ಏಷ್ಯಾಕಪ್ಗೂ ಮುನ್ನ ಟೀಮ್ ಇಂಡಿಯಾಕ್ಕೆ ವಿಶೇಷ ಸ್ಕ್ಯಾನಿಂಗ್: ಏನಿದು ಡೆಕ್ಸಾ ಸ್ಕ್ಯಾನ್?
What is Dexa Scan?: ಏಷ್ಯಾಕಪ್ 2023ಕ್ಕಾಗಿ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಸೇರಿದಂತೆ ಟೀಮ್ ಇಂಡಿಯಾ ಆಟಗಾರರು ಬೆಂಗಳೂರು ಸಮೀಪದ ಆಲೂರಿನಲ್ಲಿ ಕಠಿಣ ಅಭ್ಯಾಸ ನಡೆಸುತ್ತಿದ್ದಾರೆ. ಇದರ ನಡುವೆ ಭಾನುವಾರ ಈ ಆಟಗಾರರಿಗೆ ವಿಶೇಷ ಡೆಕ್ಸಾ ಸ್ಕ್ಯಾನಿಂಗ್ ಏರ್ಪಡಿಸಲಾಗಿತ್ತು. ಹಾಗಾದರೆ ಏನಿದು ಡೆಕ್ಸಾ ಸ್ಕ್ಯಾನ್?, ಇಲ್ಲಿದೆ ನೋಡಿ ಮಾಹಿತಿ.
ಏಷ್ಯಾಕಪ್ 2023ಕ್ಕಾಗಿ (Asia Cup 2023) ಭಾರತ ಕ್ರಿಕೆಟ್ ತಂಡದ ಆಟಗಾರರು ಬೆಂಗಳೂರು ಸಮೀಪದ ಆಲೂರಿನಲ್ಲಿ ಕಳೆದ ಎರಡು ದಿನಗಳಿಂದ ಕಠಿಣ ಅಭ್ಯಾಸದಲ್ಲಿ ನಿರತರಾಗಿದ್ದಾರೆ. ಆದರೆ, ರೋಹಿತ್ ಶರ್ಮಾ ಮತ್ತು ತಂಡ ಏಷ್ಯಾಕಪ್ ಶಿಬಿರದಿಂದ ಭಾನುವಾರದಂದು ಒಂದು ದಿನ ರಜೆ ಪಡೆದಿದ್ದರು. ಆದರೆ, ವಿಶ್ರಾಂತಿ ನೀಡಲಾಗಿರಲಿಲ್ಲ. ಬದಲಿಗೆ, ಆಟಗಾರರು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (NCA) ಯಲ್ಲಿರುವ KSCA ಮೈದಾನದಲ್ಲಿ ಏರ್ಪಡಿಸಲಾಗಿದ್ದ ಸಭೆಯಲ್ಲಿ ಹಾಜರಾಗಿದ್ದರು.
ಏಷ್ಯಾಕಪ್ ಶಿಬಿರದ ಮೊದಲ ದಿನದಂದು (ಆಗಸ್ಟ್ 24), ವಿರಾಟ್ ಕೊಹ್ಲಿ ಸೇರಿದಂತೆ ಎಲ್ಲಾ ಆಟಗಾರರು ಕಡ್ಡಾಯವಾಗಿ ಫಿಟ್ನೆಸ್ ಪರೀಕ್ಷೆಗೆ ಒಳಗಾಗಿದ್ದರು. 2ನೇ ದಿನ ಆಲೂರು ಮೈದಾನದಲ್ಲಿ ಎಲ್ಲರೂ ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್ ಅಭ್ಯಾಸ ಶುರು ಮಾಡಿದರು. ಭಾರತದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಬ್ಯಾಟಿಂಗ್ ತಂತ್ರ ಹೇಳಿಕೊಟ್ಟರೆ ಯಶ್ ದಯಾಳ್, ಉಮ್ರಾನ್ ಮಲಿಕ್ ಮತ್ತು ಮಿಸ್ಟರಿ ಸ್ಪಿನ್ನರ್ ವರುಣ್ ಚಕ್ರವರ್ತಿ ಬ್ಯಾಟರ್ಗಳಿಗೆ ಬೌಲಿಂಗ್ ಮಾಡಿದರು.
India vs Pakistan: ಭಾರತ ತಂಡ ಗೆದ್ದಿದ್ದಕ್ಕಿಂತ ಸೋತಿದ್ದೇ ಹೆಚ್ಚು..!
ಸೆಪ್ಟೆಂಬರ್ 2 ರಂದು ಏಷ್ಯಾಕಪ್ನಲ್ಲಿ ಭಾರತ ತಂಡ ಪಾಕಿಸ್ತಾನ ವಿರುದ್ಧ ಆಡುವ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ. ಇದಕ್ಕೂ ಮುಂಚಿತವಾಗಿ ರೋಹಿತ್, ಕೊಹ್ಲಿ ಸೇರಿದಂತೆ ಟೀಮ್ ಇಂಡಿಯಾದ ಎಲ್ಲ ಆಟಗಾರರು ಬಿಸಿಸಿಐನ ಕಡ್ಡಾಯ ಡೆಕ್ಸಾ ಸ್ಕ್ಯಾನ್‌ಗೆ ಒಳಗಾದರು.
ಡೆಕ್ಸಾ ಸ್ಕ್ಯಾನ್ ಎಂದರೇನು?
DEXA (ಡೆಕ್ಸಾ) ಅಥವಾ ಡ್ಯುಯಲ್-ಎನರ್ಜಿ ಎಕ್ಸ್-ರೇ ಅಬ್ಸಾರ್ಪ್ಟಿಯೋಮೆಟ್ರಿ ಎನ್ನುವುದು ವೈಜ್ಞಾನಿಕ ವಿಧಾನವಾಗಿದ್ದು, ಇದರಲ್ಲಿ ಸ್ಪೆಕ್ಟ್ರಲ್ ಇಮೇಜಿಂಗ್ ಎಂದು ಕರೆಯಲ್ಪಡುವ ವಿಶೇಷ ತಂತ್ರವನ್ನು ಬಳಸಿಕೊಂಡು ವ್ಯಕ್ತಿಯ ಮೂಳೆಯ ಖನಿಜದ ಸಾಂದ್ರತೆಯನ್ನು ತಿಳಿಯಬಹುದು. ಅಂದರೆ ಇದು ಆಟಗಾರನ ಮೂಳೆಯಲ್ಲಿರುವ ಖನಿಜಾಂಶವನ್ನು ತೋರಿಸುತ್ತದೆ. ಸುಲಭವಾಗಿ ಹೇಳಬೇಕೆಂದರೆ, ಡೆಕ್ಸಾ ಸ್ಕ್ಯಾನ್ ಪರೀಕ್ಷೆಯು ವ್ಯಕ್ತಿಯ ದೇಹದಲ್ಲಿನ ಕೊಬ್ಬಿನ ಅಂಶವನ್ನು ನಿರ್ಧರಿಸಲು ಸಹಾಯ ಮಾಡುವ ಒಂದು ವಿಧಾನವಾಗಿದೆ. ಈ ಸ್ಕ್ಯಾನ್ನ ಫಲಿತಾಂಶದ ಬಳಿಕ ಫಿಸಿಯೋಗಳು ಆ ಆಟಗಾರನಿಗೆ ಅಗತ್ಯವಿರುವಷ್ಟು ಆಹಾರವನ್ನು ಸೇವಿಸಲು ಸೂಚಿಸುತ್ತಾರೆ.
ಆಟಗಾರರು ಇಂಜುರಿಗೆ ತುತ್ತಾಗುವುದನ್ನು ತಪ್ಪಿಸಲು ಬಿಸಿಸಿಐ ಈ ವಿಧಾನವನ್ನು ಜಾರಿಗೆ ತಂದಿದೆ. ಭವಿಷ್ಯದಲ್ಲಿ ಗಾಯಕ್ಕೆ ತುತ್ತಾಗಬಾರದು, ಫಿಟ್ ಆಗಿರಬೇಕು ಎಂಬ ಕಾರಣಕ್ಕೆ ಮುಂಜಾಗ್ರತ ಕ್ರಮವಾಗಿ ಈ ಸ್ಕ್ಯಾನಿಂಗ್ ಮಾಡಲಾಗುತ್ತದೆ. ಪ್ರತಿಯೊಬ್ಬ ಆಟಗಾರ ತಮ್ಮ ಡೆಕ್ಸಾ ಸ್ಕ್ಯಾನ್ ಫಲಿತಾಂಶಗಳನ್ನು ನೋಡಿ ವಿಭಿನ್ನ ಫಿಟ್‌ನೆಸ್, ಆಹಾರದಲ್ಲಿ ಬದಲಾವಣೆ ಮಾಡುತ್ತಾರೆ.
ನಿಯಮದ ಪ್ರಕಾರ, ಕ್ರಿಕೆಟ್ ಆಟಗಾರರಿಗೆ ಕೊಬ್ಬಿನಂಶವು ಶೇಕಡಾ 10 ಕ್ಕಿಂತ ಕಡಿಮೆ ಇರಬೇಕು. ಒಂದುವೇಳೆ 10-12 ರಲ್ಲಿ ಇದ್ದರೂ ತೊಂದರೆಯಿಲ್ಲ, ಫಿಟ್ ಆಗಿದ್ದಾರೆ ಎನ್ನಬಹುದು. ಕಡಿಮೆ ಕೊಬ್ಬು ಇದ್ದರೆ ಆಟಗಾರನಿಗೆ ಹೆಚ್ಚಿನ ಶಕ್ತಿ, ವೇಗ, ಚುರುಕುತನ ಮತ್ತು ಸ್ನಾಯು, ಕೀಲುಗಳ ಮೇಲೆ ಕಡಿಮೆ ಒತ್ತಡವನ್ನು ನೀಡುತ್ತದೆ. ಈ ಮೂಲಕ ಬೆನ್ನು ಮತ್ತು ಮೊಣಕಾಲಿನ ಗಾಯಗಳನ್ನು ತಡೆಯಬಹುದು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:57 am, Mon, 28 August 23