U19 World Cup 2026: 7 ಸಿಕ್ಸರ್, 96 ರನ್..! ಅಭ್ಯಾಸ ಪಂದ್ಯದಲ್ಲೇ ಅಬ್ಬರಿಸಿದ ವೈಭವ್ ಸೂರ್ಯವಂಶಿ
U19 World Cup 2026: ಅಂಡರ್-19 ವಿಶ್ವಕಪ್ ಸಿದ್ಧತೆಯಲ್ಲಿ ಭಾರತ ಯುವ ತಂಡದ ಆಟಗಾರ ವೈಭವ್ ಸೂರ್ಯವಂಶಿ ಸ್ಕಾಟ್ಲೆಂಡ್ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಅಬ್ಬರಿಸಿದ್ದಾರೆ. ಕೇವಲ 50 ಎಸೆತಗಳಲ್ಲಿ 96 ರನ್ ಬಾರಿಸಿ ಶತಕದಿಂದ ವಂಚಿತರಾದರೂ, ವೈಭವ್ ತಮ್ಮ ಸ್ಫೋಟಕ ಫಾರ್ಮ್ ಮುಂದುವರಿಸಿದ್ದಾರೆ. ಅವರ ಭರ್ಜರಿ ಬ್ಯಾಟಿಂಗ್ ಭಾರತ ತಂಡದ ವಿಶ್ವಕಪ್ ಗೆಲುವಿನ ಭರವಸೆಯನ್ನು ಹೆಚ್ಚಿಸಿದೆ. ನಾಯಕ ಆಯುಷ್ ಮತ್ತು ವಿಹಾನ್ ಕೂಡ ತಂಡ ಸೇರಿರುವುದು ಬಲ ತಂದಿದೆ.

2026 ರ ಅಂಡರ್-19 ವಿಶ್ವಕಪ್ (U19 World Cup 2026) ಆರಂಭಕ್ಕೆ ಕೆಲವೇ ದಿನಗಳು ಬಾಕಿ ಇದ್ದು, ಹೀಗಾಗಿ ಎಲ್ಲಾ ತಂಡಗಳು ಅಭ್ಯಾಸ ಪಂದ್ಯದಲ್ಲಿ ನಿರತವಾಗಿವೆ. 2026 ರ ಅಂಡರ್-19 ವಿಶ್ವಕಪ್ ಜನವರಿ 15 ರಂದು ಜಿಂಬಾಬ್ವೆ ಮತ್ತು ನಮೀಬಿಯಾದಲ್ಲಿ ಆರಂಭವಾಗುತ್ತದೆ. ಅದಕ್ಕೂ ಮೊದಲು, ಎಲ್ಲಾ ತಂಡಗಳು ಇಂದು ಅಂದರೆ ಜನವರಿ 10 ರಿಂದ ಅಭ್ಯಾಸ ಪಂದ್ಯಗಳನ್ನು ಆಡುತ್ತಿವೆ. ಆ ಪ್ರಕಾರ ಭಾರತ ಯುವ ತಂಡ ತನ್ನ ಮೊದಲ ಅಭ್ಯಾಸ ಪಂದ್ಯದಲ್ಲಿ ಸ್ಕಾಟ್ಲೆಂಡ್ ತಂಡವನ್ನು ಎದುರಿಸಿದೆ. ಈ ಪಂದ್ಯದಲ್ಲಿ ಟೀಂ ಇಂಡಿಯಾ ಪರ ಕಣಕ್ಕಿಳಿದಿದ್ದ ವೈಭವ್ ಸೂರ್ಯವಂಶಿ (Vaibhav Suryavanshi) ಅಬ್ಬರದ ಇನ್ನಿಂಗ್ಸ್ ಆಡಿದರು. ಆಸ್ಟ್ರೇಲಿಯಾ, ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾದಂತಹ ತಂಡಗಳ ವಿರುದ್ಧ ವೈಭವ್ ಹೇಗೆ ಮಿಂಚಿದ್ದರೋ ಅದೇ ರೀತಿ ಸ್ಕಾಟ್ಲೆಂಡ್ ವಿರುದ್ಧವೂ ಸಿಕ್ಸರ್‌ಗಳ ಮಳೆಗರೆದಿದ್ದಾರೆ.
ಪ್ರಸ್ತುತ ಟೀಂ ಇಂಡಿಯಾದ ಯುವ ಆರಂಭಿಕ ಆಟಗಾರ ವೈಭವ್ ಸೂರ್ಯವಂಶಿ ಸ್ಫೋಟಕ ಫಾರ್ಮ್ನಲ್ಲಿದ್ದಾರೆ. ಮೊದಲ ಬಾರಿಗೆ ವಿಶ್ವಕಪ್ನಲ್ಲಿ ಭಾಗವಹಿಸುತ್ತಿರುವ ವೈಭವ್ ಮೇಲೆ ಭಾರತ ತಂಡ ಹೆಚ್ಚಿನ ಭರವಸೆಯನ್ನು ಹೊಂದಿದೆ. ಆ ಪ್ರಕಾರ 14 ವರ್ಷದ ವೈಭವ್, ಸ್ಕಾಟ್ಲೆಂಡ್ ವಿರುದ್ಧ ಬೌಂಡರಿ ಮತ್ತು ಸಿಕ್ಸರ್‌ಗಳ ಮಳೆಗರೆದರು. ಆದರೆ ಕೇವಲ 4 ರನ್ಗಳ ಅಂತರದಿಂದ ಶತಕದಿಂದ ವಂಚಿತರಾದರು.
ಶತಕ ತಪ್ಪಿಸಿಕೊಂಡ ವೈಭವ್
ಇತ್ತೀಚೆಗೆ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ಎರಡು ಸ್ಫೋಟಕ ಇನ್ನಿಂಗ್ಸ್‌ಗಳನ್ನು ಆಡಿದ್ದ ವೈಭವ್, ಸ್ಕಾಟ್ಲೆಂಡ್ ವಿರುದ್ಧವೂ ಬೌಂಡರಿ ಮತ್ತು ಸಿಕ್ಸರ್‌ಗಳ ಮಳೆಗರೆದರು. ಕೇವಲ 27 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ವೈಭವ್ ಬಹುತೇಕ ಪ್ರತಿ ಓವರ್‌ನಲ್ಲಿಯೂ ಬೌಂಡರಿ ಅಥವಾ ಸಿಕ್ಸರ್ ಬಾರಿಸಿದರು. ಇದರ ಪರಿಣಾಮವಾಗಿ ಶತಕದ ಸನಿಹಕ್ಕೂ ಬಂದರು. ಆದರೆ ಶತಕ ಪೂರೈಸಲು ಕೇವಲ ಒಂದು ಬೌಂಡರಿ ಮಾತ್ರ ಬೇಕಾಗಿದ್ದಾಗ ಎಡವಿದ ವೈಭವ್ ವಿಕೆಟ್ ಒಪ್ಪಿಸಿದರು.
ಕೇವಲ 50 ಎಸೆತಗಳಲ್ಲಿ ಒಂಬತ್ತು ಬೌಂಡರಿ ಮತ್ತು ಏಳು ಸಿಕ್ಸರ್‌ಗಳ ಸಹಿತ 96 ರನ್ ಬಾರಿಸಿದ ವೈಭವ್ಗೆ ಇದು ಸತತ ಮೂರನೇ ಐವತ್ತು ಪ್ಲಸ್ ಸ್ಕೋರ್ ಆಗಿದೆ. ಇದಕ್ಕೂ ಮೊದಲು, ಅವರು ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ 68 ಮತ್ತು 127 ರನ್ಗಳ ಇನ್ನಿಂಗ್ಸ್ ಆಡಿದ್ದರು. ಇನ್ನು ಅಂಡರ್ ವಿಶ್ವಕಪ್ನಲ್ಲಿ ಜನವರಿ 15 ರಂದು ತನ್ನ ಮೊದಲ ಪಂದ್ಯವನ್ನಾಡುತ್ತಿರುವ ಭಾರತ, ಅಲ್ಲಿ ಅಮೆರಿಕ ತಂಡವನ್ನು ಎದುರಿಸುತ್ತಿದೆ. ಈ ಪಂದ್ಯದಲ್ಲೂ ವೈಭವ್ ಇದೇ ರೀತಿ ಅಬ್ಬರಿಸಿದರೆ ತಂಡಕ್ಕೆ ಗೆಲುವು ಖಚಿತ.
ಬಿಸಿಸಿಐ ವಿರುದ್ಧ ತೊಡೆ ತಟ್ಟಿರುವ ಬಾಂಗ್ಲಾ ತಂಡದ ಟಿ20 ವಿಶ್ವಕಪ್ ಪ್ರದರ್ಶನ ಹೇಗಿದೆ?
ತಂಡ ಸೇರಿಕೊಂಡ ಆಯುಷ್ ಮತ್ತು ವಿಹಾನ್
ಈ ಪಂದ್ಯದೊಂದಿಗೆ ತಂಡದ ನಾಯಕ ಆಯುಷ್ ಮ್ಹಾತ್ರೆ ಮತ್ತು ಉಪನಾಯಕ ವಿಹಾನ್ ಮಲ್ಹೋತ್ರಾ ಇಂಜುರಿಯಿಂದ ಚೇತರಿಸಿಕೊಂಡು ತಂಡ ಸೇರಿಕೊಂಡಿದ್ದಾರೆ. ಮಣಿಕಟ್ಟಿನ ಗಾಯಗಳಿಂದಾಗಿ ಇಬ್ಬರೂ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಿಂದ ಹೊರಗುಳಿದಿದ್ದರು. ಹೀಗಾಗಿ ಆ ಸರಣಿಯಲ್ಲಿ ವೈಭವ್ ತಂಡವನ್ನು ಮುನ್ನಡೆಸಿದ್ದರು. ಈ ಪಂದ್ಯದಲ್ಲಿ ನಾಯಕ ಆಯುಷ್ 19 ಎಸೆತಗಳಲ್ಲಿ 22 ರನ್ ಬಾರಿಸಿದರೆ ವಿಹಾನ್ ಅರ್ಧಶತಕದ ಇನ್ನಿಂಗ್ಸ್ ಆಡಿದರು.
Published On - 3:57 pm, Sat, 10 January 26
