ಒಂದೇ ಎಸೆತದಲ್ಲಿ 8 ರನ್​ ನೀಡಿ ಪಂದ್ಯ ಸೋಲಿಸಿದ ಯುವ ವೇಗಿ

TNPL 2025: ತಮಿಳುನಾಡು ಪ್ರೀಮಿಯರ್ ಲೀಗ್​ನ 9ನೇ ಪಂದ್ಯದಲ್ಲಿ ಸೇಲಂ ಸ್ಪಾರ್ಟನ್ಸ್ ತಂಡವು ರೋಚಕ ಜಯ ಸಾಧಿಸಿದೆ. ಅದು ಕೂಡ ಕೊನೆಯ ಓವರ್​ನಲ್ಲಿ. ಆದರೆ ಇಡೀ ಪಂದ್ಯದ ಚಿತ್ರಣ ಬದಲಾಗಿದ್ದು 19ನೇ ಓವರ್​ನಲ್ಲಿ. ಅಂದರೆ ನಿರ್ಣಾಯಕ ಹಂತದಲ್ಲಿ ಒಂದೇ ಓವರ್​ನಲ್ಲಿ 11 ಎಸೆತಗಳನ್ನು ಎಸೆಯುವ ಮೂಲಕ ತಿರುಪ್ಪೂರ್ ತಮಿಳನ್ಸ್ ವೇಗಿ ತಂಡದ ಸೋಲಿಗೆ ಕಾರಣರಾದರು.

ಒಂದೇ ಎಸೆತದಲ್ಲಿ 8 ರನ್​ ನೀಡಿ ಪಂದ್ಯ ಸೋಲಿಸಿದ ಯುವ ವೇಗಿ
Esakkimuthu

Updated on: Jun 14, 2025 | 10:30 AM

ಕ್ರಿಕೆಟ್‌ನಲ್ಲಿ ಒಂದು ಚೆಂಡು ಅಥವಾ ಒಂದು ಓವರ್ ಪಂದ್ಯದ ದಿಕ್ಕನ್ನು ಹೇಗೆ ಬದಲಾಯಿಸಬಹುದು ಎಂಬುದಕ್ಕೆ ಅತ್ಯುತ್ತಮ ಉದಾಹರಣೆ ಜೂನ್ 13 ರಂದು ತಮಿಳುನಾಡು ಪ್ರೀಮಿಯರ್ ಲೀಗ್​ನಲ್ಲಿ ನಡೆದ 9ನೇ ಪಂದ್ಯ. ಈ ಪಂದ್ಯವನ್ನು ಸೇಲಂ ಸ್ಪಾರ್ಟನ್ಸ್ ತಂಡವು ಕೊನೆಯ ಓವರ್​ನಲ್ಲಿ ಗೆದ್ದುಕೊಂಡಿತು. ಇದಕ್ಕೆ ಕಾರಣರಾಗಿದ್ದು ತಿರುಪ್ಪೂರ್ ತಮಿಳನ್ಸ್ ವೇಗಿ ಇಸಾಕಿಮುತ್ತು.

ಈ ಪಂದ್ಯದ 19ನೇ ಓವರ್​ ಎಸೆದ ಇಸಾಕಿಮುತ್ತು ಒಂದೇ ಎಸೆತದಲ್ಲಿ 8 ರನ್​ಗಳನ್ನು ಬಿಟ್ಟು ಕೊಟ್ಟಿದ್ದರು. ಅಷ್ಟೇ ಅಲ್ಲದೆ ತಮಿಳುನಾಡು ಪ್ರೀಮಿಯರ್ ಲೀಗ್​ನಲ್ಲಿ ಅತ್ಯಂತ ದೀರ್ಘ ಮತ್ತು ದುಬಾರಿ ಓವರ್ ಎಸೆದ ಅನಗತ್ಯ ದಾಖಲೆಯನ್ನು ಸಹ ತಮ್ಮದಾಗಿಸಿಕೊಂಡರು. .

ಒಂದೇ ಎಸೆತದಲ್ಲಿ 8 ರನ್:

ಸೇಲಂನ ಎಸ್​ಸಿಎ ಕ್ರಿಕೆಟ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ತಿರುಪ್ಪೂರ್ ತಮಿಳನ್ಸ್ ತಂಡವು 20 ಓವರ್​ಗಳಲ್ಲಿ 8 ವಿಕೆಟ್ ಕಳೆದುಕೊಂಡು 177 ರನ್ ಕಲೆಹಾಕಿತ್ತು. ಈ ಗುರಿಯನ್ನು ಬೆನ್ನತ್ತಿದ ಸೇಲಂ ಸ್ಪಾರ್ಟನ್ಸ್ ತಂಡಕ್ಕೆ ಕೊನೆಯ 12 ಎಸೆತಗಳಲ್ಲಿ 31 ರನ್​ಗಳು ಬೇಕಿದ್ದವು.

ಈ ವೇಳೆ ತಿರುಪ್ಪೂರ್ ತಮಿಳನ್ಸ್ ತಂಡದ ನಾಯಕ ಸಾಯಿ ಕಿಶೋರ್ 19ನೇ ಓವರ್ ಅನ್ನು ಇಸಾಕಿಮುತ್ತು ಅವರಿಗೆ ನೀಡಿದರು. ಅತ್ತ ಕ್ರೀಸ್​ನಲ್ಲಿದ್ದ ಸೇಲಂ ಸ್ಪಾರ್ಟನ್ಸ್ ಬ್ಯಾಟರ್​ಗಳಾದ ಭೂಪತಿ ಕುಮಾರ್ ಮತ್ತು ಹರೀಶ್ ಕುಮಾರ್ ಒಟ್ಟಾಗಿ ಬಲಗೈ ವೇಗಿಯ ಮೊದಲ 5 ಎಸೆತಗಳಲ್ಲಿ ಒಂದು ಸಿಕ್ಸರ್ ಮತ್ತು 2 ಬೌಂಡರಿಗಳೊಂದಿಗೆ 17 ರನ್ ಗಳಿಸಿದರು.

ಇದಾಗ್ಯೂ ಕೊನೆಯ 7 ಎಸೆತಗಳಲ್ಲಿ ಸೇಲಂ ಸ್ಪಾರ್ಟನ್ಸ್ ತಂಡಕ್ಕೆ 14 ರನ್​ಗಳು ಬೇಕಿದ್ದವು. ಆದರೆ ಇಸಾಕಿಮುತ್ತು 19ನೇ ಓವರ್​ನ ಕೊನೆಯ ಎಸೆತವನ್ನು ಮುಗಿಸಲು ಪರದಾಡಿದರು. ಪರಿಣಾಮ 4 ನೋಬಾಲ್​ಗಳು ಮೂಡಿಬಂದವು. ಈ ಅವಕಾಶವನ್ನು ಬಳಸಿಕೊಂಡ ಸೇಲಂ ಬ್ಯಾಟರ್​ಗಳು ಒಟ್ಟು 8 ರನ್​ಗಳಿಸಲು ಯಶಸ್ವಿಯಾದರು.

11 ಎಸೆತಗಳು:

19ನೇ ಓವರ್​ನಲ್ಲಿ ಇಸಾಕಿಮುತ್ತು ಎಸೆದದ್ದು ಬರೋಬ್ಬರಿ 11 ಎಸೆತಗಳನ್ನು ಎಸೆದರು. ಅಲ್ಲದೆ 4 ಓವರ್​ಗಳಲ್ಲಿ ಒಂದೇ ಒಂದು ವಿಕೆಟ್ ಪಡೆಯದೇ 53 ರನ್​​ಗಳನ್ನು ಬಿಟ್ಟುಕೊಟ್ಟರು.

ಇದನ್ನೂ ಓದಿ: ಬವುಮಾ ಭರ್ಜರಿ ಬ್ಯಾಟಿಂಗ್​ಗೆ ಬಾಬರ್ ವಿಶ್ವ ದಾಖಲೆಯೇ ಬ್ರೇಕ್

6 ರನ್​ಗಳ ಗುರಿ:

ಇಸಾಕಿಮುತ್ತು 19ನೇ ಓವರ್​ನಲ್ಲಿ 25 ರನ್ ನೀಡಿದ್ದ ಪರಿಣಾಮ ಸೇಲಂ ಸ್ಪಾರ್ಟನ್ಸ್ ತಂಡ ಕೊನೆಯ ಓವರ್​ನಲ್ಲಿ ಕೇವಲ 6 ರನ್​ಗಳ ಗುರಿ ಪಡೆಯಿತು.  ಸುಲಭ ಗುರಿಯನ್ನು ಬೆನ್ನತ್ತಿದ ಸೇಲಂ ಸ್ಪಾರ್ಟನ್ಸ್ 19.5 ಓವರ್​ಗಳಲ್ಲಿ 178 ರನ್ ಬಾರಿಸಿ 4 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿತು.