ಸಾಮಾನ್ಯವಾಗಿ ಕ್ರಿಕೆಟ್ನಲ್ಲಿ ಔಟಾಗಿದ್ದರೂ ಚೆಂಡು ನೋ ಬಾಲ್ ಆಗಿದ್ದರೆ ನಾಟೌಟ್ ಎಂದು ತೀರ್ಪು ನೀಡಲಾಗುತ್ತದೆ. ಇದಲ್ಲದೆ ಮೂರನೇ ಅಂಪೈರ್ ಪರಿಶೀಲಿಸಿ ನಾಟೌಟ್ ನೀಡುವುದು ಸಹ ಸಾಮಾನ್ಯ. ಆದರೆ ಐರ್ಲೆಂಡ್ ಹಾಗೂ ನ್ಯೂಜಿಲೆಂಡ್ ನಡುವಣ 2ನೇ ಏಕದಿನ ಪಂದ್ಯವು ಅಪರೂಪದ ತೀರ್ಪಿಗೆ ಸಾಕ್ಷಿಯಾಗಿದೆ. ಈ ಪಂದ್ಯದಲ್ಲಿ ಎಲ್ಲರ ಕಣ್ಮುಂದೆಯೇ ವಿಕೆಟ್ ಕೀಪರ್ ಉತ್ತಮ ಕ್ಯಾಚ್ ಹಿಡಿದಿದ್ದರು. ಅಂಪೈರ್ ಕೂಡ ಔಟ್ ಎಂದು ಬೆರಳನ್ನು ಮೇಲೆಕ್ಕೆತ್ತಿದರು. ಇನ್ನೇನು ಬ್ಯಾಟ್ಸ್‌ಮನ್ ಬೌಂಡರಿ ಲೈನ್ ದಾಟಿ ಪೆವಿಲಿಯನ್ಗೆ ಸೇರಲಿದ್ದಾರೆ ಅನ್ನುವಷ್ಟರಲ್ಲಿ ತೀರ್ಪು ಬದಲಾಯಿತು. ಇತ್ತ ಬೌಲರ್ ಸೇರಿದಂತೆ ಇತರೆ ಆಟಗಾರರು ಕೂಡ ದಂಗಾಗಿದ್ದರು. ಅಷ್ಟಕ್ಕೂ ಈ ಪಂದ್ಯದಲ್ಲಿ ನಡೆದಿದ್ದೇನು ಅಂದರೆ…
ನ್ಯೂಜಿಲೆಂಡ್ ಬೌಲರ್ ಬ್ಲೇರ್ ಟಿಕ್ನರ್ ಐರ್ಲೆಂಡ್ ಇನಿಂಗ್ಸ್ ನ 43ನೇ ಓವರ್ ಬೌಲಿಂಗ್ ಮಾಡುತ್ತಿದ್ದರು. ಅತ್ತ ಸಿಮಿ ಸಿಂಗ್ ಸ್ಟ್ರೈಕ್ ನಲ್ಲಿದ್ದರು. ಬ್ಲೇರ್ ತನ್ನ ಓವರ್‌ನ ಕೊನೆಯ ಚೆಂಡನ್ನು ಆಫ್ ಸ್ಟಂಪ್ ಹೊರಗೆ ಬೌಲ್ ಮಾಡಿದರು. ಸಿಮಿ ಈ ಚೆಂಡನ್ನು ಪಾಯಿಂಟ್ ಕಡೆಗೆ ಆಡಲು ಪ್ರಯತ್ನಿಸಿದರು. ಆದರೆ, ಚೆಂಡು ಬ್ಯಾಟ್‌ನ ಅಂಚಿಗೆ ತಾಗಿ ವಿಕೆಟ್‌ಕೀಪರ್ ಟಾಮ್ ಲ್ಯಾಥಮ್ ಅವರ ಕೈ ಸೇರಿತು. ಫೀಲ್ಡ್ ಅಂಪೈರ್ ಔಟ್ ಎಂದು ತೀರ್ಪು ನೀಡಿದರು. ಇದಾದ ಕೆಲವೇ ಕ್ಷಣಗಳಲ್ಲಿ ಅಂಪೈರ್ ತನ್ನ ತೀರ್ಪನ್ನು ಬದಲಿಸಿದ್ದರು.
ಇತ್ತ ನ್ಯೂಜಿಲೆಂಡ್ ಆಟಗಾರರು ಕೂಡ ಅಂಪೈರ್ ತೀರ್ಪಿನಿಂದ ಒಂದು ಕ್ಷಣ ಕಂಫ್ಯೂಸ್ ಆದರು. ಈ ಸಂದರ್ಭದಲ್ಲಿ ಅಂಪೈರ್ ಜೊತೆ ಬ್ಲೇರ್ ಟಿಕ್ನರ್ ವಾದಕ್ಕಿಳಿದರು. ಇದೇ ವೇಳೆ ಬೌಲಿಂಗ್ ಮಾಡುವ ವೇಳೆ ಟಿಕ್ನರ್ ಅವರ ಪ್ಯಾಂಟ್ ಹಿಂಬದಿಯಲ್ಲಿ ಸಿಲುಕಿಸಿದ್ದ ಟವೆಲ್ ಬಿದ್ದಿದ್ದ ಕಾರಣ ನಾಟೌಟ್ ಎಂದು ತೀರ್ಪು ನೀಡಿರುವುದಾಗಿ ಅಂಪೈರ್ ತಿಳಿಸಿದ್ದರು.
ಟವೆಲ್ ಬಿದ್ದ ಕಾರಣ ಅದನ್ನು ಡೆಡ್ ಬಾಲ್ ಎಂದು ಪರಿಗಣಿಸಲಾಗುತ್ತದೆ. ಹಾಗಾಗಿ ಔಟಾಗಿದ್ದರೂ ಸಿಮಿ ಸಿಂಗ್ ನಾಟೌಟ್ ಆದರು. ಆದರೆ ಈ ತೀರ್ಪಿನಿಂದ ಕೋಪಗೊಂಡ ಟಿಕ್ನರ್ ಅಂಪೈರ್‌ಗೆ “ನನಗೆ ನಿಯಮಗಳು ಗೊತ್ತು, ಆದರೆ ಬ್ಯಾಟ್ಸ್‌ಮನ್ ಈ ಬಾಲ್‌ನಲ್ಲಿ ಸಿಕ್ಸರ್ ಬಾರಿಸಿದ್ದರೆ, ಅದನ್ನು ಡೆಡ್ ಬಾಲ್ ಎಂದು ಕರೆಯಲಾಗುತ್ತಿರಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಐಸಿಸಿ ನಿಯಮ ಏನು ಹೇಳುತ್ತೆ?
ಐಸಿಸಿ 20.4.2.7 ಪ್ರಕಾರ, “ಸ್ಟ್ರೈಕ್‌ನಲ್ಲಿರುವ ಬ್ಯಾಟ್ಸ್‌ಮನ್ ಯಾವುದೇ ಶಬ್ದ ಅಥವಾ ಚಲನೆಯಿಂದ ವಿಚಲಿತನಾಗಿದ್ದರೆ ಅಂಪೈರ್ ಅದನ್ನು ಡೆಡ್ ಬಾಲ್ ಅನ್ನು ಸೂಚಿಸಬಹುದು. ಮೈದಾನದ ಒಳಗೆ ಅಥವಾ ಹೊರಗೆ ಒಂದು ಘಟನೆಯಿಂದ ಬ್ಯಾಟ್ಸ್‌ಮನ್‌ನ ಗಮನವು ವಿಚಲಿತವಾಗಿದ್ದರೂ ಸಹ ಅದನ್ನು ಡೆಡ್ ಬಾಲ್ ಎಂದು ತೀರ್ಪು ನೀಡಬಹುದಾಗಿದೆ. ಹೀಗಾಗಿ ಟಿಕ್ನರ್ ಟವೆಲ್ ಬಿದ್ದಿದ್ದನ್ನು ಗಮನಿಸಿದ ಅಂಪೈರ್ ಡೆಡ್ ಬಾಲ್ ಎಂಬ ತೀರ್ಪು ನೀಡಿದ್ದರು.
ಇನ್ನು ಈ ಪಂದ್ಯದಲ್ಲಿ ಐರ್ಲೆಂಡ್ ನೀಡಿದ 216 ರನ್ಗಳ ಟಾರ್ಗೆಟ್ ಅನ್ನು ನ್ಯೂಜಿಲೆಂಡ್ ತಂಡವು 38.1 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ ಚೇಸ್ ಮಾಡಿ 3 ವಿಕೆಟ್ಗಳ ಜಯ ಸಾಧಿಸಿತು.