ಸಿರಾಜ್ ನಮ್ ಹುಡ್ಗ.. ಎದುರಾಳಿಯನ್ನು ಕಣ್ಣಲ್ಲಿ ಕಣ್ಣಿಟ್ಟು ಎದುರಿಸುತ್ತಾನೆ ಎಂದ ಕಿಂಗ್ ಕೊಹ್ಲಿ

| Updated By: ಝಾಹಿರ್ ಯೂಸುಫ್

Updated on: Aug 25, 2021 | 4:06 PM

Virat Kohli - Mohammed Siraj: ಭಾರತ-ಇಂಗ್ಲೆಂಡ್ ನಡುವಣ ಮೂರನೇ ಟೆಸ್ಟ್ ಪಂದ್ಯವು ಲೀಡ್ಸ್​ ಹೆಡಿಂಗ್ಲೆ ಮೈದಾನದಲ್ಲಿ ಬುಧವಾರ ಆರಂಭವಾಗಿದೆ. ಐದು ಪಂದ್ಯಗಳ ಸರಣಿಯಲ್ಲಿ ಭಾರತ 1-0 ಅಂತರದಿಂದ ಮುನ್ನಡೆ ಸಾಧಿಸಿದ್ದು, ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆದ್ದರೆ ಸರಣಿ ಸೋಲಿನಿಂದ ಪಾರಾಗಲಿದೆ.

ಸಿರಾಜ್ ನಮ್ ಹುಡ್ಗ.. ಎದುರಾಳಿಯನ್ನು ಕಣ್ಣಲ್ಲಿ ಕಣ್ಣಿಟ್ಟು ಎದುರಿಸುತ್ತಾನೆ ಎಂದ ಕಿಂಗ್ ಕೊಹ್ಲಿ
Virat Kohli- Mohammed Siraj
Follow us on

ಟೀಮ್ ಇಂಡಿಯಾದಲ್ಲಿ (Team India) ಮೊಹಮ್ಮದ್ ಸಿರಾಜ್ (Mohammed Siraj) ಹೊಸ ಸಂಚಲನ ಸೃಷ್ಟಿಸಿದ್ದಾರೆ. ಇದೇ ಮೊದಲ ಬಾರಿಗೆ ಇಂಗ್ಲೆಂಡ್​ನಲ್ಲಿ ಆಡುತ್ತಿರುವ ಸಿರಾಜ್ ಮೊದಲೆರೆಡು ಟೆಸ್ಟ್​ಗಳಿಂದ 11 ವಿಕೆಟ್ ಉರುಳಿಸಿದ್ದಾರೆ. ಅದರಲ್ಲೂ ಲಾರ್ಡ್ಸ್ (The Lord’s)​ ಮೈದಾನದಲ್ಲಿ 8 ವಿಕೆಟ್ ಪಡೆಯುವ ಮೂಲಕ ಟೀಮ್ ಇಂಡಿಯಾ ಗೆಲುವಿಗೆ ಪ್ರಮುಖ ಕಾಣಿಕೆ ನೀಡಿದರು. ಸಿರಾಜ್ ಅವರ ಈ ಪ್ರದರ್ಶನದ ಬಗ್ಗೆ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ (Virat kohli) ಮನಬಿಚ್ಚಿ ಮಾತನಾಡಿದ್ದಾರೆ. ಯುವ ವೇಗಿಯ ಪ್ರದರ್ಶನ ನನಗೆ ಅಚ್ಚರಿ ಮೂಡಿಸಿಲ್ಲ ಎಂದಿದ್ದಾರೆ. ಏಕೆಂದರೆ ಸಿರಾಜ್ ಯಾವುದೇ ಸಮಯದಲ್ಲೂ ವಿಕೆಟ್ ಉರುಳಿಸುವ ಹಂತಕ್ಕೆ ತಲುಪಿದ್ದಾರೆ. ಆಸ್ಟ್ರೇಲಿಯಾ ಟೆಸ್ಟ್ ಸರಣಿಯಿಂದ ಆತ್ಮ ವಿಶ್ವಾಸ ಹೆಚ್ಚಾಗಿದ್ದು, ಇದುವೇ ಆತನ ಬೌಲಿಂಗ್ ಅನ್ನು ಹೊಸ ಮಟ್ಟಕ್ಕೆ ಕೊಂಡೊಯ್ದಿದೆ ಎಂದು ಕೊಹ್ಲಿ ಹೇಳಿದ್ದಾರೆ.

‘ನನಗಂತು ಸಿರಾಜ್ ಅವರ ಪ್ರಗತಿ ನೋಡಿ ಆಶ್ಚರ್ಯವಾಗಿಲ್ಲ. ಏಕೆಂದರೆ ನಾನು ಆತನನ್ನು ತುಂಬಾ ಹತ್ತಿರದಿಂದ ನೋಡಿದ್ದೇನೆ (ಸಿರಾಜ್ ಕೊಹ್ಲಿ ನಾಯಕತ್ವದ ಆರ್​ಸಿಬಿ ತಂಡದ ಆಟಗಾರ). ಆತ ತುಂಬಾ ಕೌಶಲ್ಯ ಹೊಂದಿರುವ ಆಟಗಾರ. ಅಂತಹ ಬೌಲಿಂಗ್​ ಕೌಶಲ್ಯವನ್ನು ಹೊರತರಲು ಆತ್ಮವಿಶ್ವಾಸದ ಅಗತ್ಯವಿದೆ. ಆಸ್ಟ್ರೇಲಿಯಾ ಸರಣಿಯಲ್ಲಿ ಆ ವಿಶ್ವಾಸವನ್ನು ಸಿರಾಜ್ ಪಡೆದಿದ್ದಾರೆ ಎಂದು ಕೊಹ್ಲಿ ತಿಳಿಸಿದರು.

ಇದೇ ವೇಳೆ ಸಿರಾಜ್ ಅವರ ಆಕ್ರಮಣಕಾರಿ ಪ್ರದರ್ಶನದ ಬಗ್ಗೆ ಮಾತನಾಡಿದ ಕೊಹ್ಲಿ, ಪ್ರಸ್ತುತ ಅವರ ಪ್ರದರ್ಶನವೇ ಅವರನ್ನು ಅಂತಹದೊಂದು ಮಟ್ಟಕ್ಕೆ ಕೊಂಡೊಯ್ದಿದೆ. ಒಬ್ಬ ಆಟಗಾರನಿಗೆ ಆತ್ಮ ವಿಶ್ವಾಸವಿದ್ದರೆ ಏನೂ ಬೇಕಾದರೂ ಮಾಡಬಲ್ಲ. ಆತನಲ್ಲೂ ಆ ರೀತಿಯ ಆಕ್ರಮಣಕಾರಿ ಗುಣಗಳನ್ನು ನೋಡಿ ಖುಷಿಯಾಯಿತು. ಸಿರಾಜ್ ಎದುರಾಳಿಯ ಕಣ್ಣಿಗೆ ಕಣ್ಣಿಟ್ಟು ಆಡುತ್ತಾರೆ. ಆ ಮೂಲಕ ಬ್ಯಾಟ್ಸ್​​ಮನ್​ಗಳನ್ನು ಔಟ್ ಮಾಡಲು ಪ್ರಯತ್ನಿಸುತ್ತಾರೆ. ಇಂತಹ ಗುಣಗಳಿದ್ದರೆ ಯಾವುದೇ ಬ್ಯಾಟ್ಸ್​ಮನ್ ಬಂದರೂ ಹೆದರುವುದಿಲ್ಲ ಎಂದು ಕೊಹ್ಲಿ ತಿಳಿಸಿದರು.

ಇಂತಹ ಗುಣಗಳ ಆಟವನ್ನು ಮೈಗೂಡಿಸಿಕೊಂಡಿರುವ ಆಟಗಾರರು ಯಾವುದೇ ಸಂದರ್ಭದಲ್ಲೂ ಹಿಂದೆ ಸರಿಯುವ ಬಗ್ಗೆ ಯೋಚಿಸುವುದಿಲ್ಲ ಎಂದು ಟೀಮ್ ಇಂಡಿಯಾ ನಾಯಕ ತಿಳಿಸಿದರು.

ಭಾರತ-ಇಂಗ್ಲೆಂಡ್ ನಡುವಣ ಮೂರನೇ ಟೆಸ್ಟ್ ಪಂದ್ಯವು ಲೀಡ್ಸ್​ ಹೆಡಿಂಗ್ಲೆ ಮೈದಾನದಲ್ಲಿ ಬುಧವಾರ ಆರಂಭವಾಗಿದೆ. ಐದು ಪಂದ್ಯಗಳ ಸರಣಿಯಲ್ಲಿ ಭಾರತ 1-0 ಅಂತರದಿಂದ ಮುನ್ನಡೆ ಸಾಧಿಸಿದ್ದು, ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆದ್ದರೆ ಸರಣಿ ಸೋಲಿನಿಂದ ಪಾರಾಗಲಿದೆ.

3ನೇ ಟೆಸ್ಟ್​ನಲ್ಲಿ ಉಭಯ ತಂಡಗಳ ಪ್ಲೇಯಿಂಗ್ ಇಲೆವೆನ್ ಹೀಗಿದೆ:

ಭಾರತ: ವಿರಾಟ್ ಕೊಹ್ಲಿ (ಕ್ಯಾಪ್ಟನ್), ಕೆಎಲ್ ರಾಹುಲ್, ರೋಹಿತ್ ಶರ್ಮಾ, ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ, ರಿಷಭ್ ಪಂತ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಇಶಾಂತ್ ಶರ್ಮಾ, ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಸಿರಾಜ್.

ಇಂಗ್ಲೆಂಡ್: ಜೋ ರೂಟ್ (ಕ್ಯಾಪ್ಟನ್), ರೋರಿ ಬರ್ನ್ಸ್, ಹಸೀಬ್ ಹಮೀದ್, ಡೇವಿಡ್ ಮಲಾನ್, ಜಾನಿ ಬೈರ್‌ಸ್ಟೊ, ಜೋಸ್ ಬಟ್ಲರ್ (ವಿಕೆಟ್ ಕೀಪರ್), ಮೊಯೀನ್ ಅಲಿ, ಸ್ಯಾಮ್ ಕರ್ರನ್, ಓಲಿ ರಾಬಿನ್ಸನ್, ಕ್ರೇಗ್ ಓವರ್‌ಟನ್, ಜೇಮ್ಸ್ ಅಂಡರ್ಸನ್

 

ಇದನ್ನೂ ಓದಿ: ಪೆಟ್ರೋಲ್, ಡಿಸೇಲ್ ಹಾಕಬೇಕಿಲ್ಲ, ಚಾರ್ಜ್​ ಕೂಡ ಮಾಡಬೇಕಿಲ್ಲ: ಇದು ಮಾರುತಿ ಸುಜುಕಿ ಹೊಸ ಕಾರು

ಇದನ್ನೂ ಓದಿ: Video: ಒಂದೇ ಒಂದು ಬೌನ್ಸರ್ ಎಸೆದು ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆದ!

ಇದನ್ನೂ ಓದಿ: Crime News: ಅಶ್ಲೀಲ ವೀಡಿಯೋ ಕಳುಹಿಸುತ್ತಿದ್ದ ಆಂಟಿ ಅರೆಸ್ಟ್..!

(Virat Kohli talks of Mohammed Siraj’s aggressive bowling)