Virat Kohli: ಪಂದ್ಯಶ್ರೇಷ್ಠ ಸ್ವೀಕರಿಸುವ ವೇಳೆ ವಿರಾಟ್ ಕೊಹ್ಲಿಯಿಂದ ಅಚ್ಚರಿ ಹೇಳಿಕೆ: ಏನಂದ್ರು ಕೇಳಿ
RCB vs GT Post Match Presentation: ಗುಜರಾತ್ ಬೌಲರ್ಗಳನ್ನು ಬೆಂಡೆತ್ತಿದ ವಿರಾಟ್ ಕೊಹ್ಲಿ 73 ರನ್ ಚಚ್ಚಿದರು.ಇದಕ್ಕಾಗಿ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನೂ ಬಾಜಿಕೊಂಡರು. ಪಂದ್ಯ ಮುಗಿದ ಬಳಿಕ ಮಾತನಾಡಿದ ಕೊಹ್ಲಿ ಏನು ಹೇಳಿದರು ಎಂಬುದನ್ನು ನೋಡೋಣ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್ 2022 ರಲ್ಲಿ (IPL 2022) ತನ್ನ ಪ್ಲೇ ಆಫ್ ಆಸೆಯನ್ನ ಇನ್ನೂ ಜೀವಂತವಾಗಿರಿಸಿದೆ. ಗುಜರಾತ್ ಟೈಟಾನ್ಸ್ ವಿರುದ್ಧ ನಡೆದ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಆರ್ಸಿಬಿ (RCB vs GT) 8 ವಿಕೆಟ್ಗಳ ಅಮೋಘ ಗೆಲುವು ಕಂಡಿತು. ಸತತ ವೈಫಲ್ಯ ಅನುಭವಿಸುತ್ತಿದ್ದ ಕೊಹ್ಲಿ ಈ ಪಂದ್ಯದಲ್ಲಿ ಅಕ್ಷರಶಃ ವಿರಾಟ ರೂಪ ಪ್ರದರ್ಶಿಸಿದರು. ಜಿಟಿ ಬೌಲರ್ಗಳನ್ನು ಬೆಂಡೆತ್ತಿದ ಕಿಂಗ್ ಕೊಹ್ಲಿ (Virat Kohli) 54 ಎಸೆತಗಳಲ್ಲಿ 8 ಫೋರ್, 2 ಸಿಕ್ಸರ್ ಸಿಡಿಸಿ 73 ರನ್ ಚಚ್ಚಿ ತಂಡದ ಗೆಲುವಿನಲ್ಲಿ ಮುಖ್ಯ ಪಾತ್ರವಹಿಸಿದರು. ಇದಕ್ಕಾಗಿ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನೂ ಬಾಜಿಕೊಂಡರು. ವಿಶೇಷ ಎಂದರೆ ಬರೋಬ್ಬರಿ 564 ದಿನಗಳ ಬಳಿಕ ಐಪಿಎಲ್ನಲ್ಲಿ ಕೊಹ್ಲಿ ಪಂದ್ಯಶ್ರೇಷ್ಠ ತಮ್ಮದಾಗಿಸಿದರು. ಈ ಹಿಂದೆ 2020 ರಲ್ಲಿ ಸಿಎಸ್ಕೆ ವಿರುದ್ಧ 90 ರನ್ ಬಾರಿಸಿದ್ದಾಗ ಈ ಪ್ರಶಸ್ತಿ ಪಡೆದುಕೊಂಡಿದ್ದರು. ಜಿಟಿ ವಿರುದ್ಧ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿ ಒಂದೇ ಐಪಿಎಲ್ ಫ್ರಾಂಚೈಸಿ ಪರ 7000 ರನ್ ಗಳಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಕೂಡ ಪಾತ್ರರಾದರು.
ಪಂದ್ಯ ಮುಗಿದ ಬಳಿಕ ಮಾತನಾಡಿದ ವಿರಾಟ್ ಕೊಹ್ಲಿ ಏನು ಹೇಳಿದರು ಎಂಬುದನ್ನು ನೋಡೋಣ. “ನನ್ನ ತಂಡಕ್ಕೆ ನನ್ನಿಂದ ಏನೂ ಕೊಡುಗೆ ನೀಡಲು ಸಾಧ್ಯ ಆಗುತ್ತಿಲ್ಲ ಎಂಬ ಕೊರಗು ಕಾಡುತ್ತಲೇ ಇತ್ತು. ಇದರಿಂದ ತುಂಬಾ ದುಃಖಿತನಾಗಿದ್ದೆ. ಈ ಪಂದ್ಯ ನಮಗೆ ತುಂಬಾ ಮುಖ್ಯವಾಗಿತ್ತು. ನಾನಂತು ಆಡಲೇಬೇಕಿತ್ತು. ಏನಾದರು ತಂಡಕ್ಕೆ ಕೊಡುಗೆ ಸಲ್ಲಿಸಬೇಕು ಎಂದಿದ್ದರೆ ಅದು ಇಂದಿನ ಪಂದ್ಯದಲ್ಲೇ ಆಗಬೇಕು ಎಂಬ ನಂಬಿಕೆಯಿಟ್ಟಿದ್ದೆ. ನೀವು ದೃಷ್ಟಿಕೋನವನ್ನು ಸರಿಯಾಗಿ ಇಟ್ಟುಕೊಳ್ಳಬೇಕು. ಕಾರ್ಯ ಪ್ರಕ್ರಿಯೆಯನ್ನು ಮರೆತು, ನಿರೀಕ್ಷೆಗಳ ಮೇಲೆ ನೀವು ಉಳಿಯಬಹುದು. ಆದ್ದರಿಂದ ಸಾಕಷ್ಟು ಕಠಿಣ ಪರಿಶ್ರಮ ಪಟ್ಟಿದ್ದೇನೆ. ಗುಜರಾತ್ ವಿರುದ್ಧದ ಪಂದ್ಯಕ್ಕೂ ಮುನ್ನ ಬುಧವಾರ ನೆಟ್ಸ್‌ನಲ್ಲಿ ಸತತ 9 ಗಂಟೆಗಳ ಬ್ಯಾಟ್ ಮಾಡಿದ್ದೇನೆ,” ಎಂದು ಅಚ್ಚರಿ ವಿಚಾರ ಬಹಿರಂಗ ಪಡಿಸಿದ್ದಾರೆ.
“ನನ್ನ ಮೇಲೆ ಅನುಮಾನ ಪಡದೆ ತನ್ನನ್ನು ತಾನೇ ಬೆಂಬಲಿಸಿದೆ. ಪ್ರತಿಯೊಂದು ಎಸೆತವನ್ನು ಸ್ಪಷ್ಟತೆಯೊಂದಿಗೆ ಆಡಬೇಕೆಂದು ಅಂದುಕೊಂಡಿದ್ದೆ. ಅದೇ ರೀತಿ ಬ್ಯಾಟ್ ಮಾಡಿದೆ. ಇದಕ್ಕಾಗಿ ಸಾಕಷ್ಟು ಕಠಿಣ ಪರಿಶ್ರಮ ನಡೆಸಿ ಬಂದಿದ್ದೇನೆ. ಬ್ಯಾಟಿಂಗ್ ವೇಳೆ ತನ್ನ ಮೇಲೆ ತನಗೇ ಅನುಮಾನ ಬಾರದಂತೆ ನೋಡಿಕೊಂಡಿದ್ದೇನೆ. ಈ ಪಂದ್ಯದಲ್ಲಿ ನಾನು ಉತ್ತಮ ಪ್ರದರ್ಶನ ನೀಡುತ್ತೇನೆಂದು ನನಗೆ ಗೊತ್ತಿತ್ತು. ಈ ಆವೃತ್ತಿಯಲ್ಲಿ ನನಗೆ ತುಂಬಾ ಬೆಂಬಲ ಸಿಕ್ಕಿರುವುದು ಅದ್ಭುತವಾಗಿದೆ. ನಾನು ಹಿಂದೆಂದೂ ನೋಡಿರದ ಪ್ರೀತಿ ಸಿಕ್ಕಿದೆ. ಈ ಎಲ್ಲಾ ಪ್ರೀತಿಗೆ ನಾನು ಎಂದೆಂದಿಗೂ ಕೃತಜ್ಞನಾಗಿದ್ದೇನೆ,” ಎಂಬುದು ವಿರಾಟ್ ಮಾತು.
Matthew Wade: ಇದರಲ್ಲಿ ಆರ್ಸಿಬಿ ತಪ್ಪೇನಿದೆ?: ಔಟಾದ ಸಿಟ್ಟಲ್ಲಿ ಬ್ಯಾಟ್, ಹೆಲ್ಮೆಟ್ ಬಿಸಾಕಿದ ಮ್ಯಾಥ್ಯೂ ವೇಡ್
ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ (73), ಫಾಫ್ ಡುಪ್ಲೆಸಿಸ್ (44) ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ (40*) ಅವರ ಮನಮೋಹಕ ಬ್ಯಾಟಿಂಗ್ ಸಹಾಯದಿಂದ ಸುಲಭವಾಗಿ ರನ್ ಚೇಸ್ ಮಾಡಿದರು. ಕೊಹ್ಲಿ 73 ರನ್ ಗಳಿಸುವ ಮೂಲಕ ಪ್ರಸಕ್ತ ಪಂದ್ಯಾವಳಿಯಲ್ಲಿ ಅವರ ಅತ್ಯಧಿಕ ಸ್ಕೋರ್ ಅನ್ನು ಗಳಿಸಿ, ರನ್ ದಾಹ ತೀರಿಸಿಕೊಂಡರು. ಫಾಫ್-ಕೊಹ್ಲಿ ಶತಕದ ಜೊತೆಯಾಟ ಆಡಿ ಔಟಾದ ನಂತರ, ಗ್ಲೆನ್ ಮ್ಯಾಕ್ಸ್‌ವೆಲ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿ ತಂಡವನ್ನು ಗೆಲುವಿನ ಗಡಿ ದಾಟಿಸಿದರು. ಇವರಿಗೆ ದಿನೇಶ್ ಕಾರ್ತಿಕ್ ಸಾಥ್ ನೀಡಿದರು. ಈ ಜಯದೊಂದಿಗೆ ಆರ್ಸಿಬಿ 14 ಪಂದ್ಯಗಳಿಂದ 8 ಜಯ ಹಾಗೂ 6 ಸೋಲಿನೊಂದಿಗೆ 16 ಅಂಕ ಸಂಪಾದಿಸಿ ಅಗ್ರ 4ರೊಳಗೆ ಸ್ಥಾನ ಪಡೆದಿದೆ. ಆರ್ಸಿಬಿ ಪ್ಲೇ ಆಫ್ಗೆ ಕ್ವಾಲಿಫೈ ಆಗಬೇಕೆಂದರೆ ಮೇ. 21 ರಂದು ನಡೆಯಲಿರುವ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಸೋಲಬೇಕಿದೆ.
ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:25 am, Fri, 20 May 22