USA vs BAN: ಬಾಂಗ್ಲಾದೇಶ್ ವಿರುದ್ಧ ಸರಣಿ ಗೆದ್ದ ಯುಎಸ್ಎ
USA vs Bangladesh: ಬಾಂಗ್ಲಾದೇಶ್ ತಂಡವನ್ನು ಮಣಿಸಿ ಯುಎಸ್ಎ ಸರಣಿ ಜಯಿಸಿದೆ. ವಿಶೇಷ ಎಂದರೆ ಈ ಬಾರಿಯ ಟಿ20 ವಿಶ್ವಕಪ್ನಲ್ಲಿ ಯುಎಸ್ಎ ತಂಡವು ಗ್ರೂಪ್-ಎ ನಲ್ಲಿದೆ. ಅಂದರೆ ಇದೇ ಗ್ರೂಪ್ನಲ್ಲಿ ಭಾರತ ಮತ್ತು ಪಾಕಿಸ್ತಾನ್ ತಂಡಗಳಿವೆ. ಹೀಗಾಗಿ ಭಾರತ ಮತ್ತು ಪಾಕಿಸ್ತಾನ್ ತಂಡಗಳ ವಿರುದ್ಧ ಯುಎಸ್ಎ ಕಡೆಯಿಂದ ಭರ್ಜರಿ ಪೈಪೋಟಿಯನ್ನು ನಿರೀಕ್ಷಿಸಬಹುದು.

ಬಾಂಗ್ಲಾದೇಶ್ ವಿರುದ್ಧದ ಟಿ20 ಸರಣಿಯನ್ನು 1-2 ಅಂತರದಿಂದ ಯುಎಸ್ಎ (USA) ತಂಡ ಗೆದ್ದುಕೊಂಡಿದೆ. ಹೌಸ್ಟನ್ನ ಪ್ರೈರೀ ವ್ಯೂ ಕ್ರಿಕೆಟ್ ಕಾಂಪ್ಲೆಕ್ಸ್ ಸ್ಡೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಅಂತಿಮ ಟಿ20 ಪಂದ್ಯದಲ್ಲಿ ಬಾಂಗ್ಲಾದೇಶ್ ತಂಡ ಗೆದ್ದರೂ, ಮೊದಲೆರಡು ಮ್ಯಾಚ್ಗಳಲ್ಲಿ ಯುಎಸ್ಎ ತಂಡ ಜಯ ಸಾಧಿಸಿತ್ತು. ಈ ಮೂಲಕ ಬಾಂಗ್ಲಾ ವಿರುದ್ಧ ಚೊಚ್ಚಲ ಬಾರಿ ಸರಣಿ ಗೆಲ್ಲುವಲ್ಲಿ ಯುಎಸ್ಎ ಯಶಸ್ವಿಯಾಗಿದೆ.
- ಮೊದಲ ಟಿ20 ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಬಾಂಗ್ಲಾದೇಶ್ ತಂಡ 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 153 ರನ್ ಕಲೆಹಾಕಿದ್ದರು. ಈ ಗುರಿಯನ್ನು ಬೆನ್ನತ್ತಿದ ಯುಎಸ್ಎ ತಂಡ 19.3 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 156 ರನ್ ಬಾರಿಸಿ ಭರ್ಜರಿ ಜಯ ಸಾಧಿಸಿತ್ತು.
- ಇನ್ನು ಎರಡನೇ ಟಿ20 ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಯುಎಸ್ಎ ತಂಡ 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 144 ರನ್ಗಳಿಸಲಷ್ಟೇ ಶಕ್ತರಾಗಿದ್ದರು. ಆದರೆ ಬೌಲಿಂಗ್ನಲ್ಲಿ ಅದ್ಭುತ ಪ್ರದರ್ಶನ ನೀಡಿದ ಯುಎಸ್ಎ 19.3 ಓವರ್ಗಳಲ್ಲಿ 138 ರನ್ಗಳಿಗೆ ಬಾಂಗ್ಲಾದೇಶ್ ತಂಡವನ್ನು ಆಲೌಟ್ ಮಾಡಿ 6 ರನ್ಗಳ ರೋಚಕ ಗೆಲುವು ದಾಖಲಿಸಿತು.
- ಶನಿವಾರ (ಮೇ 25) ನಡೆದ ಅಂತಿಮ ಟಿ20 ಪಂದ್ಯದಲ್ಲಿ ಬಾಂಗ್ಲಾದೇಶ್ ತಂಡದ ಕರಾರುವಾಕ್ ದಾಳಿ ಮುಂದೆ ಯುಎಸ್ಎ ಬ್ಯಾಟರ್ಗಳು ಮಂಕಾದರು. ಅದರಲ್ಲೂ ಮುಸ್ತಫಿಜುರ್ ರೆಹಮಾನ್ 4 ಓವರ್ಗಳಲ್ಲಿ ಕೇವಲ 10 ರನ್ ನೀಡಿ 6 ವಿಕೆಟ್ ಕಬಳಿಸಿದರು. ಪರಿಣಾಮ ಯುಎಸ್ಎ ತಂಡ 20 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು ಕೇವಲ 104 ರನ್ಗಳಿಸಲಷ್ಟೇ ಶಕ್ತರಾದರು.
- 105 ರನ್ಗಳ ಸುಲಭ ಗುರಿಯನ್ನು ಬೆನ್ನತ್ತಿದ ಬಾಂಗ್ಲಾದೇಶ್ ಪರ ಆರಂಭಿಕರಾದ ತಂಝಿದ್ ಹಸನ್ (58) ಹಾಗೂ ಸೌಮ್ಯ ಸರ್ಕಾರ್ (42) ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದರು. ಅಲ್ಲದೆ 11.4 ಓವರ್ಗಳಲ್ಲಿ ಗುರಿ ಮುಟ್ಟುವ ಮೂಲಕ ಬಾಂಗ್ಲಾದೇಶ್ ತಂಡಕ್ಕೆ 10 ವಿಕೆಟ್ಗಳ ಅಮೋಘ ಗೆಲುವು ತಂದುಕೊಟ್ಟರು.
ಈ ಸೋಲಿನ ಹೊರತಾಗಿಯೂ 3 ಪಂದ್ಯಗಳ ಸರಣಿಯ ಮೊದಲೆರಡು ಮ್ಯಾಚ್ಗಳಲ್ಲಿ ಗೆಲುವು ದಾಖಲಿಸಿದ ಯುಎಸ್ಎ ತಂಡ ಟ್ರೋಫಿ ಮುಡಿಗೇರಿಸಿಕೊಂಡಿದೆ. ವಿಶೇಷ ಎಂದರೆ ಯುಎಸ್ಎ ತಂಡ ಇದೇ ಮೊದಲ ಬಾರಿಗೆ ಟಿ20 ಸರಣಿಯಲ್ಲಿ ಬಾಂಗ್ಲಾದೇಶ್ ತಂಡವನ್ನು ಎದುರಿಸಿದೆ. ಚೊಚ್ಚಲ ಸರಣಿಯಲ್ಲೇ ಬಾಂಗ್ಲಾ ತಂಡವನ್ನು ಬಗ್ಗು ಬಡಿದು ಸರಣಿ ಗೆದ್ದಿರುವುದು ವಿಶೇಷ.
ಯುಎಸ್ಎ ಪ್ಲೇಯಿಂಗ್ 11: ಆಂಡ್ರೀಸ್ ಗೌಸ್ (ವಿಕೆಟ್ ಕೀಪರ್) , ಆರನ್ ಜೋನ್ಸ್ (ನಾಯಕ) , ಕೋರಿ ಆಂಡರ್ಸನ್ , ಮಿಲಿಂದ್ ಕುಮಾರ್ , ನಿತೀಶ್ ಕುಮಾರ್ , ಶಾಡ್ಲಿ ವ್ಯಾನ್ ಶಾಲ್ಕ್ವಿಕ್ , ಶಯಾನ್ ಜಹಾಂಗೀರ್ , ನಿಸರ್ಗ್ ಪಟೇಲ್ , ಜಸ್ದೀಪ್ ಸಿಂಗ್ , ನೋಸ್ತುಶ್ ಕೆಂಜಿಗೆ , ಸೌರಭ್ ನೇತ್ರವಲ್ಕರ್.
ಇದನ್ನೂ ಓದಿ: Hardik Pandya: ಹಾರ್ದಿಕ್ ಪಾಂಡ್ಯರ ಶೇ.70 ರಷ್ಟು ಆಸ್ತಿ ಹೆಂಡತಿ ಪಾಲು..?
ಬಾಂಗ್ಲಾದೇಶ್ ಪ್ಲೇಯಿಂಗ್ 11: ಲಿಟ್ಟನ್ ದಾಸ್ (ವಿಕೆಟ್ ಕೀಪರ್) , ಸೌಮ್ಯ ಸರ್ಕಾರ್ , ತಂಝಿದ್ ಹಸನ್ , ನಜ್ಮುಲ್ ಹೊಸೈನ್ ಶಾಂಟೋ (ನಾಯಕ) , ತೌಹಿದ್ ಹೃದೋಯ್ , ಶಾಕಿಬ್ ಅಲ್ ಹಸನ್ , ಮಹ್ಮುದುಲ್ಲಾ , ರಿಶಾದ್ ಹೊಸೈನ್ , ತಂಝಿಮ್ ಹಸನ್ ಸಾಕಿಬ್ , ಹಸನ್ ಮಹ್ಮದ್ , ಮುಸ್ತಫಿಜುರ್ ರೆಹಮಾನ್.
Published On - 7:58 am, Sun, 26 May 24
