ಬಾಂಗ್ಲಾದೇಶ್ ತಂಡದ ನಾಯಕ ಶಕೀಬ್ ಅಲ್ ಹಸನ್ (Shakib Al Hasan) ಮೈದಾನದಲ್ಲಿನ ತಮ್ಮ ಕೋಪತಾಪಗಳಿಂದೇ ಹಲವು ಬಾರಿ ಸುದ್ದಿಯಾಗಿದ್ದರು. ಇದೀಗ ಇದಕ್ಕೆ ಹೊಸ ಸೇರ್ಪಡೆ ಬಾಂಗ್ಲಾದೇಶ್ ಪ್ರೀಮಿಯರ್ ಲೀಗ್ನ ಅಂಪೈರ್ ಜೊತೆಗಿನ ಜಗಳ. ಬಿಪಿಎಲ್ನ ಮೂರನೇ ಪಂದ್ಯದಲ್ಲಿ ಫಾರ್ಚೂನ್ ಬಾರಿಶಾಲ್ ಹಾಗೂ ಸಿಲ್ಹೆಟ್ ಸ್ಟ್ರೈಕರ್ಸ್ ಮುಖಾಮುಖಿಯಾಗಿತ್ತು. ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಬಾರಿಶಾಲ್ ಪರ ಶಕೀಬ್ ಅಲ್ ಹಸನ್ 4ನೇ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದರು.
ಮೊದಲ ಇನಿಂಗ್ಸ್ನ 16ನೇ ಓವರ್ನಲ್ಲಿ ಸ್ಟ್ರೈಕರ್ಸ್ ವೇಗಿ ರೆಜೂರ್ ರೆಹಮಾನ್ ನಿಧಾನಗತಿಯ ಬೌನ್ಸರ್ ಎಸೆದರು. ಅತ್ತ ಬೌನ್ಸರ್ ಸ್ಟ್ರೈಕ್ನಲ್ಲಿದ್ದ ಶಕೀಬ್ ಅವರ ತಲೆಯ ಮೇಲಿಂದ ಹಾದು ಹೋಗಿತ್ತು. ಚೆಂಡು ಎತ್ತರದಿಂದ ಸಾಗಿದ್ದ ಪರಿಣಾಮ ಶಾಟ್ ಹೊಡೆಯಲು ಹಿಂಜರಿದರು. ಇದರಿಂದ ವೈಡ್ ಸಿಗಲಿದೆ ಎಂದು ಶಕೀಬ್ ಅಲ್ ಹಸನ್ ನಿರೀಕ್ಷಿಸಿದ್ದರು.
ಆದರೆ ತಲೆಯ ಮೇಲಿಂದ ಚೆಂಡು ಹೋಗಿದ್ದರೂ ಅಂಪೈರ್ ವೈಡ್ ನೀಡಲಿಲ್ಲ. ಬದಲಾಗಿ ಫಸ್ಟ್ ಬೌನ್ಸರ್ ಎಂದು ಎಚ್ಚರಿಕೆ ನೀಡಿದರು. ಇತ್ತ ವೈಡ್ ಎಂದು ಪರಿಗಣಿಸಿದ ಕಾರಣ ಶಕೀಬ್ ಕೋಪಗೊಂಡರು. ಅಂಪೈರ್ ತೀರ್ಮಾನದ ವಿರುದ್ಧ ಮೈದಾನದಲ್ಲೇ ಕಿರುಚಾಡುತ್ತಾ ಆಕ್ರೋಶ ಹೊರಹಾಕಿದರು. ಅಲ್ಲದೆ ಅಂಪೈರ್ ಜೊತೆ ವಾಗ್ವಾದಕ್ಕಿಳಿದರು. ಇದೀಗ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಕೆಲವರು ಅಂಪೈರ್ ನಿರ್ಧಾರದ ಬಗ್ಗೆ ಅಪಸ್ವರ ಎತ್ತಿದರೆ, ಮತ್ತೆ ಕೆಲವರು ಶಕೀಬ್ ಅಲ್ ಹಸನ್ ವರ್ತನೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
What happened to Shakib Al Hasan here? Why is this being compared to Virat Kohli? #BPL2023 pic.twitter.com/k3kJKDaw8l
— Farid Khan (@_FaridKhan) January 7, 2023
ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಫಾರ್ಚೂನ್ ಬಾರಿಶಾಲ್ ತಂಡವು ಶಕೀಬ್ ಅಲ್ ಹಸನ್ (67 ರನ್, 32 ಎಸೆತ) ಅವರ ಅರ್ಧಶತಕದ ನೆರವಿನಿಂದ 7 ವಿಕೆಟ್ ನಷ್ಟಕ್ಕೆ 194 ರನ್ ಕಲೆಹಾಕಿತು. ಈ ಕಠಿಣ ಗುರಿ ಬೆನ್ನತ್ತಿದ ಸಿಲ್ಹೆಟ್ ಸ್ಟ್ರೈಕರ್ಸ್ ತಂಡವು 19 ಓವರ್ಗಳಲ್ಲಿ 196 ರನ್ ಬಾರಿಸಿ 6 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ.
ವಿಕೆಟ್ ಕಿತ್ತೆಸೆದಿದ್ದ ಶಕೀಬ್:
ಈ ಹಿಂದೆ ಢಾಕಾ ಪ್ರೀಮಿಯರ್ ಲೀಗ್ನಲ್ಲಿ ಅಂಪೈರ್ ತೀರ್ಪಿನ ವಿರುದ್ಧ ಶಕೀಬ್ ಅಲ್ ಹಸನ್ ಮೈದಾನದಲ್ಲೇ ಆಕ್ರೋಶ ಹೊರಹಾಕಿದ್ದರು. ಅದರಲ್ಲೂ ವಿಕೆಟ್ಗಳನ್ನು ಕಿತ್ತೆಸೆಯುವ ಮೂಲಕ ಅಂಪೈರ್ಗೆ ಭಯ ಹುಟ್ಟಿಸಿದ್ದರು. ಈ ಅನುವಚಿತ ವರ್ತನೆ ಶಕೀಬ್ ಅವರನ್ನು 4 ಪಂದ್ಯಗಳಿಂದ ನಿಷೇಧಿಸಲಾಗಿತ್ತು.
ಇದೀಗ ಬಾಂಗ್ಲಾದೇಶ್ ಪ್ರೀಮಿಯರ್ ಲೀಗ್ನಲ್ಲೂ ಅಂಪೈರ್ ಜೊತೆ ಜಗಳಕ್ಕಿಳಿಯುವ ಮೂಲಕ ಶಕೀಬ್ ಸಖತ್ ಸುದ್ದಿಯಾಗಿದ್ದಾರೆ.