ಸಚಿನ್ ವಿರೋಧದ ನಡುವೆಯೂ ವೈಭವ್‌ಗೆ ನಾಯಕತ್ವ; ಬಿಹಾರ ತಂಡದ ಮಹತ್ವದ ಘೋಷಣೆ

ಬಿಹಾರ ಕ್ರಿಕೆಟ್ ಮಂಡಳಿ 15 ವರ್ಷದ ವೈಭವ್ ಸೂರ್ಯವಂಶಿಯನ್ನು ಸೈಯದ್ ಮುಷ್ತಾಕ್ ಅಲಿ ಟಿ20 ಟ್ರೋಫಿಗೆ ನಾಯಕನಾಗಿ ನೇಮಿಸಿದೆ. ಈ ನಿರ್ಧಾರಕ್ಕೆ ಸಚಿನ್ ತೆಂಡೂಲ್ಕರ್ ಚಿಕ್ಕ ವಯಸ್ಸಿಗೆ ಇಂತಹ ದೊಡ್ಡ ಜವಾಬ್ದಾರಿ ನೀಡುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ವೈಭವ್ ಈ ಮೂಲಕ ಪ್ರಮುಖ ಟಿ20 ಪಂದ್ಯಾವಳಿಯಲ್ಲಿ ನಾಯಕತ್ವ ವಹಿಸಿದ ಅತ್ಯಂತ ಕಿರಿಯ ಆಟಗಾರನಾಗಲಿದ್ದಾರೆ. ಅವರ ನಾಯಕತ್ವ ಮತ್ತು ಬ್ಯಾಟಿಂಗ್ ಪ್ರದರ್ಶನ ಕುತೂಹಲ ಮೂಡಿಸಿದೆ.

ಸಚಿನ್ ವಿರೋಧದ ನಡುವೆಯೂ ವೈಭವ್‌ಗೆ ನಾಯಕತ್ವ; ಬಿಹಾರ ತಂಡದ ಮಹತ್ವದ ಘೋಷಣೆ
Vaibhav Sooryavanshi

Updated on: Nov 06, 2026 | 9:49 PM

ಬಿಹಾರ ಕ್ರಿಕೆಟ್ ಮಂಡಳಿ ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಂಡಿದ್ದು, 15 ವರ್ಷದ ಯುವ ಬ್ಯಾಟ್ಸ್‌ಮನ್ ವೈಭವ್ ಸೂರ್ಯವಂಶಿಗೆ ತಂಡದ ನಾಯಕತ್ವದ ಜವಾಬ್ದಾರಿ ನೀಡಿದೆ. ಮುಂಬರುವ ಸೈಯದ್ ಮುಷ್ತಾಕ್ ಅಲಿ ಟಿ20 ಟ್ರೋಫಿಯಲ್ಲಿ ವೈಭವ್ ಬಿಹಾರ ತಂಡವನ್ನು ಮುನ್ನಡೆಸಲಿದ್ದಾರೆ. ನವೆಂಬರ್ 14ರಿಂದ ಡಿಸೆಂಬರ್ 6ರವರೆಗೆ ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿ ನಡೆಯಲಿದೆ. ದೇಶದ ಪ್ರಮುಖ ದೇಶೀಯ ಟಿ20 ಟೂರ್ನಿಯಾಗಿರುವ ಇದರಲ್ಲಿ ಒಟ್ಟು 38 ತಂಡಗಳು ಪ್ರಶಸ್ತಿಗಾಗಿ ಸೆಣಸಾಡಲಿವೆ. ಈ ಟೂರ್ನಿಗಾಗಿ ಬಿಹಾರ ಕ್ರಿಕೆಟ್ ಮಂಡಳಿ ತನ್ನ ತಂಡವನ್ನು ಪ್ರಕಟಿಸಿದೆ. 15 ವರ್ಷದ ವೈಭವ್ ಸೂರ್ಯವಂಶಿಗೆ ನಾಯಕನ ಪಟ್ಟ ಕಟ್ಟಲಾಗಿದ್ದು, ಸೂರಜ್ ಕಶ್ಯಪ್ ಉಪನಾಯಕನಾಗಿ ಆಯ್ಕೆಯಾಗಿದ್ದಾರೆ. ಸದ್ಯ ಟೂರ್ನಿಯ ಮೊದಲ ಎರಡು ಪಂದ್ಯಗಳಿಗೆ ಮಾತ್ರ ಬಿಹಾರ ತಂಡವನ್ನು ಪ್ರಕಟಿಸಲಾಗಿದೆ.

ವೈಭವ್‌ಗೆ ನಾಯಕತ್ವಕ್ಕೆ ಸಚಿನ್ ವಿರೋಧ

ಇತ್ತೀಚೆಗಷ್ಟೇ ವೈಭವ್ ಸೂರ್ಯವಂಶಿಗೆ ನಾಯಕತ್ವದ ಜವಾಬ್ದಾರಿ ನೀಡುವ ವಿಚಾರವಾಗಿ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಇಷ್ಟು ಚಿಕ್ಕ ವಯಸ್ಸಿನಲ್ಲಿ ವೈಭವ್‌ಗೆ ಇಂತಹ ದೊಡ್ಡ ಜವಾಬ್ದಾರಿ ನೀಡುವುದು ಸರಿಯಲ್ಲ ಎಂಬುದು ಅವರ ಅಭಿಪ್ರಾಯವಾಗಿತ್ತು. ಎಕ್ಸ್‌ಪ್ರೆಸ್ ಸಂವಾದ ಕಾರ್ಯಕ್ರಮದಲ್ಲಿ ದುಲೀಪ್ ಟ್ರೋಫಿಯಲ್ಲಿ ವೈಭವ್ ಅವರನ್ನು ಉಪನಾಯಕನನ್ನಾಗಿ ನೇಮಿಸಿದ್ದರ ಬಗ್ಗೆ ಸಚಿನ್ ಅವರನ್ನು ಪ್ರಶ್ನಿಸಲಾಗಿತ್ತು. ಇದಕ್ಕೆ ಪ್ರತಿಕ್ರಿಯಿಸಿದ್ದ ಅವರು, ವೈಭವ್‌ಗೆ ಈಗಲೇ ಇಂತಹ ಜವಾಬ್ದಾರಿ ನೀಡುವುದು ಆತುರದ ನಿರ್ಧಾರವಾಗಬಹುದು ಎಂದಿದ್ದರು.

Loading...

‘ದುಲೀಪ್ ಟ್ರೋಫಿಯಲ್ಲಿ ವೈಭವ್ ಅವರನ್ನು ಉಪನಾಯಕನನ್ನಾಗಿ ನೇಮಿಸುವುದು ಆತುರದ ನಿರ್ಧಾರ ಎಂದು ನಾನು ಭಾವಿಸುತ್ತೇನೆ. ಅವರು ಇನ್ನಷ್ಟು ರೆಡ್ ಬಾಲ್ ಪಂದ್ಯಗಳನ್ನು ಆಡಲು ಅವಕಾಶ ನೀಡಬೇಕು. ಹಂತ ಹಂತವಾಗಿ ಅನುಭವ ಪಡೆದುಕೊಂಡು ಮುಂದೆ ಸಾಗಲು ಬಿಡಬೇಕು’ ಎಂದು ಸಚಿನ್ ಅಭಿಪ್ರಾಯಪಟ್ಟಿದ್ದರು.

ಅತ್ಯಂತ ಕಿರಿಯ ಟಿ20 ನಾಯಕ

ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಬಿಹಾರ ತಂಡವನ್ನು ಮುನ್ನಡೆಸುವ ಮೂಲಕ ವೈಭವ್ ಸೂರ್ಯವಂಶಿ ಮತ್ತೊಂದು ವಿಶೇಷ ದಾಖಲೆ ಬರೆಯುವ ನಿರೀಕ್ಷೆಯಿದೆ. ಈ ಮೂಲಕ ಪ್ರಮುಖ ಟಿ20 ಟೂರ್ನಿಯಲ್ಲಿ ತಂಡವೊಂದರ ನಾಯಕತ್ವ ವಹಿಸಿದ ಅತ್ಯಂತ ಕಿರಿಯ ಆಟಗಾರರ ಸಾಲಿನಲ್ಲಿ ಅಗ್ರಸ್ಥಾನ ಪಡೆಯಲಿದ್ದಾರೆ.

ಇದಕ್ಕೂ ಮೊದಲು ಅವರು ದುಲೀಪ್ ಟ್ರೋಫಿಯಲ್ಲಿ ನಾಯಕತ್ವದ ಜವಾಬ್ದಾರಿ ನಿಭಾಯಿಸಿದ್ದರು. ಕ್ರೊಯೇಷಿಯಾದ ಜೇಕ್ ವುಕೋಸಿಕ್ 17 ವರ್ಷ 311 ದಿನಗಳ ವಯಸ್ಸಿನಲ್ಲಿ ನಾಯಕತ್ವ ವಹಿಸಿದ್ದ ಅತ್ಯಂತ ಕಿರಿಯ ಅಂತರರಾಷ್ಟ್ರೀಯ ನಾಯಕರಾಗಿದ್ದರು. ಅಫ್ಘಾನಿಸ್ತಾನದ ರಶೀದ್ ಖಾನ್ ಕೂಡ 20 ವರ್ಷ 350 ದಿನಗಳ ವಯಸ್ಸಿನಲ್ಲಿ ಟೆಸ್ಟ್ ತಂಡದ ನಾಯಕತ್ವ ವಹಿಸಿದ್ದರು. ಇದಲ್ಲದೆ, 19ನೇ ವಯಸ್ಸಿನಲ್ಲೇ ಅಫ್ಘಾನಿಸ್ತಾನದ ಏಕದಿನ ತಂಡದ ನಾಯಕನಾಗಿಯೂ ರಶೀದ್ ಜವಾಬ್ದಾರಿ ನಿರ್ವಹಿಸಿದ್ದರು. ಇದೀಗ ಕೇವಲ 15ನೇ ವಯಸ್ಸಿನಲ್ಲೇ ಬಿಹಾರ ತಂಡದ ನಾಯಕನಾಗಿರುವ ವೈಭವ್, ತಮ್ಮ ಬ್ಯಾಟಿಂಗ್ ಜೊತೆಗೆ ನಾಯಕತ್ವದಲ್ಲೂ ಹೇಗೆ ಮಿಂಚಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

‘ಪವರ್‌ಪ್ಲೇನಲ್ಲಿ ಬ್ಯಾಟಿಂಗ್ ಅಂದ್ರೆ ಹೀಗಿರಬೇಕು’; ಅಭಿಷೇಕ್-ವೈಭವ್ ಆಟಕ್ಕೆ ಸ್ಯಾಂಟ್ನರ್ ಫಿದಾ!

ಬಿಹಾರ ತಂಡ: ವೈಭವ್ ಸೂರ್ಯವಂಶಿ (ನಾಯಕ), ಸೂರಜ್ ಕಶ್ಯಪ್ (ಉಪನಾಯಕ), ಆಯುಷ್ ಲೋಹರುಕ (ವಿಕೆಟ್ ಕೀಪರ್), ಅನ್ಮೋಲ್ ಕುಮಾರ್ (ವಿಕೆಟ್ ಕೀಪರ್), ಅಲೋಕ್ ಕುಮಾರ್, ಅಲ್ತಮಶ್ ಅಶ್ರಫ್, ಪರಮ್ ಕುಮಾರ್ ಸಿಂಗ್, ರಿತ್ವಿಕ್ ರಾಜ್, ಮಯಾಂಕ್ ಕುಮಾರ್, ರಾಘವೇಂದ್ರ ಪ್ರತಾಪ್, ಆಶಿಶ್ ಕುಮಾರ್, ವಾಸುದೇವ್ ಪ್ರತಾಪ್, ನವಾಜ್ ಖಾನ್, ಹಿಮಾಂಶು ಸಿಂಗ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪೃಥ್ವಿಶಂಕರ

ಪೃಥ್ವಿಶಂಕರ ಅವರ ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ. ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ಕೆಲಸ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ಇವರು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ಇವರ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
Loading...
Unable to load recommendations.
Follow Us