ವೈಭವ್ ಆರ್ಭಟಕ್ಕೆ 57 ವರ್ಷಗಳ ಹಳೆಯ ದಾಖಲೆ ಧೂಳೀಪಟ!

ದುಲೀಪ್ ಟ್ರೋಫಿಯ ಸೆಮಿಫೈನಲ್ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಅಬ್ಬರಿಸಿದ್ದಾರೆ. ಈ ಅಬ್ಬರದೊಂದಿಗೆ ಯುವ ದಾಂಡಿಗ  57 ವರ್ಷಗಳ ಹಳೆಯ ದಾಖಲೆಯನ್ನು ಅಳಿಸಿ ಹಾಕಿದ್ದಾರೆ. ಈ ಮೂಲಕ ದುಲೀಪ್ ಟ್ರೋಫಿ ಇತಿಹಾಸದಲ್ಲೇ ಹಾಫ್ ಸೆಂಚುರಿ ಸಿಡಿಸಿದ ಅತ್ಯಂತ ಕಿರಿಯ ಬ್ಯಾಟರ್ ಎಂಬ ಹೆಗ್ಗಳಿಕೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ವೈಭವ್ ಆರ್ಭಟಕ್ಕೆ 57 ವರ್ಷಗಳ ಹಳೆಯ ದಾಖಲೆ ಧೂಳೀಪಟ!
Vaibhav Sooryavanshi

Updated on: Aug 31, 2026 | 12:02 PM

ಭಾರತೀಯ ಕ್ರಿಕೆಟ್‌ನ ‘ರನ್ ಮಷೀನ್’ ವೈಭವ್ ಸೂರ್ಯವಂಶಿ ಅವರ ಅಬ್ಬರ ಈಗ ದುಲೀಪ್ ಟ್ರೋಫಿಯಲ್ಲೂ ಮುಂದುವರೆದಿದೆ. ಐಪಿಎಲ್ ಮತ್ತು ಟೀಮ್ ಇಂಡಿಯಾ ಬಳಿಕ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲೂ ಅಬ್ಬರಿಸಿರುವ 15 ವರ್ಷದ ವೈಭವ್, ಬಿರುಸಿನ ಅರ್ಧಶತಕ ಸಿಡಿಸುವ ಮೂಲಕ ದುಲೀಪ್ ಟ್ರೋಫಿ ಇತಿಹಾಸದಲ್ಲೇ ಅರ್ಧಶತಕ ಬಾರಿಸಿದ ಅತ್ಯಂತ ಕಿರಿಯ ಬ್ಯಾಟರ್ ಎನಿಸಿಕೊಂಡಿದ್ದಾರೆ!

ಬೆಂಗಳೂರಿನ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್ ಮೈದಾನದಲ್ಲಿ ನಡೆಯುತ್ತಿರುವ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಈಸ್ಟ್ ಝೋನ್ ಹಾಗೂ ಸೆಂಟ್ರಲ್ ಝೋನ್ ತಂಡಗಳು ಮುಖಾಮುಖಿಯಾಗಿವೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸೆಂಟ್ರಲ್ ಝೋನ್ ತಂಡವು ಪ್ರಥಮ ಇನಿಂಗ್ಸ್​ನಲ್ಲಿ 266 ರನ್​ಗಳಿಸಿ ಆಲೌಟ್ ಆಗಿದೆ.

ಇದಕ್ಕುತ್ತರವಾಗಿ ಮೊದಲ ಇನಿಂಗ್ಸ್ ಶುರು ಮಾಡಿದ ಈಸ್ಟ್ ಝೋನ್ ತಂಡದ ಪರ ವೈಭವ್ ಸೂರ್ಯವಂಶಿ ಹಾಗೂ ಅಭಿಮನ್ಯು ಈಶ್ವರನ್ ಆರಂಭಿಕರಾಗಿ ಕಣಕ್ಕಿಳಿದಿದ್ದಾರೆ. ಆರಂಭದಿಂದಲೇ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ ವೈಭವ್ ಕೇವಲ 42 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ್ದರು.

ಭರ್ಜರಿ ಹಾಫ್ ಸೆಂಚುರಿ ದಾಖಲೆ:

ಅರ್ಧಶತಕದ ಬಳಿಕವೂ ಸಿಡಿಲಬ್ಬರ ಮುಂದುವರೆಸಿದ ಈ ಯುವ ಎಡಗೈ ದಾಂಡಿಗ, ಕೇವಲ 81 ಎಸೆತಗಳಲ್ಲಿ 7 ಭರ್ಜರಿ ಸಿಕ್ಸರ್ ಹಾಗೂ 7 ಫೋರ್‌ಗಳ ನೆರವಿನಿಂದ 92 ರನ್ ಚಚ್ಚಿದರು. ಆದರೆ, ಶತಕದಂಚಿನಲ್ಲಿ ವಿಕೆಟ್ ಒಪ್ಪಿಸುವ ಮೂಲಕ ಕೇವಲ 8 ರನ್‌ಗಳಿಂದ ಚೊಚ್ಚಲ ಸೆಂಚುರಿ ದಾಖಲೆಯನ್ನು ಮಿಸ್ ಮಾಡಿಕೊಂಡರು.

ಇದಾಗ್ಯೂ ದುಲೀಪ್ ಟ್ರೋಫಿ ಇತಿಹಾಸದಲ್ಲೇ ಅರ್ಧ ಶತಕ ಬಾರಿಸಿದ ಅತ್ಯಂತ ಕಿರಿಯ ಬ್ಯಾಟರ್ ಎನಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಈ ದಾಖಲೆ ಲಕ್ಷ್ಮಣ್ ಸಿಂಗ್ ಹೆಸರಿನಲ್ಲಿತ್ತು.

  • ಲಕ್ಷ್ಮಣ್ ಸಿಂಗ್ ಅವರು 1969 ರಲ್ಲಿ ತಮ್ಮ 16ನೇ ವಯಸ್ಸಿನಲ್ಲಿ ಈ ದಾಖಲೆ ಬರೆದಿದ್ದರು.
  • ವೈಭವ್ ಸೂರ್ಯವಂಶಿ 15ನೇ ವಯಸ್ಸಿನಲ್ಲಿ ಅರ್ಧಶತಕ ಸಿಡಿಸಿ ಈ ದಾಖಲೆ ಮುರಿದಿದ್ದಾರೆ.

ವೈಭವ್ ಸೂರ್ಯವಂಶಿಯ ಈ ಪ್ರಚಂಡ ಬ್ಯಾಟಿಂಗ್ ನೆರವಿನೊಂದಿಗೆ ಈಸ್ಟ್ ಝೋನ್ ತಂಡವು 26 ಓವರ್​ಗಳ ಮುಕ್ತಾಯದ ವೇಳೆಗೆ 2 ವಿಕೆಟ್ ಕಳೆದುಕೊಂಡು 162 ರನ್ ಕಲೆಹಾಕಿದೆ.

ಸೆಂಟ್ರಲ್ ಝೋನ್ ಪ್ಲೇಯಿಂಗ್ 11: ಅಮನ್ ಮೊಖಡೆ , ಆರ್ಯನ್ ಜುಯಲ್ (ವಿಕೆಟ್ ಕೀಪರ್) , ಕುನಾಲ್ ಚಾಂಡೇಲಾ , ಯಶ್ ರಾಥೋಡ್ , ರಜತ್ ಪಾಟಿದಾರ್ (ನಾಯಕ) , ರಿಂಕು ಸಿಂಗ್ , ಸರಾಂಶ್ ಜೈನ್ , ಹರ್ಷ್ ದುಬೆ , ಅರ್ಷದ್ ಖಾನ್ , ಯಶ್ ಠಾಕೂರ್ , ಆರ್ಯನ್ ಪಾಂಡೆ.

ಇದನ್ನೂ ಓದಿ: ಅಝರ್ ಸಿಡಿಲಬ್ಬರ.. 42 ಸಿಕ್ಸರ್, 3 ಭರ್ಜರಿ ಸೆಂಚುರಿ, ಹೊಸ ದಾಖಲೆ!

ಈಸ್ಟ್ ಝೋನ್ ಪ್ಲೇಯಿಂಗ್ 11: ಅಭಿಮನ್ಯು ಈಶ್ವರನ್ , ವೈಭವ್ ಸೂರ್ಯವಂಶಿ , ಕುಮಾರ್ ಕುಶಾಗ್ರ , ಸುದೀಪ್ ಕುಮಾರ್ ಘರಾಮಿ , ಇಶಾನ್ ಕಿಶನ್ (ನಾಯಕ) , ವಿರಾಟ್ ಸಿಂಗ್ , ಮುಹಮ್ಮದ್ ಖುರೈಶಿ , ಅನುಕೂಲ್ ರಾಯ್ , ಅಭಿಜಿತ್ ಕೆ ಸರ್ಕಾರ್ , ಮೊಹಮ್ಮದ್ ಶಮಿ , ಮುಖೇಶ್ ಕುಮಾರ್.

 

Published On - 11:55 am, Mon, 31 August 26

Loading...
Unable to load recommendations.
Follow Us