ಭಾರತ ಹಾಗೂ ಇಂಗ್ಲೆಂಡ್ (India vs England) ನಡುವೆ ಬಾಕಿ ಉಳಿದಿದ್ದ ಒಂದು ಟೆಸ್ಟ್ ಪಂದ್ಯದ ಜೊತೆ ಟಿ20 ಸರಣಿ ಕೂಡ ಮುಕ್ತಾಯಗೊಂಡಿದ್ದು ಇದೀಗ ಏಕದಿನ ಸರಣಿಗೆ ವೇದಿಕೆ ಸಜ್ಜಾಗಿದೆ. ಟೆಸ್ಟ್ ಸಮಬಲದಿಂದ ಅಂತ್ಯಕಂಡರೆ ಟಿ20 ಸರಣಿಯನ್ನು ಟೀಮ್ ಇಂಡಿಯಾ 2-1 ಅಂತರದಿಂದ ವಶಪಡಿಸಿಕೊಂಡಿತ್ತು. ಸದ್ಯ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಕದನ ಇಂದು ಲಂಡನ್ನ ಕೆನ್ನಿಂಗ್ಟನ್ ಓವಲ್ ಮೈದಾನದಲ್ಲಿ ಆಯೋಜಿಸಲಾಗಿದೆ. ಬಲಿಷ್ಠ ಬ್ಯಾಟಿಂಗ್ ಪಡೆಯನ್ನು ಹೊಂದಿರುವ ಉಭಯ ತಂಡಗಳ ನಡುವಣ ಕಾದಾಟ ಸಾಕಷ್ಟು ಕುತೂಹಲ ಕೆರಳಿಸಿದೆ. ಅಲ್ಲದೆ ಆಂಗ್ಲರಿಗೆ ಇದು ಪ್ರತಿಷ್ಠೆಯ ಸರಣಿ ಕೂಡ ಹೌದು. ಯಾಕೆಂದರೆ ಟಿ20 ಸರಣಿಯಲ್ಲಿ ನೀಡಿದ ಕಳಪೆ ಪ್ರದರ್ಶನದಿಂದ ಬಟ್ಲರ್ (Jos Buttler) ಪಡೆ ಹೊರಬರಬೇಕಿದೆ. ಇತ್ತ ರೋಹಿತ್ (Rohit Sharma) ಪಡೆ ಏಕದಿನಕ್ಕೆಂದು ಮಾಸ್ಟರ್ ಪ್ಲಾನ್ ರೂಪಿಸಿದೆ. ಹೀಗಾಗಿ ಇಂಡೋ-ಇಂಗ್ಲೆಂಡ್ ಮೊದಲ ಏಕದಿನ ಹೈವೋಲ್ಟೇಜ್ ಪಂದ್ಯ ಆಗುವುದರಲ್ಲಿ ಅನುಮಾನವಿಲ್ಲ.
ಕೊಹ್ಲಿ ಅಲಭ್ಯ:
ಟೀಮ್ ಇಂಡಿಯಾದ ಆಟಗಾರ ವಿರಾಟ್ ಕೊಹ್ಲಿ ಅವರು ತೊಡೆಸಂದು ನೋವಿನಿಂದ ಬಳಲುತ್ತಿದ್ದು, ಇಂದಿನ ಮೊದಲ ಏಕದಿನ ಪಂದ್ಯಕ್ಕೆ ಅಲಭ್ಯರಾಗುವ ಸಾಧ್ಯತೆಗಳಿವೆ ಎಂದು ವರದಿಯಾಗಿದೆ. ಆದರೆ ಕೊಹ್ಲಿ ಗಾಯದ ಬಗ್ಗೆ ಹೆಚ್ಚಿನ ವಿವರಗಳು ಖಚಿತವಾಗಿಲ್ಲ. ಗಾಯ ಎಷ್ಟು ಗಂಭೀರವಾಗಿದೆ ಎಂಬುದು ಸ್ಪಷ್ಟವಾಗಿಲ್ಲ. ಇದರ ಹೊರತಾಗಿಯೂ, ಭಾರತ ತಂಡದ ಆಡಳಿತ ಮಂಡಳಿ ಮೊದಲ ಪಂದ್ಯದಲ್ಲಿ ಅವರಿಗೆ ವಿರಾಮ ನೀಡಬಹುದು ಎಂಬ ವದಂತಿ ಕೇಳಿಬರುತ್ತಿದೆ. ಆದ್ದರಿಂದ ಕೊಹ್ಲಿ ಮುಂದಿನ ಎರಡು ಪಂದ್ಯಗಳಿಗೆ ಲಭ್ಯವಿರುತ್ತಾರೆ. ಅಲ್ಲದೆ ನಾಟಿಂಗ್‌ಹ್ಯಾಮ್‌ನಿಂದ ಲಂಡನ್‌ಗೆ ಬಂದ ಟೀಮ್ ಬಸ್‌ನಲ್ಲಿ ಕೂಡ ವಿರಾಟ್ ಬಂದಿಲ್ಲ. ವೈದ್ಯಕೀಯ ತಪಾಸಣೆಯು ಇದರ ಹಿಂದಿನ ಒಂದು ಕಾರಣವಾಗಿರಬಹುದು ಎನ್ನಲಾಗಿದೆ.
ಧವನ್ ಕಮ್ಬ್ಯಾಕ್:
ಬಹಳ ಸಮಯದ ನಂತರ ಶಿಖರ್ ಧವನ್ ಟೀಮ್ ಇಂಡಿಯಾಕ್ಕೆ ಕಮ್ಬ್ಯಾಕ್ ಮಾಡಿದ್ದಾರೆ. ಇವರು ರೋಹಿತ್ ಶರ್ಮಾ ಜೊತೆ ಇನ್ನಿಂಗ್ಸ್ ಆರಂಭಿಸುವುದು ಖಚಿತ. ಸದ್ಯ ಕೇವಲ ಏಕದಿನ ಸರಣಿಯಲ್ಲಿ ಮಾತ್ರ ಆಡುತ್ತಿರುವ ಧವನ್ ತಮ್ಮ ಸಾಮರ್ಥ್ಯ ಸಾಬೀತುಪಡಿಸಲು ಉತ್ತಮ ವೇದಿಕೆಯಾಗಿದೆ. ಇಲ್ಲಿ ರನ್ ಗಳಿಸಲು ಪರದಾಡಿದರೆ ಧವನ್ ಮುಂದಿನ ಹಾದಿ ಕಠಿಣವಾಗಲಿದೆ. ಯಾಕೆಂದರೆ ಧವನ್ ಜಾಗಕ್ಕೆ ಇಶಾನ್ ಕಿಶನ್, ರುತುರಾಜ್ ಗಾಯಕ್ವಾಡ್, ಕೆಎಲ್ ರಾಹುಲ್ ಕೂಡ ಕಾದುಕುಳಿತಿದ್ದಾರೆ.
ಇನ್ನು ಕೊಹ್ಲಿ ಹೊರಗುಳಿದರೆ ಮೂರನೇ ಕ್ರಮಾಂಕದಲ್ಲಿ ಶ್ರೇಯಸ್ ಅಯ್ಯರ್ಗೆ ಸ್ಥಾನ ಸಿಗಲಿದೆ. ಸೂರ್ಯಕುಮಾರ್ ಯಾದವ್ ಕೂಡ ತಂಡದಲ್ಲಿದ್ದು ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಲಿದ್ದಾರೆ. ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್, ಆಲ್ರೌಂಡರ್ಗಳಾದ ಹಾರ್ದಿಕ್ ಪಾಂಡ್ಯ ಮತ್ತು ರವೀಂದ್ರ ಜಡೇಜಾ ನಂತರದ ಸ್ಥಾನದಲ್ಲಿ ಆಡಲಿದ್ದಾರೆ.
ಟೀಮ್ ಇಂಡಿಯಾದ ಬೌಲಿಂಗ್ ಆಯ್ಕೆ ಕೊಂಚ ಕಷ್ಟವಾಗಿದೆ. ಮತ್ತೊಬ್ಬ ಆಲ್ರೌಂಡರ್ ಶಾರ್ದೂಲ್ ಠಾಕೂರ್ ಆಡಿಸಬೇಕೊ ಅಥವಾ ಪ್ರಸಿದ್ಧ್ ಕೃಷ್ಣ ಆಯ್ಕೆ ಮಾಡುತ್ತಾರೊ ನೋಡಬೇಕಿದೆ. ಉಳಿದಂತೆ ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ ಮತ್ತು ಯುಜ್ವೇಂದ್ರ ಚಹಲ್ ಪ್ಲೇಯಿಂಗ್ ಇಲೆವೆನ್ನಲ್ಲಿ ಕಾಣಿಸಿಕೊಳ್ಳುವುದು ಖಚಿತ.
ಇತ್ತ ಜೋಸ್ ಬಟ್ಲರ್ಗೆ ಇದು ಮೊದಲ ಅಗ್ನಿಪರೀಕ್ಷೆ. ಇಂಗ್ಲೆಂಡ್ ತಂಡದ ನಾಯಕನಾಗಿದ್ದ ಇಯಾನ್ ಮಾರ್ಗನ್ ನಾಯಕತ್ವ ತೊರೆದ ಬಳಿಕ ಕ್ಯಾಪ್ಟನ್ ಆಗಿರುವ ಬಟ್ಲರ್ಗೆ ಇಂದು ಮೊದಲ ಏಕದಿನ ಸರಣಿಯಾಗಿದೆ. ಹೀಗಾಗಿ, ಗೆಲುವು ಸಾಧಿಸುವ ಉತ್ಸಾಹದಲ್ಲಿದ್ದಾರೆ. ಆಂಗ್ಲರ ತಂಡದಲ್ಲಿ ಬೆನ್ ಸ್ಟೋಕ್ಸ್, ಜೋ ರೂಟ್, ಬೈರ್ಸ್ಟೋರಂತಹ ಬಲಿಷ್ಠ ಆಟಗಾರರಿದ್ದಾರೆ.
ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಏಕದಿನ ಪಂದ್ಯವು ಭಾರತೀಯ ಕಾಲಮಾನದ ಪ್ರಕಾರ ಸಂಜೆ 5:30 ಕ್ಕೆ ಪ್ರಾರಂಭವಾಗಲಿದೆ. ಪಂದ್ಯದ ನೇರ ಪ್ರಸಾರವನ್ನು ಸೋನಿ ನೆಟ್‌ವರ್ಕ್‌ನ ಚಾನೆಲ್‌ನಲ್ಲಿ ನೋಡಬಹುದು. ಜೊತೆಗೆ ಹಿಂದಿಯಲ್ಲಿ ಸೋನಿ ಟೆನ್ 3 ನಲ್ಲಿ ವೀಕ್ಷಿಸಬಹುದು.
Published On - 7:43 am, Tue, 12 July 22