U19 World Cup 2022: ಕ್ವಾರ್ಟರ್ ಫೈನಲ್‌ಗೂ ಮುನ್ನವೇ ಭಾರತಕ್ಕೆ ಆಘಾತ; ಹಂಗಾಮಿ ನಾಯಕ ನಿಶಾಂತ್ ಸಿಂಧುಗೆ ಕೊರೊನಾ
U19 World Cup 2022: ಭಾರತ ತಂಡದ ಹಂಗಾಮಿ ನಾಯಕ ನಿಶಾಂತ್ ಸಿಂಧು ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ. ಕೊರೊನಾ ಹಿಡಿತಕ್ಕೆ ಒಳಗಾದ ತಂಡದ ನಿಯಮಿತ ನಾಯಕ ಯಶ್ ಧುಲ್ ಅವರ ಅನುಪಸ್ಥಿತಿಯಲ್ಲಿ ಸಿಂಧು ತಂಡದ ನಾಯಕತ್ವವನ್ನು ವಹಿಸಿಕೊಂಡಿದ್ದರು.
ವೆಸ್ಟ್ ಇಂಡೀಸ್‌ನಲ್ಲಿ ನಡೆಯುತ್ತಿರುವ ಅಂಡರ್-19 ವಿಶ್ವಕಪ್ (ICC U-19 World Cup 2022) ನಲ್ಲಿ, ಭಾರತ ತಂಡವು ಜನವರಿ 29, ಶನಿವಾರದಂದು ಬಾಂಗ್ಲಾದೇಶದ ವಿರುದ್ಧ ಕ್ವಾರ್ಟರ್ ಫೈನಲ್‌ನಲ್ಲಿ ಆಡಲಿದೆ. ಆದರೆ, ಅದಕ್ಕೂ ಮುನ್ನ ಟೀಮ್ ಇಂಡಿಯಾಗೆ ಕೆಟ್ಟ ಸುದ್ದಿಯೊಂದು ಬಂದಿದೆ. ಭಾರತ ತಂಡದ ಹಂಗಾಮಿ ನಾಯಕ ನಿಶಾಂತ್ ಸಿಂಧು ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ. ಕೊರೊನಾ ಹಿಡಿತಕ್ಕೆ ಒಳಗಾದ ತಂಡದ ನಿಯಮಿತ ನಾಯಕ ಯಶ್ ಧುಲ್ ಅವರ ಅನುಪಸ್ಥಿತಿಯಲ್ಲಿ ಸಿಂಧು ತಂಡದ ನಾಯಕತ್ವವನ್ನು ವಹಿಸಿಕೊಂಡಿದ್ದರು. ಕಳೆದೆರಡು ಪಂದ್ಯಗಳಲ್ಲಿ ಸಿಂಧು ತಂಡದ ಸಾರಥ್ಯ ವಹಿಸಿದ್ದರು. ಆದರೆ, ಕ್ಯಾಪ್ಟನ್ ಧುಲ್ ಸೋಂಕಿನಿಂದ ಚೇತರಿಸಿಕೊಂಡಿದ್ದು, ಇದೀಗ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಆಡಲು ಲಭ್ಯವಾಗುತ್ತಿರುವುದು ಸಮಾಧಾನದ ಸಂಗತಿ.
ವಿಶ್ವಕಪ್‌ನಲ್ಲಿ ಭಾರತ ತಂಡ ನಿರಂತರವಾಗಿ ಕೊರೊನಾ ಸೋಂಕಿನ ಪ್ರಕರಣಗಳೊಂದಿಗೆ ಹೋರಾಡುತ್ತಿದೆ. ಟೂರ್ನಿಯ ಆರಂಭದ ಹಂತದಲ್ಲಿಯೇ ನಾಯಕ ಧುಲ್ ಸೇರಿದಂತೆ 5 ಆಟಗಾರರಿಗೆ ಸೋಂಕು ತಗುಲಿದೆ. ಇದೀಗ ಅಫಿಶಿಂಗ್ ಕ್ಯಾಪ್ಟನ್ ಹಾಗೂ ಆಲ್ ರೌಂಡರ್ ಸಿಂಧು ಕೂಡ ಸೋಂಕಿಗೆ ತುತ್ತಾಗಿದ್ದಾರೆ. ಸುದ್ದಿ ಸಂಸ್ಥೆ ಪಿಟಿಐ ವರದಿಯ ಪ್ರಕಾರ, ಉಗಾಂಡಾ ವಿರುದ್ಧದ ಕೊನೆಯ ಲೀಗ್ ಪಂದ್ಯದ ನಂತರ ನಿಶಾಂತ್ ಸಿಂಧು ಪಾಸಿಟಿವ್ ಎಂದು ಕಂಡುಬಂದಿದೆ. ಹಾಗಾಗಿ ಅವರು ನಾಕೌಟ್ ಪಂದ್ಯಕ್ಕೆ ಲಭ್ಯರಿರುವುದಿಲ್ಲ. ಸಿಂಧು ಹೊರತುಪಡಿಸಿ ಎಲ್ಲರೂ ಫಿಟ್ ಆಗಿದ್ದಾರೆ ಎಂದು ಐಸಿಸಿ ಮೂಲ ತಿಳಿಸಿದೆ.
ಉಗಾಂಡ ವಿರುದ್ಧ 4 ವಿಕೆಟ್ ಉಗಾಂಡ ವಿರುದ್ಧದ ನಾಯಕತ್ವದಲ್ಲಿ ನಿಶಾಂತ್ ಚೆಂಡಿನೊಂದಿಗೆ ಅದ್ಭುತ ಪ್ರದರ್ಶನ ತೋರಿದರು. 17 ವರ್ಷದ ಎಡಗೈ ಸ್ಪಿನ್ನರ್ ಉಗಾಂಡಾ ವಿರುದ್ಧದ ಆ ಪಂದ್ಯದಲ್ಲಿ ಕೇವಲ 19 ರನ್‌ಗಳಿಗೆ 4 ವಿಕೆಟ್‌ಗಳನ್ನು ಪಡೆದರು. ಇದಲ್ಲದೇ ಬ್ಯಾಟಿಂಗ್ನಲ್ಲು ನಿಶಾಂತ್ ಕೂಡ 15 ರನ್ ಗಳಿಸಿದರು. ಜೊತೆಗೆ ಐರ್ಲೆಂಡ್ ವಿರುದ್ಧ 36 ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ 27 ರನ್ಗಳ ಇನ್ನಿಂಗ್ಸ್ ಆಡಿದರು. ನಿಶಾಂತ್ ಸ್ಥಾನಕ್ಕೆ ಎಡಗೈ ಸ್ಪಿನ್ನರ್ ಅನೀಶ್ವರ್ ಗೌತಮ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.
ನಾಯಕ ಧುಲ್ ಸೇರಿದಂತೆ ಐವರು ಆಟಗಾರರು ಫಿಟ್ ಆಗಿದ್ದಾರೆ ಆದರೆ, ಭಾರತ ತಂಡಕ್ಕೂ ಸಮಾಧಾನದ ಸುದ್ದಿ ಬಂದಿದೆ. ಐರ್ಲೆಂಡ್ ವಿರುದ್ಧದ ಪಂದ್ಯಕ್ಕೂ ಮುನ್ನ ಆರ್‌ಟಿ-ಪಿಸಿಆರ್ ಪರೀಕ್ಷೆಯಲ್ಲಿ ಪಾಸಿಟಿವ್ ಕಂಡುಬಂದಿದ್ದ ನಾಯಕ ಧುಲ್, ವೈಸ್ ಕ್ಯಾಪ್ಟನ್ ಶೇಖ್ ರಶೀದ್, ಸಿದ್ಧಾರ್ಥ್ ಯಾದವ್, ಆರಾಧ್ಯ ಯಾದವ್ ಮತ್ತು ಮಾನವ್ ಪಾರಿಖ್ ಅವರು ಸೋಂಕಿನಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದು, ಕೊನೆಯ ಸುತ್ತಿಗೆ ಲಭ್ಯವಾಗಲಿದ್ದಾರೆ. ಶನಿವಾರ ಸಂಜೆ ಭಾರತ ಮತ್ತು ಬಾಂಗ್ಲಾದೇಶದ ನಾಕೌಟ್ ಪಂದ್ಯ ನಡೆಯಲಿದೆ. ಆದ್ದರಿಂದ ಅವರು ತಯಾರಿಗೆ ಸೀಮಿತ ಸಮಯವನ್ನು ಹೊಂದಿರುತ್ತಾರೆ.
ನಾಯಕ, ಉಪನಾಯಕ ಸೇರಿದಂತೆ ತಂಡದ 5 ಆಟಗಾರರಿಗೆ ಸೋಂಕು ತಗುಲಿದ್ದ ಹಿನ್ನೆಲೆಯಲ್ಲಿ ಕಳೆದ ಎರಡು ಪಂದ್ಯಗಳಲ್ಲಿ ಆಡುವ ಇಲೆವೆನ್ ತಂಡವನ್ನು ಫೀಲ್ಡಿಂಗ್ ಮಾಡುವಲ್ಲಿ ಭಾರತವೂ ಸಮಸ್ಯೆ ಎದುರಿಸಿತ್ತು. ಕ್ಯಾಪ್ಟನ್ ಧುಲ್ ಮತ್ತು ಇತರ ಸೋಂಕಿತ ಆಟಗಾರರು ಟ್ರಿನಿಡಾಡ್‌ನಲ್ಲಿ ಏಳು ದಿನಗಳ ಪ್ರತ್ಯೇಕತೆಯ ನಂತರ ಶುಕ್ರವಾರ ಆಂಟಿಗುವಾ ತಲುಪಿದರು.
ಇದನ್ನೂ ಓದಿ:U19 World cup: ಕೊನೇ ಓವರ್ನಲ್ಲಿ ಹ್ಯಾಟ್ರಿಕ್ ಸಿಕ್ಸ್: ಅಂಡರ್19 ವಿಶ್ವಕಪ್‌ನಲ್ಲಿ ರಾಜ್ವರ್ಧನ್ ಸ್ಫೋಟಕ ಆಟ