AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs ENG: ವೈಭವ್- ಕನಿಷ್ಕ್ ಆರ್ಭಟಕ್ಕೆ ತತ್ತರಿಸಿದ ಯುವ ಆಂಗ್ಲ ತಂಡ

India U19 Wins 1st ODI Against England: ಭಾರತದ ಅಂಡರ್-19 ಕ್ರಿಕೆಟ್ ತಂಡ ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ 6 ವಿಕೆಟ್‌ಗಳಿಂದ ಸುಲಭ ಗೆಲುವು ಸಾಧಿಸಿದೆ. ವೈಭವ್ ಸೂರ್ಯವಂಶಿ ಅವರ 48 ರನ್‌ಗಳ ಸ್ಫೋಟಕ ಇನ್ನಿಂಗ್ಸ್ ಮತ್ತು ಕನಿಷ್ಕ್ ಚೌಹಾಣ್ ಅವರ 3 ವಿಕೆಟ್‌ಗಳ ಅದ್ಭುತ ಬೌಲಿಂಗ್ ಭಾರತದ ಗೆಲುವಿಗೆ ಕಾರಣವಾಯಿತು. ಇಂಗ್ಲೆಂಡ್ ಕೇವಲ 175 ರನ್‌ಗಳಿಗೆ ಆಲೌಟ್ ಆಯಿತು. ಈ ಗೆಲುವಿನೊಂದಿಗೆ ಭಾರತ ಏಕದಿನ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

IND vs ENG: ವೈಭವ್- ಕನಿಷ್ಕ್ ಆರ್ಭಟಕ್ಕೆ ತತ್ತರಿಸಿದ ಯುವ ಆಂಗ್ಲ ತಂಡ
Ind Vs Eng
ಪೃಥ್ವಿಶಂಕರ
|

Updated on: Jun 27, 2025 | 10:41 PM

Share

ಶುಭ್​ಮನ್ ಗಿಲ್ ನಾಯಕತ್ವದಲ್ಲಿ ಟೀಂ ಇಂಡಿಯಾ ಇಂಗ್ಲೆಂಡ್ ಪ್ರವಾಸವನ್ನು ಗೆಲುವಿನೊಂದಿಗೆ ಆರಂಭಿಸುವಲ್ಲಿ ಎಡವಿದೆ. ಲೀಡ್ಸ್‌ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ, ನಾಯಕ ಗಿಲ್ ಮತ್ತು ಉಪನಾಯಕ ರಿಷಭ್ ಪಂತ್ ಸೇರಿದಂತೆ ಬ್ಯಾಟ್ಸ್‌ಮನ್‌ಗಳ ಬಲವಾದ ಪ್ರದರ್ಶನದ ಹೊರತಾಗಿಯೂ, ಭಾರತ ಸೋಲನ್ನು ಎದುರಿಸಬೇಕಾಯಿತು. ಆದರೆ ಹಿರಿಯರ ತಂಡದ ಆರಂಭ ನಿರಾಶಾದಾಯಕವಾಗಿದ್ದರೂ, ಜೂನಿಯರ್ ತಂಡವು ತನ್ನ ಖಾತೆಯನ್ನು ಗೆಲುವಿನೊಂದಿಗೆ ಆರಂಭಿಸಿದೆ. ಯುವ ಬ್ಯಾಟ್ಸ್‌ಮನ್ ವೈಭವ್ ಸೂರ್ಯವಂಶಿ (Vaibhav Suryavanshi) ಅವರ ಸ್ಫೋಟಕ ಇನ್ನಿಂಗ್ಸ್ ಮತ್ತು ಸ್ಪಿನ್ನರ್ ಕನಿಷ್ಕ್ ಚೌಹಾಣ್ (Kanishk Chouhan) ಅವರ ಮಾರಕ ಬೌಲಿಂಗ್‌ನ ಬಲದಿಂದ, ಭಾರತ ಅಂಡರ್ -19 ತಂಡವು ಮೊದಲ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ಅಂಡರ್ -19 ತಂಡವನ್ನು 6 ವಿಕೆಟ್‌ಗಳಿಂದ ಸೋಲಿಸಿತು.

ಯುವ ಏಕದಿನ ಸರಣಿಯ ಮೊದಲ ಪಂದ್ಯವು ಭಾರತ ಮತ್ತು ಇಂಗ್ಲೆಂಡ್‌ನ 19 ವರ್ಷದೊಳಗಿನವರ ತಂಡಗಳ ನಡುವೆ ಜೂನ್ 27, ಶುಕ್ರವಾರದಂದು ಇಂಗ್ಲೆಂಡ್‌ನ ಹೋವ್‌ನಲ್ಲಿರುವ ಸಸೆಕ್ಸ್ ಕೌಂಟಿ ಕ್ರಿಕೆಟ್ ಕ್ಲಬ್ ಮೈದಾನದಲ್ಲಿ ನಡೆಯಿತು. ಈ ಸರಣಿಯಲ್ಲಿ ಒಟ್ಟು 5 ಪಂದ್ಯಗಳು ನಡೆಯಲಿದ್ದು, ಮೊದಲ ಪಂದ್ಯದಲ್ಲಿಯೇ ಭಾರತ ತಂಡ ಗೆಲುವಿನೊಂದಿಗೆ 1-0 ಮುನ್ನಡೆ ಸಾಧಿಸಿದೆ.

175 ರನ್​ಗಳಿಗೆ ಆಲೌಟ್

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಆತಿಥೇಯ ಇಂಗ್ಲೆಂಡ್ ತಂಡವು ಪೂರ್ಣ 50 ಓವರ್‌ಗಳನ್ನು ಸಹ ಆಡಲು ಸಾಧ್ಯವಾಗದೆ ಕೇವಲ 175 ರನ್​ಗಳಿಗೆ ಆಲೌಟ್ ಆಯಿತು. ಆತಿಥೇಯ ತಂಡದ ಪರ, ಇಂಗ್ಲೆಂಡ್​ನ ಲೆಜೆಂಡರಿ ಆಲ್‌ರೌಂಡರ್ ಆಂಡ್ರ್ಯೂ ಫ್ಲಿಂಟಾಫ್ ಅವರ ಪುತ್ರ ರಾಕಿ ಫ್ಲಿಂಟಾಫ್ ಅತ್ಯಧಿಕ 56 ರನ್​ಗಳ ಇನ್ನಿಂಗ್ಸ್ ಆಡಿದರು. ಅವರನ್ನು ಹೊರತುಪಡಿಸಿ, ಆರಂಭಿಕ ಆಟಗಾರ ಐಸಾಕ್ ಮೊಹಮ್ಮದ್ ಕೇವಲ 28 ಎಸೆತಗಳಲ್ಲಿ 42 ರನ್ ಗಳಿಸಿದರು. ಇತ್ತ ಟೀಂ ಇಂಡಿಯಾ ಪರ ಮಾರಕ ದಾಳಿ ನಡೆಸಿದ ಕನಿಷ್ಕ್ ಚೌಹಾಣ್ 10 ಓವರ್‌ ಬೌಲ್ ಮಾಡಿ ಕೇವಲ 20 ರನ್‌ಗಳನ್ನು ಬಿಟ್ಟುಕೊಟ್ಟು 3 ವಿಕೆಟ್ ಪಡೆದರು. ಕನಿಷ್ಕ್ ಹೊರತುಪಡಿಸಿ, ಮೊಹಮ್ಮದ್ ಅನ್ನನ್, ಆರ್‌ಎಸ್ ಅಂಬ್ರಿಶ್ ಮತ್ತು ಹೆನಿಲ್ ಪಟೇಲ್ ಕೂಡ ಪರಿಣಾಮಕಾರಿಯಾಗಿ ಬೌಲಿಂಗ್ ಮಾಡಿ ಮೂವರು ಬೌಲರ್‌ಗಳು ತಲಾ 2 ವಿಕೆಟ್‌ಗಳನ್ನು ಪಡೆದರು.

ವೈಭವ್ ಸಿಡಿಲಬ್ಬರದ ಬ್ಯಾಟಿಂಗ್

ಈ ಗುರಿ ಬೆನ್ನಟ್ಟಿದ ಭಾರತದ ಪರ ಆರಂಭಿಕರಾಗಿ ಕಣಕ್ಕಿಳಿದಿದ್ದ ವೈಭವ್ ಸೂರ್ಯವಂಶಿ ಮತ್ತು ಆಯುಷ್ ಮ್ಹಾತ್ರೆ ಪವರ್ ಪ್ಲೇ ಮುಗಿಯುವುದಕ್ಕೂ ಮುನ್ನವೇ ತಂಡದ ಗೆಲುವನ್ನು ಖಚಿತಪಡಿಸಿದರು. ಅದರಲ್ಲೂ ಆರಂಭದಿಂದಲೇ ಸ್ಫೋಟಕ ಬ್ಯಾಟಿಂಗ್‌ ನಡೆಸಿದ ವೈಭವ್ ಸಿಕ್ಸರ್​ಗಳ ಸುನಾಮಿ ಎಬ್ಬಿಸಿದರು. ಆದಾಗ್ಯೂ ಅರ್ಧಶತಕದಂಚಿನಲ್ಲಿ ಎಡವಿದ ವೈಭವ್ ಕೇವಲ 19 ಎಸೆತಗಳಲ್ಲಿ 48 ರನ್ ಗಳಿಸಿ ಔಟಾದರು. ಈ ಇನ್ನಿಂಗ್ಸ್‌ನಲ್ಲಿ, ಅವರು 5 ಸಿಕ್ಸರ್‌ ಮತ್ತು 3 ಬೌಂಡರಿಗಳನ್ನು ಬಾರಿಸಿದರು. ಅಂದರೆ ಅವರು ಸಿಕ್ಸರ್‌ಗಳು ಮತ್ತು ಬೌಂಡರಿಗಳಿಂದಲೇ 42 ರನ್ ಗಳಿಸಿದರು.

5 ಸಿಕ್ಸರ್, 3 ಬೌಂಡರಿ.. ಇಂಗ್ಲೆಂಡ್‌ ವಿರುದ್ಧ ರನ್​ಗಳ ಮಳೆಗರೆದ ವೈಭವ್ ಸೂರ್ಯವಂಶಿ

ಭಾರತಕ್ಕೆ 6 ವಿಕೆಟ್ ಜಯ

ವೈಭವ್ ಅರ್ಧಶತಕ ಪೂರೈಸಲು ಸಾಧ್ಯವಾಗದಿದ್ದರೂ, ಅವರ ಆಕ್ರಮಣಕಾರಿ ಶೈಲಿಯಿಂದಾಗಿ ಭಾರತ ತಂಡ ಕೇವಲ 8 ನೇ ಓವರ್‌ನಲ್ಲಿ 71 ರನ್ ಗಳಿಸಿತ್ತು. ನಾಯಕ ಮ್ಹಾತ್ರೆ ಈ ಬಾರಿ ಯಾವುದೇ ಪರಿಣಾಮ ಬೀರಲು ಸಾಧ್ಯವಾಗಲಿಲ್ಲ. ಇವರ ಜೊತೆಗೆ ಇತರ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಸಹ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಲಿಲ್ಲ. ಆದರೆ ಇದರ ನಂತರ, ಉಪನಾಯಕ ಅಭಿಗ್ಯಾನ್ ಕುಂಡು ಜವಾಬ್ದಾರಿಯುತ ಬ್ಯಾಟಿಂಗ್‌ ಮಾಡಿ ಕೇವಲ 34 ಎಸೆತಗಳಲ್ಲಿ 45 ರನ್ ಬಾರಿಸಿ 24 ನೇ ಓವರ್‌ನಲ್ಲಿಯೇ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ