ಪ್ರತಿಭೆಯೊಂದಿದ್ದರೆ ಕ್ರಿಕೆಟ್‌ನಲ್ಲಿ ವಯಸ್ಸು ಮುಖ್ಯವಾಗುವುದಿಲ್ಲ ಎಂಬುದು ಮತ್ತೊಮ್ಮೆ ಸಾಭೀತಾಗಿದೆ. ಕೇವಲ 13ನೇ ವಯಸ್ಸಿನಲ್ಲಿ ಕ್ರಿಕೆಟ್ ಲೋಕದಲ್ಲಿ ತಲ್ಲಣ ಮೂಡಿಸಿರುವ ಬಿಹಾರದ ಸಮಸ್ತಿಪುರದ ವೈಭವ್ ಸೂರ್ಯವಂಶಿಗೆ ಐಪಿಎಲ್‌ನಲ್ಲಿ ಆಡುವ ಅವಕಾಶ ದೊರೆತಿದೆ. ಇಷ್ಟು ದಿನ ದೇಶೀ ಕ್ರಿಕೆಟ್‌ನಲ್ಲಿ ರನ್ ಮಳೆ ಹರಿಸುತ್ತಿರುವ ವೈಭವ್ ಸೂರ್ಯವಂಶಿ ಇನ್ನು ಮುಂದೆ ಐಪಿಎಲ್‌ನಲ್ಲಿ ಅಬ್ಬರಿಸುವುದನ್ನು ನಾವು ಕಾಣಬಹುದಾಗಿದೆ. ಇಂದು ನಡೆದ ಮೆಗಾ ಹರಾಜಿನಲ್ಲಿ ಈ ಯುವ ಕ್ರಿಕೆಟಿಗನ್ನು ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿ ಬರೋಬ್ಬರಿ 1.10 ಕೋಟಿ ರೂ. ನೀಡಿದೆ. ಈ ಹರಾಜಿನಲ್ಲಿ ಘಟಾನುಘಟಿ ಆಟಗಾರರೇ ಹರಾಜಾಗದೆ ಉಳಿದಿರುವಾಗ ಕೇವಲ 13 ವರ್ಷದ ವೈಭವ್, ಐಪಿಎಲ್‌ನಲ್ಲಿ ಕೋಟಿ ಸರದಾರನಾಗಿ ಹೊರಹೊಮ್ಮಿರುವುದು ಸಂತಸಕರ ಸುದ್ದಿಯಾಗಿದೆ.ಇದರ ಜೊತೆಗೆ ಕೇವಲ 13 ವರ್ಷಕ್ಕೆ ಐಪಿಎಲ್ ಲೋಕಕ್ಕೆ ಕಾಲಿಟ್ಟ ಮೊದಲ ಯುವ ಕ್ರಿಕೆಟಿಗ ಎಂಬ ದಾಖಲೆಯನ್ನು ವೈಭವ್ ಬರೆದಿದ್ದಾರೆ.
ಐಪಿಎಲ್ ಮೆಗಾ ಹರಾಜಿನಲ್ಲಿ 491 ನೇ ಆಟಗಾರನಾಗಿ ಹರಾಜಿಗೆ ಬಂದಿದ್ದ ವೈಭವ್ ಸೂರ್ಯವಂಶಿಯನ್ನು ಯಾರು ಖರೀದಿಸುವುದಿಲ್ಲ ಎಂಬುದು ಆರಂಭದ ಅಭಿಪ್ರಾಯವಾಗಿತ್ತು. ಆದರೆ ವೈಭವ್ಗಾಗಿ ರಾಜಸ್ಥಾನ ರಾಯಲ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವೆ ಜಿದ್ದಾಜಿದ್ದಿನ ಹೋರಾಟ ನಡೆದಿತ್ತು. ಅಂತಿಮವಾಗಿ ರಾಜಸ್ಥಾನ ರಾಯಲ್ಸ್, 1.10 ಕೋಟಿ ರೂ. ನೀಡಿ ಈ ಯುವ ಕ್ರಿಕೆಟಿಗನನ್ನು ತನ್ನ ತಂಡಕ್ಕೆ ಸೇರಿಸಿಕೊಂಡಿದೆ. ಇದೀಗ ಅತಿ ಚಿಕ್ಕ ವಯಸ್ಸಿಗೆ ಐಪಿಎಲ್‌ನಲ್ಲಿ ಆಡುವ ಅವಕಾಶ ಪಡೆದಿರುವ ವೈಭವ್ಗೆ ತಂಡದ ಪ್ಲೇಯಿಂಗ್ 11ನಲ್ಲಿ ಅವಕಾಶ ಸಿಗುತ್ತಾ ಎಂಬುದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.
𝙏𝙖𝙡𝙚𝙣𝙩 𝙢𝙚𝙚𝙩𝙨 𝙤𝙥𝙥𝙤𝙧𝙩𝙪𝙣𝙞𝙩𝙮 𝙞𝙣𝙙𝙚𝙚𝙙 🤗
13-year old Vaibhav Suryavanshi becomes the youngest player ever to be sold at the #TATAIPLAuction 👏 🔝
Congratulations to the young𝙨𝙩𝙖𝙧, now joins Rajasthan Royals 🥳#TATAIPL | @rajasthanroyals | #RR pic.twitter.com/DT4v8AHWJT
— IndianPremierLeague (@IPL) November 25, 2024
ಕೇವಲ 13 ವಯಸ್ಸಿನ ವೈಭವ್ರನ್ನು ಇಷ್ಟು ದೊಡ್ಡ ಮೊತ್ತಕ್ಕೆ ಖರೀದಿಸಲು ಕಾರಣವೂ ಇದೆ. ಇಷ್ಟು ಚಿಕ್ಕ ವಯಸ್ಸಿನಲ್ಲೇ ವೈಭವ್ ಭಾರತದ ಕ್ರಿಕೆಟ್‌ನಲ್ಲಿ ಸಖತ್ ಸದ್ದು ಮಾಡುತ್ತಿದ್ದಾರೆ| ಈ ವಯಸ್ಸಿಗೆ ಅವರು ರಣಜಿ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದಾರೆ. ಅಲ್ಲದೆ ಹೇಮಂತ್ ಟ್ರೋಫಿ, ಕೂಚ್ ಬೆಹಾರ್ ಟ್ರೋಫಿ ಮತ್ತು ವಿನೂ ಮಂಕಡ್ ಟ್ರೋಫಿಗಳನ್ನು ಆಡಿದ್ದಾರೆ. ಇತ್ತೀಚೆಗೆ ಭಾರತದ ಅಂಡರ್-19 ತಂಡಕ್ಕೂ ಆಯ್ಕೆಯಾಗಿದ್ದರು. ವೈಭವ್ ಸೂರ್ಯವಂಶಿ ಅವರು ವಿವಿಧ ಟೂರ್ನಿಗಳು ಸೇರಿದಂತೆ ಒಂದು ವರ್ಷದಲ್ಲಿ ಒಟ್ಟು 49 ಶತಕಗಳನ್ನು ಗಳಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಅವರು ಕೇವಲ 12 ವರ್ಷ ಮತ್ತು 284 ದಿನಗಳಲ್ಲಿ ತಮ್ಮ ಮೊದಲ ಪ್ರಥಮ ದರ್ಜೆ ಪಂದ್ಯವನ್ನು ಆಡಿದ್ದಾರೆ. ಇದಲ್ಲದೇ ರಣಧೀರ್ ವರ್ಮಾ ಅಂಡರ್-19 ಏಕದಿನ ಪಂದ್ಯಾವಳಿಯಲ್ಲೂ ವೈಭವ್ ತ್ರಿಶತಕ ಬಾರಿಸಿದ್ದರು.
ಸೂರ್ಯವಂಶಿ ಈ ವರ್ಷದ ಜನವರಿಯಲ್ಲಿ ಬಿಹಾರ ಪರ ರಣಜಿಗೆ ಪದಾರ್ಪಣೆ ಮಾಡಿ ಉತ್ತಮ ಪ್ರದರ್ಶನ ನೀಡಿದ್ದರು. ಆ ನಂತರ ವೈಭವ್ ಅವರನ್ನು ಆಸ್ಟ್ರೇಲಿಯಾ ಪ್ರವಾಸಕ್ಕಾಗಿ ಭಾರತ ಎ ತಂಡದಲ್ಲಿ ಆಯ್ಕೆ ಮಾಡಲಾಯಿತು. ಆಸ್ಟ್ರೇಲಿಯಾ ಎ ವಿರುದ್ಧವೂ ವೈಭವ್ ಅದ್ಭುತ ಪ್ರದರ್ಶನ ನೀಡಿ ಶತಕ ಸಿಡಿಸಿದ್ದರು. ವೈಭವ್ ಕೇವಲ 58 ಎಸೆತಗಳಲ್ಲಿ ಈ ಶತಕ ದಾಖಲಿಸಿದ್ದರು. ಅವರ ಇನ್ನಿಂಗ್ಸ್‌ನಲ್ಲಿ 14 ಬೌಂಡರಿ ಮತ್ತು 4 ಸಿಕ್ಸರ್‌ಗಳು ಸೇರಿದ್ದವು. ಸೂರ್ಯವಂಶಿ ತಮ್ಮ ವೃತ್ತಿ ಜೀವನದಲ್ಲಿ ಇದುವರೆಗೆ 5 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದು, ಅದರಲ್ಲಿ ಆಡಿರುವ 10 ಇನ್ನಿಂಗ್ಸ್‌ಗಳಲ್ಲಿ 100 ರನ್ ಗಳಿಸಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:43 pm, Mon, 25 November 24