ಐರ್ಲೆಂಡ್ ವಿರುದ್ಧ ಅಬ್ಬರಿಸುವ ಮುನ್ನವೇ ಭಾರತದ ಬೌಲರ್​ಗಳ ಬೆಂಡೆತ್ತಿದ ವೈಭವ್; ವಿಡಿಯೋ

Vaibhav Sooryavanshi Shines in Nets: ವೈಭವ್ ಸೂರ್ಯವಂಶಿ ಟೀಂ ಇಂಡಿಯಾ ಜೊತೆ ಐರ್ಲೆಂಡ್‌ನಲ್ಲಿ ಭರ್ಜರಿ ಅಭ್ಯಾಸ ನಡೆಸಿದ್ದಾರೆ. ನೆಟ್ಸ್‌ನಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಮಿಂಚಿದ್ದಾರೆ. ಐರ್ಲೆಂಡ್ ಅಥವಾ ಇಂಗ್ಲೆಂಡ್ ಟಿ20 ಸರಣಿಯಲ್ಲಿ ಚೊಚ್ಚಲ ಪಂದ್ಯ ಆಡಲು ಸಿದ್ಧರಾಗಿರುವ ಸೂರ್ಯವಂಶಿ, ಪದಾರ್ಪಣೆ ಮಾಡಿದರೆ ಸಚಿನ್ ತೆಂಡೂಲ್ಕರ್ ಅವರ ಕಿರಿಯ ಆಟಗಾರ ದಾಖಲೆಯನ್ನು ಮುರಿಯುವ ಅವಕಾಶವಿದೆ.

ಐರ್ಲೆಂಡ್ ವಿರುದ್ಧ ಅಬ್ಬರಿಸುವ ಮುನ್ನವೇ ಭಾರತದ ಬೌಲರ್​ಗಳ ಬೆಂಡೆತ್ತಿದ ವೈಭವ್; ವಿಡಿಯೋ
Vaibhav Sooryavanshi

Updated on: Jun 26, 2026 | 4:02 PM

ಎರಡು ಪಂದ್ಯಗಳ ಟಿ20 ಸರಣಿಗಾಗಿ ಟೀಂ ಇಂಡಿಯಾ, ಐರ್ಲೆಂಡ್ (India vs Ireland ) ಪ್ರವಾಸ ಮಾಡಿದೆ. ಸರಣಿಯ ಮೊದಲ ಪಂದ್ಯ ಇಂದು ಅಂದರೆ ಜೂನ್ 26 ರಂದು ನಡೆಯಲಿದೆ. ಈ ಪಂದ್ಯದಲ್ಲಿ ಟೀಂ ಇಂಡಿಯಾ ಪರ ವೈಭವ್ ಸೂರ್ಯವಂಶಿ (Vaibhav Sooryavanshi) ಪಾದಾರ್ಪಣೆ ಮಾಡುತ್ತಾರೋ ಇಲ್ಲವೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ ಪಂದ್ಯಕ್ಕೂ ಮುನ್ನ ವೈಭವ್ ನೆಟ್ಸ್​ನಲ್ಲಿ ಸಾಕಷ್ಟು ಬೆವರು ಹರಿಸುತ್ತಿದ್ದಾರೆ. ಬೆಲ್‌ಫಾಸ್ಟ್‌ನಲ್ಲಿ ನಡೆದ ಅಭ್ಯಾಸದ ಅವಧಿಯಲ್ಲಿ ಸೂರ್ಯವಂಶಿ ನೆಟ್ಸ್‌ನಲ್ಲಿ ಸಾಕಷ್ಟು ಸಮಯ ಕಳೆದರು. ಆ ಬಳಿಕ ಬೌಲಿಂಗ್​ನಲ್ಲೂ ತಮ್ಮ ಮ್ಯಾಜಿಕ್ ತೋರಿದ ಸೂರ್ಯವಂಶಿ, ವಿಶ್ವದ ನಂ. 1 ಟಿ20 ಬ್ಯಾಟ್ಸ್‌ಮನ್ ಅಭಿಷೇಕ್ ಶರ್ಮಾರನ್ನು ಅಚ್ಚರಿಗೊಳಿಸಿದರು.

ನೆಟ್ಸ್​ನಲ್ಲಿ ವೈಭವ್ ಅಬ್ಬರ

ಮೊದಲು ಬ್ಯಾಟಿಂಗ್​ನಲ್ಲಿ ಬೆವರು ಹರಿಸಿದ ವೈಭವ್, ನೆಟ್ಸ್‌ನಲ್ಲಿ ಸಾಕಷ್ಟು ಸಮಯ ಕಳೆದರು. ಈ ವೇಳೆ ಅವರು ಟೀಂ ಇಂಡಿಯಾದ ಸ್ಟಾರ್ ಬೌಲರ್​ಗಳಿಗೂ ನಿರರ್ಗಳವಾಗಿ ದೊಡ್ಡ ದೊಡ್ಡ ಹೊಡೆತಗಳನ್ನು ಆಡಿದರು. ಇದೀಗ ಆ ವಿಡಿಯೋವನ್ನು ಬಿಸಿಸಿಐ ತನ್ನ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದೆ. ಆ ವೀಡಿಯೊದಲ್ಲಿ ಸೂರ್ಯವಂಶಿ, ನೋ-ಲುಕ್ ಶಾಟ್ ಅನ್ನು ಸಹ ಆಡುವ ಮೂಲಕ ತಮ್ಮ ಬ್ಯಾಟಿಂಗ್‌ ಶಸ್ತ್ರಾಗಾರಕ್ಕೆ ಹೊಸ ಅಸ್ತ್ರವನ್ನು ಸೇರಿಸಿಕೊಂಡಿದ್ದಾರೆ ಎಂಬುದು ಖಚಿತವಾದಂತ್ತಾಗಿದೆ.

ಬೌಲಿಂಗ್‌ನಲ್ಲೂ ವೈಭವ್ ಮ್ಯಾಜಿಕ್

ಬ್ಯಾಟಿಂಗ್‌ ಬಳಿಕ ಬೌಲಿಂಗ್‌ನಲ್ಲೂ ವೈಭವ್ ತಮ್ಮ ಮ್ಯಾಜಿಕ್ ತೊರಿದರು. ವೈಭವ್ ಸೂರ್ಯವಂಶಿ ಬೌಲಿಂಗ್ ಮಾಡುತ್ತಿದ್ದ ಅದೇ ನೆಟ್ಸ್‌ನಲ್ಲಿ ಅಭಿಷೇಕ್ ಶರ್ಮಾ ಬ್ಯಾಟಿಂಗ್ ಮಾಡುತ್ತಿದ್ದರು. ಸೂರ್ಯವಂಶಿ ಅವರ ಒಂದು ಎಸೆತದಲ್ಲಿ ಶರ್ಮಾ ದೊಡ್ಡ ಶಾಟ್ ಆಡಿದರು. ಆದರೆ ಮುಂದಿನ ಎಸೆತದಲ್ಲೇ ವೈಭವ್, ಅವರನ್ನು ಬ್ಲಫ್ ಮಾಡಿದರು. ಸೂರ್ಯವಂಶಿ ನಗುತ್ತಾ ತಮ್ಮ ಮುಖವನ್ನು ಮರೆಮಾಡಿದರು. ಸೂರ್ಯವಂಶಿಗೆ ತಾನು ಬ್ಲಫ್ ಮಾಡಿದ್ದೇನೆ ಎಂದು ನಂಬಲು ಸಾಧ್ಯವಾಗಲಿಲ್ಲ. ಸೂರ್ಯವಂಶಿ ಬ್ಯಾಟಿಂಗ್‌ ಜೊತೆಗೆ ಎಡಗೈ ಸ್ಪಿನ್ ಬೌಲಿಂಗ್ ಕೂಡ ಮಾಡುತ್ತಾರೆ. ಅವರು ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಎರಡು ವಿಕೆಟ್‌ಗಳನ್ನು ಸಹ ಪಡೆದಿದ್ದಾರೆ.

ಐರ್ಲೆಂಡ್ ತಯಾರಿ ಹೇಗಿದೆ?

ಐರ್ಲೆಂಡ್​ನಲ್ಲೂ ವೈಭವ್ ಕ್ರೇಜ್ ಜೋರಾಗಿದೆ. ಪ್ರೇಕ್ಷಕರನ್ನು ಗಮನದಲ್ಲಿಟ್ಟುಕೊಂಡು ಕ್ರೀಡಾಂಗಣದಲ್ಲಿ ಆಸನಗಳ ವ್ಯವಸ್ಥೆಯನ್ನು ಹೆಚ್ಚಳ ಮಾಡಲಾಗಿದೆ. ಇದುವರೆಗೆ ವಿಶ್ವದ ಅತ್ಯುತ್ತಮ ಬೌಲರ್​ಗಳ ವಿರುದ್ಧ ಅಬ್ಬರಿಸಿರುವ ವೈಭವ್, ಐರ್ಲೆಂಡ್‌ ವಿರುದ್ಧ ಹೇಗೆ ಆಡುತ್ತಾರೆ ಎಂಬುದನ್ನು ಕಾದುನೋಡಬೇಕಿದೆ. ಆದರೆ ಅದಕ್ಕೂ ಮುನ್ನ ವೈಭವ್ ವಿರುದ್ಧ ಐರ್ಲೆಂಡ್​ನ ಯೋಜನೆ ಹೇಗಿರಲಿದೆ ಎಂಬುದು ಎಲ್ಲರ ಪ್ರಶ್ನೆಯಾಗಿದೆ. ಅದಕ್ಕೆ ಉತ್ತರಿಸಿದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಬೆನ್ ಕ್ಯಾಲಿಟ್ಜ್,‘ನಮಗೆ ಎಲ್ಲಾ ಆಟಗಾರರು ಒಂದೆ. ನಾಳೆ ವಿರಾಟ್ ಕೊಹ್ಲಿ ಆಗಿರಲಿ, ಶ್ರೇಯಸ್ ಅಯ್ಯರ್ ಆಗಿರಲಿ ಅಥವಾ ಸೂರ್ಯವಂಶಿ ಆಡುತ್ತಿರಲಿ, ನಾವು ಅವರೆಲ್ಲರನ್ನೂ ಒಂದೇ ರೀತಿ ಪರಿಗಣಿಸುತ್ತೇವೆ.

ಈ ಹಿಂದಿನ ವೀಡಿಯೊಗಳನ್ನು ನೋಡುವ ಮೂಲಕ ನಾವು ತಂತ್ರ ರೂಪಿಸುತ್ತೇವೆ. ಆದರೆ ನೀವು ಎಷ್ಟು ಬೇಕಾದರೂ ಯೋಜಿಸಬಹುದು. ಆದರೆ ಪಂದ್ಯದ ದಿನದಂದು ಯಾರು ಉತ್ತಮವಾಗಿ ಆಡುತ್ತಾರೋ ಅವರು ಮೇಲುಗೈ ಸಾಧಿಸುತ್ತಾರೆ. ಆದಾಗ್ಯೂ ಅವರೆಲ್ಲರೂ ಉತ್ತಮ ಆಟಗಾರರು. ಅವರಲ್ಲಿ ಹೆಚ್ಚಿನ ದೌರ್ಬಲ್ಯಗಳಿಲ್ಲ, ಅವರು ವಿಶ್ವ ಚಾಂಪಿಯನ್‌ಗಳು. ಆದರೆ ಅವರೆಲ್ಲರನ್ನೂ ಒಂದೇ ರೀತಿ ನೋಡಲಾಗುತ್ತದೆ ಮತ್ತು ನಾವು ಅವರೆಲ್ಲರನ್ನೂ ಬೇಗನೇ ಔಟ್ ಮಾಡುವುದಕ್ಕೆ ಪ್ರಯತ್ನಿಸುತ್ತೇವೆ. ಸಧ್ಯಕ್ಕೆ ಅದೇ ನಮ್ಮ ಯೋಜನೆ ಎಂದಿದ್ದಾರೆ.

IND vs IRE: ಐರ್ಲೆಂಡ್​ನಲ್ಲೂ ವೈಭವ್ ಕ್ರೇಜ್; ಕ್ರೀಡಾಂಗಣದಲ್ಲಿ ಆಸನಗಳ ಹೆಚ್ಚಳ

ಆಡುವ ಅವಕಾಶ ಸಿಗುತ್ತಾ?

ವೈಭವ್ ಸೂರ್ಯವಂಶಿಗೆ ಐರ್ಲೆಂಡ್‌ನಲ್ಲಿ ಅವಕಾಶ ಸಿಗದಿದ್ದರೆ, ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಅವರಿಗೆ ಅವಕಾಶ ಸಿಗಬಹುದು. ಐರ್ಲೆಂಡ್ ನಂತರ, ಟೀಂ ಇಂಡಿಯಾ ಇಂಗ್ಲೆಂಡ್‌ನಲ್ಲಿ ಐದು ಪಂದ್ಯಗಳ ಟಿ20 ಸರಣಿಯನ್ನು ಆಡಲಿದೆ. ಈ ಸರಣಿಯಲ್ಲಿ ಐದು ಪಂದ್ಯಗಳನ್ನು ಆಡುವುದರಿಂದ ಸೂರ್ಯವಂಶಿಗೆ ಅವಕಾಶ ಸಿಗುವುದು ಖಚಿತ. ಸೂರ್ಯವಂಶಿ ಚೊಚ್ಚಲ ಪ್ರವೇಶ ಮಾಡಿದರೆ, ಭಾರತದ ಪರ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಅತ್ಯಂತ ಕಿರಿಯ ಆಟಗಾರ ಎಂಬ ಸಚಿನ್ ಅವರ ದಾಖಲೆಯನ್ನು ಸಹ ಮುರಿಯಲಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:59 pm, Fri, 26 June 26

Follow Us