ಈ ಪಂದ್ಯದಲ್ಲಿ ರೋಹಿತ್ ಶರ್ಮಾ (Rohit Sharma) ಪಡೆ 213 ರನ್ಗಳ ಟಾರ್ಗೆಟ್ ಬೆನ್ನಟ್ಟಿ 6 ವಿಕೆಟ್ಗಳ ರೋಚಕ ಜಯ ಸಾಧಿಸಿತು. ಈ ಮೂಲಕ ಹಿಟ್ಮ್ಯಾನ್ ಹುಟ್ಟುಹಬ್ಬಕ್ಕೆ ಗೆಲುವಿನ ಉಡುಗೊರೆ ದೊರಕಿತು. ಅಲ್ಲದೆ ಐಪಿಎಲ್ ಇತಿಹಾಸದಲ್ಲೇ ವಾಂಖೆಡೆಯಲ್ಲಿ ಗರಿಷ್ಠ ರನ್ ಚೇಸ್ ಮಾಡಿದ ದಾಖಲೆ ಮುಂಬೈ ಪಾಲಾಯಿತು.
ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ 20 ಓವರ್ಗಳಲ್ಲಿ 212 ರನ್ ಕಲೆಹಾಕಿತು. ಟಾರ್ಗೆಟ್ ಬೆನ್ನಟ್ಟಿದ ಮುಂಬೈ ಈ ಬಾರಿ ಕೂಡ ಉತ್ತಮ ಆರಂಭ ಪಡೆದುಕೊಳ್ಳಲಿಲ್ಲ. ರೋಹಿತ್ ಶರ್ಮಾ (3), ಇಶಾನ್ ಕಿಶನ್ (28) ಬೇಗನೆ ಔಟಾದರು. ಆದರೆ, ಮಧ್ಯಮ ಕ್ರಮಾಂಕದಲ್ಲಿ ಕ್ಯಾಮ್ರೋನ್ ಗ್ರೀನ್ (44) ಹಾಗೂ ಸೂರ್ಯಕುಮಾರ್ ಯಾದವ್ (55) ಅಬ್ಬರಿಸಿ ಒಂದು ಹಂತಕ್ಕೆ ಪಂದ್ಯವನ್ನು ತಂದಿಟ್ಟರು. ಪಂದ್ಯವನ್ನು ಫಿನಿಶ್ ಮಾಡುವ ಜವಾಬ್ದಾರಿ ತಿಲಕ್ ವರ್ಮಾ ಮತ್ತು ಟಿಮ್ ಡೇವಿಡ್ ಮೇಲಿತ್ತು. ಸೋಲಿನ ಸುಳಿಗೆ ಸಿಲುಕಿದ್ದ ಮುಂಬೈ ಗೆಲುವು ಸಾಧಿಸುತ್ತೆ ಎಂದು ಯಾರೂ ಊಹಿಸಿರಲಿಲ್ಲ. ಆದರೆ, ಎಲ್ಲರ ಲೆಕ್ಕಚಾರವನ್ನು ತಲೆಕೆಳಗಾಗಿಸಿದ್ದು ಟಿಮ್ ಡೇವಿಡ್.
ಕೊನೆಯ 12 ಎಸೆತಗಳಲ್ಲಿ ಮುಂಬೈ ಗೆಲುವಿಗೆ 32 ರನ್ಗಳು ಬೇಕಾಗಿದ್ದವು. ಸಂದೀಪ್ ಶರ್ಮಾ ಅವರ 19ನೇ ಓವರ್ನಲ್ಲಿ ಡೇವಿಡ್ ತಲಾ 1 ಫೋರ್, ಸಿಕ್ಸರ್ ಸಿಡಿಸಿ ಒಟ್ಟು 15 ರನ್ಗಳು ಬಂದವು. ಹೀಗಾಗಿ ಕೊನೆಯ 6 ಎಸೆತಗಳಲ್ಲಿ 17 ರನ್ಗಳು ಬೇಕಾದವು. 20ನೇ ಓವರ್ ಜೇಸನ್ ಹೋಲ್ಡರ್ ಮಾಡಲು ಬಂದರು. ಆದರೆ, ಮೊದಲ ಮೂರು ಎಸೆತಗಳಲ್ಲೇ ಪಂದ್ಯ ಮುಗಿದುಹೋಯಿತು.
ಮೊದಲ ಎಸೆತವನ್ನು ಡೇವಿಡ್ ನೇರವಾಗಿ ಸಿಕ್ಸರ್ಗೆ ಅಟ್ಟಿದರೆ, ದ್ವಿತೀಯ ಬಾಲ್ನಲ್ಲಿ ಮಿಡ್ ವಿಕೆಟ್ ಮೂಲಕ ಸಿಕ್ಸ್ ಸಿಡಿಸಿದರು. ಮೂರನೇ ಎಸೆತದಲ್ಲೂ ಡೀಪ್ ಸ್ವ್ಕೇರ್ ಲೆಗ್ನಲ್ಲಿ ಚೆಂಡನ್ನು ಬೌಂಡರಿ ಗೆರೆ ದಾಟಿಸಿದರು. ಈ ಮೂರು ಎಸೆತ ಫುಲ್ಟಾಸ್ ಹಾಕಿ ಹೋಲ್ಡರ್ ಆರ್ಆರ್ ಸೋಲಿಗೆ ಕಾರಣರಾದರು. ಡೇವಿಡ್ ಕೇವಲ 14 ಎಸೆತಗಳಲ್ಲಿ 2 ಫೋರ್, 5 ಸಿಕ್ಸರ್ ಬಾರಿಸಿ ಅಜೇಯ 45 ರನ್ ಚಚ್ಚಿದರು. ಡೇವಿಡ್ ಸಿಡಿಸಿದ ಮೂರು ಸಿಕ್ಸರ್ನ ವಿಡಿಯೋ ಇಲ್ಲಿದೆ ನೋಡಿ.
Hat trick of sixes from Tim David
And Thank You from Rohit Sharma fans for the birthday gift pic.twitter.com/uG5EpTICjv
— Immy|| ?? (@TotallyImro45) April 30, 2023
ಯಶಸ್ವಿ ಜೈಸ್ವಾಲ್ ಶತಕ:
ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ ರಾಜಸ್ಥಾನ್ ಪರ ಯಶಸ್ವಿ ಜೈಸ್ವಾಲ್ ಸ್ಫೋಟಕ ಬ್ಯಾಟಿಂಗ್ ಮೂಲಕ ಗಮನ ಸೆಳೆದರು. ಕೇವಲ 53 ಎಸೆತಗಳಲ್ಲಿ ಶತಕ ಮೂಡಿಬಂದರೆ ಒಟ್ಟು 62 ಎಸೆತಗಳಲ್ಲಿ 8 ಭರ್ಜರಿ ಸಿಕ್ಸ್ ಹಾಗೂ 16 ಫೋರ್ನೊಂದಿಗೆ 124 ರನ್ಗಳಿಸಿ ಔಟಾದರು. ಈ ಮೂಲಕ ಐಪಿಎಲ್ ಇತಿಹಾಸದಲ್ಲೇ ಗರಿಷ್ಠ ಸ್ಕೋರ್ಗಳಿಸಿದ ಅನ್ಕ್ಯಾಪ್ಡ್ ಆಟಗಾರ ಎಂಬ ದಾಖಲೆ ಬರೆದರು. ಇವರನ್ನು ಬಿಟ್ಟರೆ ಆರ್ಆರ್ ತಂಡದ ಇತರೆ ಬ್ಯಾಟರ್ಗಳ ಸ್ಕೋರ್ 20ರ ಗಡಿ ದಾಟಲಿಲ್ಲ. ರಾಜಸ್ಥಾನ್ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 212 ರನ್ ಗಳಿಸಿತು. ಮುಂಬೈ ಪರ ಅರ್ಶದ್ ಖಾನ್ 3 ವಿಕೆಟ್ ಕಿತ್ತರು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ