T20 World Cup 2022: ಟಿ20 ವಿಶ್ವಕಪ್ನಲ್ಲಿನ ಸೂಪರ್-12 ಸುತ್ತಿನಲ್ಲಿ ಕಳೆದ ಭಾನುವಾರ ರಣರೋಚಕ ಪಂದ್ಯಕ್ಕೆ ಸಾಕ್ಷಿಯಾಗಿತ್ತು. ಮೆಲ್ಬೋರ್ನ್ನಲ್ಲಿ ನಡೆದ ಈ ಪಂದ್ಯದಲ್ಲಿ ಬದ್ಧವೈರಿಗಳಾದ ಭಾರತ-ಪಾಕಿಸ್ತಾನ್ (India vs Pakistan) ತಂಡಗಳು ಮುಖಾಮುಖಿಯಾಗಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ್ 8 ವಿಕೆಟ್ ನಷ್ಟಕ್ಕೆ 159 ರನ್ ಕಲೆಹಾಕಿತ್ತು. ಈ ಸ್ಪರ್ಧಾತ್ಮಕ ಸವಾಲನ್ನು ಬೆನ್ನತ್ತಿದ ಟೀಮ್ ಇಂಡಿಯಾ ಉತ್ತಮ ಆರಂಭ ಪಡೆದಿರಲಿಲ್ಲ. ಇದಾಗ್ಯೂ ಏಕಾಂಗಿ ಹೋರಾಟ ಮುಂದುವರೆಸಿದ್ದ ವಿರಾಟ್ ಕೊಹ್ಲಿ ಅಂತಿಮ ಓವರ್ಗಳ ವೇಳೆ ಅಕ್ಷರಶಃ ಅಬ್ಬರಿಸಿದ್ದರು.
ಕೊನೆಯ 3 ಓವರ್ಗಳಲ್ಲಿ 48 ರನ್ಗಳ ಟಾರ್ಗೆಟ್ ಪಡೆದಿದ್ದ ಟೀಮ್ ಇಂಡಿಯಾ ಪರ ವಿರಾಟ್ ಕೊಹ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. ಅದರಲ್ಲೂ ಪಾಕ್ ತಂಡದ ಪ್ರಮುಖ ವೇಗಿಗಳಾದ ಶಾಹೀನ್ ಅಫ್ರಿದಿ ಎಸೆದ 18ನೇ ಓವರ್ನಲ್ಲಿ 3 ಫೋರ್ನೊಂದಿಗೆ ಕಿಂಗ್ ಕೊಹ್ಲಿ 17 ರನ್ ಚಚ್ಚಿದ್ದರು. ಇನ್ನು 19ನೇ ಓವರ್ ಎಸೆದ ಹ್ಯಾರಿಸ್ ರೌಫ್ ಓವರ್ನಲ್ಲಿ 2 ಭರ್ಜರಿ ಸಿಕ್ಸ್ನೊಂದಿಗೆ 15 ಸಿಡಿಸಿದ್ದರು. ಈ ಮೂಲಕ ಅಂತಿಮ ಓವರ್ನಲ್ಲಿ 16 ರನ್ಗಳನ್ನು ಚೇಸ್ ಮಾಡುವ ಮೂಲಕ ವಿರಾಟ್ ಕೊಹ್ಲಿ ಟೀಮ್ ಇಂಡಿಯಾಗೆ 4 ವಿಕೆಟ್ಗಳ ರೋಚಕ ಜಯ ತಂದುಕೊಟ್ಟರು.
ಇದೀಗ ಟೀಮ್ ಇಂಡಿಯಾ ಸೌತ್ ಆಫ್ರಿಕಾ ವಿರುದ್ಧದ ಪಂದ್ಯಕ್ಕಾಗಿ ಪರ್ತ್ಗೆ ತೆರಳಿದೆ. ಅತ್ತ ಪಾಕಿಸ್ತಾನ್ ತಂಡ ಕೂಡ ನೆದರ್ಲ್ಯಾಂಡ್ಸ್ ವಿರುದ್ಧದ ಪಂದ್ಯಕ್ಕಾಗಿ ಪರ್ತ್ನಲ್ಲಿದೆ. ಇದೇ ವೇಳೆ ವಿರಾಟ್ ಕೊಹ್ಲಿಯನ್ನು ಪಾಕಿಸ್ತಾನದ ವೇಗಿಗಳಾದ ಶಾಹೀನ್ ಅಫ್ರಿದಿ ಹಾಗೂ ಹ್ಯಾರಿಸ್ ರೌಫ್ ಭೇಟಿಯಾಗಿದ್ದಾರೆ.
ಕಿಂಗ್ ಕೊಹ್ಲಿಯನ್ನು ಭೇಟಿಯಾಗಿರುವ ಹ್ಯಾರಿಸ್ ರೌಫ್ ಹಾಗೂ ಶಾಹೀನ್ ಫೋಟೋವನ್ನು ಪಾಕಿಸ್ತಾನ್ ಕ್ರಿಕೆಟ್ ಟ್ವಿಟರ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ವಿಶೇಷ ಎಂದರೆ ಈ ಫೋಟೋಗೆ ನಾನಾ ರೀತಿಯ ಹಾಸ್ಯಮಯ ಕಾಮೆಂಟ್ಗಳು ಬರುತ್ತಿವೆ. ವಿರಾಟ್ ಕೊಹ್ಲಿ ಪಾಕ್ ವೇಗಿಗಳಿಗೆ ನಾನು ಚಚ್ಚಿದ್ದು ಹೇಗಿತ್ತು ಎಂದು ಕೇಳುತ್ತಿರಬಹುದು ಎಂದು ಅಭಿಮಾನಿಯೊಬ್ಬರು ಪ್ರತಿಕ್ರಿಯಿಸಿದ್ದಾರೆ.
ಇನ್ನು ಕೆಲವರು ವಿರಾಟ್ ಕೊಹ್ಲಿಯನ್ನು ಭೇಟಿಯಾಗಿ ನಮ್ಮ ಕೆರಿಯರ್ ಮುಗಿಸಬೇಡಿ ಎಂದು ಪಾಕ್ ವೇಗಿಗಳು ಮನವಿ ಮಾಡಿರಬಹುದೇ ಎಂದು ವ್ಯಂಗ್ಯವಾಡಿದ್ದಾರೆ.
Haris Rauf and Shaheen Afridi chat with Virat Kohli ?
The trio looks in a good mood ?#ViratKohli #HarisRauf #T20WorldCup #ShaheenAfridi pic.twitter.com/VmJTDrHzjF
— Cricket Pakistan (@cricketpakcompk) October 29, 2022
ಒಟ್ಟಿನಲ್ಲಿ ವಿರಾಟ್ ಕೊಹ್ಲಿಯ ಈ ಫೋಟೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಉಭಯ ತಂಡಗಳ ಅಭಿಮಾನಿಗಳಿಂದ ಹಾಸ್ಯಭರಿತ ಕಾಮೆಂಟ್ನೊಂದಿಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.