Vijay Hazare Trophy 2022: ರುತುರಾಜ್ ಶತಕ ವ್ಯರ್ಥ; ವಿಜಯ್ ಹಜಾರೆ ಟ್ರೋಫಿ ಗೆದ್ದ ಸೌರಾಷ್ಟ್ರ ತಂಡ..!
Vijay Hazare Trophy 2022 Final: ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ವಿಜಯ್ ಹಜಾರೆ ಟ್ರೋಫಿಯ ಫೈನಲ್‌ನಲ್ಲಿ ಸೌರಾಷ್ಟ್ರ ತನ್ನ ನೆರೆಯ ಮಹಾರಾಷ್ಟ್ರವನ್ನು 5 ವಿಕೆಟ್‌ಗಳಿಂದ ಸೋಲಿಸುವುದರೊಂದಿಗೆ ಎರಡನೇ ಬಾರಿಗೆ ಏಕದಿನ ಕ್ರಿಕೆಟ್‌ನಲ್ಲಿ ಭಾರತದ ಅಗ್ರ ಪಂದ್ಯಾವಳಿಯ ಪ್ರಶಸ್ತಿಯನ್ನು ಗೆದ್ದುಕೊಂಡಿತು.
ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ (Narendra Modi Stadium) ನಡೆದ ವಿಜಯ್ ಹಜಾರೆ ಟ್ರೋಫಿಯ (Vijay Hazare Trophy) ಫೈನಲ್‌ನಲ್ಲಿ ಸೌರಾಷ್ಟ್ರ ತನ್ನ ನೆರೆಯ ಮಹಾರಾಷ್ಟ್ರವನ್ನು 5 ವಿಕೆಟ್‌ಗಳಿಂದ ಸೋಲಿಸುವುದರೊಂದಿಗೆ ಎರಡನೇ ಬಾರಿಗೆ ಏಕದಿನ ಕ್ರಿಕೆಟ್‌ನಲ್ಲಿ ಭಾರತದ ಅಗ್ರ ಪಂದ್ಯಾವಳಿಯ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಸೌರಾಷ್ಟ್ರ ಪರ ಶೆಲ್ಡನ್ ಜಾಕ್ಸನ್ ಅತ್ಯುತ್ತಮ ಶತಕ ಗಳಿಸಿ ಸತತ ಸಿಕ್ಸರ್ ಮತ್ತು ಬೌಂಡರಿಗಳನ್ನು ಬಾರಿಸುವ ಮೂಲಕ ತಂಡವನ್ನು ಚಾಂಪಿಯನ್ ಮಾಡಿದರು. ಇದಕ್ಕೂ ಮುನ್ನ ಟಾಸ್ ಸೋತು ಬ್ಯಾಟಿಂಗ್ ಮಾಡಿದ್ದ ಮಹಾರಾಷ್ಟ್ರ, ನಾಯಕ ರುತುರಾಜ್ ಗಾಯಕ್ವಾಡ್ (Ruturaj Gaikwad) ಅವರ ಶತಕದ ನೆರವಿನಿಂದ ನಿಗದಿತ 50 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 248 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ಸೌರಾಷ್ಟ್ರ ತಂಡ ಶೆಲ್ಡನ್ ಜಾಕ್ಸನ್ (Sheldon Jackson) ಅವರ ಅಜೇಯ ಶತಕದಾಟದ ನೆರವಿನಿಂದ ಇನ್ನು 3 ಎಸೆತಗಳು ಬಾಕಿ ಇರುವಂತೆಯೇ 5 ವಿಕೆಟ್ ಕಳೆದುಕೊಂಡು ಗುರಿ ತಲುಪಿತು.
ಈ ಫೈನಲ್ ಪಂದ್ಯದಲ್ಲಿ ಆಲ್‌ರೌಂಡರ್ ಪ್ರದರ್ಶನ ನೀಡಿದ ಸೌರಾಷ್ಟ್ರ ತಂಡ ಬೌಲಿಂಗ್ ಹಾಗೂ ಬ್ಯಾಟಿಂಗ್ ಎರಡರಲ್ಲೂ ಅದ್ಭುತ ಪ್ರದರ್ಶನ ನೀಡಿತು. ಬ್ಯಾಟಿಂಗ್ನಲ್ಲಿ ಅನುಭವಿ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಶೆಲ್ಡನ್ ಅದ್ಭುತ ಮತ್ತು ಸ್ಮರಣೀಯ ಶತಕ ಗಳಿಸಿದರೆ, ಮೊದಲು ಬೌಲಿಂಗ್ನಲ್ಲಿ ತಂಡದ ಆಲ್‌ರೌಂಡರ್ ಚಿರಾಗ್ ಜಾನಿ ಹ್ಯಾಟ್ರಿಕ್ ವಿಕೆಟ್ ಪಡೆದು ಮಿಂಚಿದರು. ಸೌರಾಷ್ಟ್ರದ ಈ ಕರಾರುವಕ್ಕಾದ ದಾಳಿಯ ಮುಂದೆ ರುತುರಾಜ್ ಶತಕದ ಹೊರತಾಗಿಯೂ ಮಹಾರಾಷ್ಟ್ರ ತಂಡ 248 ರನ್ ಗಳಿಸಲಷ್ಟೇ ಶಕ್ತವಾಯಿತು.
ಉತ್ತಮ ಆರಂಭ ಪಡೆದ ಸೌರಾಷ್ಟ್ರ
ಮಹಾರಾಷ್ಟ್ರ ನೀಡಿದ ಗುರಿ ಬೆನ್ನಟ್ಟಿದ ಸೌರಾಷ್ಟ್ರ ತಂಡಕ್ಕೆ ಭರ್ಜರಿ ಆರಂಭ ಸಿಕ್ಕಿತು. ಆರಂಭಿಕರಾದ ಹಾರ್ವಿಕ್ ದೇಸಾಯಿ ಮತ್ತು ಶೆಲ್ಡನ್ ಜಾಕ್ಸನ್ 125 ರನ್ ಜೊತೆಯಾಟ ನಡೆಸಿದರು. ಮುಖೇಶ್ ಚೌಧರಿ, ಹಾರ್ವಿಕ್ ಅವರನ್ನು ಬೌಲ್ಡ್ ಮಾಡುವ ಮೂಲಕ ಈ ಜೊತೆಯಾಟಕ್ಕೆ ಬ್ರೇಕ್ ಹಾಕಿದರು. 50 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡ ಹಾರ್ವಿಕ್ ಬಳಿಕ ಬಂದ ಜೈ ಗೋಹಿಲ್ ಅವರನ್ನು ಸಹ ಮುಖೇಶ್ ಚೌಧರಿ ಶೂನ್ಯಕ್ಕೆ ಔಟ್ ಮಾಡಿದರು.
ಇದನ್ನೂ ಓದಿ: 220, 168, 108.. ವಿಜಯ್ ಹಜಾರೆ ಟ್ರೋಫಿಯಲ್ಲಿ ರುತುರಾಜ್ ಅಬ್ಬರ! ಫೈನಲ್ನಲ್ಲೂ ಶತಕ ಸಿಡಿಸಿದ ಗಾಯಕ್ವಾಡ್
ಜಾಕ್ಸನ್-ಚಿರಾಗ್ ಜೋಡಿ ಗೆಲುವಿನ ರೂವಾರಿ
ಆ ಬಳಿಕ ಸೌರಾಷ್ಟ್ರ ಬ್ಯಾಟ್ಸ್ಮನ್ಗಳು ನಿಗದಿತ ಅಂತರದಲ್ಲಿ ವಿಕೆಟ್ ಒಪ್ಪಿಸಿದ ಕಾರಣ ಸೌರಾಷ್ಟ್ರದ ಇನ್ನಿಂಗ್ಸ್ ಸಂಕಷ್ಟಕ್ಕೆ ಸಿಲುಕಲಿದೆ ಎಂದು ಭಾವಿಸಲಾಗಿತ್ತು. ಆದರೆ ಚಿರಾಗ್ ಜಾನಿ ಮತ್ತು ಶೆಲ್ಡನ್ ಜಾಕ್ಸನ್ ಅಜೇಯ 57 ರನ್ ಜೊತೆಯಾಟ ನಡೆಸಿ ಗೆಲುವಿನ ರೂವಾರಿಯಾದರು. ಶೆಲ್ಡನ್ 136 ಎಸೆತಗಳಲ್ಲಿ ಅಜೇಯ 133 ರನ್ ಗಳಿಸಿದರೆ ಅವರು ತಮ್ಮ ಇನ್ನಿಂಗ್ಸ್ನಲ್ಲಿ 12 ಬೌಂಡರಿ ಹಾಗೂ 5 ಸಿಕ್ಸರ್ ಬಾರಿಸಿದರು. ಚಿರಾಗ್ 25 ಎಸೆತಗಳಲ್ಲಿ ಅಜೇಯ 30 ರನ್ ಗಳಿಸಿ ತಂಡಕ್ಕೆ ಅದ್ಭುತ ಗೆಲುವು ತಂದುಕೊಟ್ಟರು.
ಫೈನಲ್‌ನಲ್ಲಿ ರುತುರಾಜ್ ಶತಕ
ಇಂದು ಸೌರಾಷ್ಟ್ರ ವಿರುದ್ಧದ ಫೈನಲ್ ಪಂದ್ಯದಲ್ಲೂ ರುತುರಾಜ್ ಶತಕ ಸಿಡಿಸಿ ಮಿಂಚಿದರು. ಈ ಟೂರ್ನಿಯ ಕೊನೆಯ 5 ಇನ್ನಿಂಗ್ಸ್‌ಗಳಲ್ಲಿ ಇದು ಅವರ ಸತತ ಮೂರನೇ ಶತಕವಾಗಿದೆ. ಈ ಟೂರ್ನಿಯಲ್ಲಿ ರುತುರಾಜ್ ಗಾಯಕ್ವಾಡ್ ಅದ್ಭುತ ಫಾರ್ಮ್‌ನಲ್ಲಿದ್ದಾರೆ. ವಿಜಯ್ ಹಜಾರೆ ಟ್ರೋಫಿ ಫೈನಲ್‌ನಲ್ಲಿ ರುತುರಾಜ್ 131 ಎಸೆತಗಳಲ್ಲಿ 7 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ 108 ರನ್ ಗಳಿಸಿದರು.
ಫೈನಲ್‌ನಲ್ಲಿ ಹ್ಯಾಟ್ರಿಕ್
ಇಂದು ವಿಜಯ್ ಹಜಾರೆ ಟ್ರೋಫಿಯ ಫೈನಲ್‌ನಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ದಾಖಲೆ ಸೃಷ್ಟಿಯಾಯಿತು. ಸೌರಾಷ್ಟ್ರ ಬೌಲರ್ ಚಿರಾಗ್ ಜಾನಿ ಈ ಹ್ಯಾಟ್ರಿಕ್ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ಚಿರಾಗ್ ಜಾನಿ ಮಹಾರಾಷ್ಟ್ರ ವಿರುದ್ಧ 10 ಓವರ್‌ಗಳಲ್ಲಿ 43 ರನ್ ನೀಡಿ 3 ವಿಕೆಟ್ ಪಡೆದರು. ಮಹಾರಾಷ್ಟ್ರ ಇನ್ನಿಂಗ್ಸ್ನ 49ನೇ ಓವರ್ ಬೌಲ್ ಮಾಡಿದ ಚಿರಾಗ್ ಈ ಹ್ಯಾಟ್ರಿಕ್ ಸಾಧನೆ ಮಾಡಿದರು. ಮೊದಲು ಎಸ್ಎಸ್ ನವಲೆ ಅವರನ್ನು ಔಟ್ ಮಾಡಿದ ಚಿರಾಗ್ ನಂತರ, ಎರಡನೇ ಎಸೆತದಲ್ಲಿ ಹಂಗರ್‌ಗೆಕರ್ ಮತ್ತು ಮೂರನೇ ಎಸೆತದಲ್ಲಿ ಓಸ್ಟ್ವಾಲ್ ವಿಕೆಟ್ ಪಡೆದರು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:23 pm, Fri, 2 December 22