U19 World Cup 2022 Final, Ind vs Eng: ರಾಜ್ ಬಾವಾ ಮಾರಕ ಬೌಲಿಂಗ್: ಚಾಂಪಿಯನ್ ಪಟ್ಟಕ್ಕೇರಲು ಟೀಮ್ ಇಂಡಿಯಾಗೆ ಸುಲಭ ಗುರಿ

| Updated By: ಝಾಹಿರ್ ಯೂಸುಫ್

Updated on: Feb 05, 2022 | 10:03 PM

ICC Under 19 World Cup 2022 Final India vs England: ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಜೇಮ್ಸ್ ರೆವ್ ತಂಡಕ್ಕೆ ಆಸರೆಯಾದರು. ಎಚ್ಚರಿಕೆಯ ಬ್ಯಾಟಿಂಗ್ ಪ್ರದರ್ಶಿಸಿದ ಜೇಮ್ಸ್ 78 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು.

U19 World Cup 2022 Final, Ind vs Eng: ರಾಜ್ ಬಾವಾ ಮಾರಕ ಬೌಲಿಂಗ್: ಚಾಂಪಿಯನ್ ಪಟ್ಟಕ್ಕೇರಲು ಟೀಮ್ ಇಂಡಿಯಾಗೆ ಸುಲಭ ಗುರಿ
Raj Bawa
Follow us on

ಅಂಟಿಗುವಾದ ಸರ್ ವಿವಿಯನ್ ರಿಚರ್ಡ್ಸ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಅಂಡರ್ 19 ವಿಶ್ವಕಪ್​ ಫೈನಲ್​ನಲ್ಲಿ ಇಂಗ್ಲೆಂಡ್ ವಿರುದ್ದ ಟೀಮ್ ಇಂಡಿಯಾ ಭರ್ಜರಿ ಬೌಲಿಂಗ್ ಪ್ರದರ್ಶನ ನೀಡಿದೆ. ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಇಂಗ್ಲೆಂಡ್ ಲೆಕ್ಕಾಚಾರಗಳನ್ನು ಟೀಮ್ ಇಂಡಿಯಾ ಯುವ ವೇಗಿಗಳು ಆರಂಭದಲ್ಲೇ ತಲೆಕೆಳಗಾಗಿಸಿದರು. 2ನೇ ಓವರ್​ನಲ್ಲಿ ಆರಂಭಿಕ ಆಟಗಾರ ಜೇಕಬ್​ರನ್ನು ಎಲ್​ಬಿ ಬಲೆಗೆ ಬೀಳಿಸಿದ ರವಿ ಕುಮಾರ್ ಟೀಮ್ ಇಂಡಿಯಾಗೆ ಮೊದಲ ಯಶಸ್ಸು ತಂದುಕೊಟ್ಟರು. ಇನ್ನು 4ನೇ ಓವರ್​ನಲ್ಲಿ ಮತ್ತೊಂದು ವಿಕೆಟ್ ಪಡೆಯುವ ಮೂಲಕ ರವಿ ಕುಮಾರ್ ವಿಕೆಟ್ ಸಂಖ್ಯೆಯನ್ನು ಎರಡಕ್ಕೇರಿಸಿದರು. ಮೊದಲ 10 ಓವರ್​ನಲ್ಲಿ ಕೇವಲ 37 ರನ್​ ನೀಡಿದ ಪಂದ್ಯದ ಮೇಲೆ ಹಿಡಿತ ಸಾಧಿಸಿದ ಟೀಮ್ ಇಂಡಿಯಾ ಬೌಲರುಗಳು ಉತ್ತಮ ಆರಂಭ ಪಡೆದರು.

ಅದರಂತೆ 11ನೇ ಓವರ್​ನಲ್ಲಿ ದಾಳಿಗಿಳಿದ ರಾಜ್ ಬಾವಾ ತನ್ನ ಮೀಡಿಯಂ ಫಾಸ್ಟ್ ಬೌಲಿಂಗ್ ಕರಾಮತ್ತನ್ನು ತೋರಿಸಿದರು. ಬ್ಯಾಕ್ ಟು ಬ್ಯಾಕ್ 3 ವಿಕೆಟ್ ಉರುಳಿಸಿದ ಬಾವ ಇಡೀ ಪಂದ್ಯದ ಮೇಲೆ ನಿಯಂತ್ರಣ ಸಾಧಿಸಿದರು. ಅತ್ತ ಆರಂಭಿಕ ಆಘಾತದಿಂದ ಚೇತರಿಸಿಕೊಳ್ಳುವ ಮುನ್ನವೇ ಬಾವಾ ನೀಡಿದ ಶಾಕ್​ನಿಂದಾಗಿ ಇಂಗ್ಲೆಂಡ್ ತತ್ತರಿಸಿತು. ಅದರಂತೆ 47 ರನ್​ಗಳಿಸುವಷ್ಟರಲ್ಲಿ ಇಂಗ್ಲೆಂಡ್​ನ ಪ್ರಮುಖ 5 ವಿಕೆಟ್​ಗಳು ಉರುಳಿದ್ದವು.

ಇದಾಗ್ಯೂ ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಜೇಮ್ಸ್ ರೆವ್ ತಂಡಕ್ಕೆ ಆಸರೆಯಾದರು. ಎಚ್ಚರಿಕೆಯ ಬ್ಯಾಟಿಂಗ್ ಪ್ರದರ್ಶಿಸಿದ ಜೇಮ್ಸ್ 78 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಈ ಮೂಲಕ ತಂಡದ ಮೊತ್ತವನ್ನು 100ರ ಗಡಿದಾಟಿಸಿದರು. ಈ ನಡುವೆ ರಾಜ್ ಬಾವಾ ಮತ್ತು ಕುಶಾಲ್ ತಾಂಬೆ ತಲಾ ಒಂದು ವಿಕೆಟ್ ಉರುಳಿಸಿದರು. ಅದರಂತೆ 30 ಓವರ್​ ಮುಕ್ತಾಯದ ವೇಳೆಗೆ ಇಂಗ್ಲೆಂಡ್ ತಂಡವು 7 ವಿಕೆಟ್​ ಕಳೆದುಕೊಂಡು 117 ರನ್​ ಪೇರಿಸಿತ್ತು.

ಇದಾಗ್ಯೂ ಟೀಮ್ ಇಂಡಿಯಾ ಬೌಲರುಗಳು ಜೇಮ್ಸ್ ರೆವ್ ವಿಕೆಟ್​ ಪಡೆಯಲು ಹರಸಾಹಸ ಪಡೆಬೇಕಾಯಿತು. ಅದರಂತೆ 8ನೇ ವಿಕೆಟ್​ಗೆ ಜೇಮ್ಸ್ ಸೇಲ್ಸ್ ಜೊತೆಗೂಡಿ ಜೇಮ್ಸ್ ರೆವ್ 93 ರನ್​ಗಳ ಜೊತೆಯಾಟವಾಡಿದರು. ತಂಡದ ಮೊತ್ತ 184 ರನ್​ ಆಗಿದ್ದ ವೇಳೆ 116 ಎಸೆತಗಳಲ್ಲಿ 96 ರನ್​ಗಳಿಸಿದ್ದ ಜೇಮ್ಸ್ ರೆವ್ ರವಿ ಕುಮಾರ್ ಎಸೆತದಲ್ಲಿ ಔಟಾದರು. ಇನ್ನು ತಂಡದ ಮೊತ್ತಕ್ಕೆ ಐದು ರನ್​ ಸೇರ್ಪಡೆಯಾಗುವಷ್ಟರಲ್ಲಿ ಉಳಿದೆರಡು ವಿಕೆಟ್ ಉರುಳಿಸಿ ಟೀಮ್ ಇಂಡಿಯಾ ಇಂಗ್ಲೆಂಡ್ ತಂಡವನ್ನು 44.5 ಓವರ್​ಗಳಲ್ಲಿ 189 ರನ್​ಗೆ ಆಲೌಟ್ ಮಾಡಿತು. ಟೀಮ್ ಇಂಡಿಯಾ ಪರ ರಾಜ್ ಬಾವಾ 5 ವಿಕೆಟ್ ಉರುಳಿಸಿದರೆ, ರವಿ ಕುಮಾರ್ 4 ವಿಕೆಟ್ ಕಬಳಿಸಿ ಮಿಂಚಿದರು. ಇದೀಗ ಟೀಮ್ ಇಂಡಿಯಾ ಮುಂದೆ 190 ರನ್​ಗಳ ಟಾರ್ಗೆಟ್ ಇದ್ದು, ಈ ಗುರಿಯನ್ನು ಬೆನ್ನತ್ತಿದರೆ ಟೀಮ್ ಇಂಡಿಯಾ ಅಂಡರ್ 19 ವಿಶ್ವಚಾಂಪಿಯನ್ ಎನಿಸಿಕೊಳ್ಳಲಿದೆ.

 

ಇದನ್ನೂ ಓದಿ: IPL 2022 auction: ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳಲಿರುವ 590 ಆಟಗಾರರ ಹೆಸರು ಇಲ್ಲಿದೆ

ಇದನ್ನೂ ಓದಿ: IPL 2022: ಮೆಗಾ ಹರಾಜಿನಲ್ಲಿ 590 ಆಟಗಾರರು: ಯಾವ ದೇಶದಿಂದ ಎಷ್ಟು ಆಟಗಾರರು? ಇಲ್ಲಿದೆ ಸಂಪೂರ್ಣ ಪಟ್ಟಿ

ಇದನ್ನೂ ಓದಿ: Jason Holder: ಡಬಲ್ ಹ್ಯಾಟ್ರಿಕ್ ಪಡೆದು ವಿಶ್ವ ದಾಖಲೆ ನಿರ್ಮಿಸಿದ ಜೇಸನ್ ಹೋಲ್ಡರ್