ದ್ವಿಶತಕ ಬಾರಿಸಿ ವಿಶ್ವ ದಾಖಲೆ ನಿರ್ಮಿಸಿದ ಫಾನ್ ಸ್ಕಾಲ್ಕ್ವೇಕ್
Jorich van Schalkwyk: ಯೂತ್ ಒಡಿಐ ಕ್ರಿಕೆಟ್ನಲ್ಲಿ ಚೊಚ್ಚಲ ದ್ವಿಶತಕ ಮೂಡಿಬಂದಿದೆ. ಈ ಡಬಲ್ ಸೆಂಚುರಿ ಬಾರಿಸಿದ್ದು ಸೌತ್ ಆಫ್ರಿಕಾದ 18 ವರ್ಷದ ಯುವ ದಾಂಡಿಗ ಜೋರಿಚ್ ಫಾನ್ ಸ್ಕಾಲ್ಕ್ವೇಕ್. ಈ ಡಬಲ್ ಸೆಂಚುರಿಯೊಂದಿಗೆ ಜೋರಿಚ್ ಶ್ರೀಲಂಕಾ ದಾಂಡಿಗನ ಹೆಸರಿನಲ್ಲಿದ್ದ ಭರ್ಜರಿ ದಾಖಲೆಯನ್ನು ಅಳಿಸಿ ಹಾಕಿದ್ದಾರೆ.

ಹರಾರೆಯಲ್ಲಿ ನಡೆದ ಯೂತ್ ಒಡಿಐ ಪಂದ್ಯದಲ್ಲಿ ಸೌತ್ ಆಫ್ರಿಕಾ ಅಂಡರ್ 19 ತಂಡದ ಆರಂಭಿಕ ದಾಂಡಿಗ ಜೋರಿಚ್ ಫಾನ್ ಸ್ಕಾಲ್ಕ್ವೇಕ್ ದ್ವಿಶತಕ ಸಿಡಿಸಿದ್ದಾರೆ. ಈ ಡಬಲ್ ಸೆಂಚುರಿಯೊಂದಿಗೆ ಅಂಡರ್-19 ಏಕದಿನ ಪಂದ್ಯದಲ್ಲಿ ದ್ವಿಶತಕ ಬಾರಿಸಿದ ವಿಶ್ವದ ಮೊದಲ ಬ್ಯಾಟರ್ ಎನಿಸಿಕೊಂಡಿದ್ದಾರೆ. ಝಿಂಬಾಬ್ವೆ ಅಂಡರ್-19 ತಂಡದ ವಿರುದ್ಧದ ಈ ಪಂದ್ಯದಲ್ಲಿ ಟಾಸ್ ಗೆದ್ದ ಸೌತ್ ಆಫ್ರಿಕಾ ತಂಡವು ಬ್ಯಾಟಿಂಗ್ ಆಯ್ದುಕೊಂಡಿದ್ದರು.
ಅದರಂತೆ ಮೊದಲು ಬ್ಯಾಟ್ ಮಾಡಿದ ಸೌತ್ ಆಫ್ರಿಕಾ ಪರ ಜೋರಿಚ್ ಫಾನ್ ಸ್ಕಾಲ್ಕ್ವೇಕ್ ಹಾಗೂ ಅದ್ನಾನ್ ಆರಂಭಿಕರಾಗಿ ಕಣಕ್ಕಿಳಿದಿದ್ದರು. ಅದ್ನಾನ್ ಕೇವಲ 3 ರನ್ಗಳಿಸಿ ಔಟಾದರೆ, ಆ ಬಳಿಕ ಬಂದ ನಾಯಕ ಮೊಹಮ್ಮದ್ ಬುಲ್ಬುಲಿಯಾ ಕೇವಲ 13 ರನ್ಗಳಿಸಿ ವಿಕೆಟ್ ಒಪ್ಪಿಸಿದರು.
ಈ ಹಂತದಲ್ಲಿ ಜೊತೆಗೂಡಿದ ಜೋರಿಚ್ ಹಾಗೂ ಜೇಸನ್ ರೌಲ್ಸ್ ಭರ್ಜರಿ ಜೊತೆಯಾಟ ಪ್ರದರ್ಶಿಸಿದರು. ಅತ್ತ ರೌಲ್ಸ್ 76 ಎಸೆತಗಳಲ್ಲಿ 76 ರನ್ ಕಲೆಹಾಕಿದರೆ, ಅತ್ತ ಜೋರಿಚ್ ಆಕರ್ಷಕ ಬ್ಯಾಟಿಂಗ್ನೊಂದಿಗೆ ಶತಕ ಪೂರೈಸಿದರು.
ಶತಕ ಬಳಿಕ ಕೂಡ ಜೋರಿಚ್ ಫಾನ್ ಸ್ಕಾಲ್ಕ್ವೇಕ್ ಆರ್ಭಟ ಮುಂದುವರೆಸಿದ್ದರು. ಈ ಮೂಲಕ ದ್ವಿಶತಕವನ್ನು ಪೂರೈಸಿದರು. ಈ ಡಬಲ್ ಸೆಂಚುರಿಯೊಂದಿಗೆ ಕಿರಿಯರ ಏಕದಿನ ಕ್ರಿಕೆಟ್ನಲ್ಲಿ ದ್ವಿಶತಕ ಬಾರಿಸಿದ ವಿಶ್ವದ ಮೊದಲ ಬ್ಯಾಟರ್ ಎಂಬ ವಿಶ್ವ ದಾಖಲೆಯನ್ನು ತಮ್ಮದಾಗಿಸಿಕೊಂಡರು.
ಅಂತಿಮವಾಗಿ 153 ಎಸೆತಗಳನ್ನು ಎದುರಿಸಿದ ಜೋರಿಚ್ ಫಾನ್ ಸ್ಕಾಲ್ಕ್ವೇಕ್ 6 ಸಿಕ್ಸ್ ಹಾಗೂ 19 ಫೋರ್ಗಳೊಂದಿಗೆ 215 ರನ್ ಕಲೆಹಾಕಿದರು. ಈ ಡಬಲ್ ಸೆಂಚುರಿ ನೆರವಿನೊಂದಿಗೆ ಸೌತ್ ಆಫ್ರಿಕಾ ಅಂಡರ್ 19 ತಂಡವು 49.5 ಓವರ್ಗಳಲ್ಲಿ 385 ರನ್ ಕಲೆಹಾಕಿತು.
386 ರನ್ಗಳ ಕಠಿಣ ಗುರಿ ಬೆನ್ನತ್ತಿದ ಝಿಂಬಾಬ್ವೆ ಅಂಡರ್-19 ತಂಡವು ಮೊದಲ ವಿಕೆಟ್ಗೆ 53 ರನ್ ಕಲೆಹಾಕಿತು. ಈ ಆ ಬಳಿಕ ದಿಢೀರ್ ಕುಸಿತಕ್ಕೊಳಗಾದ ಝಿಂಬಾಬ್ವೆ ತಂಡ 107 ರನ್ಗಳಿಸಿ ಸರ್ವಪತನ ಕಂಡಿತು. ಈ ಮೂಲಕ ಸೌತ್ ಆಫ್ರಿಕಾ ಅಂಡರ್-19 ತಂಡವು ಬರೋಬ್ಬರಿ 278 ರನ್ಗಳ ಭರ್ಜರಿ ಜಯ ಸಾಧಿಸಿದೆ.
ಇದನ್ನೂ ಓದಿ: 11 ಭರ್ಜರಿ ಸಿಕ್ಸ್, 6 ಫೋರ್: ಶರವೇಗದ ಶತಕ ಸಿಡಿಸಿ ಭರ್ಜರಿ ದಾಖಲೆ ಬರೆದ ಟಿಮ್ ಡೇವಿಡ್
ಜೋರಿಚ್ ಫಾನ್ ಸ್ಕಾಲ್ಕ್ವೇಕ್ ವಿಶ್ವ ದಾಖಲೆ:
ಜೋರಿಚ್ ಫಾನ್ ಸ್ಕಾಲ್ಕ್ವೇಕ್ ಬಾರಿಸಿದ 215 ರನ್ಗಳು ಯೂತ್ ಒಡಿಐ ಕ್ರಿಕೆಟ್ನಲ್ಲಿ ಮೂಡಿಬಂದ ಗರಿಷ್ಠ ವೈಯುಕ್ತಿಕ ಸ್ಕೋರ್. ಇದಕ್ಕೂ ಮುನ್ನ ಈ ದಾಖಲೆ ಶ್ರೀಲಂಕಾದ ಹಸಿತಾ ಬೊಯಗೋಡ ಹೆಸರಿನಲ್ಲಿತ್ತು. 2018 ರಲ್ಲಿ ಕೀನ್ಯಾ ವಿರುದ್ಧ ಹಸಿತಾ ಬೊಯಗೋಡ 191 ರನ್ ಬಾರಿಸಿ ದಾಖಲೆ ನಿರ್ಮಿಸಿದ್ದರು. ಇದೀಗ ಈ ದಾಖಲೆಯನ್ನು ಅಳಿಸಿ ಹಾಕಿ ಜೋರಿಚ್ ಫಾನ್ ಸ್ಕಾಲ್ಕ್ವೇಕ್ ಹೊಸ ವಿಶ್ವ ದಾಖಲೆ ನಿರ್ಮಿಸಿದ್ದಾರೆ.
