ಟೀಮ್ ಇಂಡಿಯಾದ (Team India) ಮಾಜಿ ಆಟಗಾರ ವಿನೋದ್ ಕಾಂಬ್ಳಿ ಮತ್ತೊಮ್ಮೆ ವಿವಾದಕ್ಕೆ ಸಿಲುಕಿದ್ದಾರೆ. ಕಾಂಬ್ಳಿ ವಿರುದ್ಧ ಪತ್ನಿ ಆಂಡ್ರಿಯಾ ಹೆವಿಟ್ ಮುಂಬೈ ಪೊಲೀಸರಿಗೆ ದೂರು ನೀಡಿದ್ದಾರೆ. ಮದ್ಯದ ಅಮಲಿನಲ್ಲಿ ವಿನೋದ್ ಕಾಂಬ್ಳಿ ಮೇಲೆ ಹಲ್ಲೆ ನಡೆಸಿ ದೌರ್ಜನ್ಯ ಎಸಗಿದ್ದಾರೆ ಎಂದು ಆಂಡ್ರಿಯಾ ಆರೋಪಿಸಿದ್ದಾರೆ. ಕುಡಿದ ಅಮಲಿನಲ್ಲಿ ಕಾಂಬ್ಳಿ ತನ್ನ ಮೇಲೆ ಅಡುಗೆ ಪ್ಯಾನ್‌ನ ಹಿಡಿಕೆಯನ್ನು ಎಸೆದಿದ್ದಾರೆ. ಇದರಿಂದ ನನ್ನ ತಲೆಗೆ ಗಾಯವಾಗಿದೆ ಎಂದು ಮಾಜಿ ಕ್ರಿಕೆಟಿಗನ ಪತ್ನಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಆರೋಪಿಸಿದ್ದಾರೆ.
ಆಂಡ್ರಿಯಾ ಪೊಲೀಸರಿಗೆ ನೀಡಿದ ದೂರಿನ ಪ್ರಕಾರ, ಶುಕ್ರವಾರ ಮಧ್ಯಾಹ್ನ 1 ರಿಂದ 1.30 ರ ನಡುವೆ ಘಟನೆ ನಡೆದಿದೆ. ಆಂಡ್ರಿಯಾ ತನ್ನ ದೂರಿನಲ್ಲಿ, ‘ವಿನೋದ್ ಕಾಂಬ್ಳಿ ಕುಡಿದ ಅಮಲಿನಲ್ಲಿ ಬಾಂದ್ರಾ ಫ್ಲಾಟ್‌ಗೆ ಬಂದು ನನ್ನನ್ನು ನಿಂದಿಸಲು ಪ್ರಾರಂಭಿಸಿದರು. ಬಳಿಕ ಅಡುಗೆ ಮನೆಗೆ ಬಂದು ಪಾತ್ರೆಯ ಹಿಡಿಕೆ ಎಸೆದು ಹಲ್ಲೆ ಮಾಡಿದ್ದಾರೆ ಎಂದು ಆಂಡ್ರಿಯಾ ತಿಳಿಸಿದ್ದಾರೆ.
ಬಾಂದ್ರಾ ಪೊಲೀಸರ ಮಾಹಿತಿ ಪ್ರಕಾರ, ವಿನೋದ್ ಕಾಂಬ್ಳಿ ವಿರುದ್ಧ ಐಪಿಸಿ ಸೆಕ್ಷನ್ 324 ಮತ್ತು 504 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ದೂರು ದಾಖಲಿಸಲು ಬರುವ ಮುನ್ನ ಕಾಂಬ್ಳಿ ಪತ್ನಿ ಆಂಡ್ರಿಯಾ ಭಾಭಾ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಆಂಡ್ರಿಯಾ ಪೊಲೀಸರಿಗೆ ನೀಡಿರುವ ದೂರಿನಲ್ಲಿ, ಪತಿಯು ನನಗೆ ನಿರಂತರವಾಗಿ ಬೆದರಿಕೆ ಹಾಕುತ್ತಿದ್ದಾರೆ ಎಂದು ಕೂಡ ಆರೋಪಿಸಿದ್ದಾರೆ. ಒಟ್ಟಿನಲ್ಲಿ ಕೆಲ ಕಾಲ ಯಾವುದೇ ಸದ್ದು ಸುದ್ದಿಯಲ್ಲಿರದ ವಿನೋದ್ ಕಾಂಬ್ಳಿ ಇದೀಗ ಮತ್ತೊಂದು ವಿವಾದದ ಮೂಲಕ ಸುದ್ದಿಯಾಗಿರುವುದು ವಿಪರ್ಯಾಸ.
ಇದನ್ನೂ ಓದಿ: ಟಿ20 ಕ್ರಿಕೆಟ್ನಲ್ಲಿ ಶತಕ ಬಾರಿಸಿದ ಟೀಮ್ ಇಂಡಿಯಾದ 7 ಬ್ಯಾಟ್ಸ್ಮನ್ಗಳ ಪಟ್ಟಿ ಇಲ್ಲಿದೆ
ಟೀಮ್ ಇಂಡಿಯಾ ಪರ 1991ರಲ್ಲಿ ಪಾದಾರ್ಪಣೆ ಮಾಡಿದ್ದ ವಿನೋದ್ ಕಾಂಬ್ಳಿ ಮೊದಲ 7 ಟೆಸ್ಟ್ ಪಂದ್ಯಗಳಲ್ಲಿ 4 ಶತಕಗಳನ್ನು ಗಳಿಸಿ ಅಬ್ಬರಿಸಿದ್ದರು. ಅದರಲ್ಲಿ 2 ದ್ವಿಶತಕಗಳಾಗಿದ್ದವು ಎಂಬುದು ವಿಶೇಷ. ಅಷ್ಟೇ ಅಲ್ಲ, ಭಾರತ ಪರ ಟೆಸ್ಟ್ ಪಂದ್ಯಗಳಲ್ಲಿ ವೇಗವಾಗಿ 1000 ರನ್ ಪೂರೈಸಿದ ದಾಖಲೆಯನ್ನೂ ಕೂಡ ನಿರ್ಮಿಸಿದ್ದರು. ಅಂದು ಕೇವಲ 14 ಪಂದ್ಯಗಳಲ್ಲಿ ಕಾಂಬ್ಳಿ ಈ ಸಾಧನೆ ಮಾಡಿದ್ದರು.
ಆದರೆ ಆ ಬಳಿಕ ಕಾಂಬ್ಳಿ ಆಡಿದ್ದು ಕೇವಲ 3 ಟೆಸ್ಟ್ ಪಂದ್ಯಗಳು ಮಾತ್ರ. ಒಟ್ಟು 17 ಟೆಸ್ಟ್ ಪಂದ್ಯಗಳನ್ನು ಆಡಿರುವ ಮುಂಬೈ ಕ್ರಿಕೆಟಿಗ 1084 ರನ್ ಕಲೆಹಾಕಿದ್ದಾರೆ. ಹಾಗೆಯೇ 104 ಏಕದಿನ ಪಂದ್ಯಗಳಿಂದ 2477 ರನ್ ಪೇರಿಸಿದ್ದಾರೆ. ಈ ವೇಳೆ ಒಟ್ಟು 6 ಶತಕ ಹಾಗೂ 17 ಅರ್ಧಶತಕಗಳನ್ನು ಬಾರಿಸಿದ್ದರು. ಆದರೆ ಅಶಿಸ್ತು ಮತ್ತು ಮುಂಗೋಪದ ಕಾರಣದಿಂದಾಗಿ ಪ್ರವರ್ಧಮಾನದಲ್ಲೇ ಕ್ರಿಕೆಟ್ ವೃತ್ತಿಜೀವನವನ್ನು ಹಾಳುಮಾಡಿಕೊಂಡರು ಎಂದರೆ ತಪ್ಪಾಗಲಾರದು.