ವೈಭವ್ ಮೇಲೆ ವಯಸ್ಸಿನ ವಂಚನೆಯ ಆರೋಪ; ಬಿಸಿಸಿಐ ಪರೀಕ್ಷೆಯಲ್ಲಿ ಹೊರಬಂದ ಸತ್ಯಾಂಶವೇನು?

Vaibhav Sooryavanshi Age Controversy: ರಾಜಸ್ಥಾನ್ ರಾಯಲ್ಸ್ ಆಟಗಾರ ವೈಭವ್ ಸೂರ್ಯವಂಶಿ ವಯಸ್ಸಿನ ವಿವಾದ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಅದ್ಭುತ ಪ್ರದರ್ಶನ ನೀಡಿದಾಗಲೆಲ್ಲ, ಅವರ ವಯಸ್ಸಿನ ಬಗ್ಗೆ ವಂಚನೆ ಆರೋಪಗಳು ಸದ್ದು ಮಾಡುತ್ತವೆ. ನೆಟ್ಟಿಗರಿಂದ ಹಿಡಿದು ಮಾಜಿ ಕ್ರಿಕೆಟಿಗರು ಈ ಪ್ರಶ್ನೆ ಎತ್ತಿದ್ದಾರೆ. ಬಿಸಿಸಿಐ ನಡೆಸಿದ TW3 ಪರೀಕ್ಷೆಯಲ್ಲಿ ವೈಭವ್ ಉತ್ತೀರ್ಣರಾಗಿದ್ದು, ಅವರ ವಯಸ್ಸಿನ ಬಗ್ಗೆ ಯಾವುದೇ ಸುಳ್ಳು ಮಾಹಿತಿ ನೀಡಿಲ್ಲ ಎಂದು ಕೋಚ್ ರವಿಪ್ರಕಾಶ್ ಝಾ ಸ್ಪಷ್ಟಪಡಿಸಿದ್ದಾರೆ.

ವೈಭವ್ ಮೇಲೆ ವಯಸ್ಸಿನ ವಂಚನೆಯ ಆರೋಪ; ಬಿಸಿಸಿಐ ಪರೀಕ್ಷೆಯಲ್ಲಿ ಹೊರಬಂದ ಸತ್ಯಾಂಶವೇನು?
Vaibhav Sooryavanshi

Updated on: May 29, 2026 | 5:18 PM

ಗುಜರಾತ್ ಟೈಟಾನ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ (GT  vs RR) ತಂಡಗಳು ಐಪಿಎಲ್‌ನ ಎರಡನೇ ಕ್ವಾಲಿಫೈಯರ್‌ನಲ್ಲಿ ಪರಸ್ಪರ ಮುಖಾಮುಖಿಯಾಗಲಿವೆ. ಆದರೆ ಈ ಪಂದ್ಯಕ್ಕೂ ಮುನ್ನ ರಾಜಸ್ಥಾನ್ ರಾಯಲ್ಸ್ ತಂಡದ ಸ್ಫೋಟಕ ಆರಂಭಿಕ ಆಟಗಾರ ವೈಭವ್ ಸೂರ್ಯವಂಶಿ (Vaibhav Sooryavanshi) ಬಗ್ಗೆ ಬಹಳ ವರ್ಷಗಳಿಂದ ಕೇಳಿಬರುತ್ತಿರುವ ಆರೋಪ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ವಾಸ್ತವವಾಗಿ ವೈಭವ್ ಅದ್ಭುತ ಪ್ರದರ್ಶನ ನೀಡಿದಾಗಲೆಲ್ಲ ಅವರ ವಯಸ್ಸಿನ ಬಗ್ಗೆಗಿನ ಆರೋಪಗಳು ಸದ್ದು ಮಾಡುತ್ತವೆ. ಇದೀಗ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಎಲಿಮಿನೆಟರ್ ಪಂದ್ಯದಲ್ಲಿ ವೈಭವ್ 29 ಎಸೆತಗಳಲ್ಲಿ 97 ರನ್ ಬಾರಿಸಿದ್ದನ್ನು ನೋಡಿದವರು ಮತ್ತೆ ವೈಭವ್ ಅವರ ವಯಸ್ಸಿನ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದಾರೆ. ಹಾಗೆಯೇ ವೈಭವ್ ತಮ್ಮ ನಿಜವಾದ ವಯಸ್ಸನ್ನು ಮುಚ್ಚಿಟ್ಟು ಎಲ್ಲರನ್ನೂ ವಂಚಿಸುತ್ತಿದ್ದಾರೆ ಎಂಬ ಆರೋಪವನ್ನು ಹೊರಿಸುತ್ತಿದ್ದಾರೆ.

ವೈಭವ್ ಮೇಲೆ ವಯಸ್ಸಿನ ವಂಚನೆಯ ಆರೋಪ

ವಾಸ್ತವವಾಗಿ ವೈಭವ್ ಅವರ ಬಗ್ಗೆ ಈ ರೀತಿಯ ಆರೋಪಗಳು ಕೇಳಿಬರುತ್ತಿರುವುದು ಇದೇ ಮೊದಲಲ್ಲ. ಯಾವಾಗ ವೈಭವ್ ತಮ್ಮ ವಯಸ್ಸಿಗೂ ಮೀರಿದ ಪ್ರದರ್ಶನ ನೀಡಲಾರಂಭಿಸಿದರೋ ಆಗಿನಿಂದಲೂ ಅವರ ವಯಸ್ಸಿನ ಬಗ್ಗೆ ನಾನಾ ಅನುಮಾನಗಳು ಹುಟ್ಟಿಕೊಂಡಿವೆ. ನೆಟ್ಟಿಗರಿಂದ ಹಿಡಿದು, ಮಾಜಿ ಕ್ರಿಕೆಟಿಗರು, ಮಾಜಿ ಕುಸ್ತಿಪಟುಗಳು ಕೂಡ ವೈಭವ್ ಅವರ ವಯಸ್ಸಿನ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದಾರೆ. ಅಂಡರ್ 19 ಏಷ್ಯಾಕಪ್‌ನಲ್ಲಿ ವೈಭವ್ ಅವರ ಅಬ್ಬರದ ಆಟ ನೋಡಿದ್ದ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಜುನೈದ್ ಖಾನ್ ವೈಭವ್ ಮೇಲೆ ವಯಸ್ಸಿನ ವಂಚನೆ ಆರೋಪ ಹೊರಿಸಿದ್ದರು. 13 ವರ್ಷದ ಬಾಲಕನೊಬ್ಬ ಇಂತಹ ಶಕ್ತಿಯನ್ನು ಹೊಂದಲು ಸಾಧ್ಯವೇ ಎಂದು ಪ್ರಶ್ನಿಸಿದ್ದರು. ಇವರ ಜೊತೆಗೆ ಭಾರತದ ಮಾಜಿ ಬಾಕ್ಸರ್ ಒಲಂಪಿಕ್ ಗೇಮ್ಸ್ ಕಂಚಿನ ಪದಕ ವಿಜೇತ ವಿಜೇಂದರ್ ಸಿಂಗ್ ಕೂಡ ವೈಭವ್ ಅವರ ವಯಸ್ಸಿನ ಬಗ್ಗೆ ಪ್ರಶ್ನೆಗಳ ಎತ್ತಿದ್ದರು.

ವೈಭವ್ ಹಳೆಯ ವಿಡಿಯೋ ವೈರಲ್

ಇದಕ್ಕೆ ಪುಷ್ಠಿ ನೀಡುವಂತೆ ವೈಭವ್ ಅವರ ಹಳೆಯ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. 2025 ರಲ್ಲಿ ವೈರಲ್ ಆಗಿದ್ದ ವಿಡಿಯೋ 2 ವರ್ಷ ಹಿಂದಿನದ್ದಾಗಿತ್ತು. ಅಂದರೆ ವೈಭವ್ 2023 ರಲ್ಲಿ ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಬರುವ ಸೆಪ್ಟೆಂಬರ್​ಗೆ ನನಗೆ 14 ವರ್ಷ ತುಂಬುತ್ತದೆ ಎಂದು ಹೇಳಿಕೆ ನೀಡಿದ್ದರು. ಹಾಗಿದ್ದರೆ 2023 ರಲ್ಲಿ ವೈಭವ್​ಗೆ 14 ವರ್ಷ ತುಂಬಿದರೆ ಈಗ ಅವರಿಗೆ 17 ವರ್ಷ ವಯಸ್ಸಾಗಿರಬೇಕು. ಆದರೆ ವೈಭವ್ ಬಿಸಿಸಿಐಗೆ ನೀಡಿದ ಅಧಿಕೃತ ದಾಖಲೆಗಳ ಪ್ರಕಾರ, ಅವರ ಜನ್ಮ ದಿನಾಂಕ ಮಾರ್ಚ್ 27, 2011. ಇದರರ್ಥ ದಾಖಲೆಗಳ ಪ್ರಕಾರ ವೈಭವ್ ಅವರಿಗೀಗ 15 ವರ್ಷ. ವೈರಲ್ ಆದ ಈ ವಿಡಿಯೋವನ್ನು ದಾಖಲೆಯಾಗಿ ತೋರಿಸಿ ಹಲವರು ವೈಭವ್ ಮೇಲೆ ಆರೋಪಗಳನ್ನು ಹೊರಿಸಿದ್ದರು. ಈ ಆರೋಪಗಳ ಪಟ್ಟಿ ಹೆಚ್ಚಾದ ಬಳಿಕ ಬಿಸಿಸಿಐ ಕೂಡ ವೈಭವ್ ಅವರ ನಿಜವಾದ ವಯಸ್ಸನ್ನು ಪತ್ತೆ ಹಚ್ಚಲು ಪರೀಕ್ಷೆಗೆ ಒಳಪಡಿಸಿತ್ತು. ಅದರಲ್ಲಿ ತಿಳಿದು ಬಂದ ಫಲಿತಾಂಶವೆಂದರೆ…

ಬಿಸಿಸಿಐ ನಡೆಸುವ ಪರೀಕ್ಷೆ ಹೇಗಿರುತ್ತದೆ?

ವಾಸ್ತವವಾಗಿ ಬಿಸಿಸಿಐ ಈ ರೀತಿಯ ವಯಸ್ಸಿನ ವಂಚನೆಯನ್ನು ತಡೆಯಲು Tanner-Whitehouse 3 (TW3) ಎಂಬ ವೈಜ್ಞಾನಿಕ ಮೂಳೆ ಪರೀಕ್ಷಾ ವಿಧಾನವನ್ನು ಬಳಸುತ್ತದೆ. ಮಣಿಕಟ್ಟು ಮತ್ತು ಕೈಯಿನ ಎಕ್ಸ್‌-ರೇ ಮೂಲಕ ಮೂಳೆಯ ಬೆಳವಣಿಗೆಯನ್ನು ಪರೀಕ್ಷಿಸಿ ಆಟಗಾರರ ನಿಖರವಾದ ವಯಸ್ಸನ್ನು ನಿರ್ಧರಿಸಲಾಗುತ್ತದೆ. ಈ TW3 ಪರೀಕ್ಷೆಯಲ್ಲಿ ಆಟಗಾರನ ಎಡಗೈ ಮತ್ತು ಮಣಿಕಟ್ಟಿನ ಎಕ್ಸ್‌-ರೇ ಮೂಲಕ ಮೂಳೆಯ ಬೆಳವಣಿಗೆಯನ್ನು ಅಳೆಯಲಾಗುತ್ತದೆ.

ಸಿಕ್ಸರ್‌ಗಳ ಮಳೆಗರೆಯುವ ವೈಭವ್ ವಿರುದ್ಧ ಮೇಡನ್ ಓವರ್ ಎಸೆದ ಬೌಲರ್ ಯಾರು ಗೊತ್ತಾ?

ವೈಭವ್ ಬಾಲ್ಯದ ಕೋಚ್ ಹೇಳಿದ್ದೇನು?

ಈ ಪರೀಕ್ಷೆಯಿಂದ ಬಂದ ಫಲಿತಾಂಶಕ್ಕೆ, ಬಿಸಿಸಿಐ ನಿಯಮದಂತೆ ಹೆಚ್ಚುವರಿಯಾಗಿ 1 ವರ್ಷವನ್ನು ಸೇರಿಸುವ ಮೂಲಕ ಆಟಗಾರನ ವಯಸ್ಸನ್ನು ಅಳೆಯಲಾಗುತ್ತದೆ. ಉದಾಹರಣೆಗೆ TW3 ಪರೀಕ್ಷೆಯಲ್ಲಿ ಆಟಗಾರನ ವಯಸ್ಸು 14.8 ಆಗಿದ್ದರೆ, ಅದಕ್ಕೆ 1 ವರ್ಷವನ್ನು ಸೇರಿಸಿ ಆಟಗಾರನ ವಯಸ್ಸನ್ನು 15.8 ಎಂದು ಲೆಕ್ಕ ಹಾಕಲಾಗುತ್ತದೆ. ಆ ಪ್ರಕಾರ, ವೈಭವ್ ಸೂರ್ಯವಂಶಿ ಅವರನ್ನು ಈ ಪರೀಕ್ಷೆಗೆ ಒಳಪಡಿಸಿದ್ದು ಅದರಲ್ಲಿ ಅವರು ಉತೀರ್ಣರಾಗಿದ್ದಾರೆ ಎಂದು ವೈಭವ್ ಅವರ ಬಾಲ್ಯದ ಕೋಚ್ ಈಗಾಗಲೇ ಟೈಮ್ಸ್ ಆಫ್ ಇಂಡಿಯಾಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದರು.

‘2022 ರ ರಣಜಿ ಟ್ರೋಫಿಗೆ ವೈಭವ್ ಅವರನ್ನು ಬಿಹಾರ ತಂಡಕ್ಕೆ ಆಯ್ಕೆ ಮಾಡಲಾಗಿತ್ತು. ರಣಜಿ ಸೀಸನ್ ಆರಂಭಕ್ಕೆ ಮೂರು ವಾರಗಳ ಮೊದಲು ಬಿಸಿಸಿಐ ವೈಭವ್ ಅವರನ್ನು ಮೂಳೆ ಪರೀಕ್ಷೆಗೆಂದು ಬೆಂಗಳೂರಿನಲ್ಲಿರುವ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಗೆ ಕಳಿಸಿತ್ತು. ವಿವಿಎಸ್ ಲಕ್ಷ್ಮಣ್ ಮುಂದಾಳತ್ವದಲ್ಲಿ ನಡೆದಿದ್ದ ಈ ಪರೀಕ್ಷೆಯಲ್ಲಿ ವೈಭವ್ ಅವರು ತಮ್ಮ ವಯಸ್ಸಿನ ವಿಚಾರದಲ್ಲಿ ಯಾವುದೇ ಸುಳ್ಳು ಮಾಹಿತಿ ನೀಡಿಲ್ಲ ಎಂಬುದು ಸಾಭೀತಾಗಿದೆ’ ಎಂದು ವೈಭವ್ ಅವರ ಬಾಲ್ಯದ ಕೋಚ್ ರವಿಪ್ರಕಾಶ್ ಝಾ ಹೇಳಿದ್ದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

pruthvi Shankar

ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ, ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ನೆಲೆ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ನಾನು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ನನ್ನ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ನನ್ನ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
Follow Us