Vijay Hazare Trophy: ಕೇವಲ 33 ಎಸೆತಗಳಲ್ಲಿ ಪಂದ್ಯ ಗೆದ್ದು ಇತಿಹಾಸ ಬರೆದ ಮುಂಬೈ
Vijay Hazare Trophy: ಮುಂಬೈ ತಂಡವು ವಿಜಯ್ ಹಜಾರೆ ಟ್ರೋಫಿಯಲ್ಲಿ ಅರುಣಾಚಲ ಪ್ರದೇಶವನ್ನು 9 ವಿಕೆಟ್‌ಗಳಿಂದ ಸೋಲಿಸಿ ಅದ್ಭುತ ಸಾಧನೆ ಮಾಡಿದೆ. ಮುಂಬೈ ಕೇವಲ 33 ಎಸೆತಗಳಲ್ಲಿ ಈ ಪಂದ್ಯವನ್ನು ಗೆದ್ದುಕೊಂಡಿದ್ದು ತಂಡದ ಪರ ರಘುವಂಶಿ ಮತ್ತು ಶಾರ್ದೂಲ್ ಠಾಕೂರ್ ಅಮೋಘ ಪ್ರದರ್ಶನ ನೀಡಿದರು. ಈ ಗೆಲುವಿನೊಂದಿಗೆ ಮುಂಬೈ ಅತಿ ಕಡಿಮೆ ಎಸೆತಗಳಲ್ಲಿ ಪಂದ್ಯ ಗೆದ್ದ ದಾಖಲೆಯನ್ನೂ ಬರೆದಿದೆ.
ವಿಜಯ್ ಹಜಾರೆ ಟ್ರೋಫಿಯಲ್ಲಿ ಮುಂಬೈ ತಂಡ ಅದ್ಭುತ ಸಾಧನೆ ಮಾಡಿದೆ. ಅಹಮದಾಬಾದ್‌ನ ಗುಜರಾತ್ ಕಾಲೇಜು ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮುಂಬೈ ತಂಡವು ಅರುಣಾಚಲ ಪ್ರದೇಶವನ್ನು 9 ವಿಕೆಟ್‌ಗಳಿಂದ ಸೋಲಿಸಿದ್ದು, ಈ ಪಂದ್ಯವನ್ನು ಕೇವಲ 33 ಎಸೆತಗಳಲ್ಲಿ ಗೆದ್ದುಕೊಂಡಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಅರುಣಾಚಲ ಪ್ರದೇಶ 32.2 ಓವರ್‌ಗಳಲ್ಲಿ ಕೇವಲ 73 ರನ್ಗಳಿಗೆ ಆಲೌಟ್ ಆಯಿತು. ಇದಕ್ಕೆ ಉತ್ತರವಾಗಿ ಮುಂಬೈ ಒಂದು ವಿಕೆಟ್ ಕಳೆದುಕೊಂಡು ಕೇವಲ 5.3 ಓವರ್‌ಗಳಲ್ಲಿ ಜಯದ ನಗೆಬೀರಿತು. ಈ ಗೆಲುವಿನೊಂದಿಗೆ ಮುಂಬೈ ವಿಜಯ್ ಹಜಾರೆ ಟ್ರೋಫಿಯಲ್ಲಿ ಅತಿ ಕಡಿಮೆ ಎಸೆತಗಳಲ್ಲಿ ಪಂದ್ಯ ಗೆದ್ದ ದಾಖಲೆಯನ್ನೂ ಬರೆಯಿತು.
ಶಾರ್ದೂಲ್ ನಾಯಕತ್ವದಲ್ಲಿ ಸಾಧನೆ
ವಾಸ್ತವವಾಗಿ ಈ ಪಂದ್ಯದಿಂದ ಶ್ರೇಯಸ್ ಅಯ್ಯರ್ ಅವರಿಗೆ ವಿಶ್ರಾಂತಿ ನೀಡಲಾಗಿದ್ದು, ಶಾರ್ದೂಲ್ ಅವರಿಗೆ ತಂಡದ ನಾಯಕತ್ವ ನೀಡಲಾಗಿತ್ತು. ನಾಯಕತ್ವದ ಜೊತೆಗೆ ಬೌಲಿಂಗ್‌ನಲ್ಲೂ ಮಿಂಚಿದ ಠಾಕೂರ್ 3 ಓವರ್‌ಗಳಲ್ಲಿ ಕೇವಲ 8 ರನ್ ನೀಡಿ 2 ವಿಕೆಟ್ ಪಡೆದರು. ಉಳಿದಂತೆ ಹರ್ಷ್ ತನ್ನಾ, ಹಿಮಾಂಶು ಸಿಂಗ್ ಮತ್ತು ಅಂಕೋಲೆಕರ್ ಕೂಡ ತಲಾ 2 ವಿಕೆಟ್ ಪಡೆದರು.
ಇನ್ನು ಅರುಣಾಚಲಪ್ರದೇಶ ತಂಡದ ಪ್ರದರ್ಶನದ ಬಗ್ಗೆ ಹೇಳುವುದಾದರೆ 10ನೇ ಕ್ರಮಾಂಕದ ಬಂದ ಯಾಬ್ ನಿಯಾ ತಂಡದ ಪರ ಗರಿಷ್ಠ 17 ರನ್ ಕಲೆಹಾಕಿದರೆ, ಆರಂಭಿಕ ಟೆಕಿ ಡೋರಿಯಾ 13 ರನ್ಗಳ ಇನ್ನಿಂಗ್ಸ್ ಆಡಿದರು. ಉಳಿದಂತೆ ತಂಡದ ಮೂವರು ಬ್ಯಾಟ್ಸ್ಮನ್ಗಳಿಗೆ ಖಾತೆ ತೆರೆಯಲು ಸಾಧ್ಯವಾಗಲಿಲ್ಲ.
ರಘುವಂಶಿ ಬಿರುಸಿನ ಬ್ಯಾಟಿಂಗ್
ಈ ಗುರಿ ಬೆನ್ನಟ್ಟಿದ ಮುಂಬೈ ಪರ ಆರಂಭಿಕರಾಗಿ ಕಣಕ್ಕಿಳಿದಿದ್ದ ಅಂಕ್ರಿಶ್ ರಘುವಂಶಿ ಕೇವಲ 18 ಎಸೆತಗಳಲ್ಲಿ 9 ಬೌಂಡರಿ ಮತ್ತು ಒಂದು ಸಿಕ್ಸರ್ ನೆರವಿನಿಂದ 50 ರನ್ ಗಳಿಸಿದರು. 11 ಎಸೆತಗಳಲ್ಲಿ 15 ರನ್ ಗಳಿಸಿ ಔಟಾದ ಆಯುಷ್ ಮ್ಹಾತ್ರೆ ರೂಪದಲ್ಲಿ ಮುಂಬೈನ ಏಕೈಕ ವಿಕೆಟ್ ಪತನವಾಯಿತು.
ಟೂರ್ನಿಯ ಪಾಯಿಂಟ್ಸ್ ಪಟ್ಟಿ ಕುರಿತು ಮಾತನಾಡುವುದಾದರೆ, ಮುಂಬೈ ತಂಡ ಸಿ ಗುಂಪಿನಲ್ಲಿ 3 ಪಂದ್ಯಗಳಲ್ಲಿ 2 ಗೆದ್ದು ಎರಡನೇ ಸ್ಥಾನದಲ್ಲಿದೆ. ಇದುವರೆಗಿನ ಮೂರು ಪಂದ್ಯಗಳನ್ನು ಗೆದ್ದಿರುವ ಕರ್ನಾಟಕ ತಂಡ ಮೊದಲ ಸ್ಥಾನದಲ್ಲಿದೆ. ಪಂಜಾಬ್ ಮೂರನೇ ಸ್ಥಾನದಲ್ಲಿದ್ದು, ಸೌರಾಷ್ಟ್ರ ನಾಲ್ಕನೇ ಸ್ಥಾನದಲ್ಲಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ