IND vs ENG: ಸತತ 2ನೇ ಪಂದ್ಯದಲ್ಲೂ ಅರ್ಧಶತಕದಂಚಿನಲ್ಲಿ ಎಡವಿದ ವೈಭವ್ ಸೂರ್ಯವಂಶಿ

Vaibhav Suryavanshi: ಭಾರತದ ಅಂಡರ್-19 ತಂಡದ ವೈಭವ್ ಸೂರ್ಯವಂಶಿ ಅವರು ಇಂಗ್ಲೆಂಡ್ ಪ್ರವಾಸದಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸುತ್ತಿದ್ದಾರೆ. ಎರಡು ಪಂದ್ಯಗಳಲ್ಲಿ 48 ಮತ್ತು 45 ರನ್ ಗಳಿಸಿದ್ದಾರೆ. ಅರ್ಧಶತಕದಿಂದ ಕೇವಲ ಕೆಲವು ರನ್‌ಗಳಿಂದ ತಪ್ಪಿಸಿಕೊಂಡಿದ್ದಾರೆ. ಆದರೂ ಅವರ ಆಕ್ರಮಣಕಾರಿ ಆಟ ಭಾರತಕ್ಕೆ ಉತ್ತಮ ಆರಂಭವನ್ನು ಒದಗಿಸಿದೆ.

IND vs ENG: ಸತತ 2ನೇ ಪಂದ್ಯದಲ್ಲೂ ಅರ್ಧಶತಕದಂಚಿನಲ್ಲಿ ಎಡವಿದ ವೈಭವ್ ಸೂರ್ಯವಂಶಿ
Vaibhav Suryavanshi

Updated on: Jun 30, 2025 | 6:19 PM

ಭಾರತದ ಅಂಡರ್-19 ಕ್ರಿಕೆಟ್ ತಂಡವು (India U19 cricket team) ಪ್ರಸ್ತುತ ಇಂಗ್ಲೆಂಡ್ ಪ್ರವಾಸದಲ್ಲಿದ್ದು, ಆತಿಥೇಯ ಇಂಗ್ಲೆಂಡ್ ಅಂಡರ್-19 ತಂಡದ ವಿರುದ್ಧ ಐದು ಪಂದ್ಯಗಳ ಯೂತ್ ಏಕದಿನ ಸರಣಿಯನ್ನು ಆಡುತ್ತಿದೆ. ಈ ಸರಣಿಯ ಮೊದಲ ಪಂದ್ಯವನ್ನು ಭಾರತ ಯುವ ಪಡೆ ಸುಲಭವಾಗಿ ಗೆದ್ದುಕೊಂಡಿತು. ತಂಡದ ಈ ಗೆಲುವಿನಲ್ಲಿ 14 ವರ್ಷದ ಬ್ಯಾಟ್ಸ್‌ಮನ್ ವೈಭವ್ ಸೂರ್ಯವಂಶಿ (Vaibhav Suryavanshi) ಅವರ ಪ್ರದರ್ಶನ ಪ್ರಮುಖ ಪಾತ್ರವಹಿಸಿತ್ತು. ಆದಾಗ್ಯೂ ವೈಭವ್ ತಮ್ಮ ಮೊದಲ ಪಂದ್ಯದಲ್ಲಿ ಕೇವಲ 2 ರನ್​ಗಳಿಂದ ಅರ್ಧಶತಕದಿಂದ ವಂಚಿತರಾಗಿದ್ದರು. ಇದೀಗ ಉಭಯ ತಂಡಗಳ ನಡುವೆ ಎರಡನೇ ಪಂದ್ಯ ನಡೆಯುತ್ತಿದ್ದು, ಈ ಪಂದ್ಯದಲ್ಲೂ ಸ್ಫೋಟಕ ಬ್ಯಾಟಿಂಗ್‌ ಮಾಡಿದ ವೈಭವ್ ಮತ್ತೊಮ್ಮೆ ಅರ್ಧಶತಕ ಬಾರಿಸುವಲ್ಲಿ ಎಡವಿದ್ದಾರೆ.

ಸತತ 2ನೇ ಪಂದ್ಯದಲ್ಲಿ ಎಡವಿದ ವೈಭವ್

ಸರಣಿಯ ಎರಡನೇ ಏಕದಿನ ಪಂದ್ಯದಲ್ಲಿ ವೈಭವ್ ಮತ್ತೊಮ್ಮೆ ತಮ್ಮ ಪ್ರತಿಭೆಯನ್ನು ಸಾಬೀತುಪಡಿಸಿದರು. ತಮ್ಮ ಇನ್ನಿಂಗ್ಸ್​ನಲ್ಲಿ 34 ಎಸೆತಗಳನ್ನು ಎದುರಿಸಿದ ವೈಭವ್ 132.35 ಸ್ಟ್ರೈಕ್ ರೇಟ್‌ನಲ್ಲಿ 45 ರನ್ ಗಳಿಸಿದರು, ಇದರಲ್ಲಿ 5 ಬೌಂಡರಿಗಳು ಮತ್ತು 3 ಸಿಕ್ಸರ್‌ಗಳು ಸೇರಿದ್ದವು. ಅವರ ಈ ಸ್ಫೋಟಕ ಇನ್ನಿಂಗ್ಸ್ ಭಾರತಕ್ಕೆ ವೇಗದ ಆರಂಭ ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿತು. ಆದರೆ ಅರ್ಧಶತಕಕ್ಕೆ ಕೇವಲ 5 ರನ್‌ಗಳಿರುವಾಗ ಸಿಕ್ಸರ್ ಬಾರಿಸುವ ಯತ್ನದಲ್ಲಿ ವಿಕೆಟ್ ಕೈಚೆಲ್ಲಿದರು. ಮೇಲೆ ಹೇಳಿದಂತೆ ವೈಭವ್ ಅರ್ಧಶತಕದಂಚಿನಲ್ಲಿ ಎಡವುತ್ತಿರುವುದು ಇದೇ ಮೊದಲಲ್ಲ. ಮೊದಲ ಏಕದಿನ ಪಂದ್ಯದಲ್ಲಿಯೂ ಸಹ, ಅವರು 19 ಎಸೆತಗಳಲ್ಲಿ 5 ಸಿಕ್ಸರ್‌ಗಳು ಮತ್ತು 3 ಬೌಂಡರಿಗಳನ್ನು ಒಳಗೊಂಡ 48 ರನ್‌ಗಳ ಬಿರುಗಾಳಿಯ ಇನ್ನಿಂಗ್ಸ್ ಆಡಿ ಔಟಾಗಿದ್ದರು.

ಇಂಗ್ಲೆಂಡ್ ಪ್ರವಾಸದಲ್ಲಿ ವೈಭವ್ ಅವರ ಬ್ಯಾಟಿಂಗ್ ಭಾರತ ತಂಡಕ್ಕೆ ಉತ್ತಮ ಆರಂಭ ನೀಡಿದೆ. ಮೊದಲ ಏಕದಿನ ಪಂದ್ಯದಲ್ಲಿ ಭಾರತ ಇಂಗ್ಲೆಂಡ್ ತಂಡವನ್ನು 6 ವಿಕೆಟ್‌ಗಳಿಂದ ಸೋಲಿಸಿ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತು. ಆ ಪಂದ್ಯದಲ್ಲಿ, ವೈಭವ್ ಮತ್ತು ನಾಯಕ ಆಯುಷ್ ಮಾತ್ರೆ 7.3 ಓವರ್‌ಗಳಲ್ಲಿ 71 ರನ್‌ಗಳ ಪಾಲುದಾರಿಕೆ ಹಂಚಿಕೊಂಡಿದ್ದರು. ಇದು ಭಾರತದ ಗೆಲುವನ್ನು ಸುಲಭಗೊಳಿಸಿತು. ಎರಡನೇ ಪಂದ್ಯದಲ್ಲೂ ಅವರ ಆಕ್ರಮಣಕಾರಿ ಬ್ಯಾಟಿಂಗ್ ಭಾರತೀಯ ಇನ್ನಿಂಗ್ಸ್‌ಗೆ ವೇಗವನ್ನು ನೀಡಿತು, ಈ ಪಂದ್ಯದಲ್ಲಿ ತಂಡವು ಮೊದಲ ಎಸೆತದಲ್ಲೇ ವಿಕೆಟ್ ಕಳೆದುಕೊಂಡಿತು. ಆದರೆ ಇದರ ನಂತರ ವೈಭವ್ ತಂಡದ ಇನ್ನಿಂಗ್ಸ್ ನಿಭಾಯಿಸಿ, ರನ್ ಗಳಿಸಿದರು.

IND vs ENG: ವೈಭವ್- ಕನಿಷ್ಕ್ ಆರ್ಭಟಕ್ಕೆ ತತ್ತರಿಸಿದ ಯುವ ಆಂಗ್ಲ ತಂಡ

ಐಪಿಎಲ್​ನಲ್ಲಿ ಅಬ್ಬರಸಿದ್ದ ವೈಭವ್

ಬಿಹಾರದ ಸಮಷ್ಟಿಪುರ ಜಿಲ್ಲೆಯ ತಾಜ್‌ಪುರ ಗ್ರಾಮದವರಾದ ವೈಭವ್ ಸೂರ್ಯವಂಶಿ ಇತ್ತೀಚೆಗೆ ನಡೆದ ಐಪಿಎಲ್ 2025 ರಲ್ಲಿ ರಾಜಸ್ಥಾನ ರಾಯಲ್ಸ್ ಪರ ಆಡುವಾಗ ಸಾಕಷ್ಟು ಸುದ್ದಿ ಮಾಡಿದ್ದರು. 14 ನೇ ವಯಸ್ಸಿನಲ್ಲಿ, ಪುರುಷರ ಟಿ20 ಕ್ರಿಕೆಟ್‌ನಲ್ಲಿ ಶತಕ ಬಾರಿಸಿದ ಅತ್ಯಂತ ಕಿರಿಯ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದರು. ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ಅವರು 38 ಎಸೆತಗಳಲ್ಲಿ 101 ರನ್ ಬಾರಿಸಿದ್ದರು. ಇದರಲ್ಲಿ 11 ಸಿಕ್ಸರ್‌ಗಳು ಮತ್ತು 7 ಬೌಂಡರಿಗಳು ಸೇರಿದ್ದವು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ