IND vs ENG: ಮಾಜಿ ಕೋಚ್ ಜೊತೆಗೂಡಿ ಅಭ್ಯಾಸ ಆರಂಭಿಸಿದ ವಿರಾಟ್ ಕೊಹ್ಲಿ

Virat Kohli comeback: ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಗೆ ವಿರಾಟ್ ಕೊಹ್ಲಿ ಭರ್ಜರಿ ತಯಾರಿ ನಡೆಸಿದ್ದಾರೆ. ಗಾಯದಿಂದ ಚೇತರಿಸಿಕೊಂಡಿರುವ ಕೊಹ್ಲಿ, ಮಾಜಿ ಬ್ಯಾಟಿಂಗ್ ಕೋಚ್ ಸಂಜಯ್ ಬಂಗಾರ್ ಮಾರ್ಗದರ್ಶನದಲ್ಲಿ ವಿಶೇಷ ಅಭ್ಯಾಸ ಶುರು ಮಾಡಿದ್ದಾರೆ. ಜುಲೈ 14 ರಿಂದ ಆರಂಭವಾಗುವ ಸರಣಿ ಮತ್ತು 2027ರ ವಿಶ್ವಕಪ್‌ಗೆ ಇದು ಮಹತ್ವದ ಸಿದ್ಧತೆಯಾಗಿದೆ. ಅವರ ಅಭ್ಯಾಸದ ವಿಡಿಯೋ ವೈರಲ್ ಆಗಿದೆ.

IND vs ENG: ಮಾಜಿ ಕೋಚ್ ಜೊತೆಗೂಡಿ ಅಭ್ಯಾಸ ಆರಂಭಿಸಿದ ವಿರಾಟ್ ಕೊಹ್ಲಿ
Virat Kohli

Updated on: Jul 02, 2026 | 3:51 PM

ಭಾರತ ಹಾಗೂ ಇಂಗ್ಲೆಂಡ್‌ (India vs England) ನಡುವೆ ಪ್ರಸ್ತುತ 5 ಪಂದ್ಯಗಳ ಟಿ20 ಸರಣಿ ನಡೆಯುತ್ತಿದೆ. ಈ ಸರಣಿ ಮುಗಿದ ಬಳಿಕ ಉಭಯ ತಂಡಗಳ ನಡುವೆ ಮೂರು ಪಂದ್ಯಗಳ ಏಕದಿನ ಸರಣಿ ನಡೆಯಲಿದೆ. ಈ ಸರಣಿಯ ಮೊದಲ ಪಂದ್ಯ ಜುಲೈ 14 ರಂದು ನಡೆಯಲಿದೆ. ಈ ಸರಣಿಗೆ ಟೀಂ ಇಂಡಿಯಾವನ್ನು ಸಹ ಆಯ್ಕೆ ಮಾಡಲಾಗಿದೆ. ಗಾಯದ ಕಾರಣದಿಂದಾಗಿ ಅಫ್ಘಾನಿಸ್ತಾನ ವಿರುದ್ಧದ ಏಕದಿನ ಸರಣಿಯಿಂದ ಹೊರಗುಳಿದಿದ್ದ ವಿರಾಟ್ ಕೊಹ್ಲಿ (Virat Kohli) ಇದೀಗ ಫಿಟ್ನೆಸ್ ಪರೀಕ್ಷೆಯಲ್ಲಿ ಪಾಸಾಗಿದ್ದು ಇಂಗ್ಲೆಂಡ್‌ ವಿರುದ್ಧ ಕಣಕ್ಕಿಳಿಲು ಸಜ್ಜಾಗಿದ್ದಾರೆ. ಹೀಗಾಗಿ ಪ್ರಸ್ತುತ ಇಂಗ್ಲೆಂಡ್​ನಲ್ಲಿ ನೆಲೆಸಿರುವ ಕೊಹ್ಲಿ, ಭಾರತದ ಮಾಜಿ ಬ್ಯಾಟಿಂಗ್ ಕೋಚ್ ಸಂಜಯ್ ಬಂಗಾರ್ ಅವರ ನೇತೃತ್ವದಲ್ಲಿ ಅಭ್ಯಾಸ ಶುರು ಮಾಡಿದ್ದಾರೆ. ಕೊಹ್ಲಿ ನೆಟ್ಸ್‌ನಲ್ಲಿ ಅಭ್ಯಾಸ ಮಾಡುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ವಿರಾಟ್ ಕೊಹ್ಲಿ ವಿಶೇಷ ತರಬೇತಿ

ಆನ್‌ಲೈನ್‌ನಲ್ಲಿ ಹರಿದಾಡುತ್ತಿರುವ ವೈರಲ್ ಕ್ಲಿಪ್‌ನಲ್ಲಿ, 37 ವರ್ಷದ ವಿರಾಟ್ ಕೊಹ್ಲಿ ತಮ್ಮ ಕಿಟ್ ಬ್ಯಾಗ್ ಅನ್ನು ಭುಜದ ಮೇಲೆ ಹೊತ್ತುಕೊಂಡು ತರಬೇತಿ ಮೈದಾನಕ್ಕೆ ಬರುತ್ತಾರೆ, ಅಲ್ಲಿ ಅವರನ್ನು ಮಾಜಿ ಬ್ಯಾಟಿಂಗ್ ಕೋಚ್ ಸಂಜಯ್ ಬಂಗಾರ್ ಸ್ವಾಗತಿಸುತ್ತಾರೆ. ನಂತರ ಇಬ್ಬರೂ ಮೈದಾನದ ಮಧ್ಯದಲ್ಲಿ ನಿಂತು ಪರಿಸ್ಥಿತಿಯ ಬಗ್ಗೆ ಚರ್ಚಿಸುತ್ತಿದ್ದಾರೆ. ವರದಿಗಳ ಪ್ರಕಾರ, ಕೊಹ್ಲಿ ಇತ್ತೀಚೆಗೆ ಅಲಿಬಾಗ್‌ನಲ್ಲಿ ವಿಶೇಷ ಬ್ಯಾಟಿಂಗ್ ಶಿಬಿರವನ್ನು ಪೂರ್ಣಗೊಳಿಸಿದ್ದರು, ಆ ಸಮಯದಲ್ಲಿ ಬಂಗಾರ್, ಕೊಹ್ಲಿಗೆ ವಿವಿಧ ತಾಂತ್ರಿಕ ಅಂಶಗಳ ಬಗ್ಗೆ ಮಾರ್ಗದರ್ಶನ ನೀಡಿದ್ದರು. ಇದೀಗ ಇಂಗ್ಲೆಂಡ್​ನಲ್ಲೂ ಈ ಜೋಡಿ ಮ್ಯಾಜಿಕ್ ಮಾಡಲು ಮುಂದಾಗಿದೆ.

ಹೊರಬಿತ್ತು ಕಿಂಗ್ ಕೊಹ್ಲಿ ಫಿಟ್ನೆಸ್ ಫಲಿತಾಂಶ; ಇಂಗ್ಲೆಂಡ್‌ ವಿರುದ್ಧ ಆಡ್ತಾರಾ ವಿರಾಟ್?

ಸಂಜಯ್ ಬಂಗಾರ್ 2014 ರಿಂದ 2019 ರವರೆಗೆ ಭಾರತೀಯ ತಂಡದ ಸಹಾಯಕ ಸಿಬ್ಬಂದಿಯ ಭಾಗವಾಗಿದ್ದರು. ಆ ಸಮಯದಲ್ಲಿ ಕೊಹ್ಲಿ ಅದ್ಭುತ ಫಾರ್ಮ್​ನಲ್ಲಿದ್ದರು. ಬಂಗಾರ್ ಅವರೊಂದಿಗೆ ಕೆಲಸ ಮಾಡಿದ ಅನುಭವ ಕೊಹ್ಲಿಗೆ ಯಾವಾಗಲೂ ಪ್ರಯೋಜನಕಾರಿಯಾಗಿದೆ. ಹೀಗಾಗಿ 2027 ರ ಏಕದಿನ ವಿಶ್ವಕಪ್‌ಗೆ ತಯಾರಿ ದೃಷ್ಟಿಯಿಂದ ಬಹಳ ಮುಖ್ಯ ಎನಿಸಿಕೊಂಡಿರುವ ಈ ಸರಣಿಗೆ ವಿರಾಟ್ ಕೊಹ್ಲಿ ಕೂಡ ತಮ್ಮ ಸಿದ್ಧತೆಗಳನ್ನು ತೀವ್ರಗೊಳಿಸಿದ್ದಾರೆ.

ಏಕದಿನ ಕ್ರಿಕೆಟ್​ನತ್ತ ಕೊಹ್ಲಿ

ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿ ಜುಲೈ 14 ರಂದು ಆರಂಭವಾಗಲಿದೆ. ಐಪಿಎಲ್ 2026 ರ ನಂತರ ವಿರಾಟ್ ಕೊಹ್ಲಿ ಅವರ ಮೊದಲ ಅಂತರರಾಷ್ಟ್ರೀಯ ಪಂದ್ಯ ಇದಾಗಿದೆ. ಟೀಂ ಇಂಡಿಯಾ ಇತ್ತೀಚೆಗೆ ಅಫ್ಘಾನಿಸ್ತಾನ ವಿರುದ್ಧ ಏಕದಿನ ಸರಣಿಯನ್ನು ಆಡಿತ್ತು, ಆದರೆ ವಿರಾಟ್ ಕೊಹ್ಲಿ ಗಾಯದಿಂದಾಗಿ ಭಾಗವಹಿಸಲು ಸಾಧ್ಯವಾಗಲಿಲ್ಲ. ಆದ್ದರಿಂದ, ಅವರು ಈಗ ಇಂಗ್ಲೆಂಡ್ ಸರಣಿಯಲ್ಲಿ ಮೈದಾನಕ್ಕೆ ಮರಳಲು ನೋಡುತ್ತಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:46 pm, Thu, 2 July 26

Follow Us