ಏಕದಿನದಲ್ಲಿ 15 ಸಾವಿರ ರನ್​ಗಳ ಸರದಾರ ನಮ್ಮ ಕಿಂಗ್ ಕೊಹ್ಲಿ..!

ತಿರುವನಂತಪುರದಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ತಮ್ಮ ವೃತ್ತಿಜೀವನದ ಮತ್ತೊಂದು ಮೈಲಿಗಲ್ಲನ್ನು ತಲುಪಿದ್ದಾರೆ. ಅವರು ಏಕದಿನ ಕ್ರಿಕೆಟ್‌ನಲ್ಲಿ 15,000 ರನ್‌ಗಳನ್ನು ಪೂರ್ಣಗೊಳಿಸಿ, ಈ ಸಾಧನೆ ಮಾಡಿದ ಎರಡನೇ ಆಟಗಾರನೆನಿಸಿದ್ದಾರೆ. ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ನಂತರ ಈ ಸಾಧನೆ ಮಾಡಿದ ಮೊದಲ ಭಾರತೀಯ ಆಟಗಾರರಾಗಿದ್ದಾರೆ. ಕೊಹ್ಲಿಯ ಸ್ಮರಣೀಯ ಇನ್ನಿಂಗ್ಸ್ ಭಾರತ ತಂಡಕ್ಕೆ ಮಹತ್ವದ ಕೊಡುಗೆ ನೀಡಿದೆ.

ಏಕದಿನದಲ್ಲಿ 15 ಸಾವಿರ ರನ್​ಗಳ ಸರದಾರ ನಮ್ಮ ಕಿಂಗ್ ಕೊಹ್ಲಿ..!
ವಿರಾಟ್ ಕೊಹ್ಲಿ
Image Credit source: BCCI X

Updated on: Sep 27, 2026 | 9:00 PM

ತಿರುವನಂತಪುರದಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಸ್ಮರಣೀಯ ಇನ್ನಿಂಗ್ಸ್ ಆಡುವ ಮೂಲಕ ಏಕದಿನ ಕ್ರಿಕೆಟ್​ನಲ್ಲಿ 15 ಸಾವಿರ ರನ್​ಗಳ ಮೈಲಿಗಲ್ಲನ್ನು ದಾಟಿದ್ದಾರೆ. ಇದರೊಂದಿಗೆ ಏಕದಿನ ಕ್ರಿಕೆಟ್​ನಲ್ಲಿ ಈ ಸಾಧನೆ ಮಾಡಿದ ಎರಡನೇ ಆಟಗಾರನೆನಿಸಿಕೊಂಡಿದ್ದಾರೆ. ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ 18426 ರನ್ ಕಲೆಹಾಕಿದ್ದಾರೆ. ಟೀಂ ಇಂಡಿಯಾ ಇನ್ನಿಂಗ್ಸ್​ನ 29ನೇ ಓವರ್​ನ 5ನೇ ಎಸೆತವನ್ನು ಬೌಂಡರಿಗಟ್ಟುವ ಮೂಲಕ ಕೊಹ್ಲಿ 15000 ರನ್​ಗಳ ಗಡಿ ದಾಟಿದರು.ಇದರ ಜೊತೆಗೆ ಕೊಹ್ಲಿ ತಮ್ಮ 80ನೇ ಏಕದಿನ ಅರ್ಧಶತಕವನ್ನು ಪೂರೈಸಿದರು.

80ನೇ ಅರ್ಧಶತಕ

ರೋಹಿತ್ ಶರ್ಮಾ ವಿಕೆಟ್ ಪತನದ ನಂತರ ಬ್ಯಾಟಿಂಗ್​ಗೆ ಬಂದ ವಿರಾಟ್ ಕೊಹ್ಲಿ ಸರಾಗವಾಗಿ ರನ್ ಕಲೆಹಾಕಿದರು. ನಾಯಕ ಶುಭ್​ಮನ್ ಗಿಲ್ ಜೊತೆಗೆ ತಂಡದ ಇನ್ನಿಂಗ್ಸ್ ಕಟ್ಟಿದ ಕೊಹ್ಲಿ ಸ್ಕೋರ್ ಬೋರ್ಡ್​ ವೇಗವನ್ನು ಹೆಚ್ಚಿಸಿದರು. ಇದರ ಫಲವಾಗಿ ಕೊಹ್ಲಿ 40 ಎಸೆತಗಳಲ್ಲಿ ತಮ್ಮ ಏಕದಿನ ವೃತ್ತಿಜೀವನದ 80ನೇ ಅರ್ಧಶತಕ ಪೂರೈಸಿದರು. ಇನ್ನು ತಮ್ಮ ಖಾತೆಗೆ 59 ರನ್ ಸೇರಿಸಿದ ಕೂಡಲೇ ಕೊಹ್ಲಿ ಏಕದಿನ ಕ್ರಿಕೆಟ್​ನಲ್ಲಿ 15000 ರನ್​ಗಳ ಗಡಿ ದಾಟಿದರು. ಕೊಹ್ಲಿ ತಮ್ಮ 315ನೇ ಏಕದಿನ ಪಂದ್ಯದ 303 ಇನ್ನಿಂಗ್ಸ್‌ಗಳಲ್ಲಿ 15,000 ರನ್‌ಗಳನ್ನು ತಲುಪಿದ್ದು, ಸುಮಾರು 60 ರ ಸರಾಸರಿಯಲ್ಲಿ ಈ ಮೈಲಿಗಲ್ಲನ್ನು ತಲುಪಿದ್ದಾರೆ.

303 ಇನ್ನಿಂಗ್ಸ್​ಗಳಲ್ಲಿ 15,000 ರನ್‌

ಇದರ ಜೊತೆಗೆ ಅತಿ ಕಡಿಮೆ ಏಕದಿನ ಇನ್ನಿಂಗ್ಸ್​ಗಳಲ್ಲಿ ಈ ಮೈಲಿಗಲ್ಲು ದಾಟಿದ ಮೊದಲ ಆಟಗಾರ ಎಂಬ ದಾಖಲೆ ಕೊಹ್ಲಿ ಪಾಲಾಗಿದೆ. ಕೊಹ್ಲಿ 303 ಏಕದಿನ ಇನ್ನಿಂಗ್ಸ್​ಗಳಲ್ಲಿ ಈ ಸಾಧನೆ ಮಾಡಿದ್ದರೆ, ಸಚಿನ್ ತೆಂಡೂಲ್ಕರ್ ತಮ್ಮ 377ನೇ ಇನ್ನಿಂಗ್ಸ್‌ನಲ್ಲಿ 15,000 ರನ್‌ಗಳನ್ನು ಪೂರೈಸಿದ್ದರು. ಇನ್ನು ಏಕದಿನ ಕ್ರಿಕೆಟ್​ನ ಸಾಮ್ರಾಟ ಎನಿಸಿಕೊಂಡಿರುವ ಕೊಹ್ಲಿ ಈ ಮಾದರಿಯಲ್ಲಿ 54 ಶತಕಗಳು ಮತ್ತು 80 ಅರ್ಧಶತಕಗಳನ್ನು ಬಾರಿಸಿದ್ದಾರೆ. ಇದರಲ್ಲಿ ಅವರ ಅತ್ಯುತ್ತಮ ಸ್ಕೋರ್ 183 ರನ್‌ ಆಗಿದೆ. ಅಲ್ಲದೆ ಏಕದಿನ ವೃತ್ತಿಜೀವನದಲ್ಲಿ ಕೊಹ್ಲಿ 170 ಕ್ಕೂ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ್ದಾರೆ.

ಮೊಹಮ್ಮದ್ ಅಜರುದ್ದೀನ್ ದಾಖಲೆ ಮುರಿದ ವಿರಾಟ್ ಕೊಹ್ಲಿ

ಅತಿ ಹೆಚ್ಚು 50+ ಸ್ಕೋರ್‌

ವೆಸ್ಟ್ ಇಂಡೀಸ್ ವಿರುದ್ಧದ ಈ ಪಂದ್ಯದಲ್ಲಿ ಅರ್ಧಶತಕದ ಗಡಿ ದಾಟುವ ಮೂಲಕ ಕೊಹ್ಲಿ ಏಷ್ಯಾದೇತರ ತಂಡಗಳ ವಿರುದ್ಧ ಏಕದಿನ ಪಂದ್ಯಗಳಲ್ಲಿ ಸಚಿನ್ ತೆಂಡೂಲ್ಕರ್ ಅವರ ಅತಿ ಹೆಚ್ಚು 50+ ಸ್ಕೋರ್‌ಗಳ ದಾಖಲೆಯನ್ನು ಮುರಿದಿದ್ದಾರೆ. ಕೊಹ್ಲಿ ಈಗ ಏಷ್ಯಾದೇತರ ತಂಡಗಳ ವಿರುದ್ಧ 96 ಐವತ್ತು+ ಸ್ಕೋರ್‌ಗಳ ಇನ್ನಿಂಗ್ಸ್ ಆಡಿದ್ದಾರೆ. ಇದಲ್ಲದೆ ಕೊಹ್ಲಿ ತವರಿನಲ್ಲಿ ಆಡಿರುವ 131 ಏಕದಿನ ಪಂದ್ಯಗಳಲ್ಲಿ 6,900 ಕ್ಕೂ ಹೆಚ್ಚು ರನ್ ಗಳಿಸಿದ್ದು, ತವರಿನಲ್ಲಿ 7,000 ಏಕದಿನ ರನ್ ಗಳಿಸಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗುವ ಸನಿಹದಲ್ಲಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:34 pm, Sun, 27 September 26

ಪೃಥ್ವಿಶಂಕರ

ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ, ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ನೆಲೆ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ನಾನು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ನನ್ನ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ನನ್ನ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
Loading...
Unable to load recommendations.
Follow Us