U19 World Cup 2024: ರಣ ರೋಚಕ ಪಂದ್ಯದಲ್ಲಿ ಪಾಕ್ ಮಣಿಸಿ ಫೈನಲ್‌ಗೇರಿದ ಆಸ್ಟ್ರೇಲಿಯಾ
U19 World Cup 2024: ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿರುವ ಅಂಡರ್ 19 ವಿಶ್ವಕಪ್ ಅಂತಿಮ ಹಂತಕ್ಕೆ ಬಂದು ನಿಂತಿದೆ. ಇಂದು ನಡೆದ ಪಾಕಿಸ್ತಾನ ಮತ್ತು ಆಸ್ಟ್ರೇಲಿಯಾ ನಡುವಿನ ಎರಡನೇ ರೋಚಕ ಸೆಮಿಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನು ಕೊನೆಯ 1 ವಿಕೆಟ್ನಿಂದ ಮಣಿಸಿದ ಆಸ್ಟ್ರೇಲಿಯಾ ತಂಡ ಫೈನಲ್ ಪ್ರವೇಶಿದೆ. ಇದರೊಂದಿಗೆ ಪ್ರಶಸ್ತಿ ಸುತ್ತಿನಲ್ಲಿ ಮುಖಾಮುಖಿಯಾಗಲಿರುವ ಎರಡು ತಂಡಗಳು ಯಾವುವು ಎಂಬುದು ಖಚಿತವಾಗಿದೆ.

ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿರುವ ಅಂಡರ್ 19 ವಿಶ್ವಕಪ್ (Under-19 World Cup 2024) ಅಂತಿಮ ಹಂತಕ್ಕೆ ಬಂದು ನಿಂತಿದೆ. ಇಂದು ನಡೆದ ಪಾಕಿಸ್ತಾನ ಮತ್ತು ಆಸ್ಟ್ರೇಲಿಯಾ (Australia vs Pakistan) ನಡುವಿನ ಎರಡನೇ ರೋಚಕ ಸೆಮಿಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನು ಕೊನೆಯ 1 ವಿಕೆಟ್ನಿಂದ ಮಣಿಸಿದ ಆಸ್ಟ್ರೇಲಿಯಾ ತಂಡ ಫೈನಲ್ ಪ್ರವೇಶಿದೆ. ಇದರೊಂದಿಗೆ ಪ್ರಶಸ್ತಿ ಸುತ್ತಿನಲ್ಲಿ ಮುಖಾಮುಖಿಯಾಗಲಿರುವ ಎರಡು ತಂಡಗಳು ಯಾವುವು ಎಂಬುದು ಖಚಿತವಾಗಿದೆ. ಈ ಪಂದ್ಯಕ್ಕೂ ಮುನ್ನ ನಡೆದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಿದ್ದ ಭಾರತ ಯುವಪಡೆ ದಾಖಲೆಯ ಒಂಬತ್ತನೇ ಬಾರಿಗೆ ವಿಶ್ವಕಪ್ ಫೈನಲ್ ಪ್ರವೇಶಿಸಿತ್ತು. ಇದೀಗ ಪಾಕಿಸ್ತಾನ ತಂಡವನ್ನು ಮಣಸಿರುವ ಆಸ್ಟ್ರೇಲಿಯಾ ತಂಡ ಆರನೇ ಬಾರಿಗೆ ಅಂಡರ್ 19 ವಿಶ್ವಕಪ್ ಫೈನಲ್ಗೆ ಟಿಕೆಟ್ ಪಡೆದುಕೊಂಡಿದೆ. ಫೆಬ್ರವರಿ 11 ರಂದು ನಡೆಯಲ್ಲಿರುವ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಹಾಗೂ ಭಾರತ (Australia vs India) ಮುಖಾಮುಖಿಯಾಗಲಿವೆ.
ಆಸೀಸ್ಗೆ ರೋಚಕ ಜಯ
ಪಾಕಿಸ್ತಾನ ನೀಡಿದ 180 ರನ್ಗಳ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ ಒಂಬತ್ತು ವಿಕೆಟ್‌ಗಳನ್ನು ಕಳೆದುಕೊಂಡು 50ನೇ ಓವರ್ನಲ್ಲಿ ಗೆಲುವಿನ ದಡ ಮುಟ್ಟಿತು. ತಂಡದ ಪರ ಆರಂಭಿಕ ಹ್ಯಾರಿ ಡಿಕ್ಸನ್ 50 ರನ್ಗಳ ಇನ್ನಿಂಗ್ಸ್ ಆಡಿದರೆ, ಆರನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ಆಲಿ ಪೀಕ್ 49 ರನ್ಗಳ ನಿರ್ಣಾಯಕ ಇನ್ನಿಂಗ್ಸ್ ಆಡಿದರು. ಆಸೀಸ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ರಾಫೆಲ್ ಮ್ಯಾಕ್ಮಿಲನ್ (19 ರನ್) ಹಾಗೂ ಕ್ಯಾಲಮ್ ವಿಡ್ಲರ್ (2 ರನ್) ಕೊನೆಯ ವಿಕೆಟ್ಗೆ 16 ವಿಕೆಟ್ಗಳ ಜೊತೆಯಾಟವಾಡಿ ತಂಡವನ್ನು ಗೆಲುವಿನ ದಡ ಸೇರಿಸಿದರು.
ಅಲ್ಪ ಮೊತ್ತಕ್ಕೆ ಕುಸಿದ ಪಾಕ್
ಇದಕ್ಕೂ ಮುನ್ನ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ತಂಡದ ಮೊತ್ತ 25 ರನ್ ಇರುವಾಗ ಶಾಮಿಲ್ ಹುಸೇನ್ (17 ರನ್) ರೂಪದಲ್ಲಿ ತಂಡದ ಮೊದಲ ವಿಕೆಟ್ ಪತನವಾಯಿತು. ಕೇವಲ ಎರಡು ರನ್ಗಳ ಅಂತರದಲ್ಲಿ ಮತ್ತೊಂದು ವಿಕೆಟ್ ಪತನವಾಯಿತು. ಮೂರನೇ ಕ್ರಮಾಂಕದಲ್ಲಿ ಬಂದ ಅಜಾನ್ ಅವೈಸ್ ಹೊತುಪಡಿಸಿ ಉಳಿದ ಆಟಗಾರರೆಲ್ಲ ಒಂದಂಕಿಗೆ ಸುಸ್ತಾದರು. ಆದರೆ ತಂಡದ ಪರ ಏಕಾಂಗಿ ಹೋರಾಟ ನಡೆಸಿದ ಅವೈಸ್ 52 ರನ್ಗಳ ಇನ್ನಿಂಗ್ಸ್ ಆಡಿದರು.
ಒಂದಂಕಿಗೆ ಸುಸ್ತಾದ 7 ಬ್ಯಾಟರ್ಸ್
ಹಾಗೆಯೇ 7ನೇ ಕ್ರಮಾಂಕದಲ್ಲಿ ಬಂದ ಅರಾಫತ್ ಮಿನ್ಹಾಸ್ ಕೂಡ ಅವೈಸ್ಗೆ ಸಾಥ್ ನೀಡಿ ತಂಡವನ್ನು 100ರ ಗಡಿ ದಾಟಿಸಿದರು. ಈ ವೇಳೆ ಮಿನ್ಹಾಸ್ ಕೂಡ 52 ರನ್ಗಳ ಕೊಡುಗೆ ನೀಡಿದರು. ಈ ಇಬ್ಬರನ್ನು ಹೊರತುಪಡಿಸಿ ತಂಡದ ಉಳಿದ ಯಾರಿಂದಲೂ ಅಂತಹ ಪ್ರದರ್ಶನ ಹೊರಬರಲಿಲ್ಲ. ತಂಡದ ಪರ ಕೇವಲ ಮೂವರು ಆಟಗಾರರು ಎರಡಂಕಿ ಮೊತ್ತವನ್ನು ದಾಟಿದನ್ನು ಬಿಟ್ಟರೆ ಉಳಿದವರೆಲ್ಲರೂ ಒಂದಂಕಿಗೆ ಪೆವಿಲಿಯನ್ ಸೇರಿಕೊಂಡರು. ಹೀಗಾಗಿ ತಂಡ ಅಲ್ಪ ರನ್ಗಳಿಗೆ ಆಲೌಟ್ ಆಗಬೇಕಾಯಿತು.
3ನೇ ಬಾರಿಗೆ ಫೈನಲ್ ಮುಖಾಮುಖಿ
ಅಂಡರ್-19 ವಿಶ್ವಕಪ್ ಇತಿಹಾಸದಲ್ಲಿ ಇದು ಮೂರನೇ ಬಾರಿಗೆ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಫೈನಲ್‌ನಲ್ಲಿ ಮುಖಾಮುಖಿಯಾಗಲಿವೆ. ಈ ಹಿಂದೆ ನಡೆದ ಎರಡು ಫೈನಲ್ ಪಂದ್ಯಗಳಲ್ಲೂ ಭಾರತ ಚಾಂಪಿಯನ್ ಆಗಿರುವುದು ಟೀಂ ಇಂಡಿಯಾ ಅಭಿಮಾನಿಗಳಿಗೆ ಸಮಾಧಾನಕರ ಸುದ್ದಿಯಾಗಿದೆ. 2012 ರಲ್ಲಿ, ಉನ್ಮುಕ್ತ್ ಚಂದ್ ಮತ್ತು 2018 ರಲ್ಲಿ, ಪೃಥ್ವಿ ಶಾ ಅವರ ನಾಯಕತ್ವದಲ್ಲಿ ಭಾರತ, ಆಸ್ಟ್ರೇಲಿಯಾವನ್ನು ಮಣಿಸಿ ಚಾಂಪಿಯನ್ ಆಗಿತ್ತು. ಈಗ ಪ್ರಚಂಡ ಫಾರ್ಮ್‌ನಲ್ಲಿರುವ ನಾಯಕ ಉದಯ್ ಸಹರಾನ್ ಈ ಸಂಪ್ರದಾಯವನ್ನು ಮುಂದುವರಿಸುವ ಜವಾಬ್ದಾರಿಯನ್ನು ಹೊತ್ತಿದ್ದಾರೆ.
ಎರಡೂ ತಂಡಗಳು
ಆಸ್ಟ್ರೇಲಿಯಾ ತಂಡ: ಹ್ಯಾರಿ ಡಿಕ್ಸನ್, ಸ್ಯಾಮ್ ಕಾನ್ಸ್ಟಾಸ್, ಹಗ್ ವೆಬ್‌ಗೆನ್ (ನಾಯಕ), ಹರ್ಜಾಸ್ ಸಿಂಗ್, ರಿಯಾನ್ ಹಿಕ್ಸ್ (ವಿಕೆಟ್ ಕೀಪರ್), ಟಾಮ್ ಕ್ಯಾಂಪ್‌ಬೆಲ್, ಆಲಿವರ್ ಪೀಕ್, ರಾಫ್ ಮೆಕ್‌ಮಿಲನ್, ಟಾಮ್ ಸ್ಟ್ರಾಕರ್, ಮಾಹ್ಲಿ ಬಿಯರ್ಡ್‌ಮನ್, ಕ್ಯಾಲಮ್ ವಿಡ್ಲರ್
ಪಾಕಿಸ್ತಾನ ತಂಡ: ಶಮಿಲ್ ಹುಸೇನ್, ಶಹಜೇಬ್ ಖಾನ್, ಅಜಾನ್ ಅವೆಸ್, ಸಾದ್ ಬೇಗ್ (ನಾಯಕ/ವಿಕೆಟ್ ಕೀಪರ್), ಅಹ್ಮದ್ ಹಸನ್, ಹರೂನ್ ಅರ್ಷದ್, ಅರಾಫತ್ ಮಿನ್ಹಾಸ್, ನವೀದ್ ಅಹ್ಮದ್ ಖಾನ್, ಉಬೈದ್ ಶಾ, ಮೊಹಮ್ಮದ್ ಜೀಶನ್, ಅಲಿ ರಜಾ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:16 pm, Thu, 8 February 24
