Venkatesh Iyer: ಬರೋಬ್ಬರಿ 204 ರನ್: ಐಪಿಎಲ್ ಅಭ್ಯಾಸ ಪಂದ್ಯದಲ್ಲಿ ಕೆಕೆಆರ್ ಬ್ಯಾಟರ್​ನ ಸಿಡಿಲಬ್ಬರದ ಆಟ

IPL 2022, Kolkata Knight Riders: ಐಪಿಎಲ್ 2022ರ ಮೊದಲ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಮುಖಾಮುಖಿ ಆಗಲಿದೆ. ಇದಕ್ಕೂ ಮುನ್ನ ನಡೆದ ಅಭ್ಯಾಸ ಪಂದ್ಯದಲ್ಲಿ ಕೆಕೆಆರ್​ನ ವೆಂಕಟೇಶ್ ಅಯ್ಯರ್ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿ ಮೊದಲ ಪಂದ್ಯಕ್ಕೂ ಮುನ್ನ ಖಡಕ್ ಸಂದೇಶ ರವಾನಿಸಿದ್ದಾರೆ.

Venkatesh Iyer: ಬರೋಬ್ಬರಿ 204 ರನ್: ಐಪಿಎಲ್ ಅಭ್ಯಾಸ ಪಂದ್ಯದಲ್ಲಿ ಕೆಕೆಆರ್ ಬ್ಯಾಟರ್​ನ ಸಿಡಿಲಬ್ಬರದ ಆಟ
Venkatesh Iyer KKR IPL 2022
Follow us
TV9 Web
| Updated By: Vinay Bhat

Updated on: Mar 24, 2022 | 8:02 AM

ಇಂಡಿಯನ್ ಪ್ರೀಮಿಯರ್ ಲೀಗ್ 15ನೇ ಆವೃತ್ತಿಗೆ ಚಾಲನೆ ದೊರಕಲು ಇನ್ನೇನು ಎರಡು ದಿನಗಳಷ್ಟೆ ಬಾಕಿಯಿದೆ. ಹೀಗಿರುವಾಗ ಎಲ್ಲ ತಂಡಗಳು ಭರ್ಜರಿ ಅಭ್ಯಾಸ ನಡೆಸುತ್ತಿದೆ. ಶನಿವಾರದಂದು ಶುರುವಾಗಲಿರುವ ಐಪಿಎಲ್ 2022ರ (IPL 2022) ಮೊದಲ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ (CSK vs KKR) ಮುಖಾಮುಖಿ ಆಗಲಿದ್ದು ಮುಂಬೈನ ವಾಂಖೆಡೆ ಕ್ರೀಡಾಂಗಣ ಈ ರೋಚಕ ಕದನಕ್ಕೆ ಸಾಕ್ಷಿಯಾಗಲಿದೆ. ಈ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ನಾಯಕತ್ವದ ಕೆಕೆಆರ್ ತಂಡ ಪ್ರಮುಖ ಸ್ಟಾರ್ ಆಟಗಾರರ ಅನುಪಸ್ಥಿತಿಯಲ್ಲಿ ಕಣಕ್ಕಿಳಿಯಲಿದೆ. ಆದರೆ, ಅನುಭವಿ ಆಟಗಾರರ ಅನುಪಸ್ಥಿತಿ ಕಾಡದಂತೆ ಯುವ ಬ್ಯಾಟರ್​​ಗಳು ಅಭ್ಯಾಸ ಪಂದ್ಯದಲ್ಲೇ ಅಬ್ಬರಿಸಿದ್ದಾರೆ. ಹೌದು, ತನ್ನದೇ ತಂಡವನ್ನು ಎರಡು ಭಾಗವನ್ನಾಗಿಸಿ ಅಭ್ಯಾಸ ಪಂದ್ಯವನ್ನು ನಡೆಸಿದ ಕೋಲ್ಕತ್ತಾ ಮೈದಾನದಲ್ಲಿ ಬೆವರಿಳಿಸಿದೆ. ಇದರಲ್ಲಿ ಆಲ್ರೌಂಡರ್ ವೆಂಕಟೇಶ್ ಅಯ್ಯರ್ (Venkatesh Iyer) ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿ ಮೊದಲ ಪಂದ್ಯಕ್ಕೂ ಮುನ್ನ ಎದುರಾಳಿಗೆ ಖಡಕ್ ಸಂದೇಶ ರವಾನಿಸಿದ್ದಾರೆ.

ಕೋಲ್ಕತ್ತಾ ತಂಡವು ತನ್ನ ಇಂಟ್ರಾ ಸ್ಕ್ವಾಡ್ ತರಬೇತಿ ಪಂದ್ಯವನ್ನು ಬುಧವಾರ ಆಯೋಜಿಸಿತ್ತು. ಇದರಲ್ಲಿ ಟೀಮ್‌ ಗೋಲ್ಡ್‌ ಪರ ಬ್ಯಾಟ್ ಬೀಸಿದ ತಮಿಳುನಾಡಿನ ಆಟಗಾರ ವೆಂಕಟೇಶ್ ಅಯ್ಯರ್ ತಮ್ಮ ವೈಯಕ್ತಿಕ ಆಟದಿಂದ ಗಮನ ಸೆಳೆದಿದ್ದಾರೆ. ಕೇವಲ 47 ಎಸೆತಗಳನ್ನು ಎದುರಿಸಿದ ಅವರು ಮನಮೋಹಕ ಸಿಕ್ಸರ್​​ಗಳನ್ನು ಸಿಡಿಸಿ 87 ರನ್ ಗಳಿಸಿ ಅಜೇಯರಾಗುಳಿದರು. ಇವರ ಸ್ಫೋಟಕ ಆಟದ ನೆರವಿನಿಂದ ಟೀಮ್ ಗೋಲ್ಡ್ ತಂಡ 20 ಓವರ್​ಗಳಲ್ಲಿ 6 ವಿಕೆಟ್ ಕಳೆದುಕೊಂಡು ಬರೋಬ್ಬರಿ 204 ರನ್‌ಗಳ ಬೃಹತ್‌ ಮೊತ್ತ ಕಲೆಹಾಕಿತು. ಇದರ ವಿಡಿಯೋವನ್ನು ಕೆಕೆಆರ್‌ ತನ್ನ ಸಾಮಾಜಿಕ ಜಾಲತಾಣಗಳ ಖಾತೆಯಲ್ಲಿ  ಹಂಚಿಕೊಂಡಿದೆ.

ಕಳೆದ ವರ್ಷದ ಐಪಿಎಲ್ ಸೀಸನ್​ನಲ್ಲಿ ದ್ವಿತಿಯಾರ್ಧದಲ್ಲಿ ಆಡಿದ ವೆಂಕಟೇಶ್ ಅಯ್ಯರ್ ಪ್ರತಿ ಪಂದ್ಯದಲ್ಲೂ ಭಾರಿ ಪ್ರಭಾವ ಬೀರಿದರು. ಆಡಿದ ಎಲ್ಲ ಪಂದ್ಯಗಳಲ್ಲಿ ತಂಡಕ್ಕೆ ದೊಡ್ಡ ಕೊಡುಗೆ ನೀಡಿದ್ದರು. ಇದರಿಂದಾಗಿ ಭಾರತ ತಂಡದ ಪರ ನೇರವಾಗಿ ಆಡುವ ಅವಕಾಶವನ್ನು ಕೂಡ ಅಯ್ಯರ್ ಅವರಿಗೆ ಲಭಿಸಿತು. ಈ ವರ್ಷದ ಐಪಿಎಲ್ ಸರಣಿಯು ಟಿ20 ವಿಶ್ವಕಪ್ ಟೂರ್ನಿಗೆ ಆಟಗಾರರ ಆಯ್ಕೆಗೆ ಪ್ರಮುಖ ವೇದಿಕೆಯಾಗಲಿದೆ. ಈಗಾಗಲೇ ಟೀಮ್ ಇಂಡಿಯಾದಿಂದ ಹೊರಬಿದ್ದಿರುವ ಹಾರ್ದಿಕ್ ಪಾಂಡ್ಯ ಜಾಗವನ್ನು ಆಕ್ರಮಿಸಲು ಅಯ್ಯರ್​ಗೆ ಇದೊಂದು ಉತ್ತಮ ಅವಕಾಶ.

ಇನ್ನು ಈ ಅಭ್ಯಾಸ ಪಂದ್ಯದಲ್ಲಿ ವೆಂಕಟೇಶ್‌ ಅವರ ಹೋರಾಟದ ಹೊರತಾಗಿಯೂ ಟೀಮ್‌ ಗೋಲ್ಡ್‌ ತಂಡ ಸೋಲೆದುರಿಸಿತು. ಟೀಮ್‌ ಪರ್ಪಲ್‌ ತಂಡದ ಪರ ನಿತೀಶ್‌ ರಾಣಾ, ಅಭಿಜೀತ್ ತೋಮರ್‌ ಮತ್ತು ರಿಂಕು ಸಿಂಗ್‌ ಸಿಡಿಲಬ್ಬರದ ಬ್ಯಾಟಿಂಗ್‌ ನಡೆಸಿ ಭರ್ಜರಿ ಜಯ ದಕ್ಕಿಸಿಕೊಟ್ಟರು. ಅಭಿಜೀತ್‌, 26 ಎಸೆತಗಳಲ್ಲಿ 52 ರನ್‌ಗಳನ್ನು ಸಿಡಿಸಿದರೆ, ನಿತೀಶ್‌ ರಾಣಾ 29 ಎಸೆಎತಗಳಲ್ಲಿ ಅಜೇಯ 51 ರನ್‌ ಬಾರಿಸಿದರು. ಇನಿಂಗ್ಸ್‌ ಅಂತ್ಯದಲ್ಲಿ ಗರ್ಜಿಸದ ರಿಂಕು ಸಿಂಗ್‌ 22 ಎಸೆತಗಳಲ್ಲಿ 48 ರನ್‌ ಸಿಡಿಸುವ ಮೂಲಕ ಕೇವಲ 17 ಓವರ್‌ಗಳಲ್ಲಿ ಪರ್ಪಲ್‌ ತಂಡಕ್ಕೆ ಭರ್ಜರಿ ಗೆಲುವು ತಂದುಕೊಟ್ಟರು.

ಮೆಗಾ ಹರಾಜಿಗೂ ಮುನ್ನ ಕೆಕೆಆರ್ ವೆಂಕಟೇಶ್ ಅಯ್ಯರ್ ಜೊತೆಗೆ ಆಂಡ್ರೆ ರಸೆಲ್, ಸುನೀಲ್ ನರೈನ್ ಮತ್ತು ವರುಣ್ ಚಕ್ರವರ್ತಿ ಅವರನ್ನು ತನ್ನಲ್ಲೇ ಉಳಿಸಿಕೊಂಡಿತ್ತು. ಹರಾಜಿನಲ್ಲಿ ಶಿವಂ ಮಾವಿ ಮತ್ತು ನಿತೀಶ್ ರಾಣರನ್ನು ಮತ್ತೆ ಸೇರಿಸಿಕೊಂಡಿತು. ಈ ಬಾರಿಯ ಆರಂಭದ ಕೆಲ ಪಂದ್ಯಗಳಿಗೆ ಆ್ಯರೋನ್ ಫಿಂಚ್ ಇಲ್ಲದ ಕಾರಣ ವೆಂಕಟೇಶ್ ಅಯ್ಯರ್ ಆರಂಭಿಕನಾಗಿ ಕಣಕ್ಕಿಳಿಯುತ್ತಾರ ಅಥವಾ ಟೀಮ್ ಇಂಡಿಯಾದಲ್ಲಿ ಆಡುವಂತೆ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಬೀಸಲು ಬರುತ್ತಾರ ಎಂಬುದು ಕುತೂಹಲ ಕೆರಳಿಸಿದೆ.

IPL 2022: ಬದಲಿ ಆಟಗಾರನಾಗಿ ಐಪಿಎಲ್​ಗೆ ಎಂಟ್ರಿ ಕೊಟ್ಟ ಆಸ್ಟ್ರೇಲಿಯಾ ಆಟಗಾರ